ಬದಲಾದ ಭಾರತೀಯ ಸಿನಿಮಾ ಸಂದರ್ಭದಲ್ಲಿ ತೆಲುಗು ಸಿನಿಮಾಗಳು ದೊಡ್ಡ ಸದ್ದು ಮಾಡುತ್ತಿವೆ. ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ’ ಸದ್ಯದಲ್ಲೇ 300 ಕೋಟಿ ರೂಪಾಯಿ ಕ್ಲಬ್‌ ಸೇರ್ಪಡೆಗೊಳ್ಳಲಿದ್ದು, ಉತ್ತರ ಭಾರತದ ಸಿನಿಪ್ರಿಯರು ತೆಲುಗು ಸಿನಿಮಾಗಳತ್ತ ಹೆಮ್ಮೆಯಿಂದ ನೋಡುತ್ತಿದ್ದಾರೆ.

ಒಂದು ಕಾಲವಿತ್ತು ಇಂಡಿಯನ್ ಫಿಲಂ ಇಂಡಸ್ಟ್ರಿ ಅಂದರೆ ಅದು ಬಾಲಿವುಡ್ ಎಂಬ ಮಾತಿತ್ತು. ಆದರೀಗ ಕಾಲ ಬದಲಾಗಿದೆ. ಸಾಕಷ್ಟು ಹೊಸ ನೀರು ಹರಿದಿದೆ. ಬಾಲಿವುಡ್‍ನ ಅದಿಪತ್ಯ ಕೊನೆಯಾಗಿದೆ. 20 ವರ್ಷ ಬಿಗ್ ಬಿ ಅಮಿತಾಬ್ ಸ್ಟಾರ್ ಆಗಿ ಆಳಿದ, 2 ದಶಕಗಳ ಕಾಲ ಶಾರುಕ್ ಬಾದ್‍ಷಾ ಆಗಿ ಮೆರೆದ ಬಿ-ಟೌನ್ ಈಗ ಗತವೈಭವ ಕಳೆದುಕೊಂಡಿದೆ. ಹಿಂದಿಯ ಸಿನಿಮಾಗಳೆಲ್ಲಾ ಈಗ ಮೆಟ್ರೋ ಸಿಟಿಗಳನ್ನೇ ಟಾರ್ಗೆಟ್ ಮಾಡಿಕೊಂಡು ದೃಶ್ಯರೂಪ ತಾಳುತ್ತಿವೆ. ಅಮಿತಾಭ್, ಶಾರುಖ್, ಸಲ್ಮಾನ್, ಅಮಿರ್ ಖಾನ್‌ರಂತಹ ಸ್ಟಾರ್‌ಗಳನ್ನು ಕಂಡ ಹಿಂದಿ ಚಿತ್ರರಂಗದಲ್ಲೀಗ ಟೈಯರ್ 2, ಟೈಯರ್ 3 ಸಿಟಿಗಳನ್ನು ಮುಟ್ಟಬಲ್ಲ, ಅಲ್ಲಿನ ಪ್ರೇಕ್ಷಕರನ್ನು ತಲುಪಬಲ್ಲ, ಥಿಯೇಟರ್‌ಗೆ ಆಡಿಯನ್ಸ್‌ ಕರೆತರುವಂತಹ ಸ್ಟಾರ್‌ಗಳಿಲ್ಲ.

2021ರಲ್ಲಂತೂ ಎಲ್ಲಾ ವರ್ಗವೂ ಉಘೇ ಉಘೇ ಅನ್ನುವಂತಹ ಒಂದೇ ಒಂದು ಸಿಂಗಲ್ ಹಿಟ್ ಸಿನಿಮಾ ಕೊಡೋಕೆ ಬಾಲಿವುಡ್‌ಗೆ ಆಗಿಲ್ಲ. ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಸೂಪರ್ ಹಿಟ್ ಅನಿಸಿಕೊಂಡಿದ್ದು ಬಿಟ್ಟರೆ ಇನ್ಯಾವ ಚಿತ್ರವೂ ನೂರು ಕೋಟಿಯನ್ನ ಸಹ ದಾಟಲಿಲ್ಲ. 2008ರಲ್ಲಿ ‘ವಾಂಟೆಡ್‍’ನಿಂದ ಶುರುವಾದ ಸಲ್ಮಾನ್ ಜೈತ್ರಯಾತ್ರೆ 2016ರಲ್ಲಿ ಬಂದ ‘ಸುಲ್ತಾನ್’ ಸಿನಿಮಾವರೆಗೂ ಹಾಗೆಯೇ ಮುಂದುವರೆದಿತ್ತು. ಯಾವುದೇ ಅಡೆ ತಡೆ ಇಲ್ಲದೆ ಆರ್ಭಟಿಸಿತ್ತು. ಆದರೆ 2021ರಲ್ಲಿ ಈದ್ ವಿಶೇಷವಾಗಿ ಬಂದಂತಹ ‘ರಾಧೆ’ ಸಿನಿಮಾ ಬಾಕ್ಸಾಫೀಸ್ ಸುಲ್ತಾನನ ಆ ಖದರ್ರು, ಪವರ್ರು ನೆನಪಿಸಲಿಲ್ಲ. ರಾಧೆ ಇನ್ನಿಲ್ಲದಂತೆ ನೆಲಕಚ್ಚಿತು. ಕೊರೊನಾ ಸಂಕಷ್ಟ ಕಾಲದಲ್ಲಿ ಪ್ರೇಕ್ಷಕನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ವರ್ಷದ ಕೊನೆಯಲ್ಲಿ ’83’ ಸಿನಿಮಾ ತೆರೆಕಂಡಿದೆ. 1983ರ ವರ್ಲ್ಡ್‌ಕಪ್‍ನ ರೋಚಕ ಜರ್ನಿಯೇ ಇಲ್ಲಿ ದೃಶ್ಯರೂಪ ಪಡೆದುಕೊಂಡಿದೆ. ರಣವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ಸಿನಿಮಾ ಅನ್ನೋದಕ್ಕಿಂತ 83ರ ವರ್ಲ್ಡ್‌ಕಪ್‌ ಮ್ಯಾಚ್‍ಗಳ ನೇರ ಪ್ರಸಾರ ಎಂಬಷ್ಟು ನೈಜವಾಗಿ ಮೂಡಿಬಂದಿದೆ. ಪ್ರತಿದೃಶ್ಯವೂ ನೋಡುಗನನ್ನ ಸೀಟಿನ ತುದಿಗೆ ಕರೆತರುವಷ್ಟು ಥ್ರಿಲ್ಲಿಂಗ್ ಆಗಿ ಮೂಡಿಬಂದಿವೆ. ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾದರೂ ಥಿಯೇಟರ್‌ ಗಳಿಕೆಯಲ್ಲಿ ಗಮನಾರ್ಹ ಸಾಧನೆಯೇನಿಲ್ಲ. ದುಬಾರಿ ಬಜೆಟ್‌ನ ಸಿನಿಮಾ ಇದು. ಇಷ್ಟೊಂದು ಹಣವನ್ನ ಗಳಿಸಿ, ನಿರ್ಮಾಪಕನಿಗೆ ಲಾಭ ಮಾಡಿಕೊಡೋದು ಕಷ್ಟ ಎನ್ನುವ ಪರಿಸ್ಥಿತಿ ಇದೆ. ಅಲ್ಲಿಗೆ ಬಾಲಿವುಡ್‍ನಲ್ಲೀಗ ಭಾರಿ ಬಂಡವಾಳದ ಸಿನಿಮಾಗಳು ಬಂದರೂ ಸಹ, ಇಡೀ ರಾಷ್ಟ್ರದಲ್ಲಿ ಹಿಂದಿ ಸಿನಿಮಾಗಳಿಗೆ ಮಾರುಕಟ್ಟೆ ಇದ್ರೂ ಸಹ ಈಗಿನ ಸಿನಿಮಾಗಳು ಲಾಭದ ಮುಖ ನೋಡೋಕೆ ಏದುಸಿರು ಬಿಡುತ್ತಿರೋದು ಬಾಲಿವುಡ್‍ನ ಸದ್ಯದ ಪರಿಸ್ಥಿತಿ ಏನು ಎಂಬುದಕ್ಕೆ ಕನ್ನಡಿ.

ಈಗ ಭಾರತೀಯ ಚಿತ್ರರಂಗವನ್ನ ತೆಲುಗು ಚಿತ್ರಗಳು ಆಳುತ್ತಿರೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ. ಈ ಸಿನಿಮಾ ವಿಶ್ವದಾದ್ಯಂತ 250 ಕೋಟಿ ಗಳಿಸಿದೆ. ಶೀಘ್ರದಲ್ಲಿಯೇ 300 ಕೋಟಿ ಕ್ಲಬ್‌ ಸೇರ್ಪಡೆಯಾಗಲಿದೆ. ಆ ಮೂಲಕ 2021ರಲ್ಲಿ 300 ಕೋಟಿ ಕ್ಲಬ್ ಸೇರಿದ ಏಕೈಕ ಭಾರತೀಯ ಸಿನಿಮಾವಾಗಿ ‘ಪುಷ್ಪ’ ಸಿನಿಮಾ ದಾಖಲೆ ಬರೆಯಲಿದೆ. ಇನ್ನು ‘ಶ್ಯಾಮ್ ಸಿಂಗಾ ರಾಯ್’ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಪಾಲ್ಗೊಂಡಿದ್ದ ರೆಬೆಲ್ ಸ್ಟಾರ್ ನಾರಾಯಣ ಮೂರ್ತಿ, “ಇನ್ಮೇಲೆ ಅಮಿತಾಭ್, ಅಮೀರ್ ಖಾನ್‌ರನ್ನು ಮರೆತುಬಿಡಿ. ಅಲ್ಲು ಅರ್ಜುನ್, ಪ್ರಭಾಸ್‌ ಅವರನ್ನು ಆ ಸ್ಥಾನಗಳಲ್ಲಿ ಕಾಣಿ” ಎಂಬಂತೆ ಮಾತಾಡಿದ್ದಾರೆ. ಮುಂದೆ ರಿಲೀಸ್‌ ಆಗಲಿರುವ ‘RRR’, ‘ರಾಧೆ ಶ್ಯಾಮ್‌’ ಚಿತ್ರಗಳ ಬಗ್ಗೆ ಈಗಾಗಲೇ ಸಂಚಲನ ಸೃಷ್ಟಿಯಾಗಿದೆ.

‘ದಿವಾರ್’, ‘ಶೋಲೆ’ ಸಿನಿಮಾದ ಅಮಿತಾಭ್ ಡೈಲಾಗ್‌ಗಳು ಇಡೀ ಭಾರತೀಯ ಜನರಲ್ಲಿ ನಲಿದಾಡಿದ್ವು. ಹಾಗೆ ಶಾರುಕ್ ಖಾನ್ ನಟನೆಯ ‘ಡಿಡಿಎಲ್‌ಜೆ’ ಸಿನಿಮಾವಂತೂ ದೇಶದ ಮನೆ ಮನೆಗೂ ತಲುಪಿತ್ತು. ಬದಲಾದ ಸಿನಿಮಾ ವ್ಯಾಕರಣದಲ್ಲಿ ‘ಬಾಹುಬಲಿ’ ಮೂಲಕ ಪ್ರಭಾಸ್, ‘ಪುಷ್ಪ’ ಚಿತ್ರದಿಂದ ಅಲ್ಲು ಅರ್ಜುನ್ ತೆಲುಗು ಚಿತ್ರರಂಗವನ್ನು ಇನ್ನೊಂದು ಲೆವೆಲ್ ಗೆ ಕರೆದೊಯ್ದಿದ್ದಾರೆ. ‘ಪುಷ್ಪ’ ಚಿತ್ರದ ‘ತಗ್ಗೆದೆ ಲೆ’ ಡೈಲಾಗನ್ನು ಭಾಷೆ ಬರದ ಹಿಂದಿ ಆಡಿಯೆನ್ಸ್ ಕೂಡ ಹೇಳ್ತಾ ಇದ್ದಾರೆ. ಆ ಮಟ್ಟಿಗೆ ತೆಲುಗು ಚಿತ್ರಗಳು ರಾಷ್ಟ್ರಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡ್ತೀವೆ. ಮುಂದಿನ ದಶಕ ಏನಿದ್ರೂ ತೆಲುಗು ಚಿತ್ರರಂಗದ್ದೇ ಎಂದು ಮಾತನಾಡಿದ್ದಾರೆ.

LEAVE A REPLY

Connect with

Please enter your comment!
Please enter your name here