ಹಿರಿಯ ನಟ, ನಿರ್ದೇಶಕ ರವಿಚಂದ್ರನ್‌ ಅವರು ‘ಛೂ ಮಂತರ್‌’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಮಾಡಿದ್ದಾರೆ. ಶರಣ್‌, ಅದಿತಿ ಪ್ರಭುದೇವ ಮತ್ತು ಮೇಘನಾ ಗಾಂವ್ಕರ್‌ ಅಭಿನಯದ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

ನವನೀತ್‌ ನಿರ್ದೇಶನದಲ್ಲಿ ಶರಣ್‌ ನಾಯಕನಾಗಿ ನಟಿಸಿರುವ ‘ಛೂ ಮಂತರ್‌’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ಹಿರಿಯ ನಟ, ನಿರ್ದೇಶಕ ರವಿಚಂದ್ರನ್‌ ಅವರು ಸಾಂಗ್‌ ರಿಲೀಸ್‌ ಮಾಡಿ ಹಾರೈಸಿದರು. ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ ಸಿನಿಮಾ ತೆರೆಗೆ ಸಿದ್ಧವಾಗಿದೆ. ರವಿಚಂದ್ರನ್‌, ‘ಶರಣ್ ಒಳ್ಳೆಯ ನಟ. ಆತನ ಚಿತ್ರದಲ್ಲಿ ಎರಡು ಹಾಡುಗಳಾದರೂ ಹಿಟ್‌ ಆಗುತ್ತವೆ. ಚಂದನ್ ಶೆಟ್ಟಿ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡು ಕೂಡ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ’ ಎಂದು ರವಿಚಂದ್ರನ್‌ ಚಿತ್ರತಂಡಕ್ಕೆ ಶುಭ ಹಾರೈಸಿದರು. ವಿಜಯ್‌ ಈಶ್ವರ್‌ ರಚನೆಯ ಈ ಹಾಡಿಗೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ದರ್ಶನಿ ನೃತ್ಯ ಸಂಯೋಜನೆ ಮಾಡಿದ್ದು ಶರಣ್‌, ಅದಿತಿ ಮತ್ತು ಚಿಕ್ಕಣ್ಣ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಶರಣ್‌ ಅವರು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ, ‘ನಾನು ನಾಯಕನಾಗಲು ರವಿಚಂದ್ರನ್ ಅವರೇ ಕಾರಣ. ನಾನು ಅವರೊಂದಿಗೆ ಹಠವಾದಿ ಚಿತ್ರದಲ್ಲಿ ಅಭಿನಯಿಸುವಾಗ, ನೀನು ಇನ್ನು ನಾಯಕನಾಗಿಲ್ವಾ? ಎಂದು ಕೇಳಿದರು. ಆಮೇಲೆ ನಾಯಕನಾಗಬೇಕು ಎಂದು ಯಾವತ್ತೂ ಅಂದುಕೊಂಡಿರದ ನಾನು, ಅವರು ಹೇಳಿದ ಎರಡು ವರ್ಷಗಳಲ್ಲೇ ನಾಯಕನಾದೆ! ಇಂದು ನಮ್ಮ ಚಿತ್ರದ ಹಾಡನ್ನು ಅವರು ಬಿಡುಗಡೆ ಮಾಡಿದ್ದು ಖುಷಿಯಾಗಿದೆ’ ಎಂದರು. ಚಿತ್ರಕ್ಕೆ ‘ಛೂ ಮಂತರ್‌’ ಶೀರ್ಷಿಕೆ ಸೂಚಿಸಿದ್ದು ನಟ ದರ್ಶನ್‌ ಎನ್ನುವುದನ್ನು ನಿರ್ಮಾಪಕ ತರುಣ್‌ ಶಿವಪ್ಪ ಬಹಿರಂಗಪಡಿಸಿದರು. ಕತೆ ಮೆಚ್ಚಿ ಪ್ರೋತ್ಸಾಹದ ಮಾತುಗಳನ್ನಾಡಿದ್ದ ನಿರ್ದೇಶಕ ತರುಣ್‌ ಸುಧೀರ್‌ ಅವರಿಗೂ ಧನ್ಯವಾದ ಅರ್ಪಿಸಿದರು. ಚಿತ್ರಕ್ಕೆ ರವಿವರ್ಮ ಸಾಹಸ ಸಂಯೋಜನೆಯಿದೆ. ಪ್ರೊಮೋಷನ್‌ ಶುರುವಾಗಿದ್ದು ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

LEAVE A REPLY

Connect with

Please enter your comment!
Please enter your name here