‘ಸಲಗ’ ಮತ್ತು ‘ಕೋಟಿಗೊಬ್ಬ 3’ ಚಿತ್ರಗಳು ಭರ್ಜರಿ ಸದ್ದು ಮಾಡುತ್ತಿವೆ. ಈ ಚಿತ್ರಗಳ ಗಳಿಕೆ ಎಷ್ಟು ಎಂದು ಗಾಂಧಿನಗರದಲ್ಲಿ ಗುಲ್ಲಾಗಿದೆ. ಸುದೀಪ್ ಅಭಿಮಾನಿಗಳು ದೊಡ್ಡಮೊತ್ತದ ಕಲೆಕ್ಷನ್ ತೋರಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ.
ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ‘ಸಲಗ’ ಮತ್ತು ‘ಕೋಟಿಗೊಬ್ಬ’ ಚಿತ್ರಗಳ ಕಲೆಕ್ಷನ್ ಕುರಿತದ್ದೇ ಸುದ್ದಿ ಈಗ ಗಾಂಧಿನಗರದಲ್ಲಿ. ‘ಸಲಗ’ ಚಿತ್ರದ ನಿರ್ಮಾಪಕ ಶ್ರೀಕಾಂತ್ ಅವರು ಮಾತ್ರ ಕಲೆಕ್ಷನ್ ಕುರಿತು ವಿತರಕರೇ ಹೇಳಬೇಕು ಎಂದು ಜಾರಿಕೊಳ್ಳುತ್ತಾರೆ. ಮತ್ತೊಂದೆಡೆ ಸೂಕ್ತ ದಾಖಲೆಯೊಂದಿಗೆ ಕಲೆಕ್ಷನ್ ಕುರಿತು ಮಾತನಾಡುತ್ತೇವೆ ಎಂದಿದ್ದಾರೆ ಆ ಚಿತ್ರದ ವಿತರಕರು. ಈ ಮಧ್ಯೆ ‘ಕೋಟಿಗೊಬ್ಬ 3’ ಚಿತ್ರದ ಕಲೆಕ್ಷನ್ ವಿವರಗಳು ಹೊರಬಿದ್ದಿವೆ. ‘ಕೋಟಿಗೊಬ್ಬ 3’ಗೆ ಆರಂಭಿಕ ವಿಘ್ನ ಎದುರಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಮೊದಲ ದಿನದ ಗಳಿಕೆಯ ವಿಷಯದಲ್ಲಿ ‘ಸಲಗ’ನಿಗೆ ಲಾಭವಾಯ್ತು. ‘ಕೋಟಿಗೊಬ್ಬ’ ಒಂದು ದಿನ ತಡವಾಗಿ ಬಿಡುಗಡೆಯಾದರೂ ಗಳಿಕೆಯಲ್ಲೇನೂ ಹಿಂದೆ ಬಿದ್ದಿಲ್ಲ. ತಮ್ಮ ಚಿತ್ರದ ವಿರುದ್ಧ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದರು. ‘ಕೋಟಿಗೊಬ್ಬ’ನನ್ನು ತಡೆಯಲು ಮಾಡಿದ ಕುತಂತ್ರಗಳ ಹೊರತಾಗಿಯೂ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಒಳ್ಳೆಯ ವ್ಯವಹಾರವನ್ನೇ ಮಾಡಿದೆ ಎನ್ನುತ್ತಿದ್ದಾರವರು. ಆದರೆ ಅವರು ನಿಖರವಾಗಿ ಕಲೆಕ್ಷನ್ ಬಗ್ಗೆ ಮಾತನಾಡಿಲ್ಲ.
ಆದರೇನಂತೆ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪೋಸ್ಟರ್‌ಗಳನ್ನು ಮಾಡಿ ಕಲೆಕ್ಷನ್ ಕುರಿತಂತೆ ಖುಷಿ ಹಂಚಿಕೊಂಡಿದ್ದಾರೆ. ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾದ ಮೊದಲ ದಿನ (ಅಕ್ಟೋಬರ್ 15) ರಂದು 12.50 ಕೋಟಿ ರೂಪಾಯಿ ಗಳಿಸಿದೆ ಎನ್ನುವುದು ಅವರ ಹೇಳಿಕೆ. ಹಬ್ಬದ ರಜೆಯೂ ಇದ್ದಿದ್ದು ಸಿನಿಮಾದ ಕಲೆಕ್ಷನ್ ಹೆಚ್ಚಾಗಲು ಕಾರಣವಾಗಿದೆ. ಇನ್ನು ಶನಿವಾರ ಹಾಗೂ ಭಾನುವಾರವೂ ಸಿನಿಮಾದ ಒಳ್ಳೆಯ ಕಲೆಕ್ಷನ್ ಮುಂದುವರೆದಿದ್ದು, ಶನಿವಾರ ಮತ್ತು ಭಾನುವಾರ ಒಟ್ಟು 25 ಕೋಟಿ ಹಣವನ್ನು ‘ಕೋಟಿಗೊಬ್ಬ 3’ ಕಲೆಕ್ಷನ್ ಮಾಡಿದೆ. ಆ ಮೂಲಕ ಸಿನಿಮಾ ನಾಲ್ಕು ದಿನಗಳಲ್ಲೇ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನುವುದು ಅಭಿಮಾನಿಗಳ ಅಂಬೋಣ. ಈ ಬಗ್ಗೆ ನಿರ್ಮಾಪಕರು ಹಾಗೂ ವಿತರಕರು ಮಾತ್ರ ಮಾಹಿತಿ ನೀಡುತ್ತಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸಪಡುತ್ತಿದ್ದಾರೆ. ಈ ಮಧ್ಯೆ ‘ಕೋಟಿಗೊಬ್ಬ 3’ ತೆಲುಗು ಡಬ್ಬಿಂಗ್ ಅವತರಣಿಕೆ ಸಿದ್ಧವಾಗುತ್ತಿದೆ. ಮುಂದಿನ ತಿಂಗಳು ಆಂಧ್ರದಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.