ಕೊರೋನಾ ಲಾಕ್‌ಡೌನ್ ತೆರವಿನ ನಂತರ ಡಬ್ಬಾದಲ್ಲೇ ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಗೆ ಸಿದ್ಧವಾಗಿವೆ. ಅದರ ಮೊದಲ ಇನ್‌ಸ್ಟಾಲ್‌ಮೆಂಟ್‌ ಎಂಬಂತೆ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾದವು. ಆದರೆ ಅವುಗಳಿಗೆ ಈಗ ಹೊಸ ಸಮಸ್ಯೆ ಎದುರಾಗಿದೆ.

ದುನಿಯಾ ವಿಜಯ್ ಅಭಿನಯದ ‘ಸಲಗ’ ಮತ್ತು ಕಿಚ್ಚ ಸುದೀಪ್ ಅವರ ‘ಕೋಟಿಗೊಬ್ಬ3’ ಚಿತ್ರಗಳು ಕಳೆದ ವಾರ ತೆರೆಕಂಡಿವೆ. ತಮ್ಮ ಚಿತ್ರಗಳು ಎಲ್ಲಿ ಪೈರೆಸಿಯ ವೈರಸ್‌ಗೆ ತುತ್ತಾಗುತ್ತವೋ ಎಂಬುದು ನಿರ್ಮಾಪಕರ ಚಿಂತೆಯಾಗಿತ್ತು. ಈ ಯೋಚನೆಯಲ್ಲಿಯೇ ನಿರ್ಮಾಪಕರ ಸಂಘ ಮತ್ತು ಆಯಾ ಚಿತ್ರಗಳ ನಿರ್ಮಾಪಕರು ಪೈರಸಿ ಆಗದಂತೆ ತಡೆಗಟ್ಟಲು ಹಲವು ಪ್ರಯತ್ನಗಳನ್ನು ಮಾಡಿದ್ದರು. ಪೊಲೀಸ್ ಕಮಿಷನರ್ ಮತ್ತು ಸೈಬರ್ ಕ್ರೈಮ್ ವಿಭಾಗಕ್ಕೆ ಮುಂಚೆಯೇ ಮನವಿ ಸಲ್ಲಿಸಿ ಸರ್ಕಾರದ ನೆರವನ್ನೂ ಕೋರಿದ್ದರು. ಆದರೆ ಅದ್ಯಾವುದೂ ಫಲ ಕೊಟ್ಟಂತೆ ಕಾಣುತ್ತಿಲ್ಲ. ಏಕೆಂದರೆ ಈಗ ‘ಸಲಗ’ ಮತ್ತು ‘ಕೋಟಿಗೊಬ್ಬ3’ ಎರಡೂ ಚಿತ್ರಗಳೂ ಪೈರಸಿಗೆ ತುತ್ತಾಗಿವೆ. ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಈಗ ಎರಡೂ ಚಿತ್ರಗಳಿಗೆ ಪೈರಸಿ ಕಾಟ ಶುರುವಾಗಿದೆ. ಆದರೆ ಸಂತಸದ ವಿಷಯ ಅಂದ್ರೆ ಅಷ್ಟೇ ವೇಗದಲ್ಲಿ ಅವುಗಳನ್ನು ತಡೆಗಟ್ಟುವ ಕೆಲಸವೂ ನಡೆಯುತ್ತಿದೆ.

ಚಿತ್ರನಿರ್ಮಾಪಕರು ಈ ಪೈರಸಿ ಲಿಂಕ್‌ಗಳನ್ನು ಹುಡುಕಿ ಡಿಲೀಟ್ ಮಾಡುವ ಹೊಣೆಯನ್ನು ಬೆಂಗಳೂರಿನ ಅಪಲೆಕ್ಸ್ ಸಂಸ್ಥೆಗೆ ವಹಿಸಿದ್ದಾರೆ. ಅಂತೆಯೇ ಈ ಸಂಸ್ಥೆಯ ಸಿಬ್ಬಂದಿ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡುವ ಕೆಲಸದಲ್ಲಿ ನಿರತವಾಗಿದ್ದಾರೆ. ಇದುವರೆಗೂ ‘ಸಲಗ’ ಮತ್ತು ‘ಕೋಟಿಗೊಬ್ಬ3’ ಚಿತ್ರಗಳ ಎರಡು ಸಾವಿರಕ್ಕೂ ಹೆಚ್ಚು ಲಿಂಕ್‌ಗಳನ್ನು ಡಿಲೀಟ್ ಮಾಡಲಾಗಿದೆ ಎನ್ನುವ ಮಾಹಿತಿ ಸಿಗುತ್ತದೆ. ತಂತ್ರಜ್ಞಾನ ಏನೇ ಮುಂದುವರೆದಿದ್ದರೂ ಈ ಪೈರೆಸಿ ಕಾಟದಿಂದ ಮುಕ್ತವಾಗಲು ಸಾಧ್ಯವಾಗುತ್ತಿಲ್ಲ. ಈಗ ಅದರ ವಿರುದ್ಧ ಹೋರಾಡುತ್ತಿರುವ ತಂಡವೂ ಕೇವಲ ಬೇನಾಮಿ ಹೆಸರಿನಲ್ಲಿ ಅಪ್‌ಲೋಡ್ ಆಗಿರುವ ಲಿಂಕ್‌ಗಳನ್ನು ಡಿಲೀಟ್ ಮಾಡುವುದು ಸಾಧ್ಯವಾಗುತ್ತಿದೆಯೇ ಹೊರತು. ಅಪ್‌ಲೋಡ್ ಮಾಡುವ ಕೆಲಸವನ್ನು ತಡೆಯಲು ಯಾವುದೇ ಮಾರ್ಗಗಳಿಲ್ಲ. ಟೆಲಿಗ್ರಾಂನಂಥ ಆಪ್ ಈ ಪೈರಸಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ‘ಸಲಗ’, ‘ಕೋಟಿಗೊಬ್ಬ3’ ಚಿತ್ರಗಳಲ್ಲದೆ ‘ಲಂಕೆ’, ‘ಶಾರ್ದೂಲ’, ‘ಕೃಷ್ಣಾ ಟಾಕೀಸ್’, ‘1980’ ಸೇರಿದಂತೆ ಸುಮಾರು ಹದಿನೆಂಟು ಚಿತ್ರಗಳು ಪೈರೆಸಿಗೆ ಈಡಾಗಿವೆ.

LEAVE A REPLY

Connect with

Please enter your comment!
Please enter your name here