ದೀಕ್ಷಿತ್ ಶೆಟ್ಟಿ ಮತ್ತು ಮಂದಾರ ಅವರ ಮೇಲೆ ಪಿಕ್ಚರೈಸ್ ಆಗಿರುವ ‘ಬ್ಲಿಂಕ್’ ಸಿನಿಮಾದ ‘ಸಖಿಯೇ’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ರಚನೆಯ ಗೀತೆಗೆ ಪ್ರಸನ್ನಕುಮಾರ್ ಎಂ ಎಸ್ ಸಂಗೀತ ಸಂಯೋಜಿಸಿದ್ದು, ಸಿದ್ದಾರ್ಥ್ ಬೆಳ್ಮಣ್ಣು ಹಾಡಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸಿನಿಮಾದ ಮತ್ತೊಬ್ಬ ನಾಯಕಿಯಾಗಿ ಚೈತ್ರ ಆಚಾರ್ ನಟಿಸಿದ್ದಾರೆ.
ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಸಿನಿಮಾದ ಎರಡನೇ ಸಾಂಗ್ ‘ಸಖಿಯೇ’ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದು, ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ಸಂಯೋಜನೆಗೆ ಸಿದ್ದಾರ್ಥ್ ಬೆಳ್ಮಣ್ಣು ದನಿಯಾಗಿದ್ದಾರೆ. ಶ್ರೀನಿಧಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಮೂಲತಃ ಅವರು ರಂಗಭೂಮಿಯವರು. ಸಿನಿಮಾ ಬಗ್ಗೆ ಮಾತನಾಡುವ ಅವರು, ‘ರಂಗಭೂಮಿ ಜೊತೆ ಜೊತೆಯಲಿ ಸಿನಿಮಾ ಮಾಡಬೇಕೆಂಬ ಕನಸು ಇತ್ತು. ಕೋವಿಡ್ ಸಮಯದಲ್ಲಿ ಒಂದಿಷ್ಟು ಸಿನಿಮಾ ನೋಡ್ತಾ ನಾವು ಯಾಕೆ ಈ ರೀತಿ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಬಾರದೆಂಬ ಯೋಚನೆ ಬಂತು. ಸ್ನೇಹಿತರು ಮತ್ತು ರಂಗಭೂಮಿ ಗೆಳೆಯರಿಂದ ಈ ಸಿನಿಮಾ ತಯಾರಾಗಿದೆ’ ಎನ್ನುತ್ತಾರೆ. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ unexpected ಘಟನೆಗಳು ಹೇಗೆ ಆವನ ಸುತ್ತ- ಮುತ್ತಲಿನ ವಾತಾವರಣ ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ. Sci-Fi ಜಾನರ್‌ಗೆ ಸೇರ್ಪಡೆಗೊಳಿಸಬಹುದಾದ ಸಿನಿಮಾ.
‘ದಿಯಾ’, ‘ದಸರಾ’ ತೆಲುಗು ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಚಿತ್ರದ ಹೀರೋ. ಅವರಿಗೆ ಜೋಡಿಯಾಗಿ ಮಂದಾರ ನಟಿಸಿದ್ದಾರೆ. ‘ಬ್ಲಿಂಕ್ ಸಿನಿಮಾ ಯಾವುದೇ ಪರ್ಟಿಕ್ಯೂಲರ್ ಜಾನರ್‌ಗೆ ಬೀಳಲ್ಲ. ಸೈನ್ಸ್ ಫಿಕ್ಷನ್ ಸಣ್ಣ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಮನುಷ್ಯತ್ವ, ಮನುಷ್ಯ ಪ್ರೀತಿ ಅನ್ನೋವುದನ್ನು ಸಿನಿಮಾ ತೋರಿಸಿಕೊಡುತ್ತದೆ. ಸೈನ್ಸ್ ಫಿಕ್ಷನ್ ಎಂದರೆ ಒಂದು ಲ್ಯಾಬ್ ಅಥವಾ ಬೇರೆ ಪ್ರಪಂಚದಲ್ಲಿ ನಡೆಯುವ ಕಥೆಯಾಗಿರುತ್ತದೆ. ಬಟ್ ಇದು ಹಾಗಲ್ಲ. ನಮ್ಮಂತಹ ಮಧ್ಯಮ ವರ್ಗದ ನಡುವೆ ಸೈನ್ಸ್ ಫಿಕ್ಷನ್ ಆದರೆ ಏನೆಲ್ಲ ಕಳವಳ ಆಗಬಹುದು.. ಏನೆಲ್ಲಾ ಸನ್ನಿವೇಶ ಎದುರಿಸಬಹುದು ಅನ್ನೋದು ಈ ಸಿನಿಮಾದ ಮುಖ್ಯಕತೆ’ ಎನ್ನುತ್ತಾರೆ ದೀಕ್ಷಿತ್.
ನಾಯಕಿ ಮಂದಾರ ರಂಗಭೂಮಿ ನಟಿ. ‘ಬ್ಲಿಂಕ್’ ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ‘ನಿರ್ದೇಶಕರು ನನಗೆ ಐದಾರು ವರ್ಷಗಳಿಂದ ಪರಿಚಯ. ಅವರೇ ನಾಟಕಗಳನ್ನು ಬರೆದು ನಟಿಸಿ ನಿರ್ದೇಶಿಸುತ್ತಿದ್ದರು. ಬ್ಲಿಂಕ್ ಸಿನಿಮಾದ ಸ್ಕ್ರಿಪ್ಟ್ ಕೇಳಿದಾಗ ಖುಷಿಯಾಯಿತು. ನಾನು ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಕನ್ನಡದಲ್ಲಿ ಲೂಸಿಯಾ, ಬೆಲ್ ಬಾಟಂ, ರಂಗಿತರಂಗ ಸಿನಿಮಾಗಳು ಹೇಗೆ ಕ್ರಾಂತಿ ಮಾಡಿದವೋ. ಹಾಗೆಯೇ ಈ ಚಿತ್ರವೂ ಮೈಲಿಗಲ್ಲಾಗಲಿದೆ’ ಎನ್ನುವ ವಿಶ್ವಾಸ ಅವರದು. ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯಡಿ ತಯಾರಾಗುತ್ತಿರುವ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಚೈತ್ರ ಜೆ ಆಚಾರ್ ನಟಿಸುತ್ತಿದ್ದಾರೆ. ವಜ್ರಧೀರ್ ಜೈನ್ , ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಅವಿನಾಶ್ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಾಗೀರ್‌ದಾರ್ ಸಂಕಲನ ಚಿತ್ರಕ್ಕಿದೆ.