ವೈಲ್ಡ್‌ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದ ಅವಿನಾಶ್ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಸಾಕಷ್ಟು ಆತ್ಮವಿಶ್ವಾಸದಿಂದ ಹೋಗಿದ್ದ ಅವರು ವೀಕ್ಷಕರ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಸ್ವತಃ ಅವರೇ ಈ ಬಗ್ಗೆ ಪಶ್ಚಾತ್ತಾಪ ಪಡುತ್ತಾರೆ. ಜಿಯೋ ಸಿನಿಮಾದ ಸಂದರ್ಶನದಲ್ಲಿ ಅವರು ಬಿಗ್‌ಬಾಸ್ ಎಕ್ಸ್‌ಪೀರಿಯನ್ಸ್ ಮೆಲುಕು ಹಾಕಿದ್ದಾರೆ.
ಅವಿನಾಶ್ ಶೇಟ್ಟಿ ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದವರು. ಮನೆಯೊಳಗೆ ಕಾಲಿಡುತ್ತಿದ್ದಂತೆ, ‘ಆನೆಯನ್ನ ಪಳಗಿಸೋಕೆ ಒಬ್ಬ ಮಾವುತ ಬೇಕು ಅಂತ advertisement ನೋಡ್ದೆ. ಹಾಗಾಗಿ ಬಂದೆ’ ಎಂದಿದ್ದರು. ಅವರ ಸ್ಟೈಲ್, ಕಾನ್ಫಿಡೆನ್ಸ್, ಮಾತು ಎಲ್ಲವೂ ಅವರು ಮನೆಯೊಳಗೆ ಮಿಂಚಲಿದ್ದಾರೆ ಎಂಬುದನ್ನು ದೃಢೀಕರಿಸುವ ಹಾಗೆಯೇ ಇತ್ತು. ಆದರೆ ಅವಿನಾಶ್ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಹಾಗಾಗಿಯೇ ಈ ವಾರ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಬ್ಯಾಕ್ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಿಂದ ಹೊರಗೆ ಬರುವುದರ ಮೂಲಕ ಅರ್ಧದಲ್ಲಿ ಎಂಟ್ರಿ ಕೊಟ್ಟು ಮನೆಯೊಳಗೆ ಜಾಗ ಗಿಟ್ಟಿಸುವುದು ಸುಲಭದ ಮಾತಲ್ಲ ಎಂಬುದನ್ನು ಸಾಬೀತುಮಾಡಿದ್ದಾರೆ.
ಮೈಕಲ್ ಮತ್ತು ಅವಿನಾಶ್ ಭಾನುವಾರದ ಸಂಚಿಕೆಯ ಕೊನೆಯಲ್ಲಿ ಕಾರಿನಲ್ಲಿ ಕೂತು ಮನೆಯಿಂದ ಹೊರಗೆ ಹೋದಾಗ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ನಿರೀಕ್ಷೆ ಸುಳ್ಳಾಗಿ ಬಿಗ್‌ಬಾಸ್ ಸೋಮವಾರದ ಸಂಚಿಕೆಯಲ್ಲಿ ಹೊಸದೊಂದು ಟ್ವಿಸ್ಟ್ ನೀಡಿದ್ದಾರೆ. ಮೈಕಲ್ ಮತ್ತೆ ಮನೆಯೊಳಗೆ ಬಂದಿದ್ದಾರೆ. ಅವಿನಾಶ್ ಒಬ್ಬರೇ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಗೆ ಬಂದಿರುವ ಅವಿನಾಶ್ ಶೆಟ್ಟಿ, JioCinemaಗೆ ಎಕ್ಸ್‌ಕ್ಲ್ಯೂಸೀವ್ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಮನೆಯೊಳಗಿನ ಜರ್ನಿಯ ಬಗ್ಗೆ ಮಾತಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ..
https://go.jc.fm/fRhd/f5ykgu59
‘ಎಲ್ಲರಿಗೂ ನಮಸ್ಕಾರ, ನಾನು ಅಸ್ತಿಕ್ ಅವಿನಾಶ್ ಶೆಟ್ಟಿ. ಈಗ ತಾನೇ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದೀನಿ. ತುಂಬಾನೇ ಫೀಲಿಂಗ್ಸ್ ಇವೆ. ವೈಲ್ಡ್‌ಕಾರ್ಡ್ ಕಂಟೆಸ್ಟೆಂಟ್ ಆಗಿ ನಾಲ್ಕು ವಾರ ಇದ್ದೆ. ನನ್ನ ಬೆಸ್ಟ್ ಕೊಡಲು ಟ್ರೈ ಮಾಡಿದೆ. ಫಿನಾಲೆಯ ಸಮೀಪಕ್ಕೆ ಹೋಗಿ ಹೊರಗೆ ಬಂದಿದ್ದೀನಿ. ಹಾಗಾಗಿ ಸ್ವಲ್ಪ ದುಃಖ ಆಗ್ತಿದೆ. ನಾನು ನಿರೀಕ್ಷೆ ಮಾಡಿರಲಿಲ್ಲ. ಸೇವ್ ಆಗ್ತೀನಿ ಅಂತಾನೇ ಅಂದ್ಕೊಂಡಿದ್ದೆ. ಆದರೆ ಹಣೆಬರಹ ಏನೂ ಮಾಡಕ್ಕಾಗಲ್ಲ.
ನಿರೀಕ್ಷೆ ಹೆಚ್ಚಿಗೆಯೇ ಇತ್ತು | ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಅಂದ ಕೂಡಲೇ ನಿರೀಕ್ಷೆ ಹೆಚ್ಚಿಗೆಯೇ ಇರುತ್ತದೆ. ಆ ನಿರೀಕ್ಷೆಯನ್ನು ಪೂರೈಸುವ ಹಾದಿಯಲ್ಲಿಯೇ ನಾನಿದ್ದೆ ಕೂಡ. ಒಂದು ವಾರ ಗ್ರೇಸ್ ಟೈಮ್ ಕೂಡ ಇತ್ತು. ನಾನು ಹೋದ ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಅದನ್ನು ನಾನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದೆ ಅನಿಸುತ್ತದೆ. ಆದರೆ ಗೇಮ್‌ನಲ್ಲಿ ನನ್ನತನವನ್ನು ಬಿಟ್ಟುಕೊಡಲಿಲ್ಲ. ನಾನು ಒಳಗೆ ಹೋದಾಗ ವಿನಯ್, ತನಿಷಾ, ಕಾರ್ತೀಕ್ ಎಲ್ಲರ ಬಗ್ಗೆಯೂ ಕೆಲವು ಪೂರ್ವನಿರ್ಧಾರಿತ ಅಭಿಪ್ರಾಯಗಳಿದ್ದವು. ಎಲ್ಲರಿಗಿಂತ ಕಡಿಮೆ ಪರಿಚಯ ಇದ್ದಿದ್ದು ವರ್ತೂರ್ ಸಂತೋಷ್ ಮತ್ತು ತುಕಾಲಿ ಅವರ ವ್ಯಕ್ತಿತ್ವ.
ಐವತ್ತು ದಿನಗಳ ನಂತರ ಮನೆಗೆ ಹೋದಾಗ ಬೇರೆ ರೀತಿಯೇ ಸ್ಪಂದನೆ ಸಿಕ್ತಾ ಬಂತು. ಯಾರಿವನು? ಯಾಕೆ ಬಂದಿದಾನೆ? ಅನ್ನುವ ರೀತಿಯಲ್ಲಿಯೇ ನೋಡಿದರು. ನಾನಾಗೇ ಹೋಗಿ ಮಾತಾಡಲು ಯತ್ನಿಸಿದರೂ ರೆಸ್ಪಾನ್ಸ್ ಚೆನ್ನಾಗಿರಲಿಲ್ಲ. ಆದರೆ ವರ್ತೂರು ಸಂತೋಷ್ ಮತ್ತು ತುಕಾಲಿ ಅವರು ತುಂಬಾನೇ ಸ್ನೇಹದಿಂದ ನೋಡಿಕೊಂಡರು. ನಮ್ಮ ಅಭಿಪ್ರಾಯಗಳು ಮ್ಯಾಚ್ ಆಗುತ್ತಿದ್ದವು. ಕೆಲವೊಂದು ಟಾಸ್ಕ್‌ಗಳಲ್ಲಿ ಎಂಟರ್‌ಟೇನಿಂಗ್ ಆಗಿರಬೇಕು ಎಂಬ ಕಾರಣಕ್ಕೆ ಕೆಲವು ಚಟುವಟಿಕೆ ಮಾಡಿದ್ದೆ. ಉದಾಹರಣೆ, ಕುದುರೆಯ ಹಾಗೆ ಮಾಡುವುದು. ಇನ್ನೊಂದು ಕಡೆ ಟಾಸ್ಕ್‌ನಲ್ಲಿ ಜಿಂಕೆ ಥರ ಆಡಿದೆ. ಕುದುರೆ, ಜಿಂಕೆ, ಮಾವುತ ಅಂತೆಲ್ಲ ಟ್ಯಾಗ್ ಮಾಡಲು ನೋಡಿದರು. ಕೆಲವೊಂದಿಷ್ಟು ಜನ ಗ್ರಾಂಟೆಡ್ ತಗೊಳ್ಳಲು ಟ್ರೈ ಮಾಡಿದ್ರು ಅನಿಸ್ತು.
ನಾನು ಹೋದ ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡಿದೀನಿ, ಗೆದ್ದಿಲ್ಲ. ಸೆಕೆಂಡ್ ವೀಕ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಟಾಪ್ 4 ಸ್ಪರ್ಧಿಗಳಲ್ಲಿ ನಾನಿದ್ದೆ. ನನ್ನ ಶಕ್ತಿಮೀರಿ ಪ್ರದರ್ಶನ ಕೊಟ್ಟಿದೀನಿ. ಈ ವಾರ ಎಲ್ಲ ವಿಚಾರದಲ್ಲಿಯೂ ಮುಂದಿದ್ದೆ. ಆದರೆ ಸಂಗೀತಾ ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ನಾನು ಸಂಗೀತಾಗೆ ಎಲ್ಲಿಯೂ ತಪ್ಪು ಆಪಾದನೆ ಮಾಡಿಲ್ಲ. ಹಾಗಾಗಿ ಸಂಗೀತಾ ಅವರಿಗೆ ತಪ್ಪು ಅರ್ಥ ಮಾಡಿಕೊಳ್ಳಲು ಕಾರಣಗಳೇ ಇರಲಿಲ್ಲ. ಆದರೆ ಅವರು ಮತ್ತೆ ತಂಡವನ್ನು ಹೊಂದಿಸುವಾಗ ನನ್ನನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ತನಿಷಾ ತಂಡ ಸೇರಿಕೊಂಡೆ. ಅಲ್ಲಿಯೂ ನನ್ನ ಪ್ರಯತ್ನ ಮುಂದುವರಿಸಿದೆ. ಕ್ಯಾಪ್ಟನ್ಸಿ ಟಾಸ್ಕ್ ಆಡಲು ಕೊನೆಕ್ಷಣದವರೆಗೂ ಟ್ರೈ ಮಾಡಿದೀನಿ.
ಫೇಕ್ – ಜೆನ್ಯೂನ್ | ನನಗೆ ವರ್ತೂರ್ ಸಂತೋಷ್ ತುಂಬ ಜೆನ್ಯೂನ್ ಮನುಷ್ಯ ಅನಿಸುತ್ತದೆ. ವಿನಯ್ ಸ್ವಲ್ಪ ಫೇಕ್ ಮಾಡ್ತಿದ್ದಾರೆ ಅನಿಸುತ್ತಿದೆ. ತನಿಷಾ ಕೂಡ ಸ್ವಲ್ಪ ಫೇಕ್ ಮಾಡುತ್ತಿದ್ದಾರೆ. ವರ್ತೂರ್ ಸಂತೋಷ್ ಖಂಡಿತ ಅಂತಿಮ ಹಂತಕ್ಕೆ ಹೋಗುತ್ತಾರೆ. ಅವರ ಜೊತೆಗೆ ಪ್ರತಾಪ್ ಕೂಡ ಬರಬಹುದು. ಪ್ರತಾಪ್ ಅವರಿಗೆ ಅಲ್ಲಿನ ಸಂದರ್ಭವನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ತುಂಬ ಚೆನ್ನಾಗಿ ಗೊತ್ತಿದೆ. ಸಂಗೀತಾ ಕೂಡ ಟಾಪ್ 5ನಲ್ಲಿ ಇರುತ್ತಾರೆ. ಅವರು ಜಾಸ್ತಿ ಮಾಡುತ್ತಾರೆ, ಆದರೂ ಅವರಿಗೆ ಟಾಸ್ಕ್‌ನಲ್ಲಿ ಕಮ್‌ಬ್ಯಾಕ್ ಮಾಡುವ ರೀತಿಯಿಂದಲೇ ಅವರು ಫೈನಲ್‌ಗೆ ಹೋಗುತ್ತಾರೆ ಅನಿಸುತ್ತದೆ. ಜೊತೆಗೆ ಕಾರ್ತೀಕ್ ಕೂಡ ತುಂಬ ಪ್ರಬಲ ಸ್ಪರ್ಧಿ. ತುಕಾಲಿ ಬಹಳ ಬುದ್ಧಿವಂತ. ಅಷ್ಟೇ ಸ್ವಯಂಕೇಂದ್ರಿತ ಮನುಷ್ಯ. ನನಗೆ ವೈಯಕ್ತಿಕವಾಗಿ ವರ್ತೂರ್ ಸಂತೋಷ್ ಗೆಲ್ಲಬೇಕು ಎಂಬ ಆಸೆ ಇದೆ. ಮುಂದಿನ ವಾರ ನನ್ನ ಜಾಗದಲ್ಲಿ ಸಿರಿ ಇರುತ್ತಾರೆ ಅನಿಸುತ್ತದೆ.
ಫನ್ ಫ್ರೈಡೆ | ಜಿಯೋ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ನಲ್ಲಿ ನನಗೆ ಇಷ್ಟವಾಗಿದ್ದು, ಕಣ್ಣಿಗೆ ಪಟ್ಟಿ ಹಾಕಿಕೊಂಡು ಬಾಲ್ ಕಲೆಕ್ಟ್ ಮಾಡುವ ಟಾಸ್ಕ್. ಅದನ್ನು ನಾನು ತುಂಬ ಎಂಜಾಯ್ ಮಾಡಿದೆ. ಬಿಗ್‌ಬಾಸ್ ಮನೆ ಎಂಬುದೇ ಒಂದು ಮ್ಯಾಜಿಕ್. ಅಲ್ಲಿ ಇರುವ ಸ್ಪರ್ಧಿಗಳಿಗಷ್ಟೇ ಅದರ ಮ್ಯಾಜಿಕ್ ಗೊತ್ತಾಗಲು ಸಾಧ್ಯ. ಅಲ್ಲಿನ ಶಿಸ್ತನ್ನು ಮಿಸ್ ಮಾಡ್ಕೋತೀನಿ. ಯಾಕೆಂದರೆ ಲೈಫ್‌ನಲ್ಲಿ ಡಿಸಿಪ್ಲೀನ್ ಯಾಕೆ ಮುಖ್ಯ ಎಂಬುದನ್ನು ಕಲಿಸಿಕೊಟ್ಟ ಮನೆ ಅದು. ಬಿಗ್‌ಬಾಸ್ ನನ್ನ ಜೀವನದಲ್ಲಿಯೇ ಒಂದು ಗಾಡ್‌ಫಾದರ್. ಯಾಕೆಂದರೆ ನಾಲ್ಕೇ ವಾರ ಇದ್ದರೂ ಬದುಕಿನಲ್ಲಿ ನಲ್ವತ್ತು ವರ್ಷ ಇದ್ದಂಥ ಪಾಠ ಕಲಿಸಿದೆ. ಎಷ್ಟೇ ಚಿಕ್ಕ ವಿಚಾರವಾಗಲಿ, ಕೊರತೆಯಾಗಲಿ, ಸಮಸ್ಯೆಯಾಗಲಿ ತಕ್ಷಣವೇ ಗಮನಿಸಿ ಕೊಡುವ ಪರಿಹಾರ, ಪ್ರೀತಿಗೆ ನಾನು ಆಭಾರಿಯಾಗಿದ್ದೀನಿ. ಹಾಗಾಗಿಯೇ ಬಿಗ್‌ಬಾಸ್‌ಗೆ ನಾನು ಋಣಿಯಾಗಿರುತ್ತೇನೆ.