ಪ್ರಭಾಸ್ ಹುಟ್ಟುಹಬ್ಬಕ್ಕೆ ಅವರ ಸೂಪರ್‌ಹಿಟ್ ತೆಲುಗು ಸಿನಿಮಾ ‘ಛತ್ರಪತಿ’ ರೀರಿಲೀಸ್ ಆಗುತ್ತಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಸಿನಿಮಾ 2005ರಲ್ಲಿ ತೆರೆಕಂಡಿತ್ತು. ಎಂ ಎಂ ಕೀರವಾಣಿ ಸಂಗೀತ ಸಂಯೋಜನೆಯ ಸಿನಿಮಾಗೆ ಎರಡು ನಂದಿ ಪ್ರಶಸ್ತಿಗಳು ಸಂದಿದ್ದವು.
ಅಕ್ಟೋಬರ್ 23ರಂದು ಪ್ರಭಾಸ್ 44ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ದಿನವನ್ನು ವಿಶೇಷವಾಗಿ ಆಚರಿಸಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ಜೊತೆಗೆ ‘ಛತ್ರಪತಿ’ ಸಿನಿಮಾ ತಂಡ ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ನೀಡಲು ಹೊರಟಿದೆ. ಪ್ರಭಾಸ್ ಹುಟ್ಟುಹಬ್ಬಕ್ಕೆ ಅವರ ಸೂಪರ್‌ಹಿಟ್ ತೆಲುಗು ಸಿನಿಮಾ ‘ಛತ್ರಪತಿ’ ಮರುಬಿಡುಗಡೆಗೆ ತಯಾರಿ ನಡೆದಿದೆ. ಈ ವಿಚಾರವನ್ನು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ‘ಛತ್ರಪತಿ’ ಸಿನಿಮಾ 4K ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಮುಂಗಡ ಬುಕ್ಕಿಂಗ್ ಸಹ ಆರಂಭವಾಗಿದೆ.
ಈ ಸಿನಿಮಾ 2005ರ ಸೆಪ್ಟೆಂಬರ್‌ನಲ್ಲಿ ತೆರೆಕಂಡಿತ್ತು. ಎಸ್ ಎಸ್ ರಾಜಮೌಳಿ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. Shri Venkateshwara Cine ಬ್ಯಾನರ್ ಅಡಿಯಲ್ಲಿ ಬಿ ವಿ ಎಸ್ ಎನ್ ಪ್ರಸಾದ್ ಈ ಚಿತ್ರವನ್ನು ನಿರ್ಮಿಸಿದ್ದರು. ಚಿತ್ರದ ಹಾಡುಗಳಿಗೆ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದರು. ಚಿತ್ರದಲ್ಲಿ ಶ್ರಿಯಾ ಶರಣ್, ಭಾನುಪ್ರಿಯಾ, ಶಫಿ, ಕೋಟಾ ಶ್ರೀನಿವಾಸ್ ರಾವ್, ಜಯ ಪ್ರಕಾಶ್ ರೆಡ್ಡಿ, ನರೇಂದ್ರ ಜಾ ಸೇರಿದಂತೆ ಇನ್ನಿತರರು ನಟಿಸಿದ್ದಾರೆ. ‘ಛತ್ರಪತಿ’ ಸಿನಿಮಾ ನಟನೆಗಾಗಿ ಭಾನುಪ್ರಿಯಾ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ಹಾಗೂ ‘ಅತ್ಯುತ್ತಮ ಸಂಗೀತ ನಿರ್ದೇಶನ’ಕ್ಕಾಗಿ ಎಂ ಎಂ ಕೀರವಾಣಿ ಅವರಿಗೆ ‘ನಂದಿ ಪ್ರಶಸ್ತಿ’ ಲಭಿಸಿತ್ತು.