ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಅಲಿಯಾ ಭಟ್ ನಟಿಸಿರುವ ‘ಗಂಗೂಬಾಯಿ ಕಥೈವಾಡಿ’ ಸಿನಿಮಾ ಕಾನೂನಿನ ಸುಳಿಗೆ ಸಿಲುಕಿದೆ. ಗಂಗೂಬಾಯಿ ಕಥೈವಾಡಿ ಕುಟುಂಬದವರು ಚಿತ್ರದ ಬಿಡುಗಡೆಗೆ ತಡೆಕೋರಿ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ‘ಗಂಗೂಬಾಯಿ ಸಮಾಜ ಸೇವಕಿ. ಈ ಚಿತ್ರದಲ್ಲಿ ಅವರನ್ನು ವೇಶ್ಯೆಯಂತೆ ತೋರಿಸಲಾಗಿದೆ’ ಎನ್ನುವುದು ಅವರ ದೂರು. ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಬನ್ಸಾಲಿ, ಕತೆಗಾರ ಹುಸೇನ್ ಝೈದಿ ಮತ್ತು ಅಲಿಯಾ ಭಟ್ ಅವರಿಗೆ ನೋಟಿಸ್ ನೀಡಲಾಗಿದೆ.
ಗಂಗೂಬಾಯಿ ಕಥೈವಾಡಿ ಕುಟುಂಬದವರು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಲೇಖಕ ಹುಸೇನ್ ಝೈದಿ ಮತ್ತು ನಟಿ ಅಲಿಯಾ ಭಟ್ ಸೇರಿದಂತೆ ಚಿತ್ರತಂಡದ ಹಲವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಸಿದ್ದಾರೆ. ಚಿತ್ರತಂಡ ಪ್ರಸ್ತುತ ಬರ್ಲಿನ್ ಇಂಟರ್‌ನ್ಯಾಷನಲ್ ಫೆಸ್ಟಿವಲ್‌ನಲ್ಲಿದ್ದರೆ ಇಲ್ಲಿ ಕಾನೂನು ಸಮರ ನಡಿದಿದೆ. ಮುಂಬಯಿ ಕಾಮಾಟಿಪುರದಲ್ಲಿ ವೇಶ್ಯೆಯಾಗಿದ್ದ ಗಂಗೂಬಾಯಿ ಕಥೈವಾಡಿ ಮುಂದೆ ಸಮಾಜ ಸೇವಕಿ, ರಾಜಕಾರಣಿಯಾಗಿ ಗುರುತಿಸಿಕೊಂಡವರು. ಹುಸೇನ್ ಝೈದಿ ರಚನೆಯ ಪುಸ್ತಕದಲ್ಲಿನ ಆಕೆಯ ಬದುಕಿನ್ನು ಬನ್ಸಾಲಿ ಸಿನಿಮಾ ಮಾಡಿದ್ದಾರೆ. ಇದೀಗ ಗಂಗೂಬಾಯಿ ಕುಟುಂಬದವರು ಚಿತ್ರದ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಅವರ ಪರ ವಕೀಲ ನರೇಂದ್ರ ದುಬೆ ಅವರು ಈ ಬಗ್ಗೆ ಮಾತನಾಡಿ, “ತಮ್ಮ ತಾಯಿಯನ್ನು ವೇಶ್ಯೆಯಂತೆ ತೋರಿಸುವುದನ್ನು ಯಾರೂ ಇಚ್ಛಿಸುವುದಿಲ್ಲ. ವೇಶ್ಯೆಯ ಪುತ್ರ ಕೂಡ ಇದನ್ನು ಒಪ್ಪುವುದಿಲ್ಲ. ಹಣಕ್ಕಾಗಿ ಚಿತ್ರದಲ್ಲಿ ಗಂಗೂಬಾಯಿ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗಿದೆ. ಹುಸೇನ್ ಝೈದಿ ಕೂಡ ತಮ್ಮ ಪುಸ್ತಕದಲ್ಲಿ ‘ಗಂಗೂಬಾಯಿ ವೇಶ್ಯೆಯಾಗಲು ಇಚ್ಛಿಸಿರಲಿಲ್ಲ’ ಎಂದೇ ಬರೆದಿದ್ದಾರೆ. ಅಂತಹ ಮಹಿಳೆಯನ್ನು ವೇಶ್ಯೆಯಂತೆ ಸಿನಿಮಾದಲ್ಲಿ ತೋರಿಸುವುದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ.
ಕಾಮಾಟಿಪುರ ಪ್ರದೇಶದಲ್ಲಿ ಗಂಗೂಬಾಯಿ ಅವರಿಗೆ ಸಾಕಷ್ಟು ಮನ್ನಣೆ ಇತ್ತು. “ಜವಾಹರಲಾಲ್ ನೆಹರೂ, ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ ಅವರಂತಹ ಪ್ರಮುಖ ರಾಜಕೀಯ ನಾಯಕರು ಚುನಾವಣೆ ಸಂದರ್ಭದಲ್ಲಿ ಆಕೆಯನ್ನು ಭೇಟಿ ಮಾಡುತ್ತಿದ್ದರು. ಆಕೆ ವೇಶ್ಯೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು” ಎನ್ನುತ್ತಾರೆ ವಕೀಲ ದುಬೆ. ಫೆಬ್ರವರಿ 25ರಂದು ಈ ಸಿನಿಮಾ ತೆರೆಕಾಣಬೇಕಿತ್ತು. ಇದೀಗ ಗಂಗೂಬಾಯಿ ಕುಟುಂಬದವರು ಚಿತ್ರದ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿದ್ದು, ಚಿತ್ರದ ಬಿಡುಗಡೆಗೆ ಮುನ್ನ ದೂರು ಚರ್ಚೆಗೆ ಬರಲಿದೆ ಎನ್ನುವ ವಿಶ್ವಾಸದಲ್ಲಿದ್ದಾರವರು.
ಗಂಗೂಬಾಯಿ ಅವರಿಗೆ ನಾಲ್ವರು ದತ್ತು ಮಕ್ಕಳಿದ್ದಾರೆ – ಬಾಬುರಾವ್, ಬೇಬಿ, ಶಕುಂತಲಾ ಮತ್ತು ರಾಜನ್. ಹುಸೇನ್ ಝೈದಿ ಅವರ ಪುಸ್ತಕದಲ್ಲಿ ದಾಖಲಾಗಿರುವಂತೆ, ಗುಜರಾತ್ ಮೂಲದ ಗಂಗೂಬಾಯಿ ಸಿನಿಮಾ ಸೇರುವ ಆಸೆಯಿಂದ ಮನೆ ಬಿಟ್ಟು ಮುಂಬಯಿಗೆ ಬರುತ್ತಾಳೆ. ನಂಬಿದ ವ್ಯಕ್ತಿಯಿಂದ ಮೋಸವಾಗಿ ವೇಶ್ಯಾವಾಟಿಕೆಯ ದಂಧೆಗೆ ಮಾರಾಟವಾಗುತ್ತಾಳೆ. ಮುಂಬಿಯ ರೆಡ್‌ಲೈಟ್ ಏರಿಯಾದಲ್ಲಿದ್ದ ಆಕೆಗೆ ಭೂಗತ ಜಗತ್ತಿನೊಂದಿಗೆ ನಂಟು ಇತ್ತು ಎನ್ನುವ ವಿಷಯ ದಾಖಲಾಗಿದೆ. ಮುಂದೆ ಕಾಮಾಟಿಪುರದ ಪ್ರಮುಖ, ಪ್ರಭಾವಿ ವ್ಯಕ್ತಿಯಾಗಿ ಬೆಳೆಯುವ ಗಂಗೂಬಾಯಿ ವೇಶ್ಯೆಯರು ಮತ್ತು ವೇಶ್ಯೆಯರ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾಳೆ. ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಅಲಿಯಾ ಭಟ್ ನಟಿಸಿದ್ದು, ಅಜಯ್ ದೇವಗನ್, ಶಂತನು ಎಂ. ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.