ಕನ್ನಡದ ಪ್ರತಿಭಾವಂತ ನಿರ್ದೇಶಕ ಮಂಸೋರೆ ಅವರ ‘19.20.21’ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಶೀಘ್ರ ಚಿತ್ರೀಕರಣ ಆರಂಭವಾಗಲಿದೆ. ರಂಗಭೂಮಿಯ ಬಹಳಷ್ಟು ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವುದು ವಿಶೇಷ.

ಮಂಸೋರೆ ಹೊಸ ಸಿನಿಮಾ ‘19.20.21’ ಶುರುವಾಗಿದೆ. ಅವರ ನಿರ್ದೇಶನದಲ್ಲಿ ತಯಾರಾಗಿ ಯಶಸ್ವಿಯಾದ ಈ ಹಿಂದಿನ ‘ಆಕ್ಟ್-1978’ ನಿರ್ಮಾಪಕರೇ ನೂತನ ಸಿನಿಮಾ ನಿರ್ಮಿಸುತ್ತಿದ್ದಾರೆ. ಇಂದು ಮುಹೂರ್ತ ನೆರವೇರಿದ್ದು ಶೀಘ್ರ ಚಿತ್ರೀಕರಣ ಶುರುವಾಗಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಸೋರೆ, “ಈ ಕೊರೋನೋತ್ತರ ಕಾಲಘಟ್ಟದಲ್ಲಿ, ಎಲ್ಲಾ ಉದ್ಯಮಗಳಂತೆ ಸಿನಿಮಾ ಉದ್ಯಮವೂ ಸಾಕಷ್ಟು ತೊಂದರೆ, ಸಂಕಷ್ಟಗಳನ್ನು ಎದುರಿಸುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಕನ್ನಡ ಚಿತ್ರರಂಗದಲ್ಲಿ ಉತ್ತಮವಾದ, ಸಧಬಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರ ಮುಂದಿಡಬೇಕು ಎಂಬ ಸದಾಶಯದೊಂದಿಗೆ ದೇವರಾಜ್‌ ಆರ್.‌ ಅವರು ‘ಆಕ್ಟ್-1978’ ಸಿನಿಮಾ ನಿರ್ಮಿಸಿದ್ದರು. ಅವರೇ ನಮ್ಮ ನೂತನ ಚಿತ್ರವನ್ನು ನಿರ್ಮಿಸಲಿದ್ದಾರೆ” ಎಂದರು.

ಸಿನಿಮಾದ ಪ್ರಮುಖ ಪಾತ್ರದಲ್ಲಿ ಶೃಂಗಾ, ಕೃಷ್ಣಾ ಹೆಬ್ಬಾಳೆ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಇದ್ದು ರಂಗಭೂಮಿಯ ಮತ್ತಷ್ಟು ಕಲಾವಿದರು ನಟಿಸಲಿದ್ದಾರೆ. ಧಾರವಾಡ, ಯಲ್ಲಾಪುರ, ಕರಾವಳಿಯ ಪ್ರಮುಖ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜಿಸಿದೆ. ಚಿತ್ರೀಕರಣ ಪೂರ್ವದ ತಯಾರಿ ಪೂರ್ಣಗೊಳಿಸಿ ಶೀಘ್ರದಲ್ಲೇ ಚಿತ್ರೀಕರಣವನ್ನು ಆರಂಭಿಸುವುದು ತಂಡದ ಯೋಜನೆ. ವೀರೇಂದ್ರ ಮಲ್ಲಣ್ಣ ಮತ್ತು ಮಂಸೋರೆ ಚಿತ್ರಕಥೆ, ಅವಿನಾಶ್‌ ಜಿ. ಸಂಭಾಷಣೆ, ಸತ್ಯ ಹೆಗ್ಡೆ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ, ಬಿಂದು ಮಾಲಿನಿ ಮತ್ತು ಬಕ್ಕೇಶ್‌ ರೋಣದ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here