ಬಿಹಾರದ ಕುಗ್ರಾಮವೊಂದರ ಕಥಾನಕ ‘ಭೋರ್’. ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ ಹಿಂದಿ ಸಿನಿಮಾ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಸಾಮಾಜಿಕ ಕಳಕಳಿಯ ಕಥಾವಸ್ತು. ಪ್ರಸ್ತುತ ಎಂಎಕ್ಸ್ ಪ್ಲೇಯರ್ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.
ಆಕೆಯ ಹೆಸರು ಬುದ್ಧನಿ. ಸುಮಾರು 15 ವಯಸ್ಸಿನ ಆಸು ಪಾಸಿನ ಹೆಣ್ಣುಮಗಳು. ಬಿಹಾರದ ಹೇಳ ಹೆಸರಿಲ್ಲದಂತಹ ಒಂದು ಸಣ್ಣ ಗ್ರಾಮ. ಆಕೆಯ ಅಪ್ಪ ಸದಾ ನಶೆಯಲ್ಲೇ ಇರುವ ಮಹಾನ್ ಕುಡುಕ. ಒಮ್ಮೆ ಹೀಗೆ ಕುಡಿಯುತ್ತಿರುವಾಗ ತನ್ನ ಜೊತೆಯಲ್ಲಿ ಕುಡಿಯುತ್ತಿದ್ದ ಮತ್ತೊಬ್ಬ ಕುಡುಕನಿಗೆ ತನ್ನ ಮಗಳನ್ನು ನಿನ್ನ ಮಗನಿಗೆ ಮದುವೆ ಮಾಡಿ ಕೊಡುವುದಾಗಿ ಮಾತು ಕೊಟ್ಟು ಬಿಡುತ್ತಾನೆ. ಆದರೆ ಆ ಹುಡುಗಿಗೆ ಓದುವುದೆಂದರೆ ಪಂಚಪ್ರಾಣ. ಹಾಗಾಗಿ ಮದುವೆಯನ್ನು ನಿರಾಕರಿಸುತ್ತಾಳೆ. ಹೀಗಿರುವಾಗ ಆಕೆಯನ್ನು ಮದುವೆ ಆಗುವ ಹುಡುಗ ಸ್ವತಃ ಇವಳನ್ನು ಭೇಟಿ ಮಾಡಿ ಮದುವೆ ಆದ ನಂತರವೂ ನಿನ್ನ ಓದು ಮುಂದುವರಿಸಬಹುದು ಎಂದು ಹೇಳಿ ಮದುವೆಗೆ ಒಪ್ಪಿಸುತ್ತಾನೆ.
ಇದರಂತೆ ಮದುವೆ ಸಹ ನಡೆದು ಹೋಗುತ್ತದೆ. ನಂತರ ಆಕೆ ತನ್ನ ಶಿಕ್ಷಣ ಮುಂದುವರಿಸಲು ಸಾಧ್ಯವಾಯಿತೇ? ಆಕೆಯ ಜೀವನದಲ್ಲಿ ನಡೆದ ಘಟನೆಗಳು ಏನು ಎಂಬುದನ್ನು ನೀವು ಚಿತ್ರದಲ್ಲಿ ನೋಡಿ. ನೈಜ ಚಿತ್ರೀಕರಣ ಈ ಚಿತ್ರದಲ್ಲಿ ನನಗೆ ತುಂಬಾ ಇಷ್ಟವಾದ ವಿಷಯ. ಆ ಹಳ್ಳಿಯ ಸೊಗಡು, ಹಾವ ಭಾವ, ಜೀವನ ಶೈಲಿ, ಅವರ ಕಷ್ಟಗಳು, ಅತಿಯಾಗಿ ಸಂತೋಷ ಪಡುವ ಕ್ಷಣಗಳು ಹೀಗೆ ಪ್ರತಿಯೊಂದು ಸನ್ನಿವೇಶಗಳನ್ನು ನಿರ್ದೇಶಕರು ತುಂಬಾ ಆಪ್ತವಾಗಿ ಚಿತ್ರಿಸಿದ್ದಾರೆ. ಕಲಾವಿದರ ಆಯ್ಕೆಯೂ ಪರ್ಫೆಕ್ಟ್ ಆಗಿದೆ. ಕಲಾವಿದರ ಅಭಿನಯ ಅಷ್ಟೇ ನೈಜವಾಗಿದೆ. ಛಾಯಾಗ್ರಾಹಕರು ಹಳ್ಳಿಯ ಜೀವನವನ್ನು ಅಷ್ಟೇ ಸೊಗಸಾಗಿ, ನೈಜವಾಗಿ ಸೆರೆಹಿಡಿದಿದ್ದಾರೆ. ಸೌಂಡ್ ಡಿಸೈನಿಂಗ್ ಅತ್ಯುತ್ತಮ ವೃತ್ತಿಪರತೆಗೆ ಸಾಕ್ಷಿ. ತೆರೆ ಮೇಲೆ ಬರುವ ಪಾತ್ರಗಳನ್ನು ಬಿಟ್ಟು ವಸ್ತುಗಳು, ಹರಿವ ನೀರು, ಪಕ್ಷಿಗಳ ಕೂಗು, ಹಂದಿಗಳು ಗೋವುಗಳು ಹೀಗೆ ಪ್ರತೀ ಶಬ್ಧಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.
ಭಾಷೆ: ಹಿಂದಿ | ನಿರ್ದೇಶನ: ಕಾಮಾಕ್ಯ ನಾರಾಯಣ್ ಸಿಂಗ್ | ನಿರ್ಮಾಣ: ರೋಹಿತ್ ಸಿಂಗ್ | ತಾರಾಬಳಗ: ನೀನೀಶ್ ನೀಲ್, ಸವೀರಿ ಗೌರ್, ದೇವೇಶ್ ರಂಜನ್