‘ಸರ್ದಾರ್ ಉಧಮ್’ ಬ್ರಿಟೀಷರ ವಿರುದ್ಧ ದ್ವೇಷವನ್ನು ಬಿತ್ತುತ್ತದೆ’ ಎಂಬ ಕಾರಣಕ್ಕೆ ಚಿತ್ರವನ್ನು ಆಸ್ಕರ್‌ಗೆ ಆಯ್ಕೆ ಮಾಡಿಲ್ಲ ಎಂದು ಈ ಸಿನಿಮಾದ ಅಭಿಮಾನಿಗಳು ಕಿಡಿಕಾರಿದ್ದಾರೆ. ತೀರ್ಪುಗಾರರ ಸಂಘದ ಸದಸ್ಯರ ವಿರುದ್ಧ ಅಭಿಮಾನಿಗಳು ‘ಸತ್ಯ ಕಹಿ’ ಎಂದು ಹೇಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚೆಗೆ ಅಮೇಜಾನ್ ಪ್ರೈಮ್ OTTಯಲ್ಲಿ ಬಿಡುಗಡೆಯಾಗಿರುವ ‘ಸರ್ದಾರ್ ಉಧಮ್’ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಘೋರ ದಿನಗಳ ಚಿತ್ರಣವನ್ನು ಈ ಚಿತ್ರ ನೀಡಿದೆ. ಆದರೆ, ಇದು ಕೆಲವರಿಗೆ ಅರಗಿಸಿಕೊಳ್ಳಲಾರದಷ್ಟು ಕಷ್ಟ ಆಗಿದೆ ಎಂದು ಇತ್ತೀಚಿನ ಬೆಳವಣಿಗೆಗಳಿಂದ ಗೊತ್ತಾಗುತ್ತಿದೆ. ‘ಸರ್ದಾರ್ ಉಧಮ್’ ಚಿತ್ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಪಡೆಯುವ ಚಿತ್ರಗಳಲ್ಲಿ ಒಂದಾಗಬೇಕಿತ್ತು. ಆದರೆ, ಬ್ರಿಟಿಷರ ವಿರುದ್ಧ ದ್ವೇಷವನ್ನು ಕಾರುವುದು ಸರಿಯಲ್ಲ ಎಂದು ತೀರ್ಪುಗಾರರ ಸದಸ್ಯರು ಹೇಳಿದ್ದಾರೆ. ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವನ್ನು ಘೋಷಿಸಿದ ಕೆಲ ದಿನಗಳ ನಂತರ, ಸ್ಫರ್ಧೆಯಲ್ಲಿದ್ದ ಅತ್ಯಂತ ಜನಪ್ರಿಯ ಚಿತ್ರ ‘ಸರ್ದಾರ್ ಉಧಮ್’ ಅನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂಬ ಪ್ರಶ್ನೆಗೆ ತೀರ್ಪುಗಾರರ ಸದಸ್ಯರು ವಿವರಣೆ ನೀಡಿದ್ದಾರೆ. ಶೂಜಿತ್ ಸಿರ್ಕಾರ್ ಅವರ ‘ಸರ್ದಾರ್ ಉಧಮ್’ ಬಗ್ಗೆ ಮಾತನಾಡುತ್ತಾ, ತೀರ್ಪುಗಾರರ ಮಂಡಳಿಯ ಸದಸ್ಯ ಇಂದ್ರದೀಪ್ ದಾಸ್‌ಗುಪ್ತಾ ಅವರು ಈ ಚಿತ್ರವು ‘ಬ್ರಿಟಿಷರ ಮೇಲಿನ ದ್ವೇಷವನ್ನು ಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.

ಈ ವರ್ಷ ಆಸ್ಕರ್‌ಗೆ ಅಧಿಕೃತ ಪ್ರವೇಶವನ್ನು ನಿರ್ಧರಿಸಿದ ತೀರ್ಪುಗಾರರ ಸದಸ್ಯರಾಗಿರುವ ಇಂದ್ರಾದೀಪ್ ದಾಸ್‌ಗುಪ್ತ ಅವರು ಮಾಧ್ಯಮಗಳೊಂದಿಗೆ ಮಾತನಾಡಿ “ಚಿತ್ರದ ನಿರ್ಮಾಣವು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆ. ಸರ್ದಾರ್ ಉದಾಮ್ ಜಲಿಯನ್ ವಾಲಾಬಾಗ್ ಘಟನೆಯ ಬಗ್ಗೆ ವಿವರಣೆ ನೀಡುವ ಚಿತ್ರವಾಗಿದೆ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ನಾಯಕನ ಮೇಲೆ ಅದ್ದೂರಿ ಚಿತ್ರ ನಿರ್ಮಿಸುವುದು ಪ್ರಾಮಾಣಿಕ ಪ್ರಯತ್ನ. ಆದರೆ ಈ ಪ್ರಕ್ರಿಯೆಯಲ್ಲಿ ಅದು ಮತ್ತೊಮ್ಮೆ ಬ್ರಿಟಿಷರ ಮೇಲೆ ನಮ್ಮ ದ್ವೇಷವನ್ನು ಕಾರುವ ಚಿತ್ರವಾಗಿದೆ. ಜಾಗತೀಕರಣದ ಈ ಯುಗದಲ್ಲಿ ಹಳೆಯ ದ್ವೇಷವನ್ನು ಇನ್ನೂ ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ತೀರ್ಪುಗಾರರ ಮತ್ತೊಬ್ಬ ಸದಸ್ಯ ಸುಮಿತ್ ಬಸು ಕೂಡ “ಕ್ಯಾಮೆರಾ ವರ್ಕ್, ಸಂಕಲನ, ಧ್ವನಿ ವಿನ್ಯಾಸ ಮತ್ತು ಅವಧಿಯ ಚಿತ್ರಣ ಸೇರಿದಂತೆ ಸಿನಿಮೀಯ ಗುಣಮಟ್ಟಕ್ಕಾಗಿ ಅನೇಕರು ಸರ್ದಾರ್ ಉಧಮ್ ಅನ್ನು ಇಷ್ಟಪಟ್ಟಿದ್ದಾರೆ. ಆದರೆ ಚಿತ್ರದ ಅವಧಿ ಜಾಸ್ತಿ ಆಯಿತು. ಮತ್ತು ಕ್ಲೈಮ್ಯಾಕ್ಸ್ ಕೂಡ ಉದ್ದ ಆಯಿತು ಎಂದಿದ್ದಾರೆ. ಶೂಜಿತ್ ಸಿರ್ಕಾರ್ ಅವರ ‘ಸರ್ದಾರ್ ಉಧಮ್’ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಉಧಮ್ ಸಿಂಗ್ ಅವರ ಜೀವನ ಮತ್ತು ಹೋರಾಟಗಳನ್ನು ತೋರಿಸುತ್ತದೆ.ಅವರು ಮೈಕೆಲ್ ಓ ಡೈಯರ್ ನನ್ನು ಕೊಂದು ಹೆಸರುವಾಸಿಯಾದವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ, ಈಸ್ಟ್ ಇಂಡಿಯಾ ಅಸೋಸಿಯೇಷನ್ ​​ಮತ್ತು ಸೆಂಟ್ರಲ್ ಏಷ್ಯನ್ ಸೊಸೈಟಿಯ ಜಂಟಿ ಸಭೆಯಲ್ಲಿ ಲಂಡನ್‌ನ ಕ್ಯಾಕ್ಸ್‌ಟನ್ ಹಾಲ್‌ನಲ್ಲಿ ಮಾತನಾಡುತ್ತಿದ್ದ  ಓ’ಡ್ವೈರ್‌ಗೆ ಉಧಮ್ ಗುಂಡು ಹಾರಿಸಿ ಕೊಂದಿದ್ದರು.

ಆದರೆ, ಈ ಕಾರಣ ಕೊಟ್ಟು ಚಿತ್ರವನ್ನು ಆಸ್ಕರ್ ವಂಚಿತವನ್ನಾಗಿ ಮಾಡಿರುವುದರ ಬಗ್ಗೆ  ಆನ್‌ಲೈನ್‌ನಲ್ಲಿ ಅಭಿಮಾನಿಗಳಿಂದ ಭಾವೋದ್ರಿಕ್ತ ಪ್ರತಿಕ್ರಿಯೆ ಬಂದಿದೆ. ಅವರಲ್ಲಿ ಒಬ್ಬರು “‘ಈ ದ್ವೇಷವನ್ನು ಹಿಡಿದಿಟ್ಟುಕೊಳ್ಳಬೇಡಿ ಅಂದರೆ ಏನರ್ಥ? ಕೊಹಿನೂರ್ ಮತ್ತು ಭಾರತದಿಂದ ದರೋಡೆ ಮಾಡಿದ ಸುಮಾರು $45 ಟ್ರಿಲಿಯನ್ ಅನ್ನು ಅವರು  ಹಿಡಿದಿಟ್ಟುಕೊಳ್ಳುವುದಿಲ್ಲ ಎಂದು ನೀವು ಭರವಸೆ ನೀಡಿದರೆ ನಾವು ಖಂಡಿತವಾಗಿಯೂ ದ್ವೇಷ ಮಾಡುವುದಿಲ್ಲ ಎಂದಿದ್ದರೆ, ಇನ್ನೊಬ್ಬರು “ಸತ್ಯದ ವನ್ನು ತುಳಿಯಲಾಗುತ್ತಿದೆ! ಎಂದಿನಂತೆ!” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ನೆಟ್ಟಿಗರು “ಸರ್ದಾರ್ ಉಧಮ್ ಪ್ರವೇಶಕ್ಕೆ ಅರ್ಹರೇ ಅಥವಾ ಇಲ್ಲವೇ ಎಂಬುದು ಬೇರೆ ಪ್ರಶ್ನೆ, ಆದರೆ ಇಂತಹ ಕಾರಣ ಕೊಟ್ಟುಚಿತ್ರವನ್ನು ನಿರ್ಬಂಧಿಸುವುದು ವರ್ಣಭೇದ ನೀತಿ ಮತ್ತು ಶಕ್ತಿಯ ಡೈನಾಮಿಕ್ಸ್ ಅನ್ನು ಪ್ರದರ್ಶಿಸುತ್ತದೆ. ಜಾಗತೀಕರಣ ಎಂದರೆ ಐತಿಹಾಸಿಕ ಅನ್ಯಾಯದ ವಿರುದ್ಧ ನಾವು ಇನ್ನು ಮುಂದೆ ಧ್ವನಿ ಎತ್ತಲು ಸಾಧ್ಯವಿಲ್ಲ ಎಂದಲ್ಲ” ಎಂದು ತಿಳಿ ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here