ಶ್ರೀಮಂತಿಕೆಯಲ್ಲಿ ಮೆರೆದ ಹುಡುಗಿಯೊಬ್ಬಳು ಸಾಮಾನ್ಯ ಜನರ ಜತೆ ಬೆರೆತು ತನ್ನ ಬದುಕನ್ನು ಕಟ್ಟಿಕೊಂಡ ಕತೆ ‘ಕಾಲ್ ಮೀ ಬೇ’. ಸ್ವಲ್ಪ ತಮಾಷೆ, ಹೆಚ್ಚು ನಾಟಕೀಯತೆಯಿಂದ ಕೂಡಿದೆ ಎಂದು ಅನಿಸಿಕೊಂಡರೂ ಬೋರ್ ಹೊಡೆಸುವುದಿಲ್ಲ. ಈ ಹಿಂದಿ ಸರಣಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
‘ಕಾಲ್ ಮೀ ಬೇ’ ವೆಬ್ ಸರಣಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ, ಫ್ಯಾಶನ್ ಇಷ್ಟ ಪಡುವ, ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿರುವ ಬೆಲ್ಲಾ ಚೌಧರಿ (ಅನನ್ಯಾ ಪಾಂಡೆ) ಎಂಬ ಮಾಡರ್ನ್ ಹುಡುಗಿಯ ಕತೆ ಹೇಳುತ್ತದೆ. ಆಗರ್ಭ ಶ್ರೀಮಂತರು, ಎಲ್ಲದಕ್ಕೂ ಆಳುಗಳಿದ್ದಾರೆ. ಐಷಾರಾಮಿ ಬದುಕು ಬದುಕುತ್ತಿರುವ ಬೆಲ್ಲಾಳಿಗೆ ಶ್ರೀಮಂತ ಕುಟುಂಬದವನನ್ನೇ ಮದುವೆ ಮಾಡಿಸಲಾಗುತ್ತದೆ. ಸದಾ ಸೋಷಿಯಲ್ ಮೀಡಿಯಾವನ್ನೇ ನೆಚ್ಚಿಕೊಂಡಿರುವ ಬೆಲ್ಲಾಗೆ ಹೊರ ಜಗತ್ತು ಏನೆಂದು ಗೊತ್ತಿಲ್ಲ. ಬ್ಯುಸಿನೆಸ್‌ನಲ್ಲಿ ಸದಾ ಬ್ಯುಸಿಯಾಗಿರುವ ಗಂಡನಿಂದ ದೈಹಿಕ ಸುಖ ಸಿಗದೆ ಇನ್ನೊಬ್ಬನ ಜತೆ ಆಕೆ ಮೈಮರೆತಿರುವಾಗ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಾಳೆ. ಪರಿಣಾಮ ಆಕೆಯ ಗಂಡನ ಬ್ಯುಸಿನೆಸ್‌ಗೆ ಹೊಡೆತ ಬೀಳುತ್ತದೆ. ಆಕೆಯ ಅಮ್ಮ ಆಕೆಯನ್ನು ಮನೆಯಿಂದಲೇ ಹೊರ ಹಾಕುತ್ತಾರೆ. ನಂತರ ಆಕೆಯ ಬದುಕು ಏನಾಗುತ್ತದೆ ಎಂಬುದೇ ಇದರ ಕತೆ.
ಇಶಿತಾ ಮೊಯಿತ್ರಾ, ಸಮೀನಾ ಮೊಟ್ಲೆಕರ್ ಮತ್ತು ರೋಹಿತ್ ನಾಯರ್ ರಚನೆಯ ಈ ಸರಣಿಯನ್ನು ಕೊಲ್ಲಿನ್ ಡಿ’ಕುನ್ಹಾ ನಿರ್ದೇಶಿಸಿದ್ದಾರೆ. ಈ ಸರಣಿ ಶುರುವಾಗುವುದು ಸೌತ್ ಡೆಲ್ಲಿಯ ಹೈಫೈ ಪ್ರದೇಶದಲ್ಲಿ. ಅಲ್ಲಿನ ಐಷಾರಾಮಿ ಬದುಕಿನಲ್ಲಿ ಅಕ್ರಮ ಸಂಬಂಧದ ಸುನಾಮಿ ಹೊಡೆದಾಗ ‘ಕಾಲ್ ಮಿ ಬೇ’ ಎಂಬ Instagram ಐಡಿ ಹೊಂದಿರುವ ಬೆಲ್ಲಾ ಚೌಧರಿ ಬದುಕುವ ದಾರಿ ಕಂಡುಕೊಂಡು ಮುಂಬೈಗೆ ಬರುತ್ತಾಳೆ. ಆಕೆ ಫ್ಯಾಷನ್ ಇಷ್ಟಪಡುವ ಬಿಂದಾಸ್ ಹುಡುಗಿ. ಸೋಷಿಯಲ್ ಮೀಡಿಯಾದಲ್ಲಿ ಏನೇನಾಗುತ್ತೆ ಎಂಬುದನ್ನು ಬಿಟ್ಟರೆ ಹೊರಗಿನ ಜಗತ್ತು, ಅಲ್ಲಿನ ಮನುಷ್ಯರ ಬದುಕಿನ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದ ಹುಡುಗಿ. ಫ್ಯಾಷನ್ ಡ್ರೆಸ್, ಬ್ಯಾಗ್, ಶೂಗಳೆಂದರೆ ಪಂಚಪ್ರಾಣ ಈ ಹುಡುಗಿಗೆ. ಆಕೆಯ ಕುಟುಂಬ ದಿವಾಳಿಯಾಗುತ್ತಿದೆ. ಕುಟುಂಬ ದೀವಾಳಿಯಾಗುವುದನ್ನು ತಪ್ಪಿಸಬೇಕಾದರೆ ಆಕೆಯನ್ನು ಶ್ರೀಮಂತ ಕುಟುಂಬದ ಗಂಡಿಗೆ ಮದುವೆ ಮಾಡಿಕೊಡಬೇಕು ಎಂದು ಆಕೆಯ ಅಮ್ಮ ತೀರ್ಮಾನಿಸುತ್ತಾಳೆ. ಹಾಗೆ ಶ್ರೀಮಂತ ಕುಟುಂಬದ ಬಿಸ್ನೆಸ್‌ಮ್ಯಾನ್ ಅಗಸ್ತ್ಯಾ (ವಿಹಾನ್ ಸಮತ್) ಜೊತೆ ಆಕೆಯ ವಿವಾಹ ನಿಶ್ಚಯವಾಗುತ್ತದೆ. ಪ್ರಣಯ ಪಕ್ಷಿಗಳಂತೆ ಇಬ್ಬರೂ ಸುತ್ತಾಡುತ್ತಾರೆ. ನಂತರ ಅದ್ಧೂರಿಯಾಗಿ ಮದುವೆ ನೆರವೇರಿತ್ತದೆ.
ಆಕೆಗೆ ಬೇಕಾದುದನ್ನೆಲ್ಲ ಕೊಡಿಸುವ ಗಂಡ, ಮನೆಯಲ್ಲಿ ಆಳು-ಕಾಳು ಬೇರೆ. ಆದರೆ ಆಕೆಗೆ ಬೇಕಾಗಿರುವುದು ಹಿಡಿ ಪ್ರೀತಿ, ದೈಹಿಕ ಸಂಪರ್ಕ. ಇದ್ಯಾವುದೂ ಇಲ್ಲದೆ ಬೇಸರಪಡುವ ಬೆಲ್ಲಾಗೆ ಜಿಮ್ ಟ್ರೇನರ್ ಸಿಕ್ಕಿಬಿಡುತ್ತಾನೆ. ಆತನೊಂದಿಗೆ ಬೆಲ್ಲಾ ಪ್ರೀತಿಯಲ್ಲಿ ಬೀಳುತ್ತಾಳೆ. ಅಷ್ಟೇ ಅಲ್ಲ ಅವರಿಬ್ಬರೂ ಪ್ರೇಮೋನ್ಮತ್ತರಾಗಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಾರೆ. ಬೆಲ್ಲಾ ಅನ್ಯ ಪುರುಷನೊಂದಿಗೆ ಇರುವ ಫೋಟೊಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತವೆ. ಈ ಅವಮಾನ ಸಹಿಸಲಾರದೆ ಗಂಡ ಆಕೆಯನ್ನು ದೂರ ಮಾಡುತ್ತಾನೆ. ಇದು ಆತನ ಬಿಸ್ನೆಸ್ ಮೇಲೆಯೂ ಪರಿಣಾಮ ಬೀಳುತ್ತದೆ. ಇತ್ತ ಆಕೆಯ ಅಮ್ಮನೂ ಆಕೆಯನ್ನು ಕುಟುಂಬದಿಂದ ದೂರವಿರುವಂತೆ ಹೇಳುತ್ತಾಳೆ. ಆಕೆಗೆ ಗಂಡ ಕೊಡುತ್ತಿದ್ದ ದುಡ್ಡು ನಿಂತು ಹೋಗುತ್ತದೆ. ಅಮ್ಮ ಆಕೆಯನ್ನು ಫ್ಯಾಮಿಲಿ ವಾಟ್ಸಾಪ್ ಗ್ರೂಪ್‌ನಿಂದಲೂ ತೆಗೆದುಹಾಕುತ್ತಾಳೆ. ಬದುಕಿನಲ್ಲಿ ಸಂಭವಿಸಿದ ಅನಿರೀಕ್ಷಿತ ಹೊಡೆತದಿಂದ ಗಲಿಬಿಲಿಗೊಂಡ ಬೆಲ್ಲಾ ಕಾರಿನಲ್ಲಿ ಕುಡಿದು ಮತ್ತೇರಿಸಿಕೊಂಡಿರುತ್ತಾಳೆ. ಪೊಲೀಸರು ಆಕೆಯನ್ನು ಬಂಧಿಸಿ ನಂತರ ಬಿಡುಗಡೆ ಮಾಡುತ್ತಾರೆ. ಅಲ್ಲಿಂದ ಬದುಕು ಹೊಸ ತಿರುವು ಪಡೆದುಕೊಳ್ಳುತ್ತದೆ.
ಬೆಲ್ಲಾ, ದೆಹಲಿ ತೊರೆದು ಮುಂಬೈ ಬರುತ್ತಾಳೆ. ಮಹಾನಗರದಲ್ಲಿ ಒಂಟಿಯಾಗಿ ಬದುಕು ಸಾಗಿಸಬೇಕು. ಅಲ್ಲಿಯವರೆಗೆ ಐಷಾರಾಮಿ ಬದುಕು ಬದುಕಿರುವ ಹುಡುಗಿಗೆ ಡಿಸೈನರ್ ಬಟ್ಟೆ, ಶೂ, ಬ್ಯಾಗ್ ಮೇಲಿನ ಗೀಳನ್ನು ಬಿಡಲೂ ಆಗುವುದಿಲ್ಲ. ಆದರೆ ಬದುಕು ಸಾಗಿಸಲೇಬೇಕು. ಅದಕ್ಕೆ ದುಡಿಯಬೇಕು ಇದು ಸ್ವಲ್ಪಮಟ್ಟಿಗೆ ಸವಾಲಿನ ಸಂಗತಿ. ಆದರೆ ಬೆಲ್ಲಾಳ ಅರ್ಹತೆ ಕೇಳಿದರೆ ಪ್ರೇಕ್ಷಕರು ದಂಗಾಗುತ್ತಾರೆ. ಆಕೆ ಹಲವಾರು ವಿಷಯದಲ್ಲಿ ಕೋರ್ಸ್ ಮಾಡಿದ್ದಾಳೆ. ಈ ಪಟ್ಟಿಯಲ್ಲಿ psychic vegan cheese and wine pairing ಮತ್ತು ‘David Beckham studies ಸೇರಿವೆ.
ಆಕೆ ಆಟೋರಿಕ್ಷಾವನ್ನು ‘ಟುಕ್ ಟುಕ್’ ಅಂತಾಳೆ. ಆಟೋದಲ್ಲಿ ಎಸಿ ಇಲ್ಲವೇ ಎಂದು ದಡಬಡಿಸುತ್ತಾಳೆ. ಆಗ ಅವಳಿಗೆ ಗೆಳತಿಯೊಬ್ಬಳು ಸಿಕ್ಕಿ ಬಿಡುತ್ತಾಳೆ. ತನ್ನ ಆಗತ್ಯಗಳನ್ನು ಪೂರೈಸಲು ತನ್ನ ಬಳಿ ಇದ್ದ ಬ್ಯಾಗ್‌ಗಳನ್ನು ಆಕೆಗೆ ಮಾರಾಟ ಮಾಡುತ್ತಾಳೆ. ಆಟೋದಲ್ಲಿ ಪ್ರಯಾಣಿಸುತ್ತಾಳೆ. ಹಾಸ್ಟೆಲ್‌ನಲ್ಲಿ ಇದ್ದು ಹೊಸ ಕೆಲಸ ಹುಡುಕಲು ಶುರು ಮಾಡುತ್ತಾಳೆ. ಇಲ್ಲಿಂದ ಬೇ ಎಂಬ ಬೆಲ್ಲಾ ಸಾಮಾನ್ಯ- ಮಧ್ಯಮ ವರ್ಗದ ಜನರೊಂದಿಗೆ ಬೆರೆಯುತ್ತಾಳೆ. ಹಾಸ್ಟೆಲ್ ಬಾಡಿಗೆ ಕೊಡಲು ಕೆಲಸವೊಂದು ಬೇಕೇಬೇಕು. ಆಗ ಆಕೆಯ ಸಹಾಯಕ್ಕೆ ಬರುವುದೇ ಆಕೆ ಮಾಡಿದ ಸೋಷಿಯಲ್ ಮೀಡಿಯಾ ಜರ್ನಲಿಸಂ ಕೋರ್ಸ್. ಅದೇನಪ್ಪಾ ಅಂದರೆ ‘140ಕ್ಕಿಂತ ಕಡಿಮೆ ಪದಗಳಲ್ಲಿ ಸುದ್ದಿ ಬರೆಯುವುದು. ಆಕೆಗೆ ಸುದ್ದಿವಾಹಿನಿಯೊಂದರಲ್ಲಿ ಇಂಟರ್ನ್‌ಶಿಪ್ ಅವಕಾಶ ಸಿಕ್ಕಿಬಿಡುತ್ತದೆ.
ಅಲ್ಲೊಬ್ಬ ಟೀವಿ ಆ್ಯಂಕರ್ ಸತ್ಯಜಿತ್ ಸೇನ್ (ವೀರ್ ದಾಸ್) ಇದ್ದಾನೆ. ಈತ ತನ್ನ ಸುದ್ದಿವಾಹಿನಿಯಲ್ಲಿ ಪ್ರೈಮ್‌ಟೈಮ್ ಶೋ ನಡೆಸಿಕೊಡುತ್ತಿರುತ್ತಾನೆ. ಈತನ ಬಾಡಿ ಲ್ಯಾಂಗ್ವೇಜ್ ಮತ್ತು ಕಾರ್ಯಕ್ರಮ ನಡೆಸಿಕೊಡುವ ರೀತಿ ನೋಡಿದರೆ ಅರ್ನಬ್ ಗೋಸ್ವಾಮಿ ನೆನಪಿಗೆ ಬಾರದೇ ಇರದು. ಈತ ಕಾರ್ಪೋರೇಟ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ಆ ಕಾರ್ಪೋರೇಟ್ ಕಂಪನಿ ಆತನಿಗೆ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತದೆ. ಈ ಮಾಹಿತಿಯನ್ನು ಬಳಸಿ ಈತ ನನ್ನ ಚಾನೆಲ್‌ನಲ್ಲಿ ವ್ಯಕ್ತಿಗಳ ಮಾನ ಹರಾಜು ಮಾಡುತ್ತಾನೆ. ಇಂತಿರುವಾಗ me too ಆರೋಪವೊಂದು ಕೇಳಿ ಬರುತ್ತದೆ. ಮಧುಲಿಕಾ ಎಂಬ ಚಿತ್ರನಟಿ ತನಗಾದ ಕೆಟ್ಟ ಅನುಭವವನ್ನು ಹೇಳಲು ಹಿಂಜರಿಯುತ್ತಾಳೆ. ಆದರೆ ಬೆಲ್ಲಾ ಆಕೆಗೆ ಧೈರ್ಯ ತುಂಬುತ್ತಾಳೆ. ಮೀಟೂ ಅಭಿಯಾನದಲ್ಲಿ ಭಾಗಿಯಾಗುವಂತೆ ಬೇ ಕರೆ ನೀಡುತ್ತಾಳೆ.
ಹಲವಾರು ಮಹಿಳೆಯರು ತಮಗಾದ ಅನುಭವಗಳನ್ನು ಮುಕ್ತವಾಗಿ ಹೇಳುತ್ತಾರೆ. ಪ್ರತಿಷ್ಠಿತ ಕಂಪನಿಯ ಮಾಲೀಕನ ವಿರುದ್ಧವೂ ಮೀಟೂ ಆರೋಪ ಕೇಳಿಬರುತ್ತದೆ. ಸತ್ಯಜಿತ್ ಸೇನ್ ಎಂಬ ಖ್ಯಾತ ಪತ್ರಕರ್ತ ಈ ಆರೋಪವನ್ನು ಅಲ್ಲಗೆಳೆದು ಕಾರ್ಪೋರೇಟ್ ಮಿತ್ರನನ್ನು ಬಚಾವ್ ಮಾಡಲು ಬಯಸಿದರೂ ಬೆಲ್ಲಾಳ ಸ್ನೇಹಿತರು ತಮ್ಮ ಆರೋಪಗಳನ್ನು ಸಾಬೀತು ಪಡಿಸುವ ಸಾಕ್ಷ್ಯ ಕಲೆ ಹಾಕಿರುತ್ತಾರೆ. ಒಂದು ಮುಕ್ತ ಚರ್ಚೆಯಲ್ಲಿ ಬೆಲ್ಲಾ ಪ್ರತಿಷ್ಠಿತ ವ್ಯಕ್ತಿಗಳ ಮುಖವಾಡ ಕಳಚುತ್ತಾಳೆ. ಅಲ್ಲಿ ಆಕೆ ಸಂತ್ರಸ್ತರ ಪರವಾಗಿ ದನಿಯೆತ್ತುತ್ತಾಳೆ. ಈ ಮೂಲಕ ಬೆಲ್ಲಾ ಚೌಧರಿ ಎಂಬ ಬೇ ತನ್ನ ಬದುಕನ್ನು ತಾನೇ ರೂಪಿಸಿಕೊಂಡ ಸ್ಟ್ರಾಂಗ್ ಮಹಿಳೆಯಾಗಿ ಮಿಂಚುತ್ತಾಳೆ.
Instagramನಲ್ಲೇ ಬದುಕಿನ ಎಲ್ಲಾ ಅಪ್ಡೇಟ್‌ಗಳನ್ನು ನೀಡುವ ಬೇ, ಜನರ ಜತೆ ವೇಗವಾಗಿ ಬೆರೆಯುತ್ತಾಳೆ. ಆಕೆ ಕಷ್ಟದಲ್ಲಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲು ಮರೆಯುವುದಿಲ್ಲ. ಆಕೆಯ ಗೆಳೆಯರು ವಿಶೇಷವಾಗಿ ಗೆಳತಿಯರು ಸದಾ ಆಕೆಗೆ ಸಾಥ್ ನೀಡುತ್ತಿರುತ್ತಾರೆ. ಶ್ರೀಮಂತಿಕೆಯಲ್ಲಿ ಮೆರೆದ ಹುಡುಗಿಯೊಬ್ಬಳು ಸಾಮಾನ್ಯ ಜನರ ಜತೆ ಬೆರೆತು ತನ್ನ ಬದುಕನ್ನು ಕಟ್ಟಿಕೊಂಡ ಕತೆ ಸ್ವಲ್ಪ ತಮಾಷೆ, ಹೆಚ್ಚು ನಾಟಕೀಯತೆಯಿಂದ ಕೂಡಿದೆ ಎಂದು ಅನಿಸಿಕೊಂಡರೂ ಬೋರ್ ಹೊಡೆಸುವುದಿಲ್ಲ. ಸರಣಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.