ಥ್ರಿಲ್ಲರ್ ಕತೆಯಾದರೂ ಕತೆಯ ನಿರೂಪಣೆ ಪೇಲವ ಆಗಿದೆ. ಕೆಲವೊಂದು ದೃಶ್ಯಗಳು ಬೋರ್ ಹೊಡೆಸಿ ಸ್ವಲ್ಪ ಸ್ಕಿಪ್ ಮಾಡಿದರೂ ಅಡ್ಡಿಯಿಲ್ಲ ಎಂಬಂತೆ ಕತೆ ಸಾಗುತ್ತದೆ. ಕ್ಲೈಮ್ಯಾಕ್ಸ್‌ ಕೂಡಾ ಕುತೂಹಲ ಉಂಟುಮಾಡುವುದಿಲ್ಲ. JioCinemaದಲ್ಲಿ ಸ್ಟ್ರೀಮ್‌ ಆಗುತ್ತಿದೆ ‘Blind’ ಹಿಂದಿ ಸಿನಿಮಾ.

ಸೈಕೋ ಕಿಲ್ಲರ್‌ಗಳ ಕುರಿತಾದ ಕಥೆಗಳು ಯಾವತ್ತೂ ಕುತೂಹಲ ಹುಟ್ಟಿಸುತ್ತವೆ. ಆದರೆ ಒಳ್ಳೆ ಕತೆಯಿದ್ದೂ ಚಿತ್ರಕತೆ, ಸಂಭಾಷಣೆಗಳಲ್ಲಿ ಚುರುಕುತನವಿಲ್ಲದೇ ಹೋದಲ್ಲಿ ಸಿನಿಮಾ ಡಲ್ ಎನಿಸಿಬಿಡುತ್ತದೆ. ಇದಕ್ಕೆ ತಾಜಾ ಉದಾಹರಣೆ ‘ಬ್ಲೈಂಡ್’. ಕ್ರೈಮ್ ಥ್ರಿಲ್ಲರ್‌ ಆಗಿರುವ ಈ ಚಿತ್ರ ಶೋಮ್ ಮಖಿಜಾ ನಿರ್ದೇಶನದಲ್ಲಿ ಮಂಕಾಗಿದೆ. ಜಿಯಾ (ಸೋನಂ ಕಪೂರ್) ಗ್ಲಾಸ್‌ಗ್ಲೋದಲ್ಲಿನ ಪೊಲೀಸ್ ಅಧಿಕಾರಿ. ಸಂಗೀತ ಕಾರ್ಯಕ್ರಮವೊಂದರಲ್ಲಿ ಎಂಜಾಯ್ ಮಾಡುತ್ತಿದ್ದ ತನ್ನ ಸಹೋದರನನ್ನು ಬಲವಂತವಾಗಿ ಎಳೆದುಕೊಂಡು ಹೊರಬರುವ ಜಿಯಾ, ನಾಳೆ ಪರೀಕ್ಷೆ ಇದ್ದು ಅದಕ್ಕೆ ತಯಾರಿ ನಡೆಸುವ ಬದಲು ಮ್ಯೂಸಿಕ್ ಕಾನ್ಸರ್ಟ್‌ಗೆ ಬಂದಿದ್ದಕ್ಕೆ ಬೈಯುತ್ತಾಳೆ. ಇಬ್ಬರ ನಡುವೆ ಮಾತಿನ ಜಗಳ. ಖಡಕ್ ಅಧಿಕಾರಿಯೂ, ಕಾಳಜಿ ಇರುವ ಅಕ್ಕ ಜಿಯಾ, ಆತನ ಕೈಗೆ ಕೋಳ ಹಾಕಿ ಕಾರಿಗೆ ಸಿಕ್ಕಿಸಿರುತ್ತಾಳೆ. ಆತ ಅದನ್ನು ಬಿಡಿಸಲಿಕ್ಕಾಗಿ ಕೀ ತೆಗೆಯಲು ಪ್ರಯತ್ನಿಸುವಾಗ ಕಾರು ಅಪಘಾತಕ್ಕೀಡಾಗುತ್ತದೆ. ಈ ಅಪಘಾತದಲ್ಲಿ ಸಹೋದರ ಸಾಯುತ್ತಾನೆ, ಜಿಯಾ ದೃಷ್ಟಿ ಕಳೆದುಕೊಳ್ಳುತ್ತಾಳೆ. ಹೆಸರೇ ಹೇಳುವಂತೆ ಬ್ಲೈಂಡ್, ದೃಷ್ಟಿಹೀನ ಯುವತಿಯ ಕಥೆ. ಈಕೆ ದೃಷ್ಟಿ ಕಳೆದುಕೊಂಡೂ ತನ್ನ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬಲ್ಲಳು. ತನ್ನ ಮುದ್ದಿನ ನಾಯಿ ಎಲ್ಸಾ ಜತೆಗೆ ಆಕೆಯ ವಾಸ.

ಒಂದು ದಿನ ಅಮ್ಮನ ಮನೆಗೆ ಹೋಗಿ ವಾಪಸ್ ಬರಲು ಟ್ಯಾಕ್ಸಿಗಾಗಿ ಕಾಯುತ್ತಾ ನಿಂತಿರುತ್ತಾಳೆ. ಆ ರಾತ್ರಿಯಲ್ಲಿ ಆಕೆ ಒಬ್ಬಳೇ ಅಲ್ಲಿ ಗಂಟೆಗಟ್ಟಲೆ ಕಾಯುತ್ತಾಳೆ. ಹೀಗಿರುವಾಗ ಕಾರೊಂದು ಮುಂದೆ ಹೋಗಿ ಹಿಂದಕ್ಕೆ ಬರುತ್ತದೆ. ಬರೀ ಸದ್ದಿನಿಂದಲೇ ಎಲ್ಲವನ್ನೂ ಅರಿಯುವ ಈಕೆ ಇದು ಟ್ಯಾಕ್ಸಿಯೇ ಎಂದು ಕೇಳುತ್ತಾಳೆ. ಅದರ ಚಾಲಕ ಹೌದು ಎಂದು ಸುಳ್ಳು ಹೇಳುತ್ತಾನೆ. ಈಕೆ ಕಾರು ಹತ್ತಿ ಮನೆಯ ವಿಳಾಸ ಹೇಳುತ್ತಾಳೆ. ದಾರಿ ಸಾಗುತ್ತಿದ್ದಂತೆ ಅವನು ಈಕೆಯನ್ನು ಮಾತಿಗೆಳೆಯುತ್ತಾನೆ. ಇಬ್ಬರೂ ಭಾರತೀಯರು. ಆಕೆ ದಣಿದಿರುವುದರಿಂದ ನೀರು ಕೊಡುತ್ತಾನೆ. ಆಕೆ ಕುಡಿಯದೇ ಬಾಟಲಿಯನ್ನು ಕೈಯಲ್ಲಿಟ್ಟುಕೊಂಡಿರುತ್ತಾಳೆ. ಹೀಗಿರುವಾಗಲೇ ಕಾರಿನ ಹಿಂಬದಿಯಿಂದ ಸದ್ದು ಕೇಳಿಸುತ್ತದೆ. ಕಾರಿನ ಬೂಟ್‌ನಿಂದ ಸದ್ದು ಬಂತು ಎಂದು ಆಕೆ ಹೇಳಿದಾಗ ಆತ ಅದೇನೂ ಇಲ್ಲ ಎಂದು ಹೇಳಿ ಜೋರಾಗಿ ಹಾಡು ಹಾಕುತ್ತಾನೆ. ಆದರೆ ಜಿಯಾ, ನೀನು ಯಾರು, ಕಾರಿನ ಬೂಟ್‌ನಲ್ಲೇನಿದೆ ಎಂದು ಕೇಳುತ್ತಲೇ ಇರುತ್ತಾಳೆ. ಚಾಲಕ (ಪೂರಬ್ ಕೊಹ್ಲಿ) ಅದು ಲಗೇಜ್ ಜಾರಿದ್ದಿರಬಹುದು, ಸರಿ ಮಾಡುತ್ತೇನೆ ಎಂದು ಇಳಿದು ಹೋಗುತ್ತಾನೆ. ಸ್ವಲ್ಪ ಹೊತ್ತಿನ ನಂತರ ಜಿಯಾ ಕಾರಿನಿಂದ ಇಳಿದು, ನೀನು ಏನೋ ಅಡಗಿಸಿದ್ದಿ. ಏನದು ಎಂದು ಜೋರು ಮಾಡುತ್ತಾಳೆ. ಆತ ಈಕೆಯ ಮೇಲೆ ಹಲ್ಲೆ ಮಾಡಿ ಆಕೆಯನ್ನೂ ಅಪಹರಿಸಲು ಪ್ರಯತ್ನಿಸುತ್ತಾನೆ. ಆ ಹೊತ್ತಲ್ಲಿ ಹಿಂದೆ ವಾಹನ ಬರುವುದನ್ನು ಕಾಣುತ್ತಿದ್ದಂತೆ ಆಕೆಯನ್ನು ದೂಡಿ ಹಾಕಿ ಆತ ಪರಾರಿಯಾಗುತ್ತಾನೆ.

ಜಿಯಾ ಬದುಕಿನಲ್ಲಿ ಈ ಘಟನೆ ನಡೆದ ದಿನವೇ ನಗರದಲ್ಲಿ ಯುವತಿಯರು ಕಣ್ಮರೆಯಾಗಿರುವ ಸುದ್ದಿ ತಿಳಿಯುತ್ತದೆ. ಈ ಸುದ್ದಿ ಕೇಳುವ ಜಿಯಾ ಅದರ ಬಗ್ಗೆ ಯೋಚಿಸುತ್ತಾಳೆ. ಇತ್ತ ಕಾರು ಚಾಲಕನಾಗಿ ಬಂದವನು ಸೈಕೋಪಾತ್. ಹೆಣ್ಣು ಮಕ್ಕಳನ್ನು ಅಪಹರಿಸಿ ಅವರಿಗೆ ಚಿತ್ರ ಹಿಂಸೆ ಕೊಟ್ಟು ಸಾಯಿಸುತ್ತಾನೆ. ಈತ ಮತ್ತು ಜಿಯಾ ನಡುವಿನ ಟಾಮ್ ಆಂಡ್ ಜೆರ್ರಿ ಆಟ ಇಲ್ಲಿಂದ ಶುರುವಾಗುತ್ತದೆ.

ನಗರದಲ್ಲಿ ಯುವತಿಯರು ನಾಪತ್ತೆಯಾಗಿರುವುದರ ಹಿಂದೆ ಇರುವುದು ಆ ಕ್ಯಾಬ್ ಚಾಲಕ. ನಿನ್ನೆ ತನ್ನ ಜತೆಗೆ ನಡೆದ ಘಟನೆಯಿಂದ ಇದು ಸ್ಪಷ್ಟವಾಗುತ್ತದೆ ಎಂದು ಜಿಯಾ ಪೊಲೀಸರಿಗೆ ದೂರು ನೀಡುತ್ತಾಳೆ. ಮೊದಲು ಪೊಲೀಸರು ಆಕೆಯ ಮಾತನ್ನು ನಂಬದೇ ಇದ್ದರೂ ಕೊನೆಗೆ ಈ ಬಗ್ಗೆ ತನಿಖೆ ನಡೆಸಲು ಪೃಥ್ವಿ (ವಿನಯ್ ಪಾಠಕ್) ಮುಂದಾಗುತ್ತಾರೆ. ಅಷ್ಟೊತ್ತರಲ್ಲಿ ನಿಖಿಲ್ (ಶುಭಂ ಸರಾಫ್) ತಾನು ಒಬ್ಬ ಕಾರು ಚಾಲಕ ಮಹಿಳೆಯನ್ನು ಅಪಹರಿಸಿದ್ದನ್ನು ನೋಡಿದ್ದೇನೆ. ಆದರೆ ಅದು ಕ್ಯಾಬ್ ಅಲ್ಲ ಎಂದು ಹೇಳುತ್ತಾನೆ. ಕಣ್ಣು ಕಾಣದ ಜಿಯಾ ಮತ್ತು ಯುವಕ ನಿಖಿಲ್ ಹೇಳಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಶುರು ಮಾಡುತ್ತಾರೆ.

ಸೈಕೋ ಕಿಲ್ಲರ್ ಪೊಲೀಸರ ಹಿಂದೆಯೇ ಬಿದ್ದಿದ್ದಾನೆ. ಆದರೆ ಶೋಮಾ ಮಖಿಜಾ ತಮ್ಮ ಜಡ ನಿರ್ದೇಶನದಿಂದ ಚಿತ್ರವನ್ನು ಬೋರ್ ಹೊಡೆಸಿ ಬಿಡುತ್ತದೆ. ಜಿಯಾ ಜೀವಕ್ಕೆ ಅಪಾಯ ಇದೆ ಎಂದು ಗೊತ್ತಾದರೂ ಅದನ್ನು ತೆರೆಯ ಮೇಲೆ ಕಾಣುವಾಗ ಯಾವುದೂ ಭಯ ಹುಟ್ಟಿಸುವುದಿಲ್ಲ.ಕೊಲೆಗಾರ ಜಿಯಾ ಮತ್ತು ನಿಖಿಲ್‌ನನ್ನು ಬೆನ್ನಟ್ಟುತ್ತಿರುವಾಗಲೂ ಏನೂ ಅನಿಸುವುದಿಲ್ಲ. ಥ್ರಿಲ್ಲರ್ ಕತೆ ಆದರೂ ಮುಂದೆ ಏನಾಗಲಿದೆ ಎಂಬುದನ್ನು ಸುಲಭವಾಗಿ ಊಹಿಸಿಬಿಡಬಹುದು. ಅಷ್ಟೇ ಅಲ್ಲ ಮೊದಲ ಬಾರಿಗೆ ಸೈಕೋಪಾತ್ ಜೊತೆಗಿನ ಜಿಯಾಳ ದೂರವಾಣಿ ಸಂಭಾಷಣೆ ಕೂಡಾ ಮಂಕಾಗಿದೆ. ಥ್ರಿಲ್ಲರ್ ಕತೆಯಾದರೂ ಕತೆಯ ನಿರೂಪಣೆ ಪೇಲವ ಆಗಿದೆ. ಕೆಲವೊಂದು ದೃಶ್ಯಗಳು ಬೋರ್ ಹೊಡೆಸಿ ಸ್ವಲ್ಪ ಸ್ಕಿಪ್ ಮಾಡಿದರೂ ಅಡ್ಡಿಯಿಲ್ಲ ಎಂಬಂತೆ ಕತೆ ಸಾಗುತ್ತದೆ. ಕ್ಲೈಮ್ಯಾಕ್ಸ್‌ ಕೂಡಾ ಕುತೂಹಲ ಉಂಟುಮಾಡುವುದಿಲ್ಲ.

ಇನ್ನು ಪಾತ್ರಗಳ ಬಗ್ಗೆ ಹೇಳುವುದಾದರೆ ಜಿಯಾ ತನ್ನ ಸ್ವಂತ ತಪ್ಪಿನಿಂದ ಅಪಘಾತದಲ್ಲಿ ತನ್ನ ಸಹೋದರನನ್ನು ಕಳೆದುಕೊಂಡ ಬಗ್ಗೆ ಮರುಗುತ್ತಿರುತ್ತಾಳೆ. ಆದರೆ ನಮ್ಮ ಮನಸ್ಸಿನಲ್ಲಿ ಆಕೆಯ ಮೇಲೆ ಸಹಾನುಭೂತಿಯ ಫೀಲ್ ಬರುವುದಿಲ್ಲ, ಆಕೆ ಗಟ್ಟಿಗಿತ್ತಿ ಎಂದು ತೋರಿಸಿದಾಗಲೂ ಪಾತ್ರದಲ್ಲಿ ಧಮ್ ಇದೆ ಎಂದು ಅನಿಸುವುದೂ ಇಲ್ಲ. ಸೋನಂ ಕಪೂರ್ ಬ್ರೇಕ್ ನಂತರ ಮತ್ತೆ ತೆರೆಗೆ ಬಂದಿದ್ದಾರೆ. ಆಕೆ ಮತ್ತಷ್ಟು ಇಂಪ್ರೂವ್ ಆಗಿದ್ದಾರೆ ಎಂದು ಇಲ್ಲಿ ಅನಿಸುವುದೇ ಇಲ್ಲ. ಈ ಪಾತ್ರಕ್ಕೆ ಆಕೆಯ ಉಚ್ಛಾರಗಳೂ, ಬಾಡಿ ಲಾಂಗ್ವೇಜ್ ಮ್ಯಾಚ್ ಆಗುತ್ತಿಲ್ಲ. ಸೈಕೋಪಾತ್ ಪೂರಬ್ ಕೊಹ್ಲಿ ವಿಲನ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿರುವ ಪೃಥ್ವಿ ಪಾತ್ರ ನಿರ್ವಹಿಸಿದ ವಿನಯ್ ಪಾಠಕ್ ಅವರನ್ನು ಕಾಮಿಡಿ ಪಾತ್ರದಂತೆ ತೋರಿಸಲಾಗಿದೆ.

ಛಾಯಾಗ್ರಾಹಕ ಗೈರಿಕ್ ಸರ್ಕಾರ್ ಚಿತ್ರದ ಕರಾಳ ಫೀಲ್‌ ಕೊಡುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸಂಗೀತ ಸಂಯೋಜಕ ಜೋಡಿ ಕ್ಲಿಂಟನ್ ಸೆರೆಜೊ ಮತ್ತು ಬಿಯಾಂಕಾ ಗೋಮ್ಸ್ ಅವರ ಸಂಗೀತ ಸಿನಿಮಾದಲ್ಲಿ ಹಿತವೆನ್ನಿಸಿದರೂ ಮನಸ್ಸಿಗೆ ನಾಟುವುದಿಲ್ಲ. 2011ರಲ್ಲಿ ತೆರೆಕಂಡ ಕೊರಿಯನ್ ಸಿನಿಮಾ ‘ಬ್ಲೈಂಡ್’ನ ಹಿಂದಿ ರಿಮೇಕ್ ಇದು. ನಯನತಾರಾ ನಟನೆಯ ‘ನೆಟ್ರಿಕಣ್’ ಕೂಡಾ ಇದೇ ಕೊರಿಯನ್ ಸಿನಿಮಾದ ತಮಿಳು ರಿಮೇಕ್. ನೀವು ಥ್ರಿಲ್ಲರ್‌ಗಳನ್ನು ಇಷ್ಟಪಡುವವರಾದರೆ ‘ಬ್ಲೈಂಡ್’ ವೀಕ್ಷಿಸಲು ಅಡ್ಡಿಯಿಲ್ಲ. ಈ ಚಿತ್ರ ಈಗ ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ.

Previous articleಸೋಚ್ ನಯೀ ಅನಿಸದ, ಸ್ವಾದ್ ವಹೀ ಅಲ್ಲದ – ರಾಕಿ ರಾಣೀ ಕೀ ಪ್ರೇಮ್ ಕಹಾನಿ
Next articleಗೋಜಲು ಉಂಟುಮಾಡುವ ಅನಗತ್ಯ ದೃಶ್ಯಗಳು

LEAVE A REPLY

Connect with

Please enter your comment!
Please enter your name here