ಕತೆ ಸುತ್ತಮುತ್ತಲಿನ ಪಾತ್ರಗಳನ್ನೇ ಸುತ್ತಿಕೊಂಡರೂ ಯಾವುದೇ ರೀತಿಯ ಗೊಂದಲವಾಗುವುದಾಗಲಿ, ಅಭಾಸ ಎನಿಸುವುದಾಗಲಿ ಇಲ್ಲ. ನೈಜತೆ, ಸರಳತೆ, ಪ್ರಾಮಾಣಿಕತೆ ಸಿನಿಮಾದ ವಿಶೇಷ. ‘ಜಲ್ಸಾ’ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಸತ್ಯ ಬದುಕನ್ನು ಬಯಸುವ ಪಾತ್ರದ ಆತ್ಮಾವಲೋಕನ. ತಪ್ಪಿನಿಂದಾದ ಅಪರಾಧದ ಭಯದಿಂದ ಇನ್ನೊಂದು ತಪ್ಪಾಗುವುದು, ಆ ತಪ್ಪುಗಳು ಕಾಡುವುದು, ಅವುಗಳನ್ನು ವ್ಯಕ್ತಪಡಿಸುವ ಭಾವ.. ಎಲ್ಲವನ್ನೂ ಚಿತ್ರದಲ್ಲಿ ನಾಜೂಕಿನಿಂದ ನಿರ್ವಹಿಸಿದ್ದಾರೆ. ಒಂದು ಅಫಘಾತದ ಸುತ್ತ ಸುತ್ತುವ ಕತೆ ಮೇಲ್ನೋಟಕ್ಕೆ ಹಿಟ್‌ ಅಂಡ್‌ ರನ್‌ ಕೇಸ್‌ನ ಕ್ರೈಂ – ಥ್ರಿಲ್ಲರ್‌ ಅನಿಸಬಹುದು, ಆದರೆ ಚಿತ್ರದೊಳಗಿನ ವಿಷಯದ ಘಾಡಾರ್ಥ ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಚಿಂತನೆಗೆ ಹಚ್ಚುತ್ತದೆ. ರೋಚಕ ಅನುಭವ ನೀಡುತ್ತದೆ. ಇಲ್ಲಿ ಕತೆಗೆ ಎರಡು ಮುಖ. ಚಿತ್ರವಿಡೀ ಪಾತ್ರಗಳನ್ನು ಒಂದಕ್ಕಿಂತ ಒಂದು ಹೆಚ್ಚು ಎನ್ನುವಷ್ಟು ಗಟ್ಟಿಯಾಗಿ ಕಟ್ಟಿದ್ದಾರೆ. ಹೇಳಲೊರಟ ವಿಷಯ ಸ್ಪಷ್ಟವಾಗಿದೆ. ಚಿತ್ರದ ಯಾವುದೇ ಪಾತ್ರದಲ್ಲಾದರೂ ಪ್ರೇಕ್ಷಕರು ತಮ್ಮನ್ನು ತಾವು ಕಾಣಬಹುದು. ಸಣ್ಣದಾಗಿ ಎಲ್ಲೋ ಒಮ್ಮೆ ಲಾಜಿಕ್‌ ಮಿಸ್‌ ಹೊಡೆಯಬಹುದು. ಆದರೆ ಅದೆಲ್ಲ ಪರಿಧಿಯನ್ನೂ ಮೀರಿ ಚಿತ್ರದಲ್ಲಿರುವ ವಿಷಯ ಮತ್ತು ಪಾತ್ರಗಳು ಪ್ರೇಕ್ಷಕರನ್ನು ತಲೆದೂಗುವಂತೆ ಮಾಡುತ್ತವೆ.

ಮೊದಲ ದೃಶ್ಯ ಸೈಕಲಾಜಿಕಲ್ ಸಿನಿಮಾದಂತೆ ತೆರೆದುಕೊಳ್ಳುತ್ತದೆ. ಮೊದಲಾರ್ಧದಲ್ಲೇ ಕತೆ ಸಂಪೂರ್ಣವಾಗಿ ಬಿಚ್ಚಿಟ್ಟು, ಮುಂದೇನಾಗಬಹುದು ಎನ್ನುವ ಕುತೂಹಲ ಮೂಡುವಂತೆ ಸಂವೇದನಾಶೀಲ ಕತೆ ರೂಪಿಸಿರುವ ಕತೆಗಾರನಿಗೆ ಪ್ರೇಕ್ಷಕ ಅಭಿಮಾನಿಯಾಗಬಹುದು. ಒಂದರ್ಥದಲ್ಲಿ ಆಲಿಯಾ ಮಹಮ್ಮದ್‌ ಎನ್ನುವ ಪಾತ್ರವೊಂದನ್ನು ಅರೆ ಜೀವವನ್ನಾಗಿಸದೆ ಸಂಪೂರ್ಣ ವಿದಾಯ ಹೇಳಿದ್ದರೆ? ಆ ಪಾತ್ರ ಇನ್ನೂ ಹೆಚ್ಚು ಕಾಡುತ್ತಿತ್ತು. ಆ ಘಟನೆಯ ಸುತ್ತಲೂ ನಡೆವ ವಿಷಯವು ಸಂಬಂಧಿಸಿದ ಪಾತ್ರಗಳನ್ನು ಇನ್ನೂ ಗಾಢವಾಗಿ ಕಾಡುತ್ತಿತ್ತು ಎಂದುಕೊಳ್ಳಬಹುದು. ಆದರೆ ಅದರಿಂದ ಚಿತ್ರದಲ್ಲಿ ಚರ್ಚೆಗೆ ಒಳಪಟ್ಟಿರುವ ವಿಷಯಗಳು ಬೇರೆಯೇ ಆಗಿರುತ್ತಿದ್ದವು. ಅದು ಬೇರೆಯದ್ದೇ ಕತೆಯಾಗುತ್ತಿತ್ತು. ಆದರೆ ಚಿತ್ರದಲ್ಲಿರುವ ಬಿಗಿ ನಿರೂಪಣೆ, ಪರಿಕಲ್ಪನೆ ಅಮೋಘ ಅನಿಸುತ್ತದೆ. ಕತೆ ಸುತ್ತಮುತ್ತಲಿನ ಪಾತ್ರಗಳನ್ನೇ ಸುತ್ತಿಕೊಂಡರೂ ಯಾವುದೇ ರೀತಿಯ ಗೊಂದಲವಾಗುವುದಾಗಲಿ, ಅಭಾಸ ಎನಿಸುವುದಾಗಲಿ ಇಲ್ಲ. ನೈಜತೆ, ಸರಳತೆ, ಪ್ರಾಮಾಣಿಕತೆ ಸಿನಿಮಾದ ವಿಶೇಷ.

ನಾಲ್ಕು ಮಂದಿಯ ಅನ್ಯಾಯದ ವಿರುದ್ದ ಮಾತನಾಡುವ, ನೇರ ಪ್ರಶ್ನೆಮಾಡಿ ಎದುರಿನ ವ್ಯಕ್ತಿಯ ಅಥವಾ ವ್ಯಕ್ತಿತ್ವದ ಮುಖವಾಡ ಕಳಚುವ ವೃತ್ತಿಯಲ್ಲಿರುವ ಪಾತ್ರವೊಂದು ಆಕಸ್ಮಿಕವಾಗಿಯೋ, ನಿರ್ಲಕ್ಷ್ಯದಿಂದಲೋ ಅಪಘಾತವೊಂದಕ್ಕೆ ಕಾರಣವಾಗಿ ಪರಿತಪಿಸುವಂತಹ ವೇದನೆ, ಯಜಮಾನಿಕೆ ಮತ್ತು ಕೆಲಸದಾಳಿನ ನಡುವಿನ ಬಂಧ, ಸದಾ ಪ್ರಶ್ನೆಗೆ ಗುರಿಯಾಗುವ ಹೆಣ್ಣಿನ ಪರ ವಾದವನ್ನು ಬಹುತೇಕ ಆಂಗಿಕವಾಗಿಯೇ ಉತ್ತರಿಸುವ ವಾದ, ಸಣ್ಣ ಮಕ್ಕಳಲ್ಲಿ ಬೆಳೆಸಬೇಕಾದ ಅಥವಾ ಇರಬೇಕಾದ ನಡವಳಿಕೆ ಎಲ್ಲವನ್ನೂ ಅದ್ಭುತವಾಗಿ ಹೆಣೆದು, ಸತ್ಯ ಮತ್ತು ಆತ್ಮಸಾಕ್ಷಿಯನ್ನೇ ತೆರೆಮೇಲೆ ತಂದಿದ್ದಾರೆ ಎನ್ನಬಹುದು.

ಒಮ್ಮೆ ಪಾತ್ರವೊಂದು ಅಪರಾಧವೊಂದಕ್ಕೆ ಕಾರಣವಾಗಿ ದಿಗಿಲುಬಿದ್ದು ಭಯಭೀತವಾಗುವ ಪರಿಯೊಂದು ಪ್ರೇಕ್ಷಕರು ದಿಗಿಲು ಬೀಳಿಸುವಷ್ಟು ನೈಜ ಅಭಿನಯದಿಂದ ಕೂಡಿದೆ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ಕಲಾವಿದರು ದೃಶ್ಯದಲ್ಲಿದ್ದಾಗಿಯೂ ಇಂಟರ್ನ್ ಜರ್ನಲಿಸ್ಟ್‌ ಪಾತ್ರವೊಂದನ್ನು ನಿರ್ವಹಿಸಿರುವ ವಿದಾತ್ರಿ ಬಂದಿ ತಮ್ಮ ನೈಜ ಅಭಿನಯ ಚಾತುರ್ಯದಿಂದ ಗಮನಸೆಳೆಯುತ್ತಾರೆ. ಸದಾ ಎಲ್ಲರ ಮುಖಭಾವದಲ್ಲಿ ಮುಗುಳುನಗೆ, ಲವಲವಿಕೆ ಬಯಸುವ ಆಯುಶ್ ಎನ್ನುವ ಪಾತ್ರ ತನ್ನ ಪ್ರಭುದ್ದತೆಯಿಂದ ಪ್ರೇಕ್ಷಕನೆದೆಯಲ್ಲಿ ಉಳಿಯುತ್ತದೆ. ಇನ್ನು ಪೊಲೀಸ್‌, ರಾಜಕಾರಣ, ಜರ್ನಲಿಸಂ ಬದ‍್ಧತೆ ಕುರಿತಾದ ವಿಷಯಗಳೂ ಚಿತ್ರದಲ್ಲಿ ಪ್ರಸ್ತಾಪವಾಗುತ್ತವೆ. ಪ್ರಸ್ತುತ ದಿನಗಳಲ್ಲಿನ ಹಾಡು, ಕುಣಿತ, ಹೊಡಿಬಡಿ ದೃಶ್ಯವಿಲ್ಲದಂಥ ಸಿನಿಮಾ ಇಷ್ಟಪಡುವ, ಪ್ರಬುದ್ಧ ಕತೆ, ಬಿಗಿ ನಿರೂಪಣೆ, ನೈಜಾಭಿನಯ, ಉತ್ತಮ ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ಸಂಕಲನ ಎಲ್ಲವನ್ನೂ ಒಳಗೊಂಡಿರುವ ಅತ್ಯುತ್ತಮ ಚಿತ್ರ ಎನಿಸಿಕೊಳ್ಳುತ್ತದೆ ‘ಜಲ್ಸಾ’.

LEAVE A REPLY

Connect with

Please enter your comment!
Please enter your name here