ಬಹುಭಾಷಾ ನಟಿ, ಮಾಜಿ ಸಂಸದೆ ಜಯಪ್ರದ ಅವರಿಗೆ ಚೆನ್ನೈ ನ್ಯಾಯಾಲಯವು 6 ತಿಂಗಳ ಜೈಲುವಾಸ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರದ ಕೆಲಸಗಾರರಿಗೆ ESI ಹಣ ನೀಡಲಾಗಿಲ್ಲ ಎನ್ನುವ ಕಾರಣಕ್ಕೆ ದೂರು ದಾಖಲಾಗಿತ್ತು. ವಿಚಾರಣೆ ನಂತರ ನ್ಯಾಯಾಲಯದಿಂದ ಈಗ ತೀರ್ಪು ಹೊರಬಿದ್ದಿದೆ.

ಜನಪ್ರಿಯ ನಟಿ, ಮಾಜಿ ಸಂಸದೆ ಜಯಪ್ರದ ಅವರಿಗೆ ಚೆನ್ನೈನ ಎಗ್ಮೋರ್‌ ಕೋರ್ಟ್‌ ಆರು ತಿಂಗಳ ಜೈಲುವಾಸ ಮತ್ತು 5000 ರೂಪಾಯಿ ದಂಡ ವಿಧಿಸಿದೆ. ಚೆನ್ನೈನ ರಾಯಪೇಟದಲ್ಲಿ ಜಯಪ್ರದ ಒಡೆತನದ ‘ಜಯಪ್ರದ ಥಿಯೇಟರ್‌ ಕಾಂಪ್ಲೆಕ್ಸ್‌’ ಇದೆ. ರಾಮಕುಮಾರ್‌ ಮತ್ತು ರಾಜಾ ಬಾಬು ಎನ್ನುವವರು ಈ ಕಾಂಪ್ಲೆಕ್ಸ್‌ ನಿರ್ವಹಿಸುತ್ತಿದ್ದಾರೆ. ಥಿಯೇಟರ್‌ ಕಾರ್ಮಿಕರ ವೇತನದಿಂದ ESI ಹಣ ವಸೂಲು ಮಾಡಿದ್ದರೂ ಅವರಿಗೆ ESI ಹಣ ಸಲ್ಲಿಕೆಯಾಗಿಲ್ಲ ಎನ್ನುವ ದೂರು ನಟಿಯ ವಿರುದ್ಧ ದಾಖಲಾಗಿತ್ತು. ಥಿಯೇಟರ್‌ ನೌಕರರು ಆಡಳಿತ ಮಂಡಳಿ ವಿರುದ್ಧ ಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆಯ ನಂತರ ನ್ಯಾಯಾಲಯ ನಟಿಗೆ ಜೈಲು ಶಿಕ್ಷೆದ ಜೊತೆ ದಂಡವನ್ನೂ ವಿಧಿಸಿದೆ.

ಈ ಹಿಂದೆ ಜಯಪ್ರದ ಅವರು ಚಿತ್ರಮಂದಿರದ ಕಾಂಪ್ಲೆಕ್ಸ್‌ಗೆ ಸಂಬಂಧಿಸಿದಂತೆ 20 ಲಕ್ಷ ರೂಪಾಯಿ ತೆರಿಗೆ ಪಾವತಿಸಿರಲಿಲ್ಲ. ಇದಕ್ಕಾಗಿ ಸಿಟಿ ಸಿವಿಲ್‌ ನ್ಯಾಯಾಲಯದ ಆದೇಶದ ಮೇರೆಗೆ ಪಾಲಿಕೆ ಅಧಿಕಾರಿಗಳು ಚಿತ್ರಮಂದಿರದ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದರು. ಈಗ ಕಾರ್ಮಿಕರಿಗೆ ಅನ್ಯಾಯ ಮಾಡಿರುವ ಕಾರಣಕ್ಕೆ ನಟಿ ತೊಂದರೆಗೆ ಸಿಲುಕಿದ್ದಾರೆ. ಬಹುಭಾಷಾ ನಟಿ ಜಯಪ್ರದ ಅವರು ಕನ್ನಡ, ತೆಲುಗು, ಹಿಂದಿ ಸೇರಿದಂತೆ ಹಲವು ಪ್ರಾದೇಷಿಕ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಕವಿರತ್ನ ಕಾಳಿದಾಸ’, ‘ಹಬ್ಬ’, ‘ಶಬ್ದವೇದಿ’, ‘ಈ ಬಂಧನ’ ಅವರ ಜನಪ್ರಿಯ ಕನ್ನಡ ಚಿತ್ರಗಳು. ಕಿರುತೆರೆ ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದ ಅವರು ಉತ್ತರ ಪ್ರದೇಶದ ರಾಂಪುರದ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದಾರೆ.

Previous article’12th fail’ ಟೀಸರ್‌ | ವಿಧು ವಿನೋದ್‌ ಚೋಪ್ರಾ ನಿರ್ದೇಶನದ ಹಿಂದಿ ಸಿನಿಮಾ
Next articleರಾಷ್ಟ್ರಗೀತೆಗೆ ಸ್ಪೆಷಲ್‌ ಟ್ಯೂನ್‌ | ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್‌ ಪ್ರಯೋಗ

LEAVE A REPLY

Connect with

Please enter your comment!
Please enter your name here