ನಿರೂಪಣೆ ವಿಚಾರದಲ್ಲಿ ನಿಧಾನವಾಗಿರುವ ಈ ಸಿನಿಮಾ ಅದರ ಹೊರತಾಗಿಯೂ ಕೊನೆಯವರೆಗೆ ಕೂರಿಸುತ್ತದೆ. ಹಾಡು – ಹೊಡೆದಾಟವಿಲ್ಲದೆ ಎರಡೂವರೆ ಗಂಟೆ ನೋಡಿಸುವ ಈ ಚಿತ್ರಕ್ಕೆ ಸಿನಿಮಾಕ್ಕಿಂತ ಹೆಚ್ಚು ವೆಬ್ ಸೀರೀಸ್‌ನ ಗುಣವಿದೆ. Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ಹತ್ತು ವರ್ಷಗಳ ಹಿಂದಿನ ಸಿನಿಮಾಗಳಿಗೂ ಈಗಿನ ಸಿನಿಮಾಗಳಿಗೂ ಇರುವ ಬಹುದೊಡ್ಡ ವ್ಯತ್ಯಾಸವೆಂದರೆ ವೇಗ. ನಿಧಾನಗತಿಯ ನಿರೂಪಣೆಯನ್ನು ಈಗಿನ ಪ್ರೇಕ್ಷಕರು ಒಪ್ಪುವುದು ಕಡಿಮೆ. ಮಮ್ಮೂಟ್ಟಿ, ನಿರ್ದೇಶಕ ಎ. ಮಧು, ಬರಹಗಾರ ಎಸ್.ಎನ್. ಸ್ವಾಮಿ ಕೂಡುವಿಕೆಯ ಸಿಬಿಐ ಸರಣಿ ಆರಂಭವಾಗಿ ಮೂರು ದಶಕ ಕಳೆದಿವೆ. ‘ಸಿಬಿಐ 5: ದ ಬ್ರೇನ್’ಗೂ ಹಿಂದಿನ ಸಿಬಿಐ ಅವತರಣಿಕೆ ತೆರೆಗೆ ಬಂದು ಬರೋಬ್ಬರಿ ಹದಿನೇಳು ವರ್ಷ ಉರುಳಿವೆ. ಅಷ್ಟರ ಮಟ್ಟಿಗೆ ಹಳೆಯ ಪಳೆಯುಳಿಕೆ ಇದ್ದಾಗ ಈಗಿನ ಕಾಲದಲ್ಲಿ ಕೊನೆಯವರೆಗೂ ನೋಡಿಸಿಕೊಂಡು ಹೋಗುವ ಸಿನಿಮಾ ಕೊಟ್ಟಿದ್ದೇ ಸಾಧನೆ ಎನ್ನಬಹುದು. ಕತೆ ಸಾಗುವ ವಿಚಾರದಲ್ಲಿ ‘ಸಿಬಿಐ 5’ನದ್ದು ನಿಧಾನಗತಿ. ಆದರೆ ಆ ಗತಿಗೇ ಪ್ರೇಕ್ಷನನ್ನು ಒಗ್ಗಿಸಿ ಮುಂದೇನು ಎಂಬ ಕುತೂಹಲ ಜೀವಂತ ಇರಿಸಿ ಕೊನೆಯವರೆಗೂ ಕೂರಿಸುವ ಚಿತ್ರವಾಗಿ ಹೊಮ್ಮಿರುವುದು ಇದರ ವಿಶೇಷ.
ಎರಡೂವರೆ ಗಂಟೆಗೂ ಅಧಿಕ ಅವಧಿಗೆ ಹರಡಿಕೊಂಡಿರುವ ‘ಸಿಬಿಐ 5’ ಎದೆ ಬಡಿತದಂತೆ. ಹೆಚ್ಚೂಕಮ್ಮಿ ಒಂದೇ ತಾಳದಲ್ಲಿ ಮುಂದೆ ಸಾಗುತ್ತದೆ. ಹಾಗಾಗಿ ಅರ್ಧ ಗಂಟೆಯ ನಂತರ ಮಮ್ಮೂಟ್ಟಿ ಬರುವ ಹೊತ್ತಿಗೆ ಆ ನಮೂನೆಯ ವೇಗಕ್ಕೆ ಪ್ರೇಕ್ಷಕ ಹೊಂದಿಕೊಳ್ಳುತ್ತಾನೆ. ಮಮ್ಮೂಟ್ಟಿ ಬಂದ ಮೇಲೂ ಚಿತ್ರ ವೇಗದ ಮಿತಿಯಲ್ಲೇ ಸಾಗುತ್ತದೆ. ಔಟ್‌ಶರ್ಟ್ ಮಾಡಿಕೊಂಡು, ಎಷ್ಟು ಬೇಕೋ ಅಷ್ಟೇ ಮಾತನಾಡುವ, ಸೊಂಟದ ಹಿಂದೆ ಕೈಕಟ್ಟಿ ಪ್ರಶಾಂತವಾಗಿ ನಡೆಯುವ ಸೇತುರಾಮ ಐಯ್ಯರ್ ಪಾತ್ರದ ಹಿಡಿತ ಮಮ್ಮೂಟ್ಟಿಗೆ ಸಲೀಸು. ಸಿಬಿಐ ಎಂದರೆ ಎಂಥಾ ಪ್ರಕರಣವನ್ನೂ ಭೇದಿಸುವ ಧೀರೋದತ್ತ ಸಂಸ್ಥೆ ಎಂದು ಬಿಂಬಿಸುವ ಬದಲು ಸಿಬಿಐ ಕೂಡ ಸೋತ ಎಷ್ಟೋ ಉದಾಹರಣೆಗಳಿವೆ ಎಂದು ಒಪ್ಪಿಕೊಳ್ಳುವ ವಾಸ್ತವವಾದಿ ಆತ.
ಅಷ್ಟಕ್ಕೂ ಇದು ಪ್ರಸ್ತುತ ಕಾಲದಲ್ಲಿ ನಡೆಯುವ ಕತೆಯಲ್ಲ. ಹಾಗೆಂದು ತೀರಾ ಹಿಂದಿನ ಘಟನಾವಳಿಯೂ ಅಲ್ಲ. ಸಿಬಿಐನ ಹೊಸ ತಂಡದ ತರಬೇತಿ ವೇಳೆಯಲ್ಲಿ ಕೆಲವು ವರ್ಷ ಹಿಂದೆ ನಡೆದ ಬಾಸ್ಕೆಟ್ ಕಿಲ್ಲಿಂಗ್ಸ್ ಪ್ರಸ್ತಾಪ ಬರುತ್ತದೆ. ಆ ಹೊತ್ತಿಗೆ ಈ ಕತೆ ನಮ್ಮೆದುರು ತೆರೆದುಕೊಳ್ಳುತ್ತದೆ. ಓರ್ವ ಮಂತ್ರಿ, ಆತನ ಖಾಸಗಿ ವೈದ್ಯ, ಪರ್ತಕರ್ತ, ಒಬ್ಬ ಉದ್ಯಮಿ ಮತ್ತೊಬ್ಬ ಸರ್ಕಲ್ ಇನ್ಸ್ಪೆಕ್ಟರ್ – ಈ ಸರಣಿ ಕೊಲೆಗಳು, ಒಬ್ಬನೇ ಸೂತ್ರಧಾರನ ಆಣತಿಯಂತೆ ನಡೆದಂಥವು. ಬಾಸ್ಕೆಟ್ ಕಿಲ್ಲಿಂಗ್ಸ್ ಎಂದರೆ ಹೀಗೆಯೇ ಎಂದು ಚಿತ್ರಕಥೆಗಾರ ಎಸ್.ಎನ್. ಸ್ವಾಮಿ ವಿವರಿಸುವ ಗೋಜಿಗೆ ಹೋಗುವುದಿಲ್ಲ. ಚಿತ್ರ ನೋಡುತ್ತಾ ನೋಡುತ್ತ ಅದು ಅರ್ಥವಾಗುತ್ತದೆ ಎಂಬುದು ಅವರ ನಂಬಿಕೆ. ವಾಸ್ತವದಲ್ಲಿ ಇದು ಸಿನಿಮಾದ ಕುತೂಹಲ ಹೆಚ್ಚು ಮಾಡುವ ಮತ್ತೊಂದು ಸೂತ್ರ, ಅದಿಲ್ಲಿ ಕೆಲಸ ಮಾಡಿದೆ.
ಹಾಡುಗಳು, ಹೊಡೆದಾಟಗಳಿಲ್ಲದೆ ಎರಡೂವರೆ ಗಂಟೆಗೂ ಅಧಿಕ ಹೊತ್ತು ಕತೆ ಹೇಳುವುದು ಈಗಿನ ಕಾಲದಲ್ಲಿ ಸುಲಭದ ಕೆಲಸವಲ್ಲ. ಹಾಗಾಗಿ ಸಿಬಿಐ ಸರಣಿಯ ಈ ಹಿಂದಿನ ಕೆಲವು ಪಾತ್ರಗಳು, ಅವುಗಳನ್ನು ನೆನಪಿಸುವ ಸನ್ನಿವೇಶಗಳನ್ನು ಸೇರಿಸಲಾಗಿದೆ. ಮೂವತ್ತು ವರ್ಷಗಳಿಂದ ನಿರಂತರ ಸಿನಿಮಾ ನೋಡುತ್ತಾ ಬಂದ ಮಂದಿಗೆ ಅವು ಕನೆಕ್ಟ್ ಆಗಬಹುದೇ ಹೊರತು ಹೊಸಬರಿಗಲ್ಲ. ಆ ಕೊಂಡಿಯ ಹೊರತಾಗಿ ಪಾತ್ರ-ಸನ್ನಿವೇಶಗಳು ಅರ್ಥವಾಗುವಂತಿವೆ. ಹಾಗಾಗಿ ನಿರ್ದೇಶಕರಿಗೆ ಗತಕಾಲದ ಜತೆಗಿನ ಸಂಬಂಧವೇ ಆ ದೃಶ್ಯಗಳನ್ನು ಸೇರಿಸಲು ಪ್ರೇರೇಪಿಸಿದೆಯೇ ವಿನಃ ಈಗಿನ ಪ್ರೇಕ್ಷಕನ ಅಗತ್ಯಕ್ಕೆ ಅವುಗಳನ್ನು ಸೇರಿಸಿದ್ದಲ್ಲ ಅಂದುಕೊಳ್ಳಬೇಕು.
ಉಳಿದಂತೆ ಆಧುನಿಕ ಆಗುಹೋಗುಗಳಿಗೆ ಕತೆ ಸೂಕ್ತವಾಗಿ ಅಪ್‌ಡೇಟ್ ಆಗಿದೆ. ಚಿತ್ರದಲ್ಲಿ ಬರುವ ಪ್ರಮುಖ ಅಂಶ ಹೃದ್ರೋಗಿಗಳಿಗೆ ಅಳವಡಿಸುವ ಪೇಸ್ ಮೇಕರ್. ಎದೆಬಡಿತದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವ ಆ ಸಾಧನ ನಿರ್ಣಾಯಕ ಪಾತ್ರ ವಹಿಸಿದೆ. ಚಿತ್ರದ ವೇಗವನ್ನೂ ಒಂದೇ ಸಮನಾಗಿ ಕೊಂಡೊಯ್ಯಲೂ ಸಹಾಯ ಮಾಡಿರುವುದು ಅದೇ ಸಾಧನ. ಕ್ರೈಂ ಥ್ರಿಲ್ಲರ್‌ಗಳಿಗೆ ವೇಗದ ನಿರೂಪಣೆಯೇ ಇರಬೇಕಾಗಿಲ್ಲ, ಬದಲಾಗಿ ಕುತೂಹಲ ಹಿಡಿದಿಟ್ಟುಕೊಳ್ಳುವ ಗುಣ ಹಾಗೂ ನಡೆದ ಕೊಲೆಗಳಿಗೆ ತಾರ್ಕಿಕ ಕಾರಣವಿದ್ದರೆ ಸಾಕು ಎಂಬುದನ್ನು ‘ಸಿಬಿಐ 5’ ಸಾಬೀತು ಪಡಿಸಿದೆ. ಹಾಗೆ ನೋಡಿದರೆ ಹಾಡು-ಫೈಟುಗಳಿಲ್ಲದ ಈ ಸಿನಿಮಾಕ್ಕೆ ಇರುವುದು ಇಂದಿನ ವೆಬ್ ಸರಣಿಗಳ ಗುಣ. ಆದರೆ ಆ ಐದೂ ಕಂತುಗಳು ಒಂದೇ ಆಗಿವೆ ಎಂಬುದಷ್ಟೇ ವ್ಯತ್ಯಾಸ.
ಕಳೆದ ಮೂವತ್ತು ವರ್ಷಗಳಲ್ಲಿ ಕ್ಯಾಮರಾ, ಹಿನ್ನೆಲೆ ಸಂಗೀತದ ಮಟ್ಟುಗಳು ಸಾಕಷ್ಟು ಬದಲಾಗಿವೆ. ಆ ಎರಡೂ ವಿಭಾಗದಲ್ಲಿ ಈಗಿನ ಕಾಲದ ಸೂತ್ರ ಅನುಸರಿಸಿರುವುದು ಸೂಕ್ತವಾಗಿದೆ. ಜೇಕ್ಸ್ ಬಿಜಾಯ್ ನೀಡಿರುವ ಹಿನ್ನೆಲೆ ಸಂಗೀತ ಈಗಿನ ಕಾಲದ್ದಾದರೂ ಮೂಲ ಸಿಬಿಐನ ಸಿಗ್ನೇಚರ್ ಟ್ಯೂನ್ ಹಾಕಿದ ಸ್ಯಾಮ್ಯುಯೆಲ್ ಜೋಸೆಫ್ ಯಾನೆ ಶಾಮ್‌ನ ಸಂಗೀತದ ಮೂಲ ಸೂತ್ರ ಬಳಕೆಯಾಗಿದೆ.
ಎಲ್ಲಕ್ಕಿಂತಲೂ ಹೆಚ್ಚು ಕೆಲಸ ಮಾಡಿರುವುದು ಹೀರೋಯಿಸಂನ ಭಿನ್ನ ಚಿತ್ರಣ. ಸಾಮಾನ್ಯ ಪೊಲೀಸ್ ವಿಚಾರಣೆಗೂ, ಸಿಬಿಐ ವಿಚಾರಣೆಗೂ ಇರುವ ವ್ಯತ್ಯಾಸಗಳನ್ನು ‘ಸಿಬಿಐ 5’ ವಾಸ್ತವಿಕ ನೆಲೆಯಲ್ಲಿ ತೋರಿಸಿದೆ. ಶಂಕಿತರ ಮೇಲೆ ಕೈ ಮಿಲಾಯಿಸದೆ ಮೊದಲು ಸಾಕಷ್ಟು ಸಾಕ್ಷ್ಯಗಳನ್ನು ಸಿದ್ಧಪಡಿಸಿಕೊಳ್ಳುವುದು, ಮನೆ ತಲಾಶ್ ಮಾಡಬೇಕು ಎಂದಾಗ ವಾರೆಂಟ್ ಪಡೆದೇ ಮುಂದೆ ಹೋಗುವುದು, ಚಾರ್ಜ್ ಶೀಟ್ ಹಾಕಿಬಿಡುತ್ತೇವೆ ಎಂಬುದಕ್ಕಿಂತ ಹೆಚ್ಚು ಆಸಕ್ತಿ ಅದು ನಾಳೆ ಕೋರ್ಟಿನಲ್ಲಿ ಹೇಗೆ ನಿಲ್ಲಬಹುದು ಎಂಬ ಚಿಂತನೆ – ಸಿಬಿಐ ತಮಿಖೆಯ ಈ ಎಲ್ಲ ವಾಸ್ತವಗಳೂ ಸೂಕ್ತವಾಗಿ ಬಿಂಬಿತವಾಗಿವೆ. ಬಹುಶಃ ಇಂಥ ಸೂಕ್ಷ್ಮಗಳ ಸೂಕ್ತ ಚಿತ್ರಿಕೆಯೇ ‘ಸಿಬಿಐ 5: ದ ಬ್ರೇನ್’ ಅನ್ನು ಅದರ ವೇಗಕ್ಕೇ ಹೊಂದಿಕೊಂಡು ನೋಡಲು ಸಾಧ್ಯವಾಗಿಸುವ ಅಂಶ. ಅಂದಹಾಗೆ ಕನ್ನಡದ ನಟ ‘ಜಂಪಿಂಗ್ ಸ್ಟಾರ್’ ಹರೀಶ್ ರಾಜ್ ಇಲ್ಲೊಂದು ಪಾತ್ರ ನಿಭಾಯಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.