ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಳ್ಳುವ ಬಿಗ್‌ಬಾಸ್ 10ನೇ ಸೀಸನ್ ಅಕ್ಟೋಬರ್ 8ರಿಂದ ಆರಂಭವಾಗಲಿದೆ. ಕಲರ್ಸ್ ಕನ್ನಡ ವಾಹಿನಿ ಈ ಬಾರಿ 12 ಸಾವಿರ ಚದರಡಿಯ ದೊಡ್ಡ ಬಿಗ್‌ಬಾಸ್ ಮನೆ ಕಟ್ಟಿದೆ. JioCinema 24 ಗಂಟೆ ಲೈವ್ ಚಾನೆಲ್‌ನಲ್ಲಿ ಬಿಗ್‌ಬಾಸ್ ಉಚಿತವಾಗಿ ನೋಡಬಹುದಾಗಿದೆ. ‘ಹ್ಯಾಪಿ ಬಿಗ್ ಬಾಸ್’ – ಇದು ಈ ಬಾರಿಯ ಥೀಮ್.
ಬಿಗ್‌ಬಾಸ್ 10ನೇ ಸೀಸನ್‌ಗೆ ಅಕ್ಟೋಬರ್ 8ರಂದು ಚಾಲನೆ ಸಿಗಲಿದೆ. ಅಂದು ಸಂಜೆ 6 ಗಂಟೆಗೆ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಸೇರಲಿದ್ದಾರೆ. ದೈನಂದಿನ ಸಂಚಿಕೆಗಳು ಮರುದಿನದಿಂದ ಪ್ರತಿ ದಿನ ರಾತ್ರಿ ಒಂಬತ್ತೂವರೆಗೆ ಪ್ರಸಾರವಾಗುತ್ತವೆ. ಬಿಗ್‌ಬಾಸ್ ಕನ್ನಡದ ಹತ್ತನೇ ವರ್ಷಾಚರಣೆಯ ಈ ಸೀಸನ್ ಅನ್ನು, ವಯಕಾಮ್ 18ರ OTT ಪ್ಲಾಟ್‌ಫಾರ್ಮ್ JioCinemaದಲ್ಲಿ 24 ಗಂಟೆ ಲೈವ್ ಚಾನಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗಿದೆ. ಹತ್ತನೇ ಸೀಸನ್ ಕನ್ನಡ ಬಿಗ್‌ಬಾಸ್‌ನಲ್ಲಿ ಹಲವು ವಿಶೇಷಗಳಿವೆ. ಇದೇ ಮೊದಲ ಬಾರಿಗೆ ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್ ಹೊಂದಿರುವುದು ಮೊದಲನೇ ವಿಶೇಷ. ಹದಿನಾರು ಸ್ಪರ್ಧಿಗಳು ಭಾಗವಹಿಸಲಿದ್ದು, 73 ಕ್ಯಾಮೆರಾಗಳು ಅವರನ್ನು ಗಮನಿಸಲಿವೆ.
ಹತ್ತನೇ ಸೀಸನ್‌ಗೆಂದೇ ಕಲರ್ಸ್ ಕನ್ನಡ ಹೊಸ ಬಿಗ್‌ಬಾಸ್ ಮನೆ ಕಟ್ಟಿರುವುದು ಮತ್ತೊಂದು ವಿಶೇಷ. ಬೆಂಗಳೂರಿನ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಈ ಹೊಸ ಮನೆ ಹೆಚ್ಚು ವಿಶಾಲವಾಗಿದ್ದು, ಬೇರೆಲ್ಲಾ ಭಾಷೆಗಳ ಬಿಗ್‌ಬಾಸ್ ಮನೆಗಳಿಗಿಂತ ದೊಡ್ಡದಾಗಿದೆ. 12 ಸಾವಿರ ಚದರಡಿಗಳ ಈ ಮಹಾಮನೆಯಲ್ಲಿ ಮೊದಲಿಗಿಂತ ದೊಡ್ಡ ಆಟಗಳನ್ನು ಆಡುವುದು ಹಾಗೂ ಟಾಸ್ಕ್‌ಗಳನ್ನು ಮಾಡುವುದು ಸಾಧ್ಯವಿದೆ. ಹಾಗಾಗಿ ಭಾವನೆಗಳ ಆಟವೂ ಈ ಸಲ ದೊಡ್ಡದಾಗಲಿದೆ.
ಕಾರ್ಯಕ್ರಮದ ಸೂತ್ರಧಾರ ನಟ ಕಿಚ್ಚ ಸುದೀಪ್ ಅವರಿಗೆ ಇಷ್ಟು ಬೇಗ ಹತ್ತು ವರ್ಷ ಉರುಳಿಹೋದ ಬಗ್ಗೆ ಬೆರಗು. ‘ನನ್ನ ಪ್ರಕಾರ ಬಿಗ್ ಬಾಸ್ ಒಂದು ಶೋ ಅಲ್ಲ, ಇದು ನನ್ನ ಹ್ಯಾಪಿ ಹೋಂ. ಪ್ರತಿ ಸೀಸನ್‌ನಲ್ಲೂ ಹೊಸ ಹೊಸ ವ್ಯಕ್ತಿತ್ವಗಳನ್ನು ಪರಿಚಯ ಮಾಡಿಕೊಳ್ಳುವುದು ಒಂದು ವಿಶಿಷ್ಟ ಅನುಭವ. ಹತ್ತನೇ ಸೀಸನ್‌ಗೆ ಎಲ್ಲರಂತೆ ನಾನೂ ಕಾತರನಾಗಿದ್ದೇನೆ’ ಎನ್ನುತ್ತಾರೆ ಸುದೀಪ್. ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಪ್ರಕಾರ ಈ ಸೀಸನ್ ವಿಶೇಷವಾಗಲು ಮೂರು ಕಾರಣಗಳಿವೆ. ‘ಹತ್ತನೇ ಸೀಸನ್ ಎಂಬುದೇ ಒಂದು ಸಂಭ್ರಮ. ಸೀಸನ್ನಿಗೊಂದು ಥೀಮ್ ಅಳವಡಿಸಿರುವುದು ಆಟದ ರೀತಿಯನ್ನು ಬದಲಿಸಲಿದೆ. ವಿಶಾಲವಾದ ಹೊಸ ಮನೆ ಮೂರನೇ ವಿಶೇಷ. ಮೂರೂ ಸೇರಿ ಹಿಂದೆಂದೂ ಕಾಣದಂತ ಮನರಂಜನೆಗೆ ದಾರಿಮಾಡಿಕೊಡಲಿವೆ’ ಎನ್ನುತ್ತಾರವರು.
ಬಾನೀಜೆ ಮತ್ತು ಎಂಡಮಾಲ್ ಶೈನ್ ಸಿಇಒ ದೀಪಕ್ ಧರ್ ಪಾಲಿಗೆ ಬಿಗ್‌ಬಾಸ್ ಶೋ ಆಯೋಜಿಸುವುದು ಹೆಮ್ಮೆಯ ಸಂಗತಿ. ಆಟ ಮತ್ತು ಭಾವನೆಗಳ ತಾಕಲಾಟದ ಮತ್ತೊಂದು ರೋಮಾಂಚಕ ಸೀಸನ್‌ಗೆ ತಯಾರಾಗಿದ್ದೇವೆ ಎನ್ನುತ್ತಾರವರು. ಇದೇ ಮೊದಲ ಬಾರಿಗೆ ‘ಬಿಗ್‌ಬಾಸ್ ಕನ್ನಡ’ JioCinemaದಲ್ಲಿಯೂ ಪ್ರಸಾರವಾಗಲಿದ್ದು, ದಿನದ ಇಪ್ಪತ್ತನಾಲ್ಕು ಗಂಟೆಯೂ ಮನೆಯಲ್ಲಿ ಏನಾಗುತ್ತಿದೆ ಎಂಬುದರ ನೇರಪ್ರಸಾರವನ್ನು ವೀಕ್ಷಕರು 24 ಗಂಟೆ ಲೈವ್ ಚಾನಲ್‌ನಲ್ಲಿ ನೋಡಬಹುದಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಿನದ ಎಪಿಸೋಡಿನ ಹೊರತಾಗಿಯೂ ಹಲವು ವೈವಿಧ್ಯದ ಎಕ್ಸ್‌ಕ್ಲ್ಯೂಸಿವ್ ಮತ್ತು ಅನ್‌ಸೀನ್ ಮನರಂಜನಾ ಕಂಟೆಂಟ್‌ಗಳು JioCinemaದಲ್ಲಿ ಇರಲಿವೆ. ‘ಬಿಗ್ ನ್ಯೂಸ್’, ‘ಅನ್‌ಸೀನ್ ಕಥೆಗಳು’, ‘JioCinema ಫನ್ ಫ್ರೈಡೇ’, ‘ಡೀಪ್ ಆಗಿ ನೋಡಿ…’ ಹೀಗೆ ಹಲವಾರು ರೂಪದಲ್ಲಿ, ಮನೆಯೊಳಗಿನ ಕುತೂಹಲಕಾರಿ ಘಟನಾವಳಿಗಳನ್ನು ವೀಕ್ಷಕರಿಗೆ ತಲುಪಿಸಲು ವೇದಿಕೆ ಸಜ್ಜುಗೊಂಡಿದೆ. ಮನೆಯೊಳಗೆ ನಡೆಯುವ ನಾಟಕೀಯ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ‘ಲೈವ್ ಶಾರ್ಟ್’ ಇನ್ನೊಂದು ವಿಶೇಷ ಆಕರ್ಷಣೆ.
ಇದರ ಜೊತೆಜೊತೆಯಲ್ಲಿ ‘ವಾಚ್ ಆಂಡ್ ವಿನ್’, ‘ಮೀಮ್ ದ ಮೊಮೆಂಟ್’, ‘ಹೈಪ್ ಚಾಟ್’, ‘ವಿಡಿಯೊ ವಿಚಾರ್’ಗಳ ಮೂಲಕ ಬಿಗ್‌ಬಾಸ್ ಕನ್ನಡದ ಅಭಿಮಾನಿಗಳಿಗೆ, ಸಂವಾದ ನಡೆಸುವ ಅಪೂರ್ವ ಅವಕಾಶವನ್ನೂ ಕಲ್ಪಿಸಿದೆ. ಇಷ್ಟೇ ಅಲ್ಲ, ಇದೇ ಮೊದಲ ಬಾರಿಗೆ, ಟೀವಿಯಲ್ಲಿ ಶೋ ನೋಡಿ, ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ JioCinemaದಲ್ಲಿ ಉತ್ತರಿಸುವ ಮೂಲಕ ಪ್ರತಿದಿನವೂ ರೋಮಾಂಚಕಾರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವನ್ನೂ ಪರಿಚಯಿಸಲಾಗಿದೆ. ಈ ಎಲ್ಲ ಸಂವಾದ ದಾರಿಗಳು ವೀಕ್ಷಕರ ಅನುಭವವನ್ನು ಇನ್ನಷ್ಟು ರೋಚಕಗೊಳಿಸುವುದರ ಜೊತೆಗೆ, ಮನೆಯೊಳಗೆ ತೆಗೆದುಕೊಳ್ಳಲಾಗುವ ಅತಿಮುಖ್ಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವ, ತಮ್ಮಿಷ್ಟದ ಅಭ್ಯರ್ಥಿಯನ್ನು ಉಳಿಸುವ ಅಧಿಕಾರವನ್ನೂ ನೀಡಲಿವೆ.