ಪು ಲ ದೇಶಪಾಂಡೆ ಪಾತ್ರದಲ್ಲಿ ಸಾಗರ್ ದೇಶಮುಖ್ ಅಭಿನಯಿಸಿದ್ದಾರೆ. ಸಾಗರ್ ಅವರಿಗೆ ಪೂರ್ತಿ ಅಂಕ ಕೊಡಬಹುದು. ಪು ಲ ಅವರ ವ್ಯಕ್ತಿತ್ವದ ಎಲ್ಲಾ ಮಜಲುಗಳ ಜೊತೆಯಲ್ಲಿ ಅವರ ವ್ಯಕ್ತಿತ್ವದ ಆರ್ದ್ರತೆಯನ್ನೂ ಅವರು ತೆರೆದಿಡುತ್ತಾರೆ. ಆ ಪಾತ್ರದ ಗ್ರಾಫ್ ಮತ್ತು ವ್ಯಾಪ್ತಿ ಎರಡಕ್ಕೂ ಅವರು ನ್ಯಾಯ ಸಲ್ಲಿಸುತ್ತಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ ಮರಾಠಿ ಸಿನಿಮಾ ‘ಭಾಯಿ, ವ್ಯಕ್ತಿ ಕಿ ವಲ್ಲಿ’

ಪುರುಷೋತ್ತಮ್ ಲಕ್ಷ್ಮಣ್ ದೇಶಪಾಂಡೆ ಅಥವಾ ಪು ಲ ದೇಶಪಾಂಡೆ ಮಹಾರಾಷ್ಟ್ರದ ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಸಾಹಿತಿ, ನಾಟಕಕಾರ, ನಟ, ಗೀತರಚನಕಾರ, ಸಂಗೀತಕಾರ, ಹಾಸ್ಯಗಾರ, ಚಾಟೋಕ್ತಿ ಪ್ರವೀಣ, ಅದ್ಭುತ ಭಾಷಣಕಾರ ಮತ್ತು ಇವುಗಳೆಲ್ಲದರ ಜೊತೆಯಲ್ಲಿ ಸರಕಾರಕ್ಕೆ ಮತ್ತು ಆಡಳಿತಕ್ಕೆ ಕನ್ನಡಿ ಹಿಡಿದು ತೋರಿಸುವ ದಿಟ್ಟತನದ ಎಚ್ಚರದ ಬೆಳಕು. ಅವರ ಈ ಬಹುಮುಖ ಪ್ರತಿಭೆಯ ಅನಾವರಣ ಈ ಚಿತ್ರದಲ್ಲಿದೆ. ಪುಲ ಅವರ ಪತ್ನಿ ಸುನೀತಾ ದೇಶಪಾಂಡೆಯವರ ’ಆಹೆ ಮನೋಹರ್ ತಾರಿ’ ಮತ್ತು ಪು ಲ ಅವರ ’ವ್ಯಕ್ತಿ ಆಣಿ ವಲ್ಲಿ’ ಪುಸ್ತಕಗಳನ್ನಾಧರಿಸಿ ತೆಗೆದ ’ಭಾಯಿ : ವ್ಯಕ್ತಿ ಕಿ ವಲ್ಲಿ’ – ಭಾಯಿ : ವ್ಯಕ್ತಿಯ ವ್ಯಕ್ತಿತ್ವ – ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ. ಎಲ್ಲರೂ, ಅವರ ಪತ್ನಿ ಸಹ ಪ್ರೀತಿಯಿಂದ ‘ಭಾಯಿ’ ಎಂದು ಕರೆಯುತ್ತಿದ್ದ ಪುಲ ದೇಶಪಾಂಡೆಯವರ ವ್ಯಕ್ತಿಚಿತ್ರಣದ ದೃಶ್ಯರೂಪ ಈ ಚಿತ್ರ.

ಹುಡುಗನಾಗಿದ್ದಾಗ ಬಾಳಾ ಠಾಕ್ರೆ ಶಾಲೆಯಲ್ಲಿ ಅವರ ವಿದ್ಯಾರ್ಥಿ. ನಂತರ ಬಾಳಾಠಾಕ್ರೆ ತನ್ನ ಅಧಿಕಾರದ ಉತ್ತುಂಗದಲ್ಲಿರುವಾಗ ತನ್ನ ಗುರುಗಳಿಗೆ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಘೋಷಣೆ ಮಾಡುತ್ತಾರೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿಯೇ ಪು ಲ ಬಾಳಾಠಾಕ್ರೆಯ ನಿರಂಕುಶ ಪ್ರವೃತ್ತಿಯನ್ನು ಟೀಕಿಸುತ್ತಾರೆ. ಅಂತಹವರು ಪ್ರಶಸ್ತಿ ಏಕೆ ತೆಗೆದುಕೊಳ್ಳಬೇಕು ಎಂದು ಠಾಕ್ರೆ ಕಟಕಿಯಾಡುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ್ದು ಈ ಸಂದರ್ಭದಲ್ಲಿ ಪು ಲ ಅವರಿಗೆ ಪೂರಾ ವಯಸ್ಸಾಗಿರುತ್ತದೆ, ಕೈಗಳು ನಡುಗುತ್ತಿರುತ್ತವೆ, ಪಾರ್ಕಿಸನ್ಸ್ ಅವರನ್ನು ಹಣ್ಣಾಗಿಸಿರುತ್ತದೆ. ಅವರ ಪರವಾಗಿ ಅವರ ಪತ್ನಿ ಸುನೀತಾ ಅವರ ಭಾಷಣವನ್ನು ಓದುತ್ತಾರೆ. ಆದರೆ ಆಗಲೂ ಸಹ ಅವರ ಧೈರ್ಯಕ್ಕೆ ಒಂದಿಷ್ಟೂ ಮುಪ್ಪು ಬಂದಿರುವುದಿಲ್ಲ.

ಇಂತಹ ಜೀವನವನ್ನಾಧರಿಸಿ ಚಿತ್ರವೊಂದನ್ನು ನಿರ್ಮಿಸುವುದು ಒಂದು ರೀತಿಯಲ್ಲಿ ಸರಳವೂ ಹೌದು, ಇನ್ನೊಂದು ರೀತಿಯಲ್ಲಿ ಸವಾಲೂ ಹೌದು. ಸರಳ ಏಕೆಂದರೆ ಪುಲ ಅವರ ಜೀವನವೇ ಒಂದು ಸ್ಕ್ರೀನ್ ಪ್ಲೇ ಇದ್ದ ಹಾಗಿದ್ದು, ಏನೆಲ್ಲಾ ನಾಟಕೀಯತೆ, ಏರಿಳಿತ, ಆಳ ಹಾಗು ವಿಸ್ತಾರಗಳನ್ನು ಒಳಗೊಂಡಿದೆ. ಅದೇ ಸಮಯಕ್ಕೆ ಇದು ಸವಾಲು ಏಕೆಂದರೆ ಮೊನ್ನೆಮೊನ್ನೆ ಅಂದರೆ ಜೂನ್ 2000 ರವರೆಗೂ ಮರಾಠಿಗರ ನಡುವಿನಲ್ಲೇ ಇದ್ದ, ಅವರಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದ ಪು ಲ ಅವರ ವ್ಯಕ್ತಿಚಿತ್ರ ಕಟ್ಟುವಾಗ ಒಂದಿಷ್ಟು ಎಡವಿದರೂ ಅವರನ್ನು ಪ್ರೀತಿಸಿದ ಜನ ಸುಮ್ಮನಿರುವುದಿಲ್ಲ. ಸಾಗರ್ ದೇಶಮುಖ್ ಪು ಲ ಆಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸಾಗರ್ ಅವರಿಗೆ ಪೂರ್ತಿ ಅಂಕ ಕೊಡಬಹುದು. ಪು ಲ ಅವರ ವ್ಯಕ್ತಿತ್ವದ ಎಲ್ಲಾ ಮಜಲುಗಳ ಜೊತೆಯಲ್ಲಿ ಅವರ ವ್ಯಕ್ತಿತ್ವದ ಆರ್ದ್ರತೆಯನ್ನೂ ಅವರು ತೆರೆದಿಡುತ್ತಾರೆ. ಆ ಪಾತ್ರದ ಗ್ರಾಫ್ ಮತ್ತು ವ್ಯಾಪ್ತಿ ಎರಡಕ್ಕೂ ಅವರು ನ್ಯಾಯ ಸಲ್ಲಿಸುತ್ತಾರೆ. ಪು ಲ ಅವರ ಆರೋಗ್ಯ ಕೆಟ್ಟು ಅವರನ್ನು ಆಸ್ಪತ್ರೆಗೆ ಸೇರಿಸಿರಲಾಗುತ್ತದೆ. ಅವರ ಪತ್ನಿ ಅಲ್ಲೇ ಇರುತ್ತಾರೆ. ಅವರ ನೆನಪಿನ ಮೂಲಕ ಚಿತ್ರ ತೆರೆದುಕೊಳ್ಳುತ್ತದೆ.

ಎರಡು ಭಾಗಗಳಲ್ಲಿ ಬಂದ ಈ ಚಿತ್ರದ ಮೊದಲ ಭಾಗ ಸೂಪರ್ ಹಿಟ್ ಆಯಿತು, ಎರಡನೆಯ ಭಾಗ ಪರವಾಗಿಲ್ಲ ಅನ್ನಿಸುವ ಹಾಗೆ ನಡೆಯಿತು ಎಂದು ಅಲ್ಲಿನ ಗೆಳೆಯರು ಹೇಳುತ್ತಾರೆ. ಒಂದು ಚಿತ್ರವಾಗಿ ಅದನ್ನು ನೋಡುವಾಗ ಇಡಿಯಾಗಿ ಚಿತ್ರ ನಿರಾಸೆಯನ್ನು ತಂದರೂ ಕೆಲವು ದೃಶ್ಯಗಳ ಕಟ್ಟುವಿಕೆ ಅನನ್ಯವಾಗಿ ಬಂದಿದೆ. ಆ ಕೆಲವು ದೃಶ್ಯಗಳ ಬಗ್ಗೆ ಒಂದಿಷ್ಟು ಮಾತು:

ಮೊಟ್ಟ ಮೊದಲಿಗೆ ಮನಸ್ಸನ್ನು ತಟ್ಟುವುದು ಪು ಲ ಮತ್ತು ಸುನೀತಾ ಅವರ ಅನುರೂಪ ದಾಂಪತ್ಯ. ಅವರಿಬ್ಬರ ನಡುವೆ ಜಗಳ ಇರಲಿಲ್ಲ ಅಂತಲ್ಲ. ಆದರೆ ಪ್ರತಿಬಾರಿ ಜಗಳ ಆದಾಗಲೂ ಅವರಿಬ್ಬರ ಕೈ ಚಾಚಿಕೊಳ್ಳುವುದು ಪರಸ್ಪರರ ಕಡೆಗೇ. ದಾಂಪತ್ಯ ಗೆಲ್ಲುವುದು ಅಲ್ಲಿ. ಮದುವೆಯ ಮೊದಲ ದಿನಗಳಲ್ಲಿ ಸುನೀತಾ ಜೋರು ಅನ್ನಿಸುತ್ತಾರೆ, ಪು ಲ ಬೇಜವಾಬ್ದಾರಿಯವರು ಅನ್ನಿಸುತ್ತಾರೆ. ಅವರು ಯಾವ ಮಟ್ಟಿಗೆ ರಂಗಭೂಮಿಯಲ್ಲಿ ಮುಳುಗಿರುತ್ತಾರೆ ಎಂದರೆ ಪತ್ನಿಗೆ ಹುಷಾರಿಲ್ಲ, ಆಕೆ ಆಸ್ಪತ್ರೆಗೆ ಬಂದಿದ್ದಾಳೆ, ಆಗ ತಾನೂ ಅಲ್ಲಿಗೆ ಬರುತ್ತೇನೆ ಎಂದು ಹೇಳಿದ್ದೆ ಎನ್ನುವುದನ್ನೂ ಮರೆಯುತ್ತಾರೆ. ಅಂದು ವೈದ್ಯರು ಸುನೀತಾ ಗರ್ಭಿಣಿ ಎಂದು ಹೇಳಿರುತ್ತಾರೆ. ತಡವಾಗಿ ಮನೆಗೆ ಬಂದ ಪತಿಗೆ ಅದನ್ನು ಹೇಳಬೇಕು ಎಂದು ಸುನೀತಾ ಪ್ರಯತ್ನಿಸುತ್ತಿರುತ್ತಾರೆ, ಆದರೆ ಗಂಡನಿಗೆ ಅದರ ಬಗ್ಗೆ ಗಮನವೇ ಇಲ್ಲ.

ಅವರಿಗೆ ಅವರ ನಾಟಕದ್ದೇ ಸಂಭ್ರಮ. ಊಟ ಸೇರದು ಎಂದು ಹಣ್ಣುಹಿಡಿದು ಕೂತ ಸುನೀತಾ ಕೈಯಿಂದ ಹಣ್ಣು ತೆಗೆದುಕೊಂಡು ತಿಂದ ಪು ಲ ಮಲಗಿಬಿಡುತ್ತಾರೆ. ಮುಂಜಾನೆ ಅಮ್ಮನಿಂದ ಅವರಿಗೆ ಸುದ್ದಿ ಗೊತ್ತಾಗುತ್ತದೆ. ಅದರೆ ಸಿಟ್ಟಿನ ಸ್ವಭಾವದ ಸುನೀತಾ ಅಷ್ಟರಲ್ಲಿ ಹೋಗಿ ಗರ್ಭಪಾತ ಮಾಡಿಸಿಕೊಂಡು ಬಂದಿರುತ್ತಾರೆ. ಹೀಗೇಕೆ ಮಾಡಿದೆ ಎನ್ನುವ ಅತ್ತೆಗೆ, ’ತಂದೆಯಾಗಿ ಇರಲಿ, ಗಂಡನಾಗಿಯೂ ಇವರ ಕೈಲಿ ಜವಾಬ್ದಾರಿ ನಿರ್ವಹಿಸಲು ಆಗುವುದಿಲ್ಲ. ಇವರು ಮಗುವಿನಂತೆ, ಇವರನ್ನೇ ಒಬ್ಬರು ನೋಡಿಕೊಳ್ಳಬೇಕು’ ಎಂದು ಹೇಳಿ ನಿಟ್ಟುಸಿರಿಡುತ್ತಾರೆ. ಆದರೂ ಗಂಡನಿಗೆ ಒಂದು ಮಾತೂ ಹೇಳದೆ ನೀನು ಹೀಗೆ ಮಾಡಿದ್ದು ತಪ್ಪು ಎಂದು ಅತ್ತೆ ಅಂದಾಗ ಅದುವರೆಗೂ ಕೈಗಳನ್ನು ಹಿಂದೆ ಕಟ್ಟಿ, ಮುಷ್ಠಿಬಿಗಿದು ನಿಂತಿದ್ದ ಪು ಲ ಹೆಂಡತಿಯ ನೆರವಿಗೆ ಧಾವಿಸುತ್ತಾರೆ. ಅಮ್ಮನನ್ನು ಸಮಾಧಾನ ಮಾಡುತ್ತಾರೆ.

ಅಮ್ಮ ಹೊರಗೆ ಹೋದ ಮೆಲೆ, ‘ಸುನೀತಾ…’ ಎಂದು ಕರೆಯುವ ಅವರು ಎರಡೂ ಕೈಜೋಡಿಸಿ ಹೆಂಡತಿಗೆ, ‘ಸಾರಿ ಸುನೀತಾ’ ಎಂದು ಕಂಬನಿ ಮಿಡಿಯುತ್ತಾರೆ. ಅತ್ಯಂತ ಭಾವಪೂರ್ಣವಾಗಿ ಕಟ್ಟಿದ ದೃಶ್ಯ ಇದು. ಇಲ್ಲಿ ತಾಯಿಯಾಗಿ ಅಶ್ವಿನಿ ಗಿರಿಯವರದೂ ಸಹ ಅಪರೂಪದ ಅಭಿನಯ. ನೋವಿನ ವಿಷಯ ಎಂದರೆ ಮತ್ತೆ ಅವರಿಬ್ಬರಿಗೆ ಮಕ್ಕಳಾಗುವುದೇ ಇಲ್ಲ. ಪು ಲ ಒಂದು ಸಲವೂ ಆ ಬಗ್ಗೆ ಹೆಂಡತಿಯ ಮೇಲೆ ತಪ್ಪು ಹೊರೆಸುವುದಿಲ್ಲ. ಕಡೆಯ ದಿನಗಳಲ್ಲಿ ಹೆಂಡತಿಯೇ ಆ ಬಗ್ಗೆ ಮಾತನಾಡಿದಾಗಲೂ ಕೂಡ, ‘ಇರಲಿಬಿಡು… ಆ ಮಗು ಇದ್ದಿದ್ದರೆ ನೀನಿಂದು ಇಷ್ಟು ಸಮಾಜಸೇವೆ ಮಾಡಲು, ಇಷ್ಟು ಮಕ್ಕಳಿಗೆ ಅಮ್ಮನಾಗಲು ಸಾಧ್ಯವಾಗುತ್ತಿರಲಿಲ್ಲವೋ ಏನೋ’ ಎಂದು ಸಮಾಧಾನ ಮಾಡುತ್ತಾರೆ.

ಹಾಗೆಯೇ ಮನಸ್ಸಿಗೆ ಹತ್ತಿರವಾಗುವ ದೃಶ್ಯಗಳು ಪು ಲ, ಭೀಮಸೇನ ಜೋಶಿ, ವಸಂತರಾವ್ ದೇಶಪಾಂಡೆ, ಕುಮಾರ ಗಂಧರ್ವ ಮತ್ತು ಚಂಪೂತಾಯಿ ಎಂದು ಕರೆಯಲ್ಪಡುವ ಹೀರಾಬಾಯಿ ಬರೋಡೆಕರ್ ಅವರ ಹಾಡುಗಾರಿಕೆಯ ದೃಶ್ಯಗಳು :

ಒಂದು ಸಲ ಭೀಮಸೇನ್ ಜೋಶಿ ಮತ್ತು ವಸಂತರಾವ್ ದೇಶಪಾಂಡೆ ಪು ಲ ತರುವ ವಿಸ್ಕಿಗಾಗಿ ಕಾತರದಲ್ಲಿ ಕಾಯುತ್ತಿರುತ್ತಾರೆ. ಶರ್ಟಿನ ಮರೆಯಲ್ಲಿ ಬಾಟಲ್ ಮುಚ್ಚಿಟ್ಟುಕೊಂಡು ಬಂದ ಅವರು ಏನೋ ಸಾಧನೆ ಮಾಡಿದವರಂತೆ ಬಾಟಲ್ ತೆಗೆಯುತ್ತಾರೆ. ಅಲ್ಲೇನಿದೆ? ತಳದಲ್ಲಿ ಒಂದೆರಡು ಸ್ಪೂನ್ ವಿಸ್ಕಿ. ‘ಅಲ್ಲಪ್ಪ ಮುಚ್ಚಳ ತೆಗೆದರೆ ಆವಿಯಾಗಿ ಬಿಡುತ್ತಲ್ಲ, ಏನು ಮಾಡೋದು’ ಎಂದು ವಸಂತರಾವ್ ಕಳವಳದಲ್ಲಿ ಕೇಳುತ್ತಾರೆ. ಭೀಮಸೇನ ಜೋಶಿ ಅಂತೂ ಅಂಗಡಿ ಹುಡುಕಿಕೊಂಡು ಹೋಗೋಣ ಎಂದು ಅವರಿಬ್ಬರನ್ನೂ ಹೊರಡಿಸುತ್ತಾರೆ. ‘ಅಯ್ಯೋ ಹೆಂಡತಿಗೆ ಸಿಗರೇಟು ತರೋಕೆ ಅಂತ ಹೇಳಿ ಬಂದಿದೀನಿ, ನಮ್ ಹೆಂಡ್ತಿ ಹೆಂಗೆ ಅಂತ ನಿಮಗೊತ್ತಿಲ್ಲ, ನನ್ನನ್ನು ಬಿಟ್ಟುಬಿಡಿ’ ಎಂದು ಪು ಲ ಅಂಗಲಾಚುತ್ತಾರೆ. ಉಹೂ ಬಿಡುವುದಿಲ್ಲ.

ಎಲ್ಲೂ ಮದಿರೆ ಸಿಗುವುದಿಲ್ಲ. ‘ಈಗ ನನಗೆ ಮೂಡ್ ಹೋಯ್ತು’ ಎಂದು ಭೀಮಸೇನ್ ಜೋಶಿ ಹೇಳಿದಾಗ ಪು ಲ ಗೆ ನಿರಾಳ, ಸರಿ ಹೊರಡುತ್ತೇನೆ ಎನ್ನುತ್ತಾರೆ. ‘ನನಗೀಗ ಹಾಡುವ ಮೂಡು, ನೀನು ಹೋದರೆ ಹಾರ್ಮೋನಿಯಂ ನುಡಿಸೋದು ಯಾರು’ ಎಂದು ಜುಲುಮೆ ಮಾಡಿ ಅವರನ್ನು ಚಂಪೂತಾಯಿಯ ಮನೆಗೆ ಕರೆತರುತ್ತಾರೆ. ಅಲ್ಲಿ ಅಂಗಳದೊಳಗೆ ಹೆಜ್ಜೆ ಇಟ್ಟ ತಕ್ಷಣ ಹಾಡುಗಾರಿಕೆ ಕೇಳಿಸುತ್ತದೆ. ‘ಹೇ ಇದು ಕುಮಾರ ಗಂಧರ್ವನ ಹಾಡು’ ಎಂದು ವಸಂತರಾವ್ ಅಂದರೆ, ‘ಹಾ, ನನ್ನನ್ನು ಕರೆಯದೆ ಅವನನ್ನು ಮಾತ್ರ ಕರೆದಿದ್ದಾರೆ’ ಎಂದು ಜೋಶಿ ಮುನಿಸಿಕೊಳ್ಳುತ್ತಾರೆ! ಅಂತೂ ಇಂತೂ ಮೂವರೂ ಸೇರುತ್ತಾರೆ. ಆಗ ಹಾಡುಗಾರಿಕೆ ನಡೆಯುತ್ತದೆ! ಈ ದೃಶ್ಯಗಳಿಗೆ ಒಂದಿಷ್ಟು ಮಿಗಿಲೆನಿಸುವುದು ಅಲ್ಲಿನ ಸಂಗೀತ. ‘ಸಾಂವರೆ ಆ ಜಯ್ಯೋ ….’ ಮತ್ತು ‘ಕಾನಡಾ ಪುರಂಧರಾಚ ….’ ಹಾಡುಗಳು. ಎಂತಹ ಮನಮೋಹಕ ಹಾಡುಗಾರಿಕೆ. ಮನಸ್ಸು ಅದರಲ್ಲಿ ಮುಳುಗಿ, ಕಣ್ಣುಗಳು ತುಂಬಿ ಬರುತ್ತವೆ.

ಅಂತಹುದೇ ಇನ್ನೊಂದು ಸಂದರ್ಭ ಚಿತ್ರದ ಎರಡನೆಯ ಭಾಗದಲ್ಲಿದೆ. ಯಾವುದೋ ಕಾರಣಕ್ಕೆ ಕುಮಾರ ಗಂಧರ್ವ ಹಾಡುವುದನ್ನು ನಿಲ್ಲಿಸಿರುತ್ತಾರೆ. ಅವರನ್ನು ಹಾಡಿನ ಜಗತ್ತಿಗೆ ಮರಳಿ ತರಲು ಈ ಸ್ನೇಹಿತರೆಲ್ಲಾ ಗುಂಪಾಗಿ ಹೋಗುತ್ತಾರೆ. ಬಾ ಹಾಡಿನ ಬೈಠಕ್ ಹಾಕೋಣ ಎಂದು ಕರೆದಾಗ, ವಿಷಣ್ಣ ದನಿಯಲ್ಲಿ, ‘ನನ್ನಿಂದ ಹಾಡಲೇ ಆಗುತ್ತಿಲ್ಲವಲ್ಲ’ ಎನ್ನುತ್ತಾರೆ. ಉತ್ಸಾಹವೇ ಕಳೆದುಕೊಂಡಂತಿರುವ ಕುಮಾರ ಗಂಧರ್ವ ಇವರ ಹಾಡುಗಾರಿಕೆಗೆ ಪ್ರೇಕ್ಷಕರಾಗಿ ಕೂರುತ್ತಾರೆ. ಒಬ್ಬರ ನಂತರ ಒಬ್ಬರು ಹಾಡಲು ಪ್ರಾರಂಭಿಸುತ್ತಾರೆ. ಅದೊಂದು ಗಾನಲೋಕ. ನಾವು ನಮ್ಮನ್ನು ಕಳೆದುಕೊಳ್ಳುತ್ತೇವೆ. ವಸಂತರಾವ್ ದೇಶಪಾಂಡೆ ಹಾಡುವ ಅಭಂಗ್ ಅಂತೂ ಮಾಯಾಲೋಕವನ್ನೇ ಕಟ್ಟಿಬಿಡುತ್ತದೆ. ಇವರೆಲ್ಲರ ಹಾಡುಗಳೂ ಮೆಟ್ಟಿಲುಗಳಾಗಿ, ಕುಮಾರ ಗಂಧರ್ವ ಅವರ ಖಿನ್ನತೆಯ ಆಳದಿಂದ ಮೇಲೆದ್ದು ಬಂದು ಹಾಡಿಗೆ ಜೊತೆಯಾಗುತ್ತಾರೆ. ಇಲ್ಲೂ ಸಂಗೀತ ಮೋಡಿಮಾಡಿಬಿಡುತ್ತದೆ.

ಸುನೀತ ದೇಶಪಾಂಡೆ ಬರೆದಿರುವ ಅವರ ಆತ್ಮಚರಿತ್ರೆ ‘ಬಾಳು ಸೊಗಸಾದರೂ…’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದವಾಗಿದೆ. ಅದರಲ್ಲಿ ಅವರು ಇಂತಹ ಬೈಠಕ್ ಗಳ ಬಗ್ಗೆ ಬರೆಯುತ್ತಾರೆ. ಪು ಲ ಕೆಲವು ಕಾಲ ಕರ್ನಾಟಕದ ಬೆಳಗಾವಿದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆಗ ಈ ಸ್ನೇಹಿತರೆಲ್ಲಾ ಅಲ್ಲಿ ಸೇರಿ, ರಾತ್ರಿಯ ಕತ್ತಲಿನಲ್ಲಿ, ಹಬ್ಬಿರುವ ಮಲ್ಲಿಗೆ ಬಳ್ಳಿಯ ಪರಿಮಳದ ಲೋಕದಲ್ಲಿ ಅಹೋರಾತ್ರಿ ಸಂಗೀತ ನಡೆಸುತ್ತಿರುತ್ತಾರೆ. ಅದನ್ನು ಓದುವಾಗ ಈ ಘಟಾನುಘಟಿಗಳ ಸಂಗೀತ ಕೇಳಲು ಜೀವ ಬೇಕಾದರೂ ಕೊಡಬಹುದು ಅನ್ನಿಸಿತ್ತು.

ಇವು ಚಿತ್ರದಲ್ಲಿನ ಕೆಲವು ಅತ್ಯಂತ ಪರಿಣಾಮಕಾರಿ ದೃಶ್ಯಗಳು. ಹಾಗೆ ಇಡೀ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಬಹುದು ಎನ್ನುವುದರಲ್ಲಿ ಚಿತ್ರದ ಮಿತಿಯೂ ಇದೆ. ಸುನೀತ ಅವರ ಪಾತ್ರದ ಮುಕ್ಕಾಲು ಭಾಗ ಅಭಿನಯಿಸಿದ ಇರಾವತಿ ಹರ್ಷೆ ಅವರು ಒಳ್ಳೆಯ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸುನೀತಾ ಆಗಿ ಅವರ ಪಾತ್ರದಲ್ಲಿ ಆತ್ಮವಿಶ್ವಾಸ ಮತ್ತು ಗಟ್ಟಿತನದ ಹೊರತಾಗಿ ಇನ್ಯಾವ ಭಾವವನ್ನೂ ಹೊಮ್ಮಿಸಲಾಗಿಲ್ಲ. ಅದು ಈ ಪಾತ್ರದ ಮಿತಿ. ಅದೇ ರೀತಿಯಲ್ಲಿ ನಿಜಜೀವನದ ಪಾತ್ರಗಳನ್ನು ಅಭಿನಯಿಸಿರುವ ಹಲವು ಪಾತ್ರಗಳು ಅತಿ ಎನ್ನುವಷ್ಟು ಅನುಕರಣೆ ಮಾಡುತ್ತವೆ. ಅದೇ ಪಾತ್ರಗಳನ್ನು ನಿಜಜೀವನದಲ್ಲಿ ಕಂಡ ನಮಗೆ ಅದು ಕಣ್ಣಿಗೆ ಹೊಡೆದಂತೆ ಕಾಣುತ್ತದೆ. ಪು ಲ ಅವರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸಲು ಬಳಸಿಕೊಂಡ ತಂತ್ರ ಸಾವಯವವಾಗಿಲ್ಲದೆ, ಬಲವಂತಕ್ಕೆ ಎಳೆದುತಂದು ಜೋಡಿಸಿದಂತೆ ಕಾಣುತ್ತದೆ. ಕ್ಯಾಮೆರಾ ನಿರ್ವಹಣೆ ಸಹ ದೂರದರ್ಶನದ ಕಾಲದಲ್ಲಿ ಬರುತ್ತಿದ್ದ ನಾಟಕಗಳನ್ನು ನೆನಪಿಸುತ್ತದೆ.
ಇದೆಲ್ಲದರ ಹೊರತಾಗಿಯೂ ಅನುಪಮವಾಗಿ ಕಟ್ಟಲ್ಪಟ್ಟ ಆ ಕೆಲವು ದೃಶ್ಯಗಳಿಗಾಗಿ ಮತ್ತು ಆ ದೈವೀಕ ಸಂಗೀತಕ್ಕಾಗಿ ನಾನು ಮತ್ತೊಮ್ಮೆ ಈ ಚಿತ್ರವನ್ನು ನೋಡಬಲ್ಲೆ!

Previous articleಗಾಳಿವಾನ: ಸಾಯಿಕುಮಾರ್ ಮನೋಜ್ಞ ಅಭಿನಯದ ಥ್ರಿಲ್ಲರ್‌ ಸರಣಿ
Next article‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಟ್ರೈಲರ್‌; ಮೇ 5ಕ್ಕೆ ಪ್ರೈಮ್‌ನಲ್ಲಿ ಸಿನಿಮಾ

LEAVE A REPLY

Connect with

Please enter your comment!
Please enter your name here