ಹನ್ನೊಂದು ವರ್ಷಗಳ ಹಿಂದೆ ನಟ ಪ್ರೇಮ್‌ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದರು. ‘ಶತ್ರು’ ಚಿತ್ರದಲ್ಲಿ ಪೊಲೀಸ್ ಖದರ್ ತೋರಿಸಿದ್ದರು. ಆದರೆ, ಈಗ ಮತ್ತೆ ಖಾಕಿ ತೊಟ್ಟಿರುವ ಪ್ರೇಮ್ ಕೈಯಲ್ಲಿ ಸಿಂಗಲ್‌ ಬ್ಯಾರಲ್‌ ಗನ್‌ ಹಿಡಿದು ಸಖತ್‌ ಸ್ಟೈಲಿಶ್‌ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸುತ್ತಿದ್ದಾರೆ.

ಪುಟ್ಟದೊಂದು ಗ್ಯಾಪ್‌ನ ನಂತರ ನೆನಪಿರಲಿ ಪ್ರೇಮ್‌ ಮತ್ತೆ ಬಣ್ಣ ಹಚ್ಚಿದ್ದಾರೆ. ಪ್ರೇಮ್‌ ಹಾಗೂ ಮಾನ್ವಿತಾ ಹರೀಶ್‌ ಅಭಿನಯದ ‘ಅಪ್ಪ ಐ ಲವ್ ಯೂ’ ಸಿನಿಮಾ ಮೂಲಕ ಸಿನಿಪ್ರಿಯರ ಮುಂದೆ ಬಂದಿದ್ದಾರೆ. ಅಷ್ಟರಲ್ಲೇ ಈ ನಟ ತಮ್ಮ ಮತ್ತೊಂದು ಹೊಸ ಸಿನಿಮಾ ಪ್ರಕಟಿಸಿದ್ದಾರೆ. ಏ. 18ರಂದು ಅವರ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಈ ಸಲ ಪ್ರೇಮ್‌ ಲವರ್‌ ಬಾಯ್‌ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಸ್ಟೈಲಿಶ್‌ ಹಾಗೂ ರಗಡ್‌ ಪೊಲೀಸ್‌ ಅಧಿಕಾರಿಯಾಗಿ ನಿಮ್ಮ ಮುಂದೆ ಬರಲಿದ್ದಾರೆ.

ನಟನ ಹುಟ್ಟುಹಬ್ಬದಂದೇ ಚಿತ್ರತಂಡ ಒಂದು ಪೋಸ್ಟರ್‌ ರಿಲೀಸ್‌ ಮಾಡಿದೆ. ಈ ಪೋಸ್ಟರ್‌ನಲ್ಲಿ ಪ್ರೇಮ್‌ ಖಾಕಿ ತೊಟ್ಟಿದ್ದು, ಕೈಯಲ್ಲಿ ಸಿಂಗಲ್‌ ಬ್ಯಾರಲ್‌ ಗನ್‌ ಹಿಡಿದು ಸ್ಟೈಲಾಗಿ ಪೋಸ್‌ ಕೊಟ್ಟಿದ್ದಾರೆ. ದೊಂಬಿ ಮಾಡುತ್ತಿರುವ ಗುಂಪಿನ ಮುಂದೆ ಗನ್‌ ಹಿಡಿದು ನಿಂತಿರುವ ಪ್ರೇಮ್‌ ಅವರ ಪೋಸ್ಟರ್‌ ತುಂಬ ಆಕರ್ಷಕವಾಗಿದೆ. ಪ್ರೇಮ್‌ ಹನ್ನೊಂದು ವರ್ಷಗಳ ಹಿಂದೆಯೇ ‘ಶತ್ರು’ ಎಂಬ ಸಿನಿಮಾದಲ್ಲಿ ಪೊಲೀಸ್‌ ಖದರ್‌ ತೋರಿದ್ದರು. ಅದಾದ ನಂತರ ಈಗ ಮತ್ತೆ ಪೊಲೀಸ್‌ ಅಧಿಕಾರಿಯಾಗಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಹೊಸ ಸಿನಿಮಾ ಬಗ್ಗೆ ಮಾತನಾಡಿರುವ ನಟ ಪ್ರೇಮ್, ‘ನನ್ನ ಹುಟ್ಟಿದ ದಿನದಂದೇ ಮುಹೂರ್ತ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. 2.0 ರೀಬ್ರ್ಯಾಂಡಿಂಗ್ ಅಂತ ನನ್ನ ಸ್ನೇಹಿತರು ಕೇಳಿದರು. ಈ ಮೊದಲು ಆಕ್ಷನ್ ಸಿನಿಮಾ ಮಾಡಿದ್ದೆವು. ಆದರೆ ಬಹಳಷ್ಟು ಗ್ಯಾಪ್ ಆಗಿತ್ತು. ಲವರ್‌ ಬಾಯ್‌ ಆಗಿ ಬ್ರ್ಯಾಂಡ್ ಆಗಿದ್ದರಿಂದ ಈಗ ಒಂದೊಳ್ಳೆ ಕಥೆಯೊಂದಿಗೆ ನಿರ್ದೇಶಕರು ಬಂದರು. ಹೀಗಾಗಿ ಈ ಚಿತ್ರ ಒಪ್ಪಿಕೊಂಡೆ. ಸಿನಿಮಾದಲ್ಲಿ ದಕ್ಷ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ. ಸ್ಕ್ರಿಪ್ಟ್‌ ರೆಡಿಯಾಗುತ್ತಿದೆ. ಕ್ಲೈಮ್ಯಾಕ್ಸ್ ಇನ್ನೂ ಚರ್ಚೆಯ ಹಂತದಲ್ಲಿದೆ. ಪೂರ್ಣ ಪ್ರಮಾಣದಲ್ಲಿ ಸ್ಟಾರ್ ಕಾಸ್ಟ್ ನಿರ್ಧಾರವಾಗಿಲ್ಲ’ ಎಂದರು.

ಯುವ ನಿರ್ದೇಶಕ ತೇಜೇಶ್ ಮಾತನಾಡಿ, ‘ಇದು ನನ್ನ ಮೊದಲ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಈ ಚಿತ್ರಕ್ಕೆ ಶೀರ್ಷಿಕೆ ಕೊಡುವ ಕೆಲಸ ಇನ್ನೂ ಚರ್ಚೆಯ ಹಂತದಲ್ಲಿದೆ. ಕಥೆಗೆ ಪ್ರೇಮ್ ಅವರು ತುಂಬಾ ಚೆನ್ನಾಗಿ ಒಪ್ಪುತ್ತಾರೆ. ಹೀಗಾಗಿ ಅವರನ್ನು ಆಯ್ಕೆ ಮಾಡಿದ್ದೇವೆ. ರಂಗಾಯಣ ರಘು ಅವರೂ ಚಿತ್ರದ ಭಾಗವಾಗಿದ್ದಾರೆ. ಈ ತಿಂಗಳಾಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು. ಯುವ ಪ್ರತಿಭೆ ತೇಜಸ್ ಬಿ ಕೆ ಕಥೆ ಚಿತ್ರಕಥೆ ಬರೆದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಚಿತ್ರಕ್ಕಿದೆ. ಹೆಸರಿಡದ ಈ ಸಿನಿಮಾಗೆ ಮಧು ಗೌಡ ಬಂಡವಾಳ ಹೂಡಿದ್ದಾರೆ.

LEAVE A REPLY

Connect with

Please enter your comment!
Please enter your name here