ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ತೆಲುಗು ಚಿತ್ರರಂಗದ ಪ್ರತಿಷ್ಠಿತ ವಾರಾಹಿ ಪ್ರೊಡಕ್ಷನ್ಸ್‌ನ ಕನ್ನಡ – ತೆಲುಗು ದ್ವಿಭಾಷಾ ಸಿನಿಮಾ ಇದೇ 4ನೇ ತಾರೀಖು ಸೆಟ್ಟೇರುತ್ತಿದೆ. ವಾರಾಹಿ ರಾಧಾಕೃಷ್ಣ ನಿರ್ದೇಶಿಸಲಿರುವ ಚಿತ್ರಕ್ಕೆ ದೇವಿಶ್ರೀ ಪ್ರಸಾದ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಅದ್ಧೂರಿ ಬಜೆಟ್‌ ಜೊತೆ ಕಂಟೆಂಟ್‌ ಸಿನಿಮಾಗಳ ಮೂಲಕ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಗಳಿಸಿದ ಚಿತ್ರನಿರ್ಮಾಣ ಸಂಸ್ಥೆ ವಾರಾಹಿ ಪ್ರೊಡಕ್ಷನ್ಸ್‌. ಟಾಲಿವುಡ್‌ನ ಈ ಪ್ರತಿಷ್ಠಿತ ಬ್ಯಾನರ್‌ ಮೂಲಕ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಹೀರೋ ಆಗಿ ಸಿನಿಮಾರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಲವ್‌ – ಫ್ಯಾಮಿಲಿ ಎಂಟರ್‌ಟೇನರ್‌ ಕತೆಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುವುದು ಸಂಸ್ಥೆಯ ಯೋಜನೆ. ಚಿತ್ರದ ಶೀರ್ಷಿಕೆಯಿನ್ನೂ ನಿಗಧಿಯಾಗಿಲ್ಲ. ಇದು ವಾರಾಹಿ ಪ್ರೊಡಕ್ಷನ್ಸ್‌ನ 15ನೇ ಚಿತ್ರವಾಗಿದ್ದು, ಮಾರ್ಚ್‌ 4ರಂದು ಮುಹೂರ್ತ ನೆರವೇರಲಿದೆ. ಶಿವರಾತ್ರಿಯ ದಿನವಾದ ಇಂದು ಸಿನಿಮಾ ಘೋಷಣೆಯಾಗಿದೆ.

ಅನುಭವಿ ತಂತ್ರಜ್ಞರು ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ಟಾಲಿವುಡ್‌ನ ಖ್ಯಾತ ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಲಿದ್ದಾರೆ. ‘ಬಾಹುಬಲಿ’ ಸಿನಿಮಾ ಖ್ಯಾತಿಯ ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ ನಿರ್ವಹಿಸಲಿದ್ದಾರೆ. ಪ್ರಸ್ತುತ ಭಾರತೀಯ ಸಿನಿಮಾದ ಮುಂಚೂಣಿ ಸಾಹಸ ಸಂಯೋಜಕರಲ್ಲೊಬ್ಬರಾದ ಪೀಟರ್ ಹೇನ್‌ ಈ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ. ಕತೆ ಮತ್ತು ನಿರ್ದೇಶನ ರಾಧಾಕೃಷ್ಣ ಅವರದು. ಚಿತ್ರದ ನಾಯಕಿಯ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಕನ್ನಡ ಮತ್ತು ತೆಲುಗು ಚಿತ್ರರಂಗಗಳ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here