ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಸಿನಿಮಾ ಐವತ್ತು ದಿನ ಪೂರೈಸಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಚಿತ್ರಕ್ಕೆ OTTಯಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನುವುದು ಚಿತ್ರತಂಡದ ಸಂತಸ. ಚಿತ್ರತಂಡದ ಎಲ್ಲರೂ ಸೇರಿ ಐವತ್ತು ದಿನ ಪೂರೈಸಿದ ಸಂಭ್ರಮವನ್ನು ಸೆಲೆಬ್ರೇಟ್ ಮಾಡಿದ್ದಾರೆ.
‘ಹೊಸಬರ ತಂಡ 50 ದಿನಗಳ ಕಾಲ ಸಿನಿಮಾವನ್ನು ಥಿಯೇಟರ್‌ನಲ್ಲಿ ಉಳಿಸಿಕೊಂಡಿದೆ. ನಮಗೆ ನಂಬಲು ಆಗುತ್ತಿಲ್ಲ. ಮೊದಲ ದಿನದಿಂದ ಇಲ್ಲಿವರೆಗೂ ಬಹಳಷ್ಟು ಹೋರಾಟ ಮಾಡಿದ್ದೆವು. ನಾವು ಜನರನ್ನು ಕರೆತಂದು ಥಿಯೇಟರ್ ತುಂಬಿಸುತ್ತಿದ್ದೇವೆ ಎಂದು ಒಂದಷ್ಟು ಜನ ಮಾತನಾಡಿಕೊಂಡರು. ಹಾಗೇ ಹೇಳಿದವರಿಗೆ ಉತ್ತರ ಈ ಐವತ್ತು ದಿನಗಳ ಸಂಭ್ರಮ. ಸಿನಿಮಾ ಕೋಟಿ, ಕೋಟಿ ಮಾಡಬೇಕು ಎನ್ನುವುದು ನಮ್ಮ ತಲೆಯಲ್ಲಿ ಇರಲಿಲ್ಲ. ನಿರ್ಮಾಪಕರು ಗೆಲ್ಲಬೇಕು, ನಿಲ್ಲಬೇಕು ಅನ್ನುವುದಷ್ಟೇ ಇತ್ತು. ಹೀಗಾಗಿ ಖುಷಿ ಇದೆ’ ಎಂದರು ‘ಬ್ಲಿಂಕ್’ ಸಿನಿಮಾದ ಹೀರೋ ದೀಕ್ಷಿತ್ ಶೆಟ್ಟಿ. ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ಅವರು ಪರಿಚಿತ ನಟ. ಹಾಗಾಗಿ ‘ಬ್ಲಿಂಕ್’ ನಿರ್ಮಾಪಕರಿಗೆ ಈ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡುವ ಯೋಜನೆಯೂ ಇದೆ.
ಈ ಟೈಮ್ ಟ್ರಾವೆಲ್ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, ‘ಸಿನಿಮಾ ಅಮೇಜಾನ್ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಸಿನಿಮಾದ ಕುರಿತು ಜನ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಟಿಟಿಗೂ ಎಂಟ್ರಿ ಕೊಟ್ಟಿರುವ ಚಿತ್ರವೀಗ ಯಶಸ್ವಿಯಾಗಿ 50 ದಿನ ಪೂರೈಸಿದೆ. ಕನ್ನಡ ಸಿನಿಮಾಗಳನ್ನು ಪ್ರೇಕ್ಷಕ ನೋಡುತ್ತಿಲ್ಲ ಎಂಬ ಅಪವಾದದ ನಡುವೆ ಬ್ಲಿಂಕ್ ಹಾಫ್ ಸೆಂಚೂರಿ ಬಾರಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು. ‘ಇಡೀ ಸಿನಿಮಾ ತಂಡ ಪ್ರಾಮಾಣಿಕವಾಗಿ ದುಡಿದಿದೆ. ಅವರಿಗೆಲ್ಲಾ ಮುಂದೆ ಒಳ್ಳೆ ಸಿನಿ ಕೆರಿಯರ್ ಸಿಗಬೇಕು. ಆದಷ್ಟು ಬೇಗ ತೆಲುಗಿಗೂ ಡಬ್ ಮಾಡಿಸುತ್ತೇವೆ. ತಮಿಳು ಡಬ್ಬಿಂಗ್ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಿನಿಮಾಗೆ ಭಾಷೆಯ ಎಲ್ಲೆ ಇಲ್ಲ’ ಎನ್ನುವುದು ಚಿತ್ರದ ನಿರ್ಮಾಪಕ ರವಿಚಂದ್ರ ಅವರ ಮಾತು.
ಓಟಿಟಿಯಲ್ಲೂ ಮೆಚ್ಚುಗೆ | ಥಿಯೇಟರ್‌ನಲ್ಲಿ ಜನಮೆಚ್ಚುಗೆ ಪಡೆದ ಚಿತ್ರಕ್ಕೆ ಓಟಿಟಿಯಲ್ಲೂ ಬೆಂಬಲ ಸಿಕ್ಕಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಮೂರು ದಿನಗಳಲ್ಲೇ 7 ಮಿಲಿಯನ್ ಮಿನಿಟ್ಸ್ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿತು. 4ನೇ ದಿನ 10 ಮಿಲಿಯನ್ ಮಿನಿಟ್ಸ್ ರೀಚ್ ಆಗಿದೆ. ಹೊಸಬರ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎನ್ನುವುದು ಚಿತ್ರತಂಡದ ಖುಷಿ. ಶಿವರಾತ್ರಿ ಹಬ್ಬದಂದು ದೊಡ್ಡ ಸಿನಿಮಾಗಳ ಜೊತೆ ರಿಲೀಸ್ ಆದ ಈ ಚಿತ್ರಕ್ಕೆ ಪ್ರಾರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಕ್ರಮೇಣ ಮೌತ್ ಪಬ್ಲಿಸಿಟಿಯಿಂದ ‘ಬ್ಲಿಂಕ್’ ಶೋಗಳು ಏರಿಕೆಯಾಗುತ್ತಾ ಹೋದವು. ಕನ್ನಡ ಸಿನಿಮಾಗಳಿಗೆ ಶೋ ಸಿಕ್ತಿಲ್ಲ ಎಂಬ ಆಪವಾದದ ನಡುವೆ 8 ಶೋಗಳಿಂದ 82 ಶೋ ‘ಬ್ಲಿಂಕ್’ ಪಾಲಾಗಿತ್ತು. ಪ್ರೇಕ್ಷಕರ ಪ್ರೀತಿ ಪಡೆದ ಸಿನಿಮಾ ಹಾಫ್ ಸೆಂಚೂರಿ ಭಾರಿಸಿದೆ.