ವರ್ಷಗಳ ಹಿಂದೆ ‘ಕತ್ತಲೆ ಕೋಣೆ’ ಸಿನಿಮಾ ನಿರ್ದೇಶಿಸಿದ್ದ ಸಂದೇಶ್‌ ಶೆಟ್ಟಿ ಅಜ್ರಿ ‘ಇನಾಮ್ದಾರ್’ ಚಿತ್ರದೊಂದಿಗೆ ಮರಳಿದ್ದಾರೆ. ಕಾಡಿನ ಜನರು ಮತ್ತು ಇನಾಮ್ದಾರ್‌ ಕುಟುಂಬದ ನಂಟನ್ನು ಹೇಳಲಿರುವ ಕತೆಯಿದು. ರಂಜನ್‌ ಛತ್ರಪತಿ ಮತ್ತು ಭೂಮಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

“ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೆ ಹಾಗೂ ಉತ್ತರ ಕರ್ನಾಟಕದ ಇನಾಮ್ದಾರ್ ಕುಟುಂಬಕ್ಕೆ ಇರುವ ನಂಟನ್ನು ‌ಹಾಗೂ ಕಪ್ಪು – ಬಿಳುಪು ವರ್ಣದ ಜನರ ಘರ್ಷಣೆ ಸುತ್ತ ಈ ಚಿತ್ರಕಥೆ ಹೆಣೆದಿದ್ದೇನೆ. ಕಾಡಿನ‌ ಮುಗ್ಧ ಜನರಿಗೆ ಆಗುತ್ತಿರುವ ಅನ್ಯಾಯ ಎತ್ತಿ‌ಹಿಡಿಯುವ ಪ್ರಯತ್ನವಿದು. ಡಬ್ಬಲ್ ಸ್ಕ್ರೀನ್ ಪ್ಲೇ ನಡುವೆ ನಮ್ಮ ಚಿತ್ರದ ಕಥೆ ಸಾಗುತ್ತದೆ” ಎಂದು ತಮ್ಮ ಚಿತ್ರದ ಕುರಿತಾಗಿ ಹೇಳುತ್ತಾರೆ ನಿರ್ದೇಶಕ ಸಂದೇಶ್‌ ಶೆಟ್ಟಿ ಅಜ್ರಿ. ಈ ಹಿಂದೆ ಅವರು ನಿರ್ದೇಶಿಸಿದ್ದ ‘ಕತ್ತಲೆ ಕೋಣೆ’ ಸಿನಿಮಾ ಕೂಡ ಭಿನ್ನ ಕಥಾಹಂದರದೊಂದಿಗೆ ಗಮನ ಸೆಳೆದಿತ್ತು. ಈ ಬಾರಿ ಸಾಮಾಜಿಕ ವಿಷಯವೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಇನಾಮ್ದಾರ್ ಕುಟುಂಬಗಳಿವೆ. ಅವುಗಳಿಗೆ ಅವುಗಳದ್ದೇ ಆದ ಹಿನ್ನೆಲೆಯಿದೆ. ಈ ಸಿನಿಮಾಗೆ ಇನಾಮ್ದಾರ್ ಶಿವಾಜಿ ಮಹಾರಾಜರ ಮಗ ಶಂಭು ಮಾಹಾರಾಜರ ವಂಶಸ್ಥರ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ‘ಕಪ್ಪು ಸುಂದರಿಯ ಸುತ್ತ’ ‌ಅಡಿಬರಹವಿದೆ. ರಂಜನ್ ಛತ್ರಪತಿ ಈ ಚಿತ್ರದೊಂದಿಗೆ ನಾಯಕನಟನಾಗಿ ಪರಿಚಯವಾಗುತ್ತಿದ್ದಾರೆ. ಬಿಗ್‌ಬಾಸ್‌ ಖ್ಯಾತಿಯ ನಟಿ ಭೂಮಿ ಶೆಟ್ಟಿ ಪ್ರಮುಖ ಹಿರೋಯಿನ್.‌ ಎಸ್ತರ್ ನರೋನ ಮತ್ತೊಬ್ಬ ನಾಯಕಿ. ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಎಂ.ಕೆ.ಮಠ, ರಘು ಪಾಂಡೇಶ್ವರ್ ಮುಂತಾದವರು ನಟಿಸುತ್ತಿದ್ದಾರೆ.

ತಪ್ಸೆ ಗುಡ್ಡ ಪ್ರದೇಶದಲ್ಲಿ ಚಿತ್ರಕ್ಕಾಗಿ ಈಗಾಗಲೇ ಕಲಾ ನಿರ್ದೇಕರು ಗುಡಿಸಿಲಿನ ಸೆಟ್ ಹಾಕುತ್ತಿದ್ದಾರಂತೆ. ಫೆಬ್ರವರಿ ಮಧ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ. ನಟ ರಂಜನ್‌ ಛತ್ರಪತಿ ಅವರು ಮಾತನಾಡಿ, “ಹಲವು ವರ್ಷಗಳಿಂದ ನಟನಾಗಬೇಕೆಂದು ಕನಸು ಹೊತ್ತು ಬಂದವನು ನಾನು. ಆದರೆ ಸಾಧ್ಯವಾಗಿರಲಿಲ್ಲ. ಈಗ ಸಮಯ ಕೂಡಿ ಬಂದಿದೆ” ಎಂದರು. “ನನಗೆ ಸಂದೇಶ್ ಅವರು ಹೇಳಿದ ತಕ್ಷಣ ಈ ಪಾತ್ರದಲ್ಲಿ ಅಭಿನಯಿಸಬೇಕು ಎನ್ನುವ ಆಸೆಯಾಯ್ತು. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇನೆ” ಎನ್ನುವ ನಟಿ ಭೂಮಿ ಶೆಟ್ಟಿ ಅವರಿಗೆ ಈ ಪಾತ್ರದ ಬಗ್ಗೆ ಅಪಾರ ಆಸ್ಥೆಯಿದೆ. ರಾಕಿ ಸೋನು ಸಂಗೀತ ಸಂಯೋಜನೆ, ಸುನೀಲ್‌ ನರಸಿಂಹಮೂರ್ತಿ ಛಾಯಾಗ್ರಹಣ, ಶಿವರಾಜ್‌ ಮೇಹು ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here