ಸಿನಿಮಾಟೋಗ್ರಾಫರ್ ಕೆ ಕೆ ಸೆಂಥಿಲ್ ಕುಮಾರ್, ಟಾಲಿವುಡ್‌ನ ಸೆಲೆಬ್ರಿಟಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ, ‘ಈಗ’ ಸಿನಿಮಾದ ಚಿತ್ರೀಕರಣ ವೇಳೆ ರಾಜಮೌಳಿ ಅವರೊಂದಿಗೆ ಕೆಲಸ ಮಾಡುವಾಗಿನ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ.
ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ. ‘ಈಗ’, ‘ಮಗಧೀರ’, ‘ಬಾಹುಬಲಿ’, ‘ಆರ್‌ಆರ್‌ಆರ್’ ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ರಾಜಮೌಳಿ ಅವರೊಂದಿಗೆ ಖ್ಯಾತ ಸಿನಿಮಾಟೋಗ್ರಾಫರ್ ಕೆ ಕೆ ಸೆಂಥಿಲ್ ಕುಮಾರ್ ಕೆಲಸ ಮಾಡಿದ್ದಾರೆ. ರಾಮೌಳಿ ಅವರ ಜತೆ ಬಿಗ್ ಬಜೆಟ್‌ನ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಮಾಡಿರುವ ಸೆಂಥಿಲ್ ಅವರಿಗೆ ಚಾಲೆಂಜಿಂಗ್ ಅನಿಸಿದ್ದು ಮಾತ್ರ ‘ಈಗ’ ಚಿತ್ರವಂತೆ. ಹೌದು, ಈ ಬಗ್ಗೆ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಸೆಂಥಿಲ್ ಹೇಳಿಕೊಂಡಿದ್ದಾರೆ.
ದಕ್ಷಿಣ ಭಾರತದ ಮಾಸ್ಟರ್‌ಪೀಸ್ ಸಿನಿಮಾಗಳಲ್ಲಿ ಎಸ್‌ಎಸ್ ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರ ಸಹ ಒಂದು. ಈ ಸಿನಿಮಾ ಜನರಿಗೆ ವಿಭಿನ್ನ ಅನುಭವ ನೀಡಿತ್ತು. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಕಥೆ ಬರೆದ ಈಗ ಚಿತ್ರ 2012ರ ಜುಲೈ 6ಕ್ಕೆ ರಿಲೀಸ್ ಆಗಿತ್ತು. ನಿರ್ದೇಶಕ ಅತ್ಯಂತ ಅದ್ಭುತವಾಗಿ ತೆರೆಯ ಮೇಲೆ ಸೆರೆಹಿಡಿದ ಕಲ್ಪನೆ ಇದಾಗಿತ್ತು. ಪ್ರೀತಿಸಿದ ಹುಡುಗಿಗೆ ಪ್ರೀತಿಯ ನಿವೇದನೆ ಮಾಡುವ ಮೊದಲೇ ಸಿನಿಮಾದ ನಾಯಕ ಕೊಲೆಯಾಗಿ, ನಂತರ ನೊಣವಾಗಿ ಜನ್ಮ ಪಡೆಯುತ್ತಾನೆ. ನಂತರ ತನ್ನನ್ನ ಕೊಂದವನ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆಯೇ ಈಗ ಸಿನಿಮಾ.
ಅಲ್ಲಿಯ ವರೆಗೆ ನೊಣವೊಂದು ಹೀಗೆಲ್ಲ ಸೇಡು ತೀರಿಸಿಕೊಳ್ಳುತ್ತದೆ ಅಂತ ಯಾರೂ ಊಹೆ ಸಹ ಮಾಡಿರಲಿಲ್ಲ. ‘ಈಗ’ ಸಿನಿಮಾ ಮಾಡಿದ್ದನ್ನ ನೆನಪಿಸಿಕೊಂಡರೆ, ‘ಆರ್‌ಆರ್‌ಆರ್’ ಚಿತ್ರ ಮಾಡಿದ್ದಕ್ಕಿಂತ ಸವಾಲಿನ ಕೆಲಸವಾಗಿತ್ತಂತೆ. ನಿತ್ಯ ನೊಣಗಳನ್ನು ಹಿಡಿದು ತರುತ್ತಿದ್ದರಂತೆ. ಅವುಗಳನ್ನು ಬಹಳ ಹತ್ತಿರದಿಂದ ಅಂದರೆ ‘ಮ್ಯಾಕ್ರೋ ಫೋಟೋಗ್ರಫಿ’ ಮೂಲಕ ಸ್ಟಡಿ ಮಾಡಿ ನಂತರ ಅವುಗಳನ್ನ ರಿಲೀಸ್ ಮಾಡಲಾಗುತ್ತಿತ್ತಂತೆ. ಅಲ್ಲದೆ, ದಿನ ಚಿತ್ರತಂಡಕ್ಕೆ ನೊಣ ಹಿಡಿಯೋದೇ ದೊಡ್ಡ ಕೆಲಸವಾಗಿತ್ತಂತೆ. ತುಂಬಾ ಶೀತ ವಾತಾವರಣಕ್ಕೆ ನೊಣಗಳನ್ನು ಒಂದು ಅಥವಾ ಎರಡು ನಿಮಿಷ ತೆರೆದಿಟ್ಟರೆ ಸಾಕು ಅವು ಪ್ರಜ್ಞೆ ಕಳೆದುಕೊಳ್ಳುತ್ತಿದ್ದವಂತೆ. ಕೂಡಲೇ ಅವುಗಳನ್ನು ನಾರ್ಮಲ್ ಟೆಂಪರೇಚರ್‌ಗೆ ಬಿಟ್ಟರೆ ಪ್ರಜ್ಞೆ ಬಂದು ಹಾರಿ ಹೋಗುತ್ತಿದ್ದವಂತೆ. ಹೀಗೆಲ್ಲ ನೊಣಗಳ ಮೇಲೆ ಪ್ರಯೋಗ ಮಾಡಿದ ನಂತರ ಸಾಕಷ್ಟು ಕಲಾವಿದರ ಜೊತೆ ಕೆಲಸ ಮಾಡಿ ಕಡೆಗೆ ನಮಗೆ ಬೇಕಾದಂತೆ ಹೀರೋ ನೊಣವನ್ನು ಸಿದ್ಧಪಡಿಸಲಾಯಿತು ಎಂದು ಸೆಂಥಿಲ್ ಹೇಳಿಕೊಂಡಿದ್ದಾರೆ.
‘ಈಗ’ ಚಿತ್ರದ ಹೀರೋ ನೊಣವನ್ನು ಮಾಡಲು ಕಂಪ್ಯೂಟರ್ ಗ್ರಾಫಿಕ್ಸ್ ಸಹಾಯ ಪಡೆಯಲಾಯಿತು. ಗ್ರಾಫಿಕ್ಸ್ ರೂಪದಲ್ಲಿರುವ ನೊಣಕ್ಕೆ ಫಿಸಿಕಲ್ ಸ್ಟ್ರಕ್ಚರ್ ಕೊಡಲು ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡಿಸದ್ದೆವು. ಕೇಳೋಕೆ ವಿಚಿತ್ರ ಅನಿಸಿದರೂ, ಇದು ಸತ್ಯ. ನೊಣವನ್ನ ಅರೆ ಪ್ರಜ್ಞಾವಸ್ಥೆಗೆ ತಂದು ಕ್ಲೋಸ್ ಆಗಿ ಫೋಟೋಗಳನ್ನ ತೆಗೆಸಲಾಗುತ್ತಿತ್ತು. ಇದು ನಾನು ಮಾಡಿದ ಸಿನಿಮಾಗಳಲ್ಲಿ ತುಂಬಾ ಕಷ್ಟದ ಅನುಭವ ಕೊಟ್ಟ ಚಿತ್ರ’ ಎಂದು ತಮ್ಮ ಅನುಭವವನ್ನು ವಿವರಿಸಿದ್ದಾರೆ. ಈಗ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ನಟಿಸಿದ್ರೆ, ನಾಯಕನಾಗಿ ನಾನಿ ಹಾಗೂ ನಾಯಕಿಯಾಗಿ ಸಮಂತಾ ಅಭನಯಿಸಿದ್ದಾರೆ. ಈ ಚಿತ್ರ ಬಾಕ್ಸಾಫಿಸ್‌ನಲ್ಲಿ ಸಖತ್ ಸದ್ದು ಮಾಡಿತ್ತು.