ನಟ ಆಯುಷ್ಮಾನ್ ಖುರಾನಾ ಚಿತ್ರಗಳು ಹೆಚ್ಚಾಗಿ ದೇಸಿ ಸೊಗಡಿನ ಕತೆಗಳಾಗಿರುತ್ತವೆ. ಈ ಚಿತ್ರದಲ್ಲಿ ಪಂಜಾಬಿ ಸೊಗಡು, ಸಂಸ್ಕೃತಿ, ಅವರು ಮಾತನಾಡುವ ಶೈಲಿ ಹೀಗೆ ಪಂಜಾಬಿ ನೇಟಿವಿಟಿಯನ್ನು ಆಪ್ತವಾಗಿ ತೋರಿಸಿದ್ದಾರೆ – ‘ಚಂಡೀಘರ್ ಕರೆ ಆಶಿಕಿ’ ಹಿಂದಿ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಆತನ ಹೆಸರು ಮನ್ನು. ಚಂಡೀಘಡ ಪಟ್ಟಣದಲ್ಲಿ ಜಿಮ್ ತರಬೇತುದಾರ. ಜೊತೆಗೆ ವೇಟ್ ಲಿಫ್ಟಿಂಗ್ ಟ್ರೋಫಿಗಾಗಿ ಹಗಲೂ ರಾತ್ರಿ ತನ್ನ ದೇಹ ದಂಡಿಸಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವವನು. ಮನೆಯಲ್ಲಿ ತಾತ, ಅಪ್ಪ, ಹಾಗೂ ಇಬ್ಬರು ಅಕ್ಕಂದಿರ ಮುದ್ದಿನ ಯುವರಾಜ. ಇವರೆಲ್ಲರಿಗೂ ಇವನಿಗೆ ಮದುವೆ ಮಾಡಿಸಬೇಕೆಂಬ ಆಸೆ. ಆದರೆ ಇವನಿಗೆ ತನಗೆ ಮದುವೆ ಬೇಡ, ಸಾಧನೆ ಮಾಡಬೇಕೆಂಬ ಆಸೆ. ಹೀಗಿರುವಾಗ ಆತನ ಜಿಮ್ನ ಒಂದು ಭಾಗವನ್ನು ಬಾಡಿಗೆಗೆ ಪಡೆದು ಅಲ್ಲಿ ಜುಂಬಾ ಕ್ಲಾಸ್ ನಡೆಸಲು ಬರುತ್ತಾಳೆ ಚಿತ್ರದ ನಾಯಕಿ ಮಾನ್ವಿ. ಚೆಂದದ ಮೊಗ, ಬಳ್ಳಿಯಂತ ಬಳುಕುವ ದೇಹ… ಆಕೆಯ ಸೌಂದರ್ಯಕ್ಕೆ ನಾಯಕ ಮನ್ನೂ ಮನ ಸೋಲುತ್ತಾನೆ.
ಇಬ್ಬರಿಗೂ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಬಂಧ ಗಟ್ಟಿಯಾಗುತ್ತದೆ. ಒಂದು ಹಂತದಲ್ಲಿ ನಾಯಕ ಆಕೆಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಅದರ ಪ್ರಕಾರ ಆಕೆಯ ಬಳಿ ಮದುವೆ ಆಗುವುದಾಗಿಯೂ ಹೇಳಿಕೊಳ್ಳುತ್ತಾನೆ. ಆದರೆ ಆಕೆ ಹೇಳುವ ಒಂದು ವಿಷಯ ಅವನಿಗೆ ಸಿಡಿಲು ಬಡಿದಂತೆ ಆಗುತ್ತದೆ! ಏನದು? ನೀವದನ್ನು ಚಿತ್ರದಲ್ಲೇ ನೋಡಿ. ನಟ ಆಯುಷ್ಮನ್ ಖುರಾನಾ ಸಿನಿಮಾ ಎಂದರೆ ಕಥೆಯಲ್ಲಿ ಒಂದು ವಿಶೇಷತೆ ಇರುತ್ತದೆ. ಹಾಗೆ ಈ ಚಿತ್ರದಲ್ಲಿಯೂ ಕೂಡಾ ಆ ವಿಶೇಷತೆ ಇದೆ. ಸಿನಿಮಾ ವೀಕ್ಷಿಸಿದರೆ ನಿಮಗೆ ಖಂಡಿತ ಕತೆ ವಿಶೇಷ ಎನಿಸುತ್ತದೆ.
ಖುರಾನಾ ಚಿತ್ರಗಳು ಹೆಚ್ಚಾಗಿ ದೇಸಿ ಸೊಗಡಿನ ಕತೆಗಳಾಗಿರುತ್ತವೆ. ಈ ಚಿತ್ರದಲ್ಲಿ ಪಂಜಾಬಿ ಸೊಗಡು, ಸಂಸ್ಕೃತಿ, ಅವರು ಮಾತನಾಡುವ ಶೈಲಿ ಹೀಗೆ ಪಂಜಾಬಿ ನೇಟಿವಿಟಿಯನ್ನು ಚೆನ್ನಾಗಿ ತೋರಿಸಲಾಗಿದೆ. ಜಿಮ್ ತರಬೇತುದಾರನ ಪಾತ್ರಕ್ಕಾಗಿ ಆಯುಷ್ಮಾನ್ ದೇಹ ದಂಡಿಸಿದ್ದು, ಅವರ ಪರಿಶ್ರಮ ತೆರೆಯ ಮೇಲೆ ಕಾಣಿಸುತ್ತದೆ. ಎಂದಿನಂತೆ ಅವರದು ಪಾತ್ರೋಚಿತ ನಟನೆ. ಚಿತ್ರದ ನಾಯಕಿ ವಾಣಿ ಕಪೂರ್ ಕೂಡ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವೃತ್ತಿ ಬದುಕಿನಲ್ಲಿ ಅವರಿಗಿದು ಪ್ರಮುಖ ಚಿತ್ರವಾಗಲಿದೆ. ನಟನೆಯ ವಿಚಾರಕ್ಕೆ ಬಂದರೆ ಕೆಲವು ಸನ್ನಿವೇಶಗಳಲ್ಲಿ ಆಯುಷ್ಮಾನ್ಗಿಂತ ಒಂದು ಪಟ್ಟು ಹೆಚ್ಚೇ ಸ್ಕೋರ್ ಮಾಡಿದ್ದಾರೆ. ಇವರ ಪಾತ್ರದ ಚಿತ್ರಣವೇ ವಿಶೇಷವಾಗಿದೆ. ಸಹ ಕಲಾವಿದರ ಅಭಿನಯ ಕಥೆಗೆ ಪೂರಕವಾಗಿದ್ದು, ಚಿತ್ರದ ತಾಂತ್ರಿಕ ಗುಣಮಟ್ಟ ಉತ್ತಮವಾಗಿದೆ.
ಸಿನಿಮಾ : ಚಂಡೀಘರ್ ಕರೆ ಆಶಿಕಿ | ನಿರ್ದೇಶನ : ಅಭಿಷೇಕ್ ಕಪೂರ್ | ಸಂಗೀತ : ಸಚಿನ್ – ಜಿಗರ್, ತನಿಶ್ಕ್ ಬಾಗ್ಚಿ | ತಾರಾಬಳಗ : ಆಯುಷ್ಮಾನ್ ಖುರಾನಾ, ವಾಣಿ ಕಪೂರ್, ಅಭಿಷೇಕ್ ಬಜಾಜ್, ಕನ್ವಲ್ಜಿತ್ ಸಿಂಗ್