ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಸಲಗ’ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಪ್ರೀ ರಿಲೀಸ್ ಇವೆಂಟ್‌ನಲ್ಲಿ ರಾಜಕೀಯ ನಾಯಕರು ಹಾಗೂ ಸ್ಯಾಂಡಲ್‌ವುಡ್‌ ತಾರೆಯರು ಪಾಲ್ಗೊಂಡು ಚಿತ್ರಕ್ಕೆ ಶುಭಹಾರೈಸಿದ್ದಾರೆ.

ಬಹುನಿರೀಕ್ಷಿತ ‘ಸಲಗ’ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಟ, ನಿರ್ದೇಶಕ ದುನಿಯಾ ವಿಜಯ್‌ ಸಾಕಷ್ಟು ಸಮಯ ತೆಗೆದುಕೊಂಡು ಮಾಡಿರುವ ಮಹತ್ವಾಕಾಂಕ್ಷೆಯ ಚಿತ್ರದ ಪ್ರೀ ರಿಲೀಸ್ ಇವೆಂಟ್‌ ನಿನ್ನೆ ಆಯೋಜನೆಗೊಂಡಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನಾವರು ‘ಸಲಗ’ ಚಿತ್ರದ ಮುಹೂರ್ತಕ್ಕೆ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದರು. ಈಗ ಚಿತ್ರದ ಬಿಡುಗಡೆ ಹೊತ್ತಿನಲ್ಲಿ ಪ್ರೀ ರಿಲೀಸ್‌ ಇವೆಂಟ್‌ಗೂ ಅವರು ಬಂದು ಆಗಮಿಸಿ ಶುಭ ಹಾರೈಸಿದ್ದು ವಿಶೇಷ. ಅವರೊಂದಿಗೆ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರೂ ಸಮಾರಂಭದಲ್ಲಿದ್ದರು.

ಇನ್ನು ಸ್ಯಾಂಡಲ್‌ವುಡ್‌ನ ಸ್ಟಾರ್ ಹೀರೋಗಳಾದ ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತು ಉಪೇಂದ್ರ ಅವರು ಪ್ರಮುಖ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಲ್ಲರೂ ವೇದಿಕೆಯಲ್ಲಿ ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರದ ಕುರಿತಂತೆ ಪ್ರೀತಿಯಿಂದ ಮಾತನಾಡಿ ಚಿತ್ರದ ಯಶಸ್ಸನ್ನು ಆಶಿಸಿದರು. ಕೋವಿಡ್‌ ನಂತರದ ದಿನಗಳಲ್ಲಿ ಅಪರೂಪಕ್ಕೆ ಇಂಥದ್ದೊಂದು ದೊಡ್ಡ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಬಗ್ಗೆ ಶಿವರಾಜಕುಮಾರ್ ಕೂಡ ಉತ್ಸುಕರಾಗಿದ್ದರು. “ಸಲಗ, ಕೋಟಿಗೊಬ್ಬ3 ಚಿತ್ರಗಳ ಮೂಲಕ ಕನ್ನಡ ಚಿತ್ರರಂಗ ಮತ್ತೆ ಗರಿಗೆದರಲಿ” ಎಂದು ಅವರು ಆಶಿಸಿದರು. ದುನಿಯಾ ವಿಜಯ್‌ ಸೇರಿದಂತೆ ಚಿತ್ರತಂಡದ ಎಲ್ಲರೂ ಉಪಸ್ಥಿತರಿದ್ದು ಚಿತ್ರೀಕರಣ ಸಂದರ್ಭದ ಅನುಭವಗಳನ್ನು ಹಂಚಿಕೊಳ್ಳುತ್ತಾ ಜನರು ಚಿತ್ರವನ್ನು ವೀಕ್ಷಿಸಬೇಕೆಂದು ಮನವಿ ಮಾಡಿದರು. ಒಟ್ಟಾರೆ ಸಾಕಷ್ಟು ಪ್ರೊಮೋಷನ್‌ನೊಂದಿಗೆ ತೆರೆಗೆ ಬರುತ್ತಿರುವ ‘ಸಲಗ’ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂದು ಗಾಂಧಿನಗರದವರು ಎದುರು ನೋಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here