‘ರಾಕಿ ಔರ್ ರಾಣೀಕಿ ಪ್ರೇಮ್ ಕಹಾನಿ’ ಒಂದು ರೀತಿಯಲ್ಲಿ ಖುದ್ದು ತಾನೇ ಗೊಂದಲದಲ್ಲಿರುವ ಸಿನಿಮಾ. ನೋಡಲು ಅಪ್ಪಟ ಬಾಲಿವುಡ್ ಚಿತ್ರದಂತಿದ್ದರೂ, ಸಾಮಾಜಿಕ ಸಂದೇಶಗಳ ಭಾರ ಹೊತ್ತು ಹೆಣಗುತ್ತದೆ. ಹೀಗಾಗಿ, ಆ ಕಡೆ ಮೈಂಡ್‌ಲೆಸ್ ಮನರಂಜನೆಯೂ ಸಾಧ್ಯವಾಗದೇ, ಈ ಕಡೆ ಸಮಸ್ಯೆಗಳ ಬಗ್ಗೆ ಆಳವಾದ ಮತ್ತು ಗಂಭೀರವಾದ ಚಿಂತನೆಯನ್ನೂ ಮಾಡದೆ, ಎಲ್ಲವನ್ನೂ ಟಿಕ್ ಮಾಡಿ ಮುಗಿಸಿಬಿಡುತ್ತದೆ.

ತೊಂಬತ್ತರ ದಶಕದಲ್ಲಿ ಬೆಳ್ಳಿಪರದೆಯನ್ನು ಅಕ್ಷರಶಃ ಆಳಿದ, ಮ್ಯೂಸಿಕಲ್ ರೊಮ್ಯಾನ್ಸ್ ಸಿನಿಮಾಗಳು ಬಾಲಿವುಡ್‌ಗೆ ಹಲವಾರು ಸ್ಚಾರ್ ನಟರನ್ನು, ನಿರ್ದೇಶಕರನ್ನು ಸೃಷ್ಟಿಸಿ ಕೊಟ್ಟಿತ್ತು. ಸುಮಾರು ಎರಡು ದಶಕಗಳ ಕಾಲ ತೆರೆಯ ಮೇಲೆ ವಿಜೃಂಭಿಸಿ, ದೊಡ್ಡ ಮಟ್ಟದಲ್ಲಿ ಕಮರ್ಷಿಯಲ್ ಗೆಲವು ಕಂಡ ಈ ಚಿತ್ರ ಪ್ರಕಾರ, ನಂತರ ಮಾಸ್ ಆ್ಯಕ್ಷನ್ ಸಿನಿಮಾಗಳ ಯುಗದ ಆರಂಭದೊಂದಿಗೆ ಬಹುತೇಕ ಕಣ್ಮರೆಯಾಗಿತ್ತು. ಐಷಾರಾಮಿ ಮನೆಗಳು, ಶ್ರೀಮಂತ ಕುಟುಂಬಗಳು, ಶಿಫಾನ್ ಸೀರೆಗಳು, ಫ್ಯಾಷನ್ ಟ್ರೆಂಡ್ ಆರಂಭಿಸುವ ಉಡುಗೆಗಳು, ಚಂದದ ಲೊಕೇಶನ್‌ಗಳು, ಜನಪ್ರಿಯ ಹಾಡುಗಳು, ಎಲ್ಲರನ್ನೂ ಕುಣಿಸುವ ನೃತ್ಯಗಳು, ಒಂದಷ್ಚು ಮೆಲೋಡ್ರಾಮ, ಫ್ಯಾಮಿಲಿ ಸೆಂಟಿಮೆಂಟ್ ಇವನ್ನೆಲ್ಲವನ್ನೂ ಸೇರಿಸಿ ಬಾಲಿವುಡ್ ಸಿದ್ಧಪಡಿಸಿದ್ದ ಅಂತಹದೇ ಬಾಲಿವುಡ್ ರೊಮ್ಯಾನ್ಸ್ ಚಿತ್ರ ಈ ವಾರ ತೆರೆಗೆ ಬಂದಿದೆ.

ಏಳು ವರ್ಷಗಳ ಅಂತರದ ಬಳಿಕ ಕರಣ್ ಜೋಹರ್ ನಿರ್ದೇಶಿಸಿರುವ ‘ರಾಕಿ ಔರ್ ರಾಣೀ ಕೀ ಪ್ರೇಮ್ ಕಹಾನಿ’ಯಲ್ಲಿ ಟಿಪಿಕಲ್ ಬಾಲಿವುಡ್ ರೊಮ್ಯಾನ್ಸ್ ಚಿತ್ರ ಬೇಡುವ ಎಲ್ಲಾ ಅಂಶಗಳೂ ಇವೆ. ರಾಕಿ ರಾಂಡ್ವಾ (ರಣವೀರ್ ಸಿಂಗ್) ಸಿಹಿ ತಿನಿಸಿನ ಉದ್ಯಮ ಹೊಂದಿರುವ ಆಗರ್ಭ ಶ್ರೀಮಂತ ಪಂಜಾಬಿ ಕುಟುಂಬದ ಏಕೈಕ ಪುತ್ರ ಸಂತಾನ. ಟೆಲಿವಿಷನ್ ಪತ್ರಕರ್ತೆ ರಾಣಿ, ಬುದ್ದಿಜೀವಿ ಮತ್ತು ಕಲಾವಿದರೇ ಇರುವ ಬೆಂಗಾಲಿ ಚಟರ್ಜಿ ಕುಟುಂಬದ ಏಕೈಕ ಸಂತಾನ, ಗುಣ ಸ್ವಭಾವ, ಕೌಟುಂಬಿಕ ಹಿನ್ನೆಲೆ, ಅಭಿರುಚಿ, ವೈಚಾರಿಕತೆ ಇವೆಲ್ಲದರಲ್ಲೂ ವಿರುದ್ಧ ದಿಕ್ಕಗಳಂತೆ ಇರುವ ಈ ಇಬ್ಬರು ಮತ್ಯಾವುದೋ ಅಪೂರ್ಣ ಪ್ರೇಮಕತೆಯೊಂದನ್ನು ಪೂರ್ಣಗೊಳಿಸುವ ಯತ್ನದಲ್ಲಿ ಭೇಟಿಯಾಗುತ್ತಾರೆ. ಪ್ರೇಮದಲ್ಲಿ ಬೀಳುತ್ತಾರೆ. ಸಂಪೂರ್ಣ ಭಿನ್ನವಾಗಿರುವ ತಮ್ಮ ಕುಟುಂಬಗಳನ್ನು ಅರಿಯುವ, ಅವರನ್ನು ತಮ್ಮ ವಿವಾಹಕ್ಕೆ ಒಪ್ಪಿಸುವ ಯತ್ನದ ಭಾಗವಾಗಿ, ಒಂದು ರೀತಿಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ರೂಪಿಸುತ್ತಾರೆ. ರಾಕಿ, ಚಟರ್ಜಿ ಮನೆಗೂ, ರಾಣಿ, ರಾಂಡ್ವಾ ಮನೆಗೂ ಹೋಗಿ ಮೂರು ತಿಂಗಳು ಇರಲು ನಿರ್ಧರಿಸುತ್ತಾರೆ. ಇದರಿಂದ ಎದುರಾಗುವ ಸಮಸ್ಯೆ, ಸನ್ನಿವೇಶ, ಫಲಿತಾಂಶಗಳೇ ಚಿತ್ರದ ಮುಖ್ಯ ಕತೆ.

ಚಿತ್ರದಲ್ಲಿ ರಾಂಡ್ವಾ ಕುಟುಂಬದ ಲಡ್ಡು ಉದ್ಯಮಕ್ಕೆ ಹೊಸದೊಂದು ಟ್ಯಾಗ್ ಲೈನ್ ಕೊಡಲಾಗುತ್ತದೆ ‘ಸೋಚ್ ನಯೀ, ಸ್ವಾದ್ ವಹೀ’ ಅಂತ. ಕರಣ್ ಜೊಹರ್ ಈ ಟ್ಯಾಗ್ ಲೈನ್ ಅನ್ನು ಗಂಭೀರವಾಗಿ ತೆಗೆದುಕೊಂಡು ತಮ್ಮ ಈ ಚಿತ್ರಕ್ಕೂ ಅಳವಡಿಸಿಕೊಳ್ಳಲು ಯತ್ನಿಸಿದ್ದಾರೆ. ಅವರಿಗೆ ‘ಕುಚ್ ಕುಚ್ ಹೋತಾ ಹೈ’ ಜಮಾನಾ ಮುಗಿದಿದೆ ಎಂಬ ಅರಿವಿದೆ. ಆ ಚಿತ್ರದಲ್ಲಿರುವ ಅಂಶಗಳು ಈಗಿನ ಸಂವೇದನೆಗಳಿಗೆ ಹೊಂದುವುದಿಲ್ಲ ಎಂಬುದೂ ಗೊತ್ತಿದೆ. ಆದರೆ, ತಮ್ಮ ವೃತ್ತಿಜೀವನವನ್ನು ರೂಪಿಸಿದ್ದ ಈ ಬಾಲಿವುಡ್ ರೋಮ್ಯಾನ್ಸ್‌ಗಳಿಗೆ ಮರುಜೀವ ಕೊಡುವ ಆಸೆಯೂ ಅಷ್ಟೇ ದೊಡ್ಡದಾಗಿದೆ. ಹೀಗಾಗಿ, ಕರಣ್ ಕಂಡುಕೊಂಡಿರುವ ಮಾರ್ಗವೆಂದರೆ ಈ ಬಾಲಿವುಡ್ ರೋಮ್ಯಾನ್ಸ್ ಅನ್ನು ನಿರೂಪಿಸಿದ್ದ ಎಲ್ಲಾ ವಿಷುವಲ್ ಅಂಶಗಳನ್ನು ಹಾಗೆಯೇ ಇಟ್ಟುಕೊಂಡು, ಈಗಿನ ಸಂವೇದನೆಗೆ ಹೊಂದುವಂತೆ ಅದರಲ್ಲಿ ಮಹಿಳಾವಾದದಿಂದ ಹಿಡಿದು ಬಾಡಿ ಶೇಮಿಂಗ್‌ವರೆಗೆ ಎಲ್ಲಾ ವಿಷಯಗಳನ್ನು ತಂದು ಅದಕ್ಕೊಂದು ಇನ್‌ಸ್ಟಾಂಟ್‌ ಪರಿಹಾರ ಸೂಚಿಸಿಬಿಡುವುದು.

ಹೀಗಾಗಿಯೇ, ಪತ್ರಕರ್ತೆಯಾಗಿರುವ, ಟೀವಿಯಲ್ಲಿ ಚರ್ಚೆಗಳನ್ನು ನಡೆಸುವ ಆಲಿಯಾ ಭಟ್‌ಗೆ ಚಂದದ ಶಿಫಾನ್ ಸೀರೆ ಉಡಿಸಿ, ಲೋ ಕಟ್, ಸ್ಲೀವ್ಲೆಸ್ ಬ್ಲೌಸ್‌ಗಳನ್ನು ತೊಡಿಸಿ ತಮ್ಮ ಗುರು ಯಶ್ ಛೋಪ್ರಾ ಚಿತ್ರಗಳ ಹೀರೋಯಿನ್‌ಗಳ ಲುಕ್ ಅನ್ನು ಉಳಿಸಿಕೊಂಡಿದ್ದಾರೆ. ಅಂತಹದೇ ತೆಳ್ಳನೆ ಶಿಫಾನ್ ಸೀರೆ ತೊಟ್ಟು ಆಲಿಯಾ, ರಣವೀರ್ ಜೊತೆ ಹಿಮ ಭರಿತ ಕಾಶ್ಮೀರದಲ್ಲಿ ಪ್ರೇಮಗೀತೆ ಹಾಡುವಂತೆ ಮಾಡಿ, ಅದನ್ನು ಯಶ್ ಛೋಪ್ರಾ ಅವರಿಗೆ ಅರ್ಪಿಸಿ, ಪರಂಪರೆ ಮುಂದುವರಿಸಿದ್ದಾರೆ. ಆದರೆ, ರಣವೀರ್‌ಗೆ ಮಾತ್ರ ಬೆಚ್ಚನೆಯ ಬಟ್ಟೆ ತೊಡಿಸಿ ಚಳಿಯಿಂದ ಕಾಪಾಡಿದ್ದಾರೆ. ಹೀರೋಯಿನ್‌ಗಳನ್ನು ಆಬ್ಜೆಕ್ಟಿಫೈ ಮಾಡುವುದನ್ನು ಕೈಬಿಡಲು ಇಷ್ಟವಿಲ್ಲದೆ, ಅದರಲ್ಲಿ ಬ್ಯಾಲೆನ್ಸ್ ತರಲು ಹೀರೋನನ್ನು ಆಬ್ಜೆಕ್ಚಿಫೈ ಮಾಡಲಾಗಿದೆ. ಚಿತ್ರದ ದ್ವಿತೀಯಾರ್ಧ ಪೂರ್ತಿ ಸಾಮಾಜಿಕ ಸಂದೇಶಗಳಿಂದ ತುಂಬಿದ್ದರೂ, ಚಿತ್ರದ ತುಂಬಾ ಸ್ಚೀರಿಯೋಟೈಪ್‌ಗಳೇ ಎದ್ದು ಕಾಣುತ್ತವೆ. ಅಬ್ಬರದ ಪಂಜಾಬಿ ಕುಟುಂಬ, ಬುದ್ದಿವಂತ ಬೆಂಗಾಲಿ ಕುಟುಂಬ, ಆ ಎರಡೂ ಕುಟುಂಬದೊಳಗಿರುವ ಬಹುತೇಕ ಸದಸ್ಯರ ಚಿತ್ರಣವೂ ಕೂಡ ಅಷ್ಟೇ ಸ್ಟೀರಿಯೋಟಿಪಿಕಲ್.

ಚಿತ್ರದ ಮೊದಲಾರ್ಧ ತುಂಬಾ ವೇಗವಾಗಿ ಸಾಗುತ್ತದೆ. ಅಲ್ಲಿ ಬಹುತೇಕ ಎಲ್ಲಾ ಬಾಲಿವುಡ್ ರೋಮ್ಯಾಂಟಿಕ್ ಸಿನಿಮಾದಲ್ಲಿರುವಂತೆ ಹೀರೋ, ಹೀರೋಯಿನ್ ಎಂಟ್ರಿ, ಅವರ ಪರಿಚಯ, ನಂತರದ ಪ್ರೇಮ, ಹಾಡು, ಮಳೆ, ಸಣ್ಣ ಜಗಳ, ಮತ್ತೆ ಸಮಾಗಮ ಹೀಗೆ. ಇದು ಪ್ರೇಕ್ಷಕರು ಯಾವ ಪ್ರೇಮ ಕತೆಯ ನಿರೀಕ್ಷೆಯಲ್ಲಿದ್ದರೋ ಅದನ್ನು ನೀಡುವ ಮೂಲಕ ಮನರಂಜಿಸುತ್ತದೆ. ಆದರೆ, ದ್ವಿತೀಯಾರ್ಧದ ವೇಳೆಗೆ ಕರಣ್ ಜೋಹರ್‌ಗೆ ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಬೇಕೆನಿಸಿ, ಸಂಪ್ರದಾಯ, ಪರಂಪರೆಯ ಹೆಸರಲ್ಲಿ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಬದುಕುತ್ತಿರುವ ರಾಂಡ್ವಾ ಕುಟುಂಬಕ್ಕೆ, ರಾಣಿಯ ಮೂಲಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಬಾಡಿ ಶೇಮಿಂಗ್‌ಗೆ ಒಳಗಾಗುವ ರಾಕಿಯ ಅಕ್ಕ, ಗಾಯಕಿಯಾಗುವ ಸುಪ್ತ ಆಸೆ ಹೊಂದಿರುವ ರಾಕಿಯ ಅಮ್ಮ, ಅವರಿಬ್ಬರಿಗೂ ಮನೆಯಲ್ಲಿ ದೊರಕದೇ ಇರುವ ಸ್ವಾತಂತ್ರ್ಯ, ಗಂಡಸುತನದ ಬಗೆಗಿನ ರಾಕಿಯ ಅಪ್ಪನ ಕಲ್ಪನೆಗಳು, ಎಲ್ಲರನ್ನೂ ನಿಯಂತ್ರಿಸುವ ರಾಕಿಯ ಅಜ್ಜಿಯ ಕುಟುಂಬ ಗೌರವದ ಬಗೆಗಿನ ಹುಸಿ ಹೆಮ್ಮೆ ಇವೆಲ್ಲವನ್ನೂ ಅದಕ್ಕಾಗಿ ಬಳಸಿಕೊಂಡಿದ್ದಾರೆ.

ಮತ್ತೊಂದೆಡೆ, ರಾಕಿಯ ಮೂಲಕ ಬುದ್ದಿಜೀವಿಗಳ ಹಿಪೋಕ್ರಸಿ, ಅಲ್ಲಿನ ಕ್ಯಾನ್ಸಲ್ ಕಲ್ಚರ್‌ಗಳ ಬಗ್ಗೆ ಕೊಂಚ ಮಾತಾಡಿದ್ದಾರೆ. ಇದು ಖಂಡಿತಾ ಒಳ್ಳೆಯ ಉದ್ದೇಶವಿರುವ ಯತ್ನವಾದರೂ, ಸಾಕಷ್ಟು ವಿಷಯಗಳನ್ನು ತುರುಕಿರುವ ಕಾರಣ ಸಹಜವಾಗಿ ಮೂಡಿ ಬಂದಿಲ್ಲ. ರಾಣಿ ಅತ್ಯಾಚಾರದ ಕುರಿತು ರಾಜಕಾರಣಿಯನ್ನು ಪ್ರಶ್ನಿಸುವುದರಿಂದ ಹಿಡಿದು, ರಾಂಡ್ವಾ ಪರಿವಾರದ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯದ ಬಗ್ಗೆ ತಿಳಿಸಿಕೊಡುವವರೆಗೆ ಬಹುತೇಕ ಎಲ್ಲವೂ ತುಂಬಾ ಕನ್ವೀನಿಯೆಂಟ್ ಆಗಿ ಮೂಡಿಬಂದಿದೆ. ಹೀಗಾಗಿ, ದ್ವಿತೀಯಾರ್ಧ ಸಮಾಜ ಶಾಸ್ತ್ರದ ತರಗತಿಯಂತೆ ಕಂಡರೂ ಅಚ್ಚರಿಯಿಲ್ಲ.

ಈ ಮಧ್ಯೆ, ರಾಕಿ ಮತ್ತು ರಾಣಿಯ ಅಪ್ಪ ಡೋಲರೇ ಹಾಡಿಗೆ ನರ್ತಿಸುವುದು, ಕೊನೆಯಲ್ಲಿ ರಾಣಿಯ ಅಜ್ಜಿ ತೀರಾ ಮೆಲೋಡ್ರಾಮಗೆ ಇಳಿಯದಿರುವುದು ಮುಂತಾದವು ಸಮಾಧಾನ ಮೂಡಿಸುತ್ತವೆ. ಇಷ್ಟೆಲ್ಲಾ ಸಾಮಾಜಿಕ ಸುಧಾರಣೆಗಳ ಬಗ್ಗೆ ಮಾತಾನಾಡುತ್ತಿರುವುದರ ಮಧ್ಯೆಯೇ, ಸೊಸೆಯಾಗಬೇಕಿರುವ ರಾಣಿ ರಾಂಡ್ವಾ ಕುಟುಂಬದ ಮನ ಗೆಲ್ಲಲು ಯತ್ನಿಸುವುದು, ರಾಕಿಯ ಅಜ್ಜಿ ವ್ಯಾಂಪ್ ರೀತಿ ವರ್ತಿಸುವುದು, ರಾಣಿಯ ಮತ್ತು ಕುಟುಂಬದ ವಿರುದ್ಧ ಸಣ್ಣಪುಟ್ಟ ಕುತಂತ್ರ ರೂಪಿಸುವುದು ಇವೆಲ್ಲಾ ಯಾವುದೋ ದೈನಿಕ ಧಾರಾವಾಹಿಯನ್ನು ನೆನಪಿಸಿಬಿಡುತ್ತದೆ.

ಚಿತ್ರದ ದೊಡ್ಡ ಪಾಸಿಟಿವ್ ಅಂಶ, ಅದರ ನಟನಾ ವರ್ಗ. ಆಲಿಯಾ ರಾಣಿ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ ಮತ್ತು ಮಿಂಚಿದ್ದಾರೆ. ಇಂತಹ ಕಮರ್ಷಿಯಲ್ ಚಿತ್ರಗಳನ್ನು ಮಾಡಲು ಬೇರೆ ರೀತಿಯ ಕನ್ವಿಕ್ಷನ್ ಬೇಕಾಗುತ್ತದೆ. ಅದನ್ನು ಅಲಿಯಾ ಸಾಧಿಸಿದ್ದಾರೆ. ರಾಕಿಯ ಅಜ್ಜನಾಗಿ ಧರ್ಮೇಂದ್ರ, ರಾಣಿಯ ಅಜ್ಜಿಯಾಗಿ ಶಬಾನಾ ಇಷ್ಟವಾಗುತ್ತಾರೆ. ರಾಕಿ ಅಜ್ಜಿಯ ಪಾತ್ರದಲ್ಲಿ ಜಯಾ ಬಚ್ಚನ್ ನಟನೆಗೆ ಫುಲ್ ಮಾರ್ಕ್ಸ್. ಆದರೆ, ತನ್ನದೇ ನಿಜ ಜೀವನದ, ವ್ಯಕ್ತಿತ್ವದ ಮುಂದುವರಿದ ಭಾಗದಂತೆ ಇರುವ ರಾಕಿಯ ಪಾತ್ರದಲ್ಲಿ ಮಾತ್ರ ರಣವೀರ್ ಯಾಕೋ ನಿರೀಕ್ಷಿಸಿದಷ್ಚು ಸೆಳೆಯುವುದಿಲ್ಲ. ಅವರ ನಟನೆಯಲ್ಲಿ ಬೇಕಾದಷ್ಚು ಲವಲವಿಕೆ ಕಾಣುವುದಿಲ್ಲ.

ಚಿತ್ರದಲ್ಲಿ ಹಲವಾರು ಹಳೆಯ ಹಿಂದಿ ಹಾಡುಗಳನ್ನು ಬಳಸಲಾಗಿದೆ. ಜೊತೆಗೆ, ಇನ್ನೂ ಕೆಲವು ಐಕಾನಿಕ್ ಬಾಲಿವುಡ್ ನಂಬರ್‌ಗಳು ಇವೆ. ಇವೆಲ್ಲಾ ಒಟ್ಟು ಸೇರಿದಾಗ ತೆರೆಯ ಮೇಲೆ ಬಾಲಿವುಡ್ ಸೆಲಬ್ರೇಷನ್ ರೀತಿಯಲ್ಲಿ ಕಾಣುತ್ತದೆ ಮತ್ತು ಹಿಂದಿನಿಂದಲೂ ಬಾಲಿವುಡ್ ಸಿನಿಮಾಗಳನ್ನು ನೋಡಿಕೊಂಡು ಬಂದ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಆದರೆ, ಹಾಡಿಗಳಿಂದಲೇ ಅರ್ಧ ಸಿನಿಮಾ ಗೆಲ್ಲಿಸಿದ್ದ ಇತರ ಮ್ಯೂಸಿಕಲ್ ರೊಮ್ಯಾನ್ಸ್‌ಗಳ ಸಂಗೀತಕ್ಕೆ ಹೋಲಿಸಿದರೆ, ಸಂಗೀತ ನಿರ್ದೇಶಕ ಪ್ರೀತಂ ನೆನಪಿನಲ್ಲಿ ಉಳಿಯುವಂತಹ ಹಾಡುಗಳನ್ನೇನೂ ಕೊಟ್ಟಿಲ್ಲ. ಎಲ್ಲವೂ ಈಗಾಗಲೇ ಕೇಳಿರುವ ನೋಡಿರುವ ಭಾವ ಮೂಡಿಸುವ ಸಾಧ್ಯತೆಯೂ ಇದೆ.

‘ರಾಕಿ ಔರ್ ರಾಣೀಕಿ ಪ್ರೇಮ್ ಕಹಾನಿ’ ಒಂದು ರೀತಿಯಲ್ಲಿ ಖುದ್ದು ತಾನೇ ಗೊಂದಲದಲ್ಲಿರುವ ಸಿನಿಮಾ. ನೋಡಲು ಅಪ್ಪಟ ಬಾಲಿವುಡ್ ಚಿತ್ರದಂತಿದ್ದರೂ, ಸಾಮಾಜಿಕ ಸಂದೇಶಗಳ ಭಾರ ಹೊತ್ತು ಹೆಣಗುತ್ತದೆ. ಹೀಗಾಗಿ, ಆ ಕಡೆ ಮೈಂಡ್‌ಲೆಸ್ ಮನರಂಜನೆಯೂ ಸಾಧ್ಯವಾಗದೇ, ಈ ಕಡೆ ಸಮಸ್ಯೆಗಳ ಬಗ್ಗೆ ಆಳವಾದ ಮತ್ತು ಗಂಭೀರವಾದ ಚಿಂತನೆಯನ್ನೂ ಮಾಡದೆ, ಎಲ್ಲವನ್ನೂ ಟಿಕ್ ಮಾಡಿ ಮುಗಿಸಿಬಿಡುತ್ತದೆ. ಆದರೆ, ಜೋಹರ್, ಚೋಪ್ರಾ ಮಾದರಿಯ ಪ್ರೇಮಕತೆಗಳ ಅಭಿಮಾನಿಗಳಿಗೆ ಸಿನಿಮಾ ಖಂಡಿತಾ ಖುಶಿ ಕೊಡುವ ಮತ್ತು ನೆನಪುಗಳನ್ನು ತಾಜಾ ಮಾಡುವ ಸಾಧ್ಯತೆ ಇದೆ. ಉಳಿದವರ ಪಾಲಿಗೆ, ಕರಣ್ ಜೋಹರ್ ನಿರ್ದೇಶಿಸಿರುವ ಮಾರುದ್ದ ಹೆಸರಿನ ಸಿನಿಮಾಗಳ ಸಾಲಿಗೆ ಮತ್ತೊಂದು ಸೇರ್ಪಡೆ ಅಷ್ಟೇ.

LEAVE A REPLY

Connect with

Please enter your comment!
Please enter your name here