ಹಳ್ಳಿ ಸೊಗಡಿನ ಡೈಲಾಗ್ಸ್, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೇ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್ ಶುರುವಾಗಿದೆಯೋ, ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ.
‘ತಳ್ಳೋದು ಪಳ್ಳೋದು ಮಾಡಿದ್ರೆ ತೆಗ್ದು ಕಪಾಳಕ್ಕೇ ಬಾರಿಸ್ಬೇಕು’, ‘ಏ ಲೂಸರ್’, ‘ಬಾಯಿ ಮುಚ್ಕೊಂಡ್ ಆಡು’, ‘ಬಾಯಿ ಮುಚ್ಕೊಂಡ್ ಆಡು ಅನ್ನೋಕೆ ನೀನ್ಯಾವಳೇ?’, ‘ಕಿತ್ತೋದೋಳು’, ‘ನೀನ್ ಕಿತ್ತೋದೋಳು’, ‘ಮರ್ಯಾದೆ ಇಲ್ದಿರೋ ನಿನ್ನಂಥೋಳ ಹತ್ರ ಏನ್ ಮಾತು?’ , ‘ಹೋಗಲೇ ಗಂಡಸಿನ ಥರ ಆಡು, ಬಳೆಗಳ ಹಾಕ್ಕೊಂಡು ಹೆಂಗಸರ ಥರ ಆಡೋದಲ್ಲ’ – ಇವೆಲ್ಲ ಯಾವುದೋ ಬೀದಿ ಜಗಳದ ತುಣುಕುಗಳಲ್ಲ. ಬಿಗ್‌ಬಾಸ್ ಮನೆಯೊಳಗೇ ರೂಪುಗೊಂಡಿರುವ ಹಳ್ಳಿ ಟಾಸ್ಕ್‌ನಲ್ಲಿ ಕೇಳಿಬಂದ ಮಾತುಗಳು. ಈ ಚಕಮಕಿಯ ತುಣುಕುಗಳು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿವೆ.
ನವೆಂಬರ್ 1ರ ರಾಜ್ಯೋತ್ಸವದ ಸಂಭ್ರಮದಲ್ಲಿ ಬಿಗ್‌ಬಾಸ್, ಮನೆಯೊಳಗಿನ ಸ್ಪರ್ಧಿಗಳಿಗೆ ಒಂದು ವಿಶಿಷ್ಟವಾದ ಟಾಸ್ಕ್ ಕೊಟ್ಟಿದ್ದರು. ಸದಸ್ಯರೆಲ್ಲರೂ ಎರಡು ಕುಟುಂಬಗಳಾಗಿ ವಿಭಾಗಗೊಂಡು ಹಳ್ಳಿ ಜೀವನವನ್ನು ನಡೆಸಬೇಕು. ಸಂಗೀತಾ ಮತ್ತು ವಿನಯ್ ಒಬ್ಬರೂ ಒಂದೊಂದು ಕುಟುಂಬದ ಮುಖ್ಯಸ್ಥರಾಗಬೇಕು ಎಂದು ಹೇಳಿದ್ದರು. ಅದರ ಪ್ರಕಾರವೇ ಟಾಸ್ಕ್ ಆರಂಭಗೊಂಡಿತ್ತು. ಪ್ರಾರಂಭದಲ್ಲಿ ಹಳ್ಳಿ ಸೊಗಡಿನ ಡೈಲಾಗ್ಸ್, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೇ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್ ಶುರುವಾಗಿದೆಯೋ, ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ.
ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್‌ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ ಎಂಬ ನಿಯಮವೇ ಈ ಚಕಮಕಿಗೆ ಕಾರಣವಾದಂತಿದೆ. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ. ಅದರಲ್ಲಿಯೂ ಸಂಗೀತಾ ಮತ್ತು ನಮ್ರತಾ ನಡುವಿನ ಗಲಾಟೆ ಮತ್ತು ವಿನಯ್ ಮತ್ತು ಕಾರ್ತಿಕ್ ನಡುವಿನ ಜಿದ್ದಾಜಿದ್ದಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗುವಂತಿದೆ.