ಗಾಯಕ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಇಂದು ಸುದ್ದಿಗೋಷ್ಠಿ ನಡೆಸಿ ತಾವು ವಿಚ್ಛೇದನ ಪಡೆದಿರುವ ವಿಚಾರವನ್ನು ಸ್ಪಷ್ಟಪಡಿಸಿದರು. ತಮ್ಮ ಕುರಿತಾಗಿ ಹರಡಿರುವ ವದಂತಿಗಳನ್ನು ಅಲ್ಲಗಳೆದಿರುವ ಅವರು, ‘ಬದುಕನ್ನು ನಾವು ಅರ್ಥ ಮಾಡಿಕೊಂಡಿರುವ ಬಗೆಯಲ್ಲಿ ದೋಷವಿದೆ. ಹೊಂದಾಣಿಕೆ ಇಲ್ಲದ ಕಾರಣ ನಾವು ಬೇರೆಯಾಗಿದ್ದೇವೆ’ ಎಂದರು.
ಗಾಯಕ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ತಮ್ಮ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಸುದ್ಧಿಗೋಷ್ಠಿ ಕರೆದಿದ್ದರು. ಈ ಕುರಿತು ಮಾತನಾಡಿದ ಚಂದನ್ ಶೆಟ್ಟಿ, ‘ನಮ್ಮಿಬ್ಬರ ಜೀವನ ಶೈಲಿ ಹೊಂದಾಣಿಕೆ ಆಗಲಿಲ್ಲ. ಬದುಕನ್ನು ನಾವು ಅರ್ಥ ಮಾಡಿಕೊಂಡಿರುವ ರೀತಿಯಲ್ಲಿ ಭಿನ್ನತೆ ಇದೆ. ಈ ಕಾರಣಗಳಿಗಾಗಿ ನಮ್ಮಿಬ್ಬರ ಮಧ್ಯೆ ಮನಸ್ತಾಪ ತಲೆದೋರುತ್ತಿದ್ದವು. ಆರಂಭದಿಂದಲೂ ಇಂತಹ ಸಂದಿಗ್ಧತೆಯನ್ನು ನಾವು ಎದುರಿಸುತ್ತಾ ಬಂದಿದ್ದೇವೆ. ಇದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದೆವು, ಸಾಧ್ಯವಾಗಲಿಲ್ಲ. ಹಾಗಾಗಿ ಅಂತಿಮವಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದೆವು. ಪರಸ್ಪರರ ಬಗ್ಗೆ ಗೌರವದಿಂದಲೇ ನಡೆದುಕೊಂಡು ಈ ನಿರ್ಧಾರಕ್ಕೆ ಬಂದಿದ್ದೇವೆ. ಕಾನೂನಿನ ಪ್ರಕಾರವಾಗಿ ವಿಚ್ಛೇದನ ಪಡೆದುಕೊಂಡಿದ್ದೇವೆ. ಇನ್ನು ಮುಂದೆಯೂ ನಮ್ಮಿಬ್ಬರ ಮಧ್ಯೆ ಇದೇ ಗೌರವ ಮುಂದುವರೆಯುತ್ತದೆ’ ಎಂದರು. ನಟಿ ನಿವೇದಿತಾ ಗೌಡ ಅವರು ಚಂದನ್ ಮಾತುಗಳನ್ನು ಅನುಮೋದಿಸಿದರು.
ವದಂತಿಗಳೆಲ್ಲಾ ಸುಳ್ಳು | ಇವರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ವದಂತಿಗಳು ಹರಡಿದ್ದವು. ಇವೆಲ್ಲಾ ಸತ್ಯಕ್ಕೆ ದೂರವಾದದ್ದು ಎಂದು ಚಂದನ್ ಶೆಟ್ಟಿ ವದಂತಿಗಳನ್ನು ತಳ್ಳಿ ಹಾಕಿದರು. ‘ಮಗು ಮಾಡಿಕೊಳ್ಳುವ ವಿಚಾರಕ್ಕೆ ಎರಡೂ ಫ್ಯಾಮಿಲಿಗಳ ಮಧ್ಯೆ ಜಗಳವಾಗಿದೆ ಎನ್ನುವುದು ಸುಳ್ಳು. ಇನ್ನು ನಿವೇದಿತಾ ಕೂಡ ನನ್ನಿಂದ ಯಾವುದೇ ರೀತಿಯ ಜೀವನಾಂಶ ಕೇಳಿಲ್ಲ. ನಮ್ಮಬ್ಬರ ದಾಂಪತ್ಯ ಬದುಕಿನಲ್ಲಿ ಮೂರನೇ ವ್ಯಕ್ತಿ ಇದ್ದಾರೆ ಎನ್ನುವುದೂ ಶುದ್ಧ ಸುಳ್ಳು’ ಎಂದರು ಚಂದನ್. ಈ ಬಗ್ಗೆ ಮಾತನಾಡಿದ ನಿವೇದಿತಾ, ‘ಜನಪ್ರಿಯ ವ್ಯಕ್ತಿಯೊಬ್ಬರೊಂದಿಗೆ ನನ್ನ ಹೆಸರನ್ನು ಸೇರಿಸಿ troll ಮಾಡಲಾಗುತ್ತಿದೆ. ಅವರು ನಮ್ಮ ಫ್ಯಾಮಿಲಿ ಫ್ರೆಂಡ್ಸ್. ನಾನು ಮತ್ತು ಚಂದನ್ ಹಲವಾರು ಬಾರಿ ಅವರ ಕುಟುಂಬದ ಸಮಾರಂಭಗಳಿಗೆ ಹೋಗಿದ್ದೇವೆ. ಅವರೊಂದಿಗೆ ನನ್ನ ಹೆಸರು ಸೇರಿಸಿರುವುದು ಕೆಟ್ಟ ಮನಸ್ಥಿತಿ. ಇಂತಹ ವದಂದಿಗಳಿಂದಾಗಿ ನಮ್ಮ ಹಾಗೂ ಅವರ ಕುಟುಂಬಗಳಿಗೆ ನೋವಾಗುತ್ತದೆ’ ಎಂದರು.
‘ನಮ್ಮಿಬ್ಬರ ವಿಚಾರ ಆರೇಳು ತಿಂಗಳ ಹಿಂದೆಯೇ ತಮಗೆ ಗೊತ್ತಿತ್ತು ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹೇಳುತ್ತಿದ್ದಾರೆ. ನನಗೆ ಖಂಡಿತ ಅವರು ಆಪ್ತರಲ್ಲ. ಸುಳ್ಳುಗಳನ್ನು ಹೇಳುವುದು ಅವರಿಗೆ ಖುಷಿ ಎನಿಸಬಹುದು. ಆದರೆ ನಮ್ಮ ಮನಸ್ಸಿಗೆ ಘಾಸಿಯಾಗುತ್ತದೆ. ಅವರು ಹಾಗೆಲ್ಲಾ ಮಾಡಬಾರದು’ ಎಂದು ಚಂದನ್ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಿದೆ ಹೇಳಿದರು. ತಮ್ಮ ನಿರ್ಧಾರಗಳಿಗೆ ಪಶ್ಚಾತ್ತಾಪ ಇಲ್ಲವೆಂದ ನಿವೇದಿತಾ, ‘ಜೀವನ ಶೈಲಿ ಹೊಂದಾಣಿಕೆಯಾಗದೆ ಜೊತೆಯಲ್ಲಿ ಬಾಳ್ವೆ ಮಾಡುವುದರಿಂದ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಹಾಗಾಗಿ ನಮ್ಮ ನಿರ್ಧಾರಗಳ ಬಗ್ಗೆ ನಮಗೆ ಸ್ಪಷ್ಟತೆಯಿದೆ. ನಮ್ಮ ಮಧ್ಯೆಯ ಸ್ನೇಹ ಹೀಗೇ ಇರುತ್ತದೆ. ಪರಸ್ಪರು ಗೌರವದಿಂದ ಬದುಕು ಕಟ್ಟಿಕೊಳ್ಳುತ್ತೇವೆ’ ಎಂದರು.