ಈ ಸರಣಿಯನ್ನು ನೋಡುವಾಗ, ಕಥೆ ನಿರೂಪಣೆಯಷ್ಟೇ ಮುಖ್ಯವಾಗುವುದು ಇದೆಲ್ಲದರ ಒಳಗಿರುವ ಸಾಮಾಜಿಕ ರಾಜಕೀಯ – Intimacy ಸ್ಪ್ಯಾನಿಷ್ ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಸ್ಟ್ರೀಂ ಆದ ಸ್ಪ್ಯಾನಿಷ್ ವೆಬ್ ಸರಣಿ Intimacy. ಓಟಿಟಿ ವೇದಿಕೆಗಳಿಂದಾದ ಒಂದು ದೊಡ್ಡ ಅನುಕೂಲ ಎಂದರೆ ಅವು ನಮ್ಮ ಪಾಲಿಗೆ ಜಗತ್ತಿನ ಸಿನಿಮಾ ಮತ್ತು ವೆಬ್ ಸರಣಿಗಳ ಕಿಟಕಿಯಾಗಿದ್ದು. ಅವುಗಳ ಕಂಟೆಂಟ್, ಸ್ಕ್ರಿಪ್ಟ್, ವೇಗ, ಸಿನಿಮಾಟಿಕ್ ಭಾಷೆ ಎಲ್ಲವೂ ನಮಗೆ ಸಾಧ್ಯತೆಗಳ ಅನೇಕ ಬಾಗಿಲುಗಳನ್ನು ತೆರೆದವು. ಸ್ಪ್ಯಾನಿಷ್ ಭಾಷೆಯದೇ ಆದ ‘ಮನಿ ಹೈಸ್ಟ್’ ಇಡೀ ಪ್ರಪಂಚದಲ್ಲಿ ಹೆಸರು ಮಾಡಿತು. ಅದರಲ್ಲಿ ಮೊದಲು ಇನ್ಸ್‌ಪೆಕ್ಟರ್ ಆಗಿ ನಂತರ ಪ್ರೊಫೆಸರ್ ಸಂಗಾತಿಯಾಗಿ ಅಭಿನಯಿಸಿದ Itziar Ituno ಈ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. Verónica Fernández ಮತ್ತು Laura Sarmiento ಈ ಕಥೆಯನ್ನು ಕಟ್ಟಿದ್ದಾರೆ. ಚಿತ್ರದ ಸ್ಕ್ರಿಪ್ಟ್, ಅಭಿನಯ, ನಿರೂಪಣೆ ಎಲ್ಲವೂ ಸರಣಿಯನ್ನು ಬಿಗಿ ತಪ್ಪದಂತೆ ಮುಂದೆ ಕರೆದೊಯುತ್ತದೆ.

ಪ್ರೀತಿ ಎನ್ನುವುದೊಂದು ನಂಬಿಕೆ. ಪ್ರೀತಿಯ ಪ್ರಾಮಾಣಿಕತೆಯಲ್ಲಿ ಆಡಿದ ಮಾತುಗಳು ನಾಳೆ ತನ್ನ ವಿರುದ್ಧವೇ ಬಳಕೆಯಾಗದು ಎನ್ನುವ ನಂಬಿಕೆ, ಆ ಜೀವದೆಡೆಗೆ ಓಡಿಬರುವಾಗ ಕಾಲು ತೊಡರಿದರೂ ಆ ಕೈಗಳು ಸಂಭಾಳಿಸುತ್ತವೆ ಎನ್ನುವ ನಂಬಿಕೆ, ಉತ್ಕಟ ಪ್ರಣಯದಲ್ಲಿ ಬಿಚ್ಚಿಟ್ಟ ಮೋಹ, ಪ್ರೇಮ, ಕಾಮ ನಮ್ಮಿಬ್ಬರ ನಡುವೆಯೇ ಉಳಿಯುತ್ತದೆ ಎನ್ನುವ ನಂಬಿಕೆ. ಆ ನಂಬಿಕೆಯಲ್ಲೇ ಕಾಗದಗಳು ರವಾನೆಯಾಗುತ್ತಿದ್ದವು, ಮಾತುಗಳು ಸೇತುವೆ ಕಟ್ಟುತ್ತಿದ್ದವು. ಅದೂ ಒಂದು ಕಾಲ. ಆಗ ಸಹ ಪ್ರೇಮಪತ್ರಗಳು ಸಿಡಿಯುವ ಟೈಂಬಾಂಬ್‌ನಂತೆ ಕಂಡದ್ದಿದೆ. ಆದರೆ ಇದು ಇನ್ನೂ ಅಪಾಯಕಾರಿ ಹಂತವನ್ನು ತಲುಪಿದ್ದು ಪ್ರತಿಯೊಬ್ಬರ ಕೈಲಿರುವ ನವಿಲುಗರಿಯಂತಹ ನಿರಪಾಯಕಾರಿ ಸೆಲ್‌ಫೋನ್‌ ತನ್ನ ಕ್ಯಾಮೆರಾ ಫೋಲ್ಡರಿನಲ್ಲಿ ಕಾಳನಾಗರಗಳನ್ನು ಮುಚ್ಚಿಟ್ಟುಕೊಳ್ಳತೊಡಗಿದಾಗ. ಆಡಿದ ಮಾತುಗಳು, ಜೊತೆಯಲ್ಲಿರುವಾಗ ತೆಗೆದುಕೊಂಡ ಚಿತ್ರಗಳು, ಮಾಡಿದ ವೀಡಿಯೋಗಳು, ಜೊತೆಯಲ್ಲಿರುವವರಿಗಾಗಿ ತೆಗೆದು ಕಳಿಸಿದ ಚಿತ್ರಗಳು ನಾಗರವಾಗಿ ಪೂತ್ಕರಿಸತೊಡಗಿದಾಗ. ಶೃಂಗಾರ ಪೋರ್ನ್ ಆಗಿದ್ದು ಆಗ. ಸಂಗಾತಿಯಾಗಿದ್ದವರನ್ನು ಬೆದರಿಸಲು, ಬ್ಲಾಕ್‌ಮೇಲ್‌ ಮಾಡಲು ಈ ಚಿತ್ರಗಳನ್ನು, ವೀಡಿಯೋಗಳನ್ನು ಬಳಸಿದಾಗ ಅದಕ್ಕೊಂದು ಹೊಸ ಹೆಸರು ಕೂಡಾ ದಕ್ಕಿತು. ಅದೇ ರಿವೇಂಜ್‌ ಪೋರ್ನ್‌.

ಇಂತಹ ಚಿತ್ರಗಳು, ವಿಡಿಯೋಗಳು ಹೊರಬಂದಾಗ ಅದು ಆ ವ್ಯಕ್ತಿಯ ಜೀವನದ ಮೇಲೆ ಮಾತ್ರವಲ್ಲ ಅವರ ಸುತ್ತಲಿನವರ ಜೀವನದ ಮೇಲೂ ಸಹ ಮತ್ತೆ ಮೊದಲಿನಂತಾಗದ ಪ್ರಭಾವವನ್ನು ಬೀರುತ್ತದೆ. ವೈಯಕ್ತಿಕ ಘಳಿಗೆಗಳಲ್ಲಿ ಎಲ್ಲದರಿಂದ ಬಿಡಿಸಿಕೊಂಡ ಬದುಕು ತಾನೇ ತಾನಾಗಿ ಇದ್ದರೂ, ಪ್ರತಿ ಬದುಕಿಗೂ ಒಂದು ಕೌಟುಂಬಿಕ, ಸಾಮಾಜಿಕ ಮತ್ತು ಔದ್ಯೋಗಿಕ ಆಯಾಮ ಸಹ ಇರುತ್ತದೆ. ವ್ಯಕ್ತಿಗತವಾಗಿ ದೈರ್ಯಸ್ಥರಾಗಿರುವವರೂ ಸಹ ಈ ಆಯಾಮಗಳಲ್ಲಿ ಒತ್ತಡಕ್ಕೆ ಒಳಗಾಗದೆ ಇರುವುದು ಅತ್ಯಂತ ಕಠಿಣ. ಈ ಸರಣಿಯಲ್ಲಿ ಭಿನ್ನಭಿನ್ನ ಸಾಮಾಜಿಕ, ಆರ್ಥಿಕ ಹಿನ್ನೆಲೆಯ, ವಯೋಮಾನದ ಹೆಂಗಸರು ಈ ಅಶ್ಲೀಲ ಚಿತ್ರಗಳ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಆನ್ ಇಪ್ಪತ್ತರಲ್ಲಿರುವ ಯುವತಿ. ಫ್ಯಾಕ್ಟರಿಯೊಂದರಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ. ತಾನು ಅಕ್ಕನಷ್ಟು ಓದಿಲ್ಲ ಎನ್ನುವ ಸಣ್ಣ ಕೀಳರಿಮೆ ಇವಳಿಗಿದ್ದರೆ, ಸಂಬಂಧಗಳ ವಿಷಯದಲ್ಲಿ ತಾನು ತಂಗಿಯಷ್ಟು ಅದೃಷ್ಟವಂತಳಲ್ಲ ಎನ್ನುವ ಕೊರಗು ಅಕ್ಕನಿಗೆ. ಆದರೆ ಇಬ್ಬರಲ್ಲೂ ಇನ್ನಿಲ್ಲದ ಪ್ರೀತಿ. ಅವರಿಗೆ ತಾಯಿ ಇಲ್ಲ, ತಂದೆ ಇವರನ್ನು ಎಂದೋ ತ್ಯಜಿಸಿ ಆಗಿದೆ. ಹಾಗಾಗಿಯೆ ಇವರಿಬ್ಬರಿಗೂ ಪರಸ್ಪರರಲ್ಲಿ ಅಷ್ಟು ಪ್ರೀತಿ, ಅನುಬಂಧ. ಆನ್ ಈಗ ಒಬ್ಬಾತನೊಂದಿಗೆ ಪ್ರೇಮದಲ್ಲಿದ್ದಾಳೆ. ವಿಧುರನಾದ ಅವನಿಗೆ ಇಬ್ಬರು ಗಂಡು ಮಕ್ಕಳು, ಆ ಮೂವರಿಗೂ ಆನ್ ಅಂದರೆ ತುಂಬಾ ಪ್ರೀತಿ. ಎಲ್ಲಾ ಚೆನ್ನಾಗಿರುವಂತೆ ಕಾಣುವ ಆನ್‌ಳ ಮೃತ ದೇಹ ಸಮುದ್ರದ ನೀರಿನಲ್ಲಿ ತೇಲುವುದರೊಂದಿಗೆ ಚಿತ್ರ ಶುರುವಾಗುತ್ತದೆ. ಭೂತಕಾಲದ ಆನ್‌ಳ ಬೆತ್ತಲೆ ಚಿತ್ರಗಳು, ವೀಡಿಯೋಗಳು ಹೊರಬಂದು, ಅವು ಅವಳನ್ನು ಸಾವಿಗೆ ನೂಕಿರುತ್ತವೆ.

ಸ್ಪೇನ್‌ನ ಒಂದು ಪಟ್ಟಣದ ಯಶಸ್ವಿ ಉಪಮೇಯರ್ ಮಲೇನ್ ಜುಬೇರಿ. ಅವಳ ಮುಂದಾಲೋಚನೆ, ಬುದ್ಧಿವಂತಿಕೆ, ಕಾರ್ಯಕ್ಷಮತೆ ಅವಳ ಪಕ್ಷ ಮುಂದಿನ ಚುನಾವಣೆಗೆ ಈಕೆಯನ್ನೇ ಮೇಯರ್ ಅಭ್ಯರ್ಥಿಯನ್ನಾಗಿ ಘೋಷಿಸಲು ಒತ್ತಡ ಹಾಕುತ್ತಿರುತ್ತದೆ. ಮರುದಿನ ಆ ಘೋಷಣೆ ಆಗಬೇಕು. ಟೌನ್ ಹಾಲ್‌ನ ಅಂಗಳದಲ್ಲಿ ಅವಸರವಸರವಾಗಿ ನಡೆದು ಹೋಗುತ್ತಿರುವ ಮಲೇನ್ ಅಲ್ಲಿ ನೇತು ಹಾಕಿದ್ದ ದೊಡ್ಡದೊಡ್ಡ ಟೀವಿಗಳಲ್ಲಿ ತನ್ನದೇ ವೀಡಿಯೋ ಕಂಡು ಆಘಾತಕ್ಕೊಳಗಾಗುತ್ತಾಳೆ. ಅವಳು ನಿರ್ಜನ ಸಮುದ್ರ ತೀರದಲ್ಲಿ, ಗಂಡೊಬ್ಬನ ಜೊತೆ ಅತ್ಯಂತ ಖಾಸಗಿ ಕ್ಷಣಗಳನ್ನು ಕಳಿಯುತ್ತಿರುವ ವೀಡಿಯೋ ಅದು. ಆ ವಿಡಿಯೋದಲ್ಲಿ ಜಾಣತನದಿಂದ ಗಂಡಿನ ಮುಖವನ್ನು ಮರೆಮಾಚಲಾಗಿದೆ, ಕಾಣುವುದು ಇವಳ ದೇಹ ಮತ್ತು ಮುಖ ಮಾತ್ರ. ಅವಳಿಗೆ ಮದುವೆಯಾಗಿದೆ. ಹದಿವಯಸ್ಸಿನ ಮಗಳಿದ್ದಾಳೆ. ಗಂಡ ಹೆಂಡತಿ ದೂರವಾಗಿದ್ದರೂ, ಬೇರೆಯಾಗಿಲ್ಲ. ಈ ಒಂದು ವೀಡಿಯೋ ಅವಳ ಇಡೀ ಬದುಕನ್ನು ತನ್ನ ಎಲ್ಲಾ ಅಯಾಮಗಳ ಜೊತೆ ಬಿರುಗಾಳಿಗೆ ಈಡು ಮಾಡಲಿದೆ. ಅವಳಿಗೆ ಅದು ಆಘಾತ ತಂದಿದೆ, ಆದರೆ ಅತ್ಯಂತ ಗಟ್ಟಿ ವ್ಯಕ್ತಿತ್ವದ ಅವಳಿಗೆ ಆ ಕಾರಣದಿಂದ ತಾನು ಏಕೆ ಚುನಾವಣೆಯಿಂದ ಹಿಂಜರೆಯಬೇಕು ಎನ್ನುವ ದಿಟ್ಟತನವೂ ಇದೆ.

ಅವಳೀಗ ಎರಡು ನೆಲೆಗಳಲ್ಲಿ ಯುದ್ಧ ಮಾಡಬೇಕು. ಗಂಡನ ಸಿಟ್ಟು, ಅಸಹಾಯಕತೆ, ಮಗಳ ಒತ್ತಿ ಹಿಡಿದ ರೋಷ, ವಿಮುಖತೆ ಮನೆಯಲ್ಲಿನ ಯುದ್ಧವಾದರೆ, ಇಡೀ ಪಕ್ಷ ಈಗ ಅವಳ ಕೈಬಿಟ್ಟಿದೆ. ಪತ್ರಿಕಾಗೋಷ್ಠಿಯಲ್ಲಿ ಅವಳಾಗಿಯೇ ಚುನಾವಣೆಯಿಂದ ಹಿಂದೆ ಸರಿಯಬೇಕು ಎನ್ನುವ ಒತ್ತಡವನ್ನು ಹಾಕುತ್ತಿದೆ. ಆದರೆ ಆಕೆ ಅದಕ್ಕೆ ತಯಾರಿಲ್ಲ. ಅದು ತನ್ನ ವೈಯಕ್ತಿಕ ಬದುಕು, ಇಲ್ಲಿಯವರೆಗೂ ಅಷ್ಟು ಮನ್ನಣೆ ಪಡೆದಿದ್ದ ತನ್ನ ಕಾರ್ಯಕ್ಷಮತೆಯನ್ನು ಇದೊಂದು ಘಟನೆ ತಳ್ಳಿಹಾಕಿಬಿಡುತ್ತದೆಯೆ ಎನ್ನುವುದು ಅವಳ ಪ್ರಶ್ನೆ. ಆದರೆ ಪಕ್ಷದಲ್ಲಿ ಮತ್ತು ಆಫೀಸಿನಲ್ಲಿ ಅದೆಲ್ಲದರ ಹೊರತಾಗಿಯೂ ಅವರಿಗೆ ಈಗ ಕಾಣುತ್ತಿರುವುದು ಅವಳಲ್ಲಿನ ‘ಹೆಣ್ಣು’ ಮಾತ್ರ. ಅಗ್ಗದ ಕಾಮೆಂಟ್‌ಗಳು, ‘ಅಕಸ್ಮಾತ್’ ಆದ ಸ್ಪರ್ಶಗಳು ಅವಳ ಮೈ ಸುಡುವಷ್ಟು ಸಿಟ್ಟೇರಿಸುತ್ತಿರುತ್ತವೆ. ಒಬ್ಬ ಸಂಭಾವ್ಯ ಮೇಯರ್‌ಗೆ ಹೀಗಾದರೆ ಫ್ಯಾಕ್ಟರಿಯಲ್ಲಿ ಕಾರ್ಮಿಕಳಾಗಿರುವ ಆನ್ ಪರಿಸ್ಥಿತಿ ಏನಾಗಿರಬಹುದು? ಅವಳ ಸುತ್ತಲಿನ ಗಂಡಸರು ಅವಳನ್ನು ಹೇಗೆ ನಡೆಸಿಕೊಂಡಿರಬಹುದು? ಇಡೀ ಫ್ಯಾಕ್ಟರಿಯಲ್ಲಿನ ಫೋನ್‌ಗಳಿಗೆ ಆ ಚಿತ್ರ ಹೋಗಿರುತ್ತದೆ. ಸುತ್ತಲಿನ ಕಣ್ಣುಗಳ ಲೇವಡಿ, ಅಸಹ್ಯವಾದ ಸನ್ನೆಗಳು, ಬೇಕೆಂದೇ ಸುತ್ತುವರೆಯುವ ಕೆಲವು ಗಂಡಸರು, ತಡೆಯಲಾರದೆ ಅವಳು ದೂರು ದಾಖಲಿಸಲೆಂದು ಆಡಳಿತ ಅಧಿಕಾರಿಯ ಬಳಿ ಹೋಗುತ್ತಾಳೆ. ಅವನ ಕಂಪ್ಯೂಟರಿನಲ್ಲೂ ಅದೇ ಚಿತ್ರವಿರುತ್ತದೆ…

ಆನ್‌ಳ ಅಕ್ಕ ಬೆಗೋ. ಅವಳಿಗೆ ತಂಗಿಯ ಸಾವನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಅವಳು ಎಲ್ಲವನ್ನೂ ಕೆದಕುತ್ತಾ ಹೋಗುತ್ತಾಳೆ. ಆನ್ ಹಿಂದೊಮ್ಮೆ ಒಬ್ಬ ಕೇಡಿಗನ ಜೊತೆ ಸಂಬಂಧದಲ್ಲಿರುತ್ತಾಳೆ. ಅದೊಂದು ವಿಷಮ ಮತ್ತು ವಿಷಪೂರಿತ ಸಂಬಂಧ. ಕಷ್ಟಪಟ್ಟು ಅದರಿಂದ ಹೊರ ಬಂದಿರುತ್ತಾಳೆ. ಆದರೆ ಅವನು ಅವಳನ್ನು ಕಳೆದುಕೊಳ್ಳಲೊಲ್ಲ. ಅದಕ್ಕಾಗಿಯೇ ಚಿತ್ರಗಳನ್ನು ಬಿಟ್ಟು ಅವಳನ್ನು ಬ್ಲಾಕ್ ಮೇಲ್ ಮಾಡುತ್ತಿರುತ್ತಾನೆ. ಹಾಗಾಗಿ ಇದು ರಿವೆಂಜ್ ಪೋರ್ನ್. ಅಲಿಸಿಯಾ ಎನ್ನುವ ಪೋಲೀಸ್ ಅಧಿಕಾರಿಣಿ ಈ ಕೇಸುಗಳನ್ನು ತನಿಖೆ ಮಾಡುತ್ತಿರುತ್ತಾಳೆ. ಬೇಗೋ ಅವಳಿಗೆ ನೆರವಾಗುತ್ತಾಳೆ. ಕಡೆಯವರೆಗೂ ಹೋರಾಡುತ್ತಾಳೆ. ಆದರೆ ಮಲೇನ್ ತನ್ನ ವೀಡಿಯೋದ ತನಿಖೆಯ ಪರವಾಗಿರುವುದಿಲ್ಲ. ಅವಳಿಗೆ ಈಗಾಗಲೇ ಎದ್ದಿರುವ ರಾಡಿಯನ್ನು ಸಂಭಾಳಿಸಿಕೊಂಡು. ತನ್ನ ಗುರಿಯನ್ನು ಜಾರದಂತೆ ನೋಡಿಕೊಳ್ಳಬೇಕಾಗಿದೆ. ಬಹುಶಃ ಬಹಳಷ್ಟು ಬುದ್ಧಿವಂತ, ಆತ್ಮವಿಶ್ವಾಸದ ಹೆಣ್ಣುಮಕ್ಕಳಂತೆ ಅವಳಿಗೂ ಸಹ ತಾನೊಬ್ಬ ವಿಕ್ಟಿಂ ಎನ್ನುವುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಅದು ದುರ್ಬಲತೆಯ ಕುರುಹು ಎನ್ನುವುದು ಅವಳ ಭಾವ. ತಾನು ಸಹ ಮೋಸಕ್ಕೊಳಗಾಗಬಲ್ಲೆ ಎನ್ನುವುದನ್ನು ಒಪ್ಪಿಕೊಳ್ಳಲಾಗದೆ ಹೋರಾಡುವುದು ಒಂದು ಶಾಪವೇ ಸರಿ. ಆದರೆ ಹಾಗೆ ಮಾತನಾಡಬೇಕಾದಾಗ ಮಾತನಾಡದೆ ಇರುವುದು ತನ್ನ ಮಗಳಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುವ ಬಗೆಯನ್ನು ಕುರಿತು ಯಾವ ಸಂದೇಶ ಕೊಡಬಹುದು ಎನ್ನುವುದು ಮಲೇನ್‌ಗೆ ನಂತರ ಅರ್ಥವಾಗುತ್ತದೆ. ಬಾಯಿ ಮುಚ್ಚಿಕೊಂಡು ಸಹಿಸುವುದರ ಮೂಲಕ ತನಗೇ ಗೊತ್ತಿಲ್ಲದಂತೆ ತಾನು ತನ್ನ ಮಗಳಿಗೆ ಮತ್ತು ಮಗಳಂತಹ ಹಲವರಿಗೆ ಮಾದರಿಯಾಗುತ್ತಿದ್ದೇನೆ ಎನ್ನುವುದು ಅವಳಿಗೆ ಗೊತ್ತಾಗುತ್ತದೆ. ಅವಳೂ ಕಂಪ್ಲೆಂಟ್ ದಾಖಲಿಸುತ್ತಾಳೆ. ಅದನ್ನುಬಾಯಿಬಿಟ್ಟು ಹೇಳಿ ವಾಚ್ಯವಾಗಿಸದೆ, ಕಥೆಯಲ್ಲೇ ಕಟ್ಟಿಕೊಟ್ಟಿರುವುದು ಸ್ಕ್ರಿಪ್ಟ್ ನ ಹಿರಿಮೆ.

ಈ ಸರಣಿಯನ್ನು ನೋಡುವಾಗ, ಕಥೆ ನಿರೂಪಣೆಯಷ್ಟೇ ಮುಖ್ಯವಾಗುವುದು ಇದೆಲ್ಲದರ ಒಳಗಿರುವ ಸಾಮಾಜಿಕ ರಾಜಕೀಯ. ಮಲೇನ್ ಪ್ರಿಯಕರನ ತಂದೆ ಇವಳು ಉಪಮೇಯರ್ ಆಗಿರುವ ಅದೇ ಪಟ್ಟಣದ ಮುಖ್ಯ ವ್ಯಾಪಾರಿಗಳಲ್ಲಿ ಒಬ್ಬ. ಅವರ್ಯಾರಿಗೂ ಹೆಣ್ಣೊಬ್ಬಳು ಮೇಯರ್ ಆಗುವುದು ಇಷ್ಟವಿಲ್ಲ. ಅವಳ ಟೇಪ್ ಹೊರಬಂದಾದ ಮೇಲೆ ಮಲೇನ್‌ಳ ಸಹೋದ್ಯೋಗಿಯೊಬ್ಬ ಅವಹೇಳನದ, ಲೋಲುಪತೆಯ ಧ್ವನಿಯಲ್ಲಿ ಹೇಳುತ್ತಾನೆ, ‘ಮೇಯರ್ ಸ್ಥಾನದಲ್ಲಿ ಗಂಡಿದ್ದರೆ ಒಂದು ಗ್ಲಾಸ್ ವಿಸ್ಕಿಯ ಜೊತೆಗೆ ಕುಳಿತು ಮಾತನಾಡಿ ಆ ವ್ಯಾಪಾರಿಗಳೆಲ್ಲಾ ಅವರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಆದರೆ ನಿನ್ನ ಜೊತೆ ಕೂತು ಡ್ರಿಂಕ್ ಮಾಡಿದರೆ….’ ಅಲಿಸೀಯಾ ಮಲೇನ್ ಕೇಸಿನ ವಿಚಾರಣೆಗೆಂದು ಇನ್ನೊಬ್ಬ ವ್ಯಾಪಾರಿಯ ಬಳಿಗೆ ಹೋಗುತ್ತಾಳೆ. ಮಲೇನ್ ಮೇಯರ್ ಆಗುವುದನ್ನು ತಪ್ಪಿಸಲೆಂದೇ ಆ ವೀಡಿಯೋ ರೆಕಾರ್ಡ್ ಮಾಡಲಾಗಿದೆ ಮತ್ತು ಹರಿಬಿಡಲಾಗಿದೆ ಎನ್ನುವುದು ಅವಳ ನಂಬಿಕೆ. ‘ಹೆಣ್ಣೊಬ್ಬಳು ಮೇಯರ್ ಆಗುವುದು ನಿಮಗಿಷ್ಟ ಇಲ್ಲ ಅಲ್ಲವಾ?’ ಎಂದು ಅವಳು ಆ ವ್ಯಾಪಾರಿಯನ್ನು ಕೇಳಿದಾಗ ಅವನ ಉತ್ತರ, ‘ಹೆಣ್ಣೆಂಬುದು ಆ ದೇವರು ಗಂಡಸರಿಗೆ ಕೊಟ್ಟ ಉಡುಗೊರೆ ಎಂದು ನಾನು ನಂಬುತ್ತೇನೆ’ ಎಂದು ಜೋಕ್ ಮಾಡಿದಂತೆ ನಗುತ್ತಾನೆ. ಇಲ್ಲಿ ಗಮನಿಸಬೇಕಾದ್ದು ಆ ಮಾತನ್ನು ಅವನು ಹೇಳುವುದು ಒಬ್ಬ ಸಂಭಾವ್ಯ ಮೇಯರ್ ಕುರಿತು, ಅದನ್ನು ಆತ ಹೇಳುವುದು ಮಹಿಳಾ ಪೋಲೀಸ್ ಆಫೀಸರ್ ಒಬ್ಬಳಿಗೆ!

ಕಥೆಯಲ್ಲಿ ಹಲವು ತಿರುವುಗಳಾಗಿ ಮಲೇನ್ ಪ್ರಿಯಕರನ ತಂದೆ ಒಮ್ಮೆ ಅವಳ ಮನೆಗೆ ಬಂದು ಅವಳ ಮೇಲೆ ನೇರವಾಗಿ ಆರೋಪ ಹೊರೆಸುತ್ತಾನೆ. ಅವನ ಪ್ರಕಾರ ತಪ್ಪು ಹೆಣ್ಣಿನದು, ಇದರ ಜವಾಬ್ದಾರಿ ಅವಳು ಹೊರಬೇಕು. ನೀನು ಮೇಯರ್ ಆಗುವುದು ನನಗಿಷ್ಟ ಇಲ್ಲ ಎನ್ನುವ ಅವನ ಪ್ರಕಾರ ಹೆಣ್ಣೊಬ್ಬಳು ಮೇಯರ್ ಆಗುವುದು ಕೋಟಾ ಪದ್ಧತಿಯಿಂದ ಮಾತ್ರ! ಬಲಿಪಶುವಿನ ಜೊತೆಗೆ ನಿಲ್ಲುವ ಬದಲು ಅವರನ್ನೇ ಆರೋಪಿಯನ್ನಾಗಿಸುವ ನೆಲೆ ಇದು. ಆನ್‌ಳ ಬದುಕಿನಲ್ಲಿ ಆದದ್ದೂ ಇದೇ, ಮಲೇನ್ ಬದುಕಿನಲ್ಲಿ ಆಗುತ್ತಿರುವುದೂ ಇದೇ. ಅವರ ಫೋಟೋ ದುರ್ಬಳಕೆ ಮಾಡಿಕೊಂಡವರಿಬ್ಬರೂ ಅಪರಾಧಿ, ಕ್ರಿಮಿನಲ್. ಕ್ರೂರಿ, ಕ್ರಿಮಿ ಎಲ್ಲಾ ಹೌದು, ಆದರೆ ಅದನ್ನು ಹಂಚಿಕೊಂಡವರು? ಅದನ್ನಿಟ್ಟುಕೊಂಡು ಆ ಹೆಣ್ಣುಮಕ್ಕಳನ್ನು ಅವಹೇಳನ ಮಾಡಿದವರು? ‘ಸುಲಭಕ್ಕೆ ಸಿಗುತ್ತಾಳೆ’ ಎಂದು ನೋಡಿದವರು? ಆನ್‌ಳ ಸಾವಿನ ಹೊಣೆಯಲ್ಲಿ ಅವರೆಲ್ಲರಿಗೂ ಪಾಲಿಲ್ಲವೆ? ಇದು ಒಂದು ಸಾಮಾಜಿಕ ಮತ್ತು ಸಾಮೂಹಿಕ ಹತ್ಯೆಯಾಗುವುದಿಲ್ಲವೆ? ಈ ಸರಣಿ ಇಂತಹ ವಿಷಯಗಳ ಬಗ್ಗೆ ಮಾತನಾಡುತ್ತದೆ.

ಚಿತ್ರದಲ್ಲಿ ತುಂಬಾ ಚೆನ್ನಾಗಿ ಕಟ್ಟಿದ ಇನ್ನೊಂದು ಪಾತ್ರ ಮಲೇನ್ ಪತಿಯದು. ಸೊಸೆಯ ಮೇಲೆ ತಪ್ಪೆಲ್ಲವನ್ನೂ ಹೊರೆಸುವ ಅವನ ತಾಯಿ ಅವನಿಗೆ ಜೊತೆಯಾಗಲೆಂದು ಇನ್ನೊಂದು ಹೆಣ್ಣನ್ನು ಹುಡುಕುತ್ತಾಳೆ. ಆಕೆ ಇವನನ್ನು ಮೆಚ್ಚಿಸಲೆಂದು, ‘ಪಾಪ ಆ ಘಟನೆ ಆದ ಮೇಲೆ ನಿನಗೆ ತುಂಬಾ ಕಷ್ಟವಾಗಿರಬೇಕಲ್ಲ?’ ಎನ್ನುತ್ತಾಳೆ. ಅವನು, ‘ಆದರೆ ನನಗಿಂತ ಹೆಚ್ಚಿನ ಕಷ್ಟ ಅವಳಿಗಾಯಿತು ಅಲ್ಲವಾ?’ ಎಂದು ಹೇಳುತ್ತಾ ಗಂಡು Vs ಹೆಣ್ಣು ಎನ್ನುವ ಬೇಲಿಯನ್ನು ಮುರಿಯುತ್ತಾನೆ. ನಂತರ ಹೆಂಡತಿಯೊಂದಿಗೆ ಅವನು ನಡೆದುಕೊಳ್ಳುವುದರಲ್ಲಿ ಆ ಸಂಬಂಧದ ಸೊಗಸಿದೆ.

ಈ ಚಿತ್ರಕ್ಕೆ ಕೆಲವು ಮಿತಿಗಳು ಸಹ ಇವೆ. ಚಿತ್ರ ಹೀಗೆ ವೈಯಕ್ತಿಕತೆಯ ಅತಿಕ್ರಮಣದಿಂದ ಹಾನಿಗೊಳಗಾದ ಹೆಣ್ಣುಮಕ್ಕಳ ಕಥೆಯನ್ನು ಮಾತ್ರ ಹೇಳುತ್ತದೆ. ಆ ಮಟ್ಟಿಗೆ ಚಿತ್ರ ಏಕಮುಖ ಎನ್ನುವುದು ನಿಜ. ಏಕೆಂದರೆ ಈ ರೀತಿಯ ಬ್ಲ್ಯಾಕ್ ಮೇಲ್ ಗಳಿಗೆ ಗಂಡು-ಹೆಣ್ಣು ಇಬ್ಬರೂ ಒಳಗಾಗಬಹುದು. ಇಬ್ಬರೂ ಬಲಿಪಶುಗಳಾಗಬಹುದು. ಆದರೆ ಇಲ್ಲಿ ಹೆಣ್ಣು ಅನುಭವಿಸುವ ಅವಮಾನ ಮತ್ತು ಅಪಮಾನ ಸಾರ್ವಜನಿಕವಾಗಿರುತ್ತದೆ. ಅದು ಆಕೆಯ ವ್ಯಕ್ತಿತ್ವದ ಎಲ್ಲವನ್ನೂ ಒಂದೇ ಬೀಸಿನಲ್ಲಿ ಪ್ರಶ್ನಾರ್ಹಗೊಳಿಸಿಬಿಡುತ್ತದೆ. ಅದನ್ನು ಈ ಚಿತ್ರ ಚೆನ್ನಾಗಿ ನಿರೂಪಿಸುತ್ತದೆ. ಆದರೆ ತನ್ನ ಅನುಕೂಲಕ್ಕಾಗಿ ಕಥೆಯನ್ನು ಅಂತ್ಯದಲ್ಲಿ ಬೇಕಾದಹಾಗೆ ಒಗ್ಗಿಸಿಕೊಂಡಿರುವುದರಿಂದ ಅಲ್ಲಿ ಇರಬೇಕಾದ ಸಂಘರ್ಷ ಕಾಣಿಸುವುದಿಲ್ಲ. ಇದರ ಹೊರತಾಗಿಯೂ ಈ ಸರಣಿಯ ಮಹಿಳಾ ಪಾತ್ರಗಳ ನಿರ್ವಹಣೆ ಅತ್ಯದ್ಭುತವಾಗಿ ಮೂಡಿಬಂದಿದೆ. ಒಂದೊಂದು ಪಾತ್ರದ ಸಣ್ಣ ಸಣ್ಣ ಏರಿಳಿತಗಳನ್ನೂ ಕಟ್ಟಿಕೊಡಲಾಗಿದೆ. ಮಲೇನ್ ಪಾತ್ರದ ಆರ್ದ್ರತೆ ಮತ್ತು ಅವಳ ಒಳಗಿನ ಎಲ್ಲಾ ಕಣ್ಣೀರನ್ನೂ ಒಪೇರಾದ ಒಂದು ದೃಶ್ಯ ಕಟ್ಟಿಕೊಟ್ಟು ಬಿಡುತ್ತದೆ.

ಅವಳು ಬಾಯಿಬಿಟ್ಟು ಮಾತಾಡಬೇಕು ಎಂದು ಒತ್ತಾಯಿಸುವ ಅಲಿಸಿಯಾ ತನ್ನ ಲೈಂಗಿಕತೆಯನ್ನುಇಡೀ ಜಗತ್ತಿನಿಂದ ಮುಚ್ಚಿಡಲು ಪ್ರೇಮವನ್ನೇ ಕಳೆದುಕೊಂಡು ಬಿಟ್ಟಿರುತ್ತಾಳೆ. ಆನ್ ಅಂತಹ ಟಾಕ್ಸಿಕ್ ಸಂಬಂಧಕ್ಕೆ ಏಕೆ ತನ್ನನ್ನು ತಾನು ತೆತ್ತುಕೊಂಡಳು ಎನ್ನುವುದನ್ನು ಮನಶ್ಯಾಸ್ತ್ರಜ್ಞೆ ವಿವರಿಸುವುದು ಹೀಗೆ : ಸಂಗಾತಿಯಿಲ್ಲದೆ ಒಂಟಿಯಾಗಿರುವುದನ್ನು ಆಕೆ ವೈಯಕ್ತಿಕ ಸೋಲು ಎಂದು ತಿಳಿದಿದ್ದಳು. ಅವನನ್ನು ಉಳಿಸಿಕೊಳ್ಳಲಿಕ್ಕಾಗಿ ಎಷ್ಟೋ ಹೊಂದಾಣಿಕೆಗಳಿಗೆ ಸಿದ್ಧವಾಗಿದ್ದಳು. ದೂರಾದರೂ ಮತ್ತೆಮತ್ತೆ ಅದೇ ಸಂಬಂಧಕ್ಕೆ ಹಿಂದಿರುಗುತ್ತಿದ್ದಳು.

ಇಂತಹುದೇ ಇನ್ನೊಂದು ಸಂದರ್ಭ, ಹೆಂಡತಿಯೊಡನೆ ಜಗಳವಾಡಿದ ಮಲೇನ್‌ಳ ಗಂಡ ಹೊರಗೆ ಹೋಗಿ ಸ್ನೇಹಿತರೊಡನೆ ಕುಡಿಯುತ್ತಾನೆ, ಹೆಂಡತಿಯನ್ನು ಬೈದುಕೊಳ್ಳುತ್ತಾನೆ, ಬೆಳಗ್ಗೆ ಎದ್ದಾಗ ತಾನು ಯಾರೋ ಹೆಣ್ಣಿನೊಡನೆ ಮಲಗಿರುವುದನ್ನು ನೋಡಿ ಬೆಚ್ಚುತ್ತಾನೆ. ಆದರೆ ಆ ಇಡೀ ಸಂದರ್ಭದಲ್ಲಿ ಕ್ಯಾಮೆರಾ ಆ ಹೆಣ್ಣಿನ ಮುಖವನ್ನು ತೋರಿಸುವುದಿಲ್ಲ, ಕಾಣುವುದು ಅವಳ ದೇಹ ಮಾತ್ರ, ಬಹುಶಃ ಆಗ ಅವನಿಗೂ ಅದು ಒಂದು ದೇಹ ಮಾತ್ರ ಆಗಿರುತ್ತದೆ? ಇಂತಹ ಹಲವಾರು ಸನ್ನಿವೇಶಗಳು ಸರಣಿಯುದ್ದಕ್ಕೂ ಇವೆ. ಒಮ್ಮೆ ಶುರು ಮಾಡಿದರೆ ಅದರಲ್ಲೇ ಮುಳುಗುವಂತೆ ಮಾಡುವ ಹಿಡಿತ ಸಹ ನಿರೂಪಣೆಗೆ ದಕ್ಕಿರುವುದರಿಂದ ಎಂಟು ಎಪಿಸೋಡ್ ಗಳ ಈ ಸರಣಿ ನೋಡುಗರನ್ನು ತನ್ನೊಳಗೆ ಒಳಗೊಳ್ಳುತ್ತದೆ.

LEAVE A REPLY

Connect with

Please enter your comment!
Please enter your name here