ಕಿರಣ್‌ ರಾಜ್‌ ನಿರ್ದೇಶನದಲ್ಲಿ ರಕ್ಷಿತ್‌ ಶೆಟ್ಟಿ ನಟಿಸಿರುವ ‘ಚಾರ್ಲಿ’ ಸಿನಿಮಾ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಇಲ್ಲಿಯವರೆಗೆ ಸಿನಿಮಾ 150 ಕೋಟಿ ರೂ. ಗಳಿಸಿದೆ. ಲಾಭಾಂಶದ ಶೇ.5ರಷ್ಟನ್ನು ಶ್ವಾನಗಳ ಇಂಬ್ರೀಡಿಂಗ್‌ ವಿರುದ್ಧ ಹೋರಾಟ ನಡೆಸುತ್ತಿರುವ NGOಗಳಿಗೆ ಹಂಚಿಕೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ರಕ್ಷಿತ್‌ ಶೆಟ್ಟಿ ನಿರ್ಮಿಸಿ, ನಟಿಸಿರುವ ‘ಚಾರ್ಲಿ’ ಸಿನಿಮಾ ಯಶಸ್ವಿಯಾಗಿ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಇಲ್ಲಿಯವರೆಗೆ ಸಿನಿಮಾ ನೂರೈವತ್ತು ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಸುಮಾರು ನೂರು ಕೋಟಿ ರೂಪಾಯಿ ಲಾಭ ಎಂದು ಅಂಕಿ ಅಂಶ ನೀಡುತ್ತಾರೆ ನಿರ್ಮಾಪಕ ರಕ್ಷಿತ್‌ ಶೆಟ್ಟಿ. ಯಶಸ್ಸಿನ ಖುಷಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. “ಲಾಭಾಂಶದಲ್ಲಿ ಶೇ. 5ರಷ್ಟು ಚಾರ್ಲಿಗೆ ಸಲ್ಲುವಂತದ್ದು. ಅವಳ ಹೆಸರಿನಲ್ಲಿ ಭಾರತದಾದ್ಯಂತ ಶ್ವಾನಗಳ ಇಂಬ್ರೀಡಿಂಗ್‌ ವಿರುದ್ಧ ಹೋರಾಡುತ್ತಿರುವ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್​ಜಿಓಗಳಿಗೆ ಸಹಾಯ ಮಾಡುವ ಕುರಿತು ಯೋಚನೆ ಮಾಡಿದ್ದೇವೆ. ಕಲಾವಿದರು ಮತ್ತು ತಂತ್ರಜ್ಞರಿಗೆ ಲಾಭಾಂಶದಲ್ಲಿ ಶೇ. 10ರಷ್ಟು ಹಂಚಿಕೆ ಮಾಡಲಿದ್ದೇವೆ. ಆ ಮೊತ್ತವೇ 10 ಕೋಟಿ ರೂಪಾಯಿಗಳಷ್ಟಾಗುತ್ತದೆ” ಎಂದರು ರಕ್ಷಿತ್‌ ಶೆಟ್ಟಿ.

ವಿತರಕ ಕಾರ್ತೀಕ್‌ ಗೌಡ ಅವರಿಗೆ ಸಿನಿಮಾದ ಪ್ರದರ್ಶನದ ಬಗ್ಗೆ ಖುಷಿಯಿದೆ. ಈ ಬಗ್ಗೆ ಮಾಹಿತಿ ನೀಡುವ ಅವರು, “25 ದಿನ ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಬೇರೆ ದೇಶಗಳಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾಗಿ 15 ದಿನಗಳ ನಂತರ ಚಿತ್ರತಂಡದವರು ದುಬೈಗೆ ಹೋಗಿ ಬಂದಿದ್ದಾರೆ. ಮಾರಿಷಸ್​, ಜಪಾನ್​ ಮುಂತಾದ ಕಡೆ ಸಹ ಚಿತ್ರ ಪ್ರದರ್ಶನವಾಗುತ್ತಿದೆ. ಅಲ್ಲಿ ಪ್ರದರ್ಶನಗಳ ಪ್ರಮಾಣ ಕಡಿಮೆ ಇರಬಹುದು. ಆದರೆ, ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲ ಪ್ರದರ್ಶನವಾಗುತ್ತಿದೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಬೇಡಿಕೆ ಇದೆ” ಎಂದರು.

ನಾಯಕಿ ಸಂಗೀತಾ ಶೃಂಗೇರಿ ಅವರ ಪಾತ್ರವನ್ನು ಜನರು ಮೆಚ್ಚಿದ್ದಾರೆ. “ಸಾಮಾನ್ಯವಾಗಿ ನಾಯಕಿ ಅಂದರೆ ಪ್ರೇಮಕಥೆ ಇರುತ್ತದೆ. ಇಲ್ಲಿ ಹಾಗಿಲ್ಲ. ಆದರೂ ನನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನುವುದೇ ಸಂತೋಷ” ಎಂದ ಸಂಗೀತಾ ಪಾತ್ರದ ಅವಕಾಶಕ್ಕಾಗಿ ಧನ್ಯವಾದ ಅರ್ಪಿಸಿದರು. ಪುಟಾಣಿ ಶಾರ್ವರಿ ಮಾತನಾಡಿ, “ಸ್ನೇಹಿತರು ಮತ್ತು ಸಂಬಂಧಿಕರು ಚಿತ್ರ ನೋಡಿ ಖುಷಿಪಟ್ಟರು. ನಾವು 65 ಜನ ಒಟ್ಟಿಗೆ ಚಿತ್ರ ನೋಡಿ ಕೇಕ್​ ಕಟ್​ ಮಾಡುವ ಮೂಲಕ ಸಂಭ್ರಮ ಆಚರಿಸಿದ್ದೇವೆ. ನಾನು ಕ್ಲಾಸ್​ಗೆ ಹೋಗುವಾಗ ಚಾರ್ಲಿ ಹುಡುಗಿ ಅಂತ ಎಲ್ಲ ಹೇಳುತ್ತಾರೆ. ಸೆಲ್ಫಿ ತೆಗೆಸಿಕೊಂಡು ಆಲ್​ ದಿ ಬೆಸ್ಟ್​ ಹೇಳುತ್ತಾರೆ” ಎಂದರು.

ನಿರ್ದೇಶಕ ಕಿರಣ್‌ ರಾಜ್‌ ಚೊಚ್ಚಲ ನಿರ್ದೇಶನದಲ್ಲಿ ಯಶಸ್ಸು ಕಂಡಿದ್ದಾರೆ. ಅವರು ತಮ್ಮ ಖುಷಿ ಹಂಚಿಕೊಳ್ಳುತ್ತಾ, “ಸೋಲು ಹಲವು ಪಾಠ ಕಲಿಸುತ್ತದೆ. ಗೆಲುವು ಹಲವು ದಾರಿಗಳನ್ನು ತೋರಿಸುತ್ತವೆ. ಸಹಾಯಕ ನಿರ್ದೇಶಕನಾಗಿ ಮೂರು ಸಿನಿಮಾಗಳನ್ನು ಮಾಡಿದ್ದೇನೆ. ಸೋಲು, ಗೆಲುವು ಎರಡನ್ನೂ ನೋಡಿದ್ದೀನಿ. ಸೋಲು ನೋಡಿರುವುದರಿಂದ ಗೆಲುವಿನ ಮಹತ್ವ ಗೊತ್ತಾಯಿತು. ಈ ಜರ್ನಿಯಲ್ಲಿ ಹಲವರಿದ್ದಾರೆ. ಒಂದೇ ಮನಸ್ಥಿತಿಯವರಾದ್ದರಿಂದ ಇಂಥದ್ದೊಂದು ಪ್ರಯತ್ನ ಮಾಡುವುದಕ್ಕೆ ಸಾಧ್ಯವಾಯಿತು. ಚಿತ್ರ 25 ದಿನ ಪೂರೈಸಿದೆ. ಮುಂದೆ ಸಹ ಇದೇ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಲಾಭ ಕೊಡುತ್ತದೆ ಎಂಬ ನಂಬಿಕೆ ಇದೆ. ಈ ಗೆಲುವಿನಿಂದ ಇನ್ನಷ್ಟು ಪ್ರಯತ್ನಗಳನ್ನು ಮಾಡುವುದಕ್ಕೆ ಸ್ಫೂರ್ತಿ ಸಿಕ್ಕಿದೆ. ಕಿರಿಕ್​ ಪಾರ್ಟಿ ಮಾಡಿದಾಗ ಹಣದ ಅಭಾವವಿತ್ತು. ಆಗ ರಕ್ಷಿತ್ ಎಲ್ಲರನ್ನೂ ಕರೆದು, ಚಿತ್ರ ಚೆನ್ನಾಗಿ ಹೋದರೆ ಇನ್ನಷ್ಟು ಕೊಡುವುದಾಗಿ ಹೇಳಿದ್ದರು. ಅದರಂತೆ ಚಿತ್ರ ಗೆದ್ದ ಮೇಲೆ ಹಲವರಿಗೆ ಅವರ ಪಾಲು ಕೊಟ್ಟರು. ಇದನ್ನು ನೋಡಿ ಕೆಲವರು ಕಣ್ಣೀರು ಹಾಕಿದ್ದು ನೆನಪಿದೆ. ಈಗಲೂ ರಕ್ಷಿತ್​ ಅದನ್ನೇ ಮುಂದುವರೆಸಿದ್ದಾರೆ” ಎಂದರು.

LEAVE A REPLY

Connect with

Please enter your comment!
Please enter your name here