ಮೆಜೆಸ್ಟಿಕ್‌ನಲ್ಲಿ ಅತಿಹೆಚ್ಚು ಮಂದಿ ಓಡಾಡುತ್ತಾರೆ. ಜನನಿಬಿಡ ಪ್ರದೇಶಗಳಲ್ಲೇ ಜೇಬುಗಳ್ಳರು-ಮೋಸಗಾರರ ಕಾಟ. ಹಾಗೆಯೇ ಸೈಬರ್ ಜಗತ್ತಿನಲ್ಲಿ ಈಗ ಹಿಂದೆಂದಿಗಿಂತ ಹೆಚ್ಚು ಮಂದಿ ಇದ್ದಾರೆ. ಹಾಗಾಗಿಯೇ ಸೈಬರ್ ವಂಚಕರೂ ಹುಟ್ಟಿಕೊಂಡಿದ್ದಾರೆ. ಪ್ರತಿ ಸ್ಕ್ರೀನೂ ಕ್ರೈಂ ಸೀನ್ ಎನ್ನುವ ಅಡಿಬರಹದ ‘ಸೈಬರ್ ವಾರ್’ ಅಂತಹ ವಂಚಕರ ಪತ್ತೆ ಕಾರ್ಯದ ಕತೆ. Voot Selectನಲ್ಲಿ ಸ್ಟ್ರೀಮ್ ಆಗುತ್ತಿದೆ.
ಮುಂಬೈನ ಸೈಬರ್ ಪೊಲೀಸ್ ವಿಭಾಗದ ಮೇಲೆ ಹ್ಯಾಕರ್‌ಗಳು ದಾಳಿ ನಡೆಸಲಿದ್ದಾರೆ ಎಂದು ಎಸ್‌ಪಿಗೆ ಅನನ್ಯಾ ಫೋನ್ ಮಾಡಿ ಹೇಳುತ್ತಾಳೆ. ಆಕೆ ನೈತಿಕ ಹ್ಯಾಕರ್. ಇನ್ನೊಂದೆಡೆ ಹ್ಯಾಕರ್ ರೀತಿ ಕಾಣುವ ಮತ್ತೊಬ್ಬ ಪಬ್‌ನಲ್ಲಿ ಯಾರಿಗೋ ಕಾಯುತ್ತಿದ್ದಾನೆ. ಹುಡುಗಿಯೊಬ್ಬಳು ಬಂದು ಬಾರ್ ಕೌಂಟರಿನ ಎದುರು ಕೂರುತ್ತಾಳೆ. ಆಕೆಯ ಗೆಳೆಯ ಬಂದು ಪಕ್ಕ ಕೂರಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದ ಹ್ಯಾಕರ್ ಧುತ್ತನೆ ಮಧ್ಯೆ ತೂರಿ ಬರುತ್ತಾನೆ. ‘ಈ ಹುಡುಗನನ್ನು ನಂಬಬೇಡ’ ಅನ್ನುತ್ತಾನೆ. ಅವರವರೇ ಕೆಲವು ಹುಡುಗರಿರುವ ವಾಟ್ಸಾಪ್ ಗ್ರೂಪ್‌ನಲ್ಲಿ ಹೆಣ್ಣನ್ನು ಹೇಗೆ ಭೋಗದ ವಸ್ತುವಾಗಿ ಕಾಣುತ್ತಾರೆ, ಏನೆಲ್ಲ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ ಎಂದು ವಿವರವಾಗಿ ಹುಡುಗಿಗೆ ತಿಳಿಸುತ್ತಾನೆ. ತನ್ನ ಖಾಸಗಿ ಚಾಟ್ ವಿವರಗಳನ್ನು ಕದ್ದು ನೋಡಿದ್ದಕ್ಕೆ ಹುಡುಗ ದಬಾಯಿಸುವಾಗಲೇ ಹ್ಯಾಕರ್‌ಗೆ ಒಂದು ಪೋನ್ ಬರುತ್ತದೆ. ಅತ್ತ ಕಡೆಯಿಂದ ಎಸ್‌ಪಿ. ಕೂಡಲೇ ಐಟಿ ಸೆಲ್‌ಗೆ ಬರಲು ಹೇಳುತ್ತಿದ್ದಾರೆ. ಅಷ್ಟರಲ್ಲಿ ಇಲ್ಲಿ ಬೌನ್ಸರ್ ಒಬ್ಬ ಈತನ ಕುತ್ತಿಗೆಗೆ ಕೈ ಹಾಕಿರುತ್ತಾನೆ. ಆದರೆ ಈತ ‘ದಾದಾ’ ಕಾಲದ ವಿಷ್ಣುವರ್ಧನ್ ರೀತಿ ಮಾತಾಡುತ್ತಾ ಆಡುತ್ತಲೇ ಆ ಬೌನ್ಸರ್‌ಗಳನ್ನು ಬಡಿದು ಹಾಕುತ್ತಾನೆ. ಹಾಗಾದರೆ ನೀನ್ಯಾರು ಎಂದು ಆ ಧೂರ್ತ ಗೆಳೆಯ ಕೇಳಿದಾಗ ನಮಗೂ ಗೊತ್ತಾಗುತ್ತದೆ, ಆತ ಎಸಿಪಿ ಆಕಾಶ್ ಮಲ್ಲಿಕ್, ಸೈಬರ್ ಸೆಲ್, ಮುಂಬೈ ಪೊಲೀಸ್ ಎಂದು. ಇದೇ ಧಾಟಿಯಲ್ಲಿ ಈ ಸರಣಿ ಮುಂದೆ ಸಾಗಿದ್ದಿದ್ದರೆ ಬಹುಶಃ ಬರೆಯುವಂಥದ್ದು ಏನೂ ಇರುತ್ತಿರಲಿಲ್ಲ. ಆದರೆ ಮುಂದಕ್ಕೆ ಕೊಂಚ ಮಜವಿದೆ.
ಇನ್ನೊಂದು ದೃಶ್ಯದಲ್ಲಿ ಮುಂಬೈನ ಸೈಬರ್ ಸೆಲ್ ವಿಭಾಗಕ್ಕೇ ಹ್ಯಾಕರ್‌ಗಳು ಮಾಡಿದ ದಾಳಿಯನ್ನು ತಡೆಯಲು ನೈತಿಕ ಹ್ಯಾಕರ್ ಅನನ್ಯಾ ಹಾಗೂ ಅವಳ ಸಂಗಡಿಗ ಬಂದಿದ್ದಾರೆ. ಹ್ಯಾಕಿಂಗ್ ಎಂದ ಕೂಡಲೇ ಸಿನಿಮಾಗಳಲ್ಲಿ ಹಸಿರು ಅಕ್ಷರ, ಗ್ರಾಫಿಕ್ಸ್ ಇರುವ ಸ್ಕ್ರೀನ್ ನೋಡಿಕೊಂಡು ಹ್ಯಾಕರ್‌ಗಳು ಏನೇನೋ ಟೈಪಿಸುತ್ತಾರೆ. ಸರ್ವರ್ ಕೋಣೆಯಲ್ಲಿ ನೀಲಿ ಬಣ್ಣದ ಎಲ್‌ಇಡಿ ಲೈಟುಗಳ ಜಾತ್ರೆ. ಇಲ್ಲಿಯೂ ಹಾಗೆಯೇ ಇದೆ. ಆದರೆ ಎಲ್ಲಾ ಸಿನಿಮಾ/ಸರಣಿಯಲ್ಲಿ ನೈಜತೆಯೇ ಇರಬೇಕೆಂದೇನೂ ಇಲ್ಲ. ಅದು ನಾಟಕೀಯವಾಗಿಯೇ ಇದ್ದರೂ ರಂಜಿಸುವ ಗುಣ ಹೊಂದಿದ್ದರೆ ಕಳೆದ ಸಮಯಕ್ಕೆ ಮೋಸವಿಲ್ಲ. ‘ಸೈಬರ್ ವಾರ್’ ಅಂಥದ್ದೊಂದು ಸರಣಿ.
ಕತೆ ಸಾಗುತ್ತಾ ಥ್ರಿಲ್ಲರ್ ಅಂಶಗಳನ್ನು ಬಲು ಗಾಂಭೀರ್ಯದಿಂದ ಹೇಳಬಹುದಿತ್ತು. ಆದರೆ ಇಲ್ಲಿ ಭಾರಿ ಅಗತ್ಯ ಎಂಬ ಕಡೆ ಮಾತ್ರ ಗಾಂಭೀರ್ಯ ತುಂಬಿ ಉಳಿದೆಡೆ ಲಘುವಾಗಿ ಕತೆಯನ್ನು ಕೊಂಡೊಯ್ಯಲಾಗಿದೆ. ಅನನ್ಯಾನಳನ್ನು ಎಲ್ಲಿಯೋ ನೋಡಿದ್ದೇನಲ್ಲಾ ಎನ್ನುತ್ತದೆ ಎಸಿಪಿಯ ಮನಸು, ಆದರೆ ಇಂಥಲ್ಲೇ ಕಂಡದ್ದು ಎನ್ನಲು ಆತನಿಗೆ ಸರಿಯಾಗಿ ನೆನಪಿಲ್ಲ. ಅದೆಲ್ಲಿ ಕಂಡದ್ದು ಎಂದು ಅನನ್ಯಾಗೆ ಪಕ್ಕಾ ನೆನಪಿರುವಂತಿದೆ, ಆದರೆ ಆಕೆ ಹೇಳುತ್ತಿಲ್ಲ. ಹಾಗಾಗಿ ಅವರ ಸಂಬಂಧ ತಿಕ್ಕಾಟದಲ್ಲೇ ಆರಂಭ. ಹಾಗಿದ್ದೂ ಒಂದೇ ತಂಡವಾಗಿ ಕೆಲಸ ಮಾಡಬೇಕಾಗಿ ಬರುವುದು ವೃತ್ತಿಯ ಅನಿವಾರ್ಯತೆ.
ಹೀಗಿರುವಾಗ ಇದ್ದಕ್ಕಿದ್ದಂತೆ ಒಂದು ಪ್ರಕರಣ ಸೈಬರ್ ಸೆಲ್‌ನ ಅಂಗಳಕ್ಕೆ ಬಂದು ಬೀಳುತ್ತದೆ. ಮದುವೆಗಿನ್ನು ಒಂದೇ ದಿನ ಬಾಕಿ ಇರುವ ಹುಡುಗಿಯ ಮೊಬೈಲಿಗೆ ಆಕೆಯ ಖಾಸಗಿ ವಿಡಿಯೋವೊಂದು ಬಂದು ಬೀಳುತ್ತದೆ. ಮದುವೆ ನಿರಾಕರಿಸದಿದ್ದರೆ ವಿಡಿಯೋವನ್ನು ಜಗಜ್ಜಾಹೀರು ಮಾಡುವ ಬೆದರಿಕೆ ಬೇರೆ. ಸೈಬರ್ ಪೊಲೀಸರ ತಂಡ ಐಪಿ ಅಡ್ರೆಸ್ ಹುಡುಕಿದರೆ ಆ ವಿಡಿಯೋ ಅವಳದೇ ಐಪಿ ಅಡ್ರೆಸ್ಸಿಂದ ರವಾನೆಯಾಗಿದೆ! ಬಂದ ಅತಿಥಿಗಳಿಗೆ ಅಲ್ಲಿ ಮೊಬೈಲ್ ಸಿಗ್ನಲ್ ದುರ್ಬಲವಾಗಿದೆ ಎಂದು ಅವಳ ಫೋನನ್ನೇ ವೈ ಫೈ ಹಾಟ್‌ಸ್ಪಾಟ್ ಆಗಿ ಮಾಡಿದ್ದಾಗ ಈ ಘಟನೆ ನಡೆದಿದೆ ಎಂಬುದು ತನಿಖೆಯ ಒಳ ಹೋದ ಹಾಗೆ ತಿಳಿದು ಬರುವ ವಿಚಾರ. ಮದುವೆಗಿನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಹಸೆಮಣೆಯೇರುವ ಹುಡುಗಿಗೆ ಮುಜುಗರ ತಪ್ಪಿಸುವ ಸವಾಲು ಸೈಬರ್ ಪೊಲೀಸರದ್ದು. ಅದ್ದರಿಂದ ಯಾರಿಗೂ ತಿಳಿಯದಂತೆ ತನಿಖೆ ನಡೆಸಬೇಕು. ಹಾಗಾಗಿ ಮದುವೆ ಮನೆಗೆ ಅತಿಥಿಗಳಂತೆ ಹೋಗುವ ತನಿಖಾಧಿಕಾರಿಗಳ ಕಾರ್ಯಕಲಾಪ ವಿನಾ ಕಾರಣ ನೋಡಿಸಿಕೊಂಡು ಸಾಗುತ್ತದೆ.
ಹೌ ಸಾಹಿಬ್ ಎಂಬ ಪೇದೆ ಮತ್ತು ಆಶಾ ಎಂಬ ಎಸ್‌ಐ ಇಬ್ಬರ ಪಾತ್ರ ಸಹಜ ಹಾಸ್ಯವನ್ನು ಸಂದರ್ಭೋಚಿತವಾಗಿ ಉಣಬಡಿಸುವುದು ಕಾರಣ ಅಂದುಕೊಳ್ಳಲು ಅಡ್ಡಿಯಿಲ್ಲ. ಅಮಿತಾಭ್ ಗಣೇಕರ್ ಮತ್ತು ನೇಹಾ ಖಾನ್ ಎಂಬಿಬ್ಬರು ಟಿವಿ ಕಲಾವಿದರ ಅತಿರೇಕವಲ್ಲದ ಅಭಿನಯ ಪಾತ್ರಗಳಿಗೆ ನ್ಯಾಯ ಒದಗಿಸಿದೆ. ಪ್ರಮುಖ ಪಾತ್ರದಲ್ಲಿನ ಮೋಹಿತ್ ಮಲ್ಲಿಕ್ ಮತ್ತು ಸನಾಯ ಇರಾನಿ ಕೂಡ ಮೂಲತಃ ಟಿವಿ ಧಾರಾವಾಹಿ ಕಲಾವಿದರು. ಇಲ್ಲಿ ಬರುವ ಪ್ರಕರಣಗಳೂ ಭಾರಿ ಗೌಪ್ಯತೆಯುಳ್ಳವೇನಲ್ಲ. ಪ್ರತಿ ಪ್ರಕರಣಕ್ಕೆ ಎರಡು ಆಧ್ಯಾಯ ಮೀಸಲಿರಿಸಲಾಗಿದೆ. ಒಂದು ಹಂತದ ನಂತರ ಇದು ಹೀಗೇ ಕೊನೆಯಾಗಲಿದೆ ಎಂಬುದನ್ನೂ ನಿರೀಕ್ಷಿಸಬಹುದು. ಆದರೆ ಗೌಪ್ಯತೆ ಮಾತ್ರವೇ ಬಂಡವಾಳವಾಗಿ ಇರಿಸದೆ ಇತರೆ ಆಯಾಮಗಳ ಕಡೆಗೂ ಗಮನ ವಹಿಸಿರುವ ಕಾರಣ ‘ಸೈಬರ್ ವಾರ್’ ಮೋಸ ಮಾಡುವುದಿಲ್ಲ. ಅರ್ಧವೇ ಗಂಟೆಯ ಎಪಿಸೋಡ್‌ಗಳು ಬೇಗಬೇಗ ಮುಗಿದುಬಿಡುತ್ತದೆ. ತೀರಾ ತಲೆಕಡೆಸಿಕೊಳ್ಳದೆ ಹಗುರವಾಗಿ ನೋಡಿ ಆನಂದಿಸಬಹುದು.
ಇನ್ನೊಂದು ಪ್ರಕರಣ ಆನ್‌ಲೈನ್ ಹಣ ಪಾವತಿಗೆ ಸಂಬಂಧಿಸಿದ್ದು. ಹೆಸರಾಂತ ಕಲಾವಿದರ ಸಂಗೀತ ಸಂಜೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಟಿಕೆಟ್‌ನ ದುಬಾರಿ ಕಾರ್ಯಕ್ರಮ. ಆದರೆ ಬುಕ್ಕಿಂಗ್ ವೇಳೆ ಶೇ.25 ರಿಯಾಯಿತಿಯ ಕೊಡುಗೆ ಫಟ್ಟನೆ ಪರದೆ ಮೇಲೆ ಬರುತ್ತದೆ. ರಿಯಾಯಿತಿ ಆಸೆಗೆ ಬಿದ್ದು ಅದನ್ನು ಕ್ಲಿಕ್ಕಿಸಿದವರನ್ನು ಧೋಖಾ ವೆಬ್‌ಸೈಟ್ ಕಡೆಗೆ ಎಳೆದು ಅವರಿಗೆ ಕೃತಕ ಟಿಕೆಟ್ ನೀಡಲಾಗುತ್ತದೆ. ಅದನ್ನೇ ನೈಜ ಟಿಕೆಟ್ ಎಂದು ನಂಬಿ ಕಾರ್ಯಕ್ರಮಕ್ಕೆ ಹೋದಾಗಲೇ ಅವರಿಗೆ ದೋಖಾಬಾಜಿ ಬಗ್ಗೆ ತಿಳಿದು ಬರುವುದು. ಸೈಬರ್ ಪೊಲೀಸರು ಆ ಅಪರಾಧಿಗಳನ್ನು ಪತ್ತೆ ಹಚ್ಚುವುದು ಮುಂದಿನ ಎರಡು ಎಪಿಸೋಡುಗಳಿಗೆ ಸರಕು.
ಸದ್ಯಕ್ಕೆ ನಾಲ್ಕು ಎಪಿಸೋಡ್‌ಗಳನ್ನು ಮಾತ್ರವೇ ಹೊರಬಿಡಲಾಗಿದೆ. ಪ್ರತಿ ಶುಕ್ರವಾರ ಎರಡೆರಡಾಗಿ ಕಂತುಗಳು ಬಿಡುಗಡೆಯಾಗುತ್ತವೆ. ಬಿಡಿ ಪ್ರಕರಣಗಳ ಜತೆಗೆ ಇಡಿಯಾಗಿ ಆವರಿಸಿರುವ ಕತೆ ಬೇರೊಂದಿದೆ ಎಂಬ ಸೂಚನೆಯಷ್ಟೇ ಸದ್ಯಕ್ಕೆ ಸಿಕ್ಕಿದೆ. ಮುಂದಿನದ್ದು ಕಾದು ನೋಡಬೇಕು.