ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ನಾಡಿದ್ದು 29ಕ್ಕೆ ತೆರೆಕಾಣುತ್ತಿದೆ. ನಿನ್ನೆ ನಡೆದ ಪ್ರೀರಿಲೀಸ್ ಇವೆಂಟ್‌ನಲ್ಲಿ ಸ್ಟಾರ್ ಹೀರೋಗಳಾದ ಪುನೀತ್ ರಾಜಕುಮಾರ್, ಯಶ್ ಸೇರಿದಂತೆ ಉದ್ಯಮದ ಪ್ರಮುಖರು ಹಾಜರಿದ್ದು ಚಿತ್ರಕ್ಕೆ ಶುಭ ಹಾರೈಸಿದರು.
ಹರ್ಷ ನಿರ್ದೇಶನದಲ್ಲಿ ಶಿವರಾಜಕುಮಾರ್ ಅಭಿನಯಿಸಿರುವ ‘ಭಜರಂಗಿ 2’ ಸಿನಿಮಾಗೆ ಮುಹೂರ್ತ ನಡೆದದ್ದು 2019ರ ಜೂನ್‌ನಲ್ಲಿ. ಕೋವಿಡ್ ದಿನಗಳದ್ದು ಒಂದು ರೀತಿಯ ಸಂಕಷ್ಟವಾದರೆ, ಕೋಟ್ಯಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ್ದ ಸೆಟ್ ಬೆಂಕಿಗಾಹುತಿಯಾಗಿದ್ದು ಚಿತ್ರತಂಡಕ್ಕೆ ದುಬಾರಿಯಾಯ್ತು. ಇವೆಲ್ಲಾ ಅಡ್ಡಿ ಆತಂಕಗಳನ್ನು ದಾಟಿ ಸಿನಿಮಾ ಸಿದ್ಧವಾಗಿದೆ. ಕನ್ನಡಕ್ಕೆ ಇದೊಂದು ಒಳ್ಳೆಯ ಫ್ಯಾಂಟಸಿ ಚಿತ್ರವಾಗಲಿದೆ ಎನ್ನುವುದು ಚಿತ್ರದ ಟ್ರೈಲರ್ ನೋಡಿದವರ ಅಭಿಪ್ರಾಯ. ಜೊತೆಗೆ ಕೋವಿಡ್ ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಕಸುವು ತುಂಬುವಲ್ಲಿಯೂ ಸಿನಿಮಾ ನೆರವಾಗಲಿದೆ ಎನ್ನಲಾಗುತ್ತಿದೆ. ನಿನ್ನೆ ಚಿತ್ರದ ಪ್ರೀರಿಲೀಸ್ ಇವೆಂಟ್‌ಗೆ ಆಗಮಿಸಿದ್ದ ಆಹ್ವಾನಿತರೆಲ್ಲರೂ ಹಾಗಾಗಲಿ ಎಂದು ಹಾರೈಸಿದರು.
ಪ್ಯಾನ್ ಇಂಡಿಯಾ ಹೀರೋ ಯಶ್ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿದ್ದರು. ಶಿವರಾಜಕುಮಾರ್ ಆತ್ಮೀಯರೂ ಆದ ಯಶ್ ಹ್ಯಾಟ್ರಿಕ್ ಹೀರೋನ ಸಿನಿಮಾ ಕಾರ್ಯಕ್ರಮಗಳಿಗೆ ಆಗಿಂದಾಗ್ಗೆ ಅತಿಥಿಯಾಗಿ ಆಗಮಿಸುತ್ತಾರೆ. “ನಾನು ಹುಟ್ಟಿದಾಗಲೇ ಶಿವಣ್ಣ ದೊಡ್ಡ ಸ್ಟಾರ್. ನನ್ನ ಬಾಲ್ಯ, ಶಾಲೆ, ಕಾಲೇಜಿನ ದಿನಗಳಲ್ಲಿ ಅವರನ್ನು ನೋಡುತ್ತಾ ಬೆಳೆದವನು ನಾನು. ಶಿವಣ್ಣ, ಅಪ್ಪು ಅವರನ್ನು ನೋಡಿ ಡ್ಯಾನ್ಸ್ ಕಲಿತವನು. ನನ್ನ ಆತ್ಮೀಯ ಸ್ನೇಹಿತನೂ ಆದ ಹರ್ಷ ತಾನು ಹೊರಲು ಸಾಧ್ಯವಾಗುವ ಭಾರಕ್ಕಿಂತಲೂ ಹೆಚ್ಚಿನ ಭಾರ ಹೊತ್ತು ನಡೆಯುವ ತಂತ್ರಜ್ಞ. ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಚೆನ್ನಾಗಿ ದುಡಿಸಿಕೊಳ್ಳುವ ಹರ್ಷನ ಸಿನಿಮಾ ದೊಡ್ಡ ಗೆಲುವು ಸಾಧಿಸಲಿ” ಎಂದರು ಯಶ್.
ಕೋವಿಡ್ ನಂತರ ಚಿತ್ರರಂಗಕ್ಕೆ ಎರಡು ದೊಡ್ಡ ಸಿನಿಮಾಗಳ ಮೂಲಕ ಒಳ್ಳೆಯ ಓಪನಿಂಗ್ ಸಿಕ್ಕಿರುವುದು ಆಶಾದಾಯಕ ಬೆಳವಣಿಗೆ ಎನ್ನುವ ಪುನೀತ್ ಈ ಗೆಲುವು ‘ಭಜರಂಗಿ 2’ನಲ್ಲೂ ಮುಂದುವರೆಯಲಿ ಎಂದು ಆಶಿಸಿದರು. “ಟ್ರೈಲರ್ ನೋಡಿದರೆ ಪ್ರೊಡಕ್ಷನ್ ಕ್ವಾಲಿಟಿ ತುಂಬಾ ಚೆನ್ನಾಗಿದೆ ಎನ್ನುವುದು ಗೊತ್ತಾಗುತ್ತದೆ. ಖಂಡಿತವಾಗಿ ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಚಿತ್ರವಾಗಲಿದೆ. ನಿರ್ದೇಶಕ ಹರ್ಷ ಮತ್ತು ನಿರ್ಮಾಪಕ ಜಯಣ್ಣ – ಭೋಗೇಂದ್ರರ ಶ್ರಮ ಸಾರ್ಥಕವಾಗಲಿ” ಎಂದು ಪುನೀತ್ ಹಾರೈಸಿದರು. ನಟಿ ಭಾವನಾ ಅವರಿಗೆ ಚಿತ್ರದಲ್ಲಿ ತೀರಾ ಭಿನ್ನ ಪಾತ್ರವಿದೆ. “ನನ್ನ ನಡೆ, ನುಡಿ, ಲುಕ್ ಎಲ್ಲವೂ ಇಲ್ಲಿ ಬೇರೆಯ ರೀತಿ ಇದೆ. ನನ್ನ ವೃತ್ತಿಬದುಕಿನಲ್ಲಿ ಇದೊಂದು ವಿಶೇಷ ಪಾತ್ರ. ಸೂಪರ್‌ಸ್ಟಾರ್ ಆದರೂ ಸಿಂಪಲ್ಲಾಗಿರುವ ಶಿವರಾಜಕುಮಾರ್ ನನಗೆ ಯಾವಾಗಲೂ ಇಷ್ಟವಾಗುತ್ತಾರೆ” ಎಂದರು ಭಾವನಾ.
ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಶೃತಿ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾದಾಗ ಅಚ್ಚರಿಯಾಗಿತ್ತು. ಇನ್ನು ಟ್ರೈಲರ್ ಅವರ ಪಾತ್ರದ ಬಗ್ಗೆ ಮತ್ತಷ್ಟು ಹೊಳಹು ನೀಡುತ್ತದೆ. “ಮೊದಲ ಬಾರಿ ಖಳನಾಯಕಿಯಾಗಿ ನಟಿಸಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿಯೂ ನಡೆಸಬೇಕಾಯ್ತು. ಶಿವರಾಜಕುಮಾರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನನಗೆ ಅವರ ಚಿತ್ರದಲ್ಲಿನ ಈ ವಿಶೇಷ ಪಾತ್ರ ಮನ್ನಣೆ ತಂದುಕೊಡಲಿದೆ” ಎನ್ನುವ ನಂಬಿಕೆಯಿದೆ ಎಂದರು ಶೃತಿ. ಚಿತ್ರದ ನಿರ್ದೇಶಕ ಹರ್ಷ ಸಿನಿಮಾದ ಚಿತ್ರೀಕರಣ ಸಾಗಿ ಬಂದ ಹಾದಿಯನ್ನು ಸ್ಮರಿಸಿಕೊಂಡು ಭಾವುಕರಾದರು. ಚಿತ್ರದಲ್ಲಿ ನಟಿಸಿರುವ ಪ್ರಮುಖ ಖಳನಟರಾದ ಪ್ರಸನ್ನ, ಚೆಲುವರಾಜು, ಗಿರೀಶ್ ಹಾಗೂ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಲಾಯ್ತು. ಅತಿಥಿಗಳಾಗಿ ಆಗಮಿಸಿದ್ದ ನಿರ್ದೇಶಕರಾದ ರಿಷಬ್ ಶೆಟ್ಟಿ, ಸಂತೋಷ್ ಆನಂದರಾಮ್, ದಿನಕರ್ ತೂಗುದೀಪ ಮಾತನಾಡಿ ಸಿನಿಮಾಗೆ ಶುಭಹಾರೈಸಿದರು.