ಕರ್ನಾಟಕದ ಕುಖ್ಯಾತ ಸರಣಿ ಕೊಲೆಗಾರ ಸಯನೈಡ್ ಮೋಹನ್ ಜೀವನ ಆಧರಿಸಿ ಮಾಡಿ ಅದಕ್ಕೆ ಹಿಂದಿ ರಾಜ್ಯದ ಲೇಪನ ಕೊಟ್ಟಿದ್ದು, ಅಲ್ಲಿನ ಜಾತಿ ಬೇಧ, ಅಂತರ್ಜಾತಿ ವಿವಾಹ ಮುಂತಾದ ಸಮಸ್ಯೆಗಳನ್ನೂ ಸೇರಿಸಿರುವುದು ಒಟ್ಟಾರೆ ಹೊಸ ಮೆರುಗನ್ನೇ ನೀಡಿದಂತೆ ಭಾಸವಾಗುತ್ತದೆ. ‘ದಹಾಡ್‌’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ತಣ್ಣನೆಯ ರಕ್ತದ ಕೊಲೆಗಾರನೊಬ್ಬನ ವಿಲಕ್ಷಣ ಚಾಣಾಕ್ಷತನ ಮತ್ತು ಅಮಾನವೀಯ ಹತ್ಯೆಗಳ ಹಿನ್ನೆಲೆಯಲ್ಲಿ ಹೆಣೆದ ತನಿಖಾ ಹಿಂದಿ ಸರಣಿ ‘ದಹಾಡ್’ (ಗರ್ಜನೆ, ಚೀತ್ಕಾರ). ಅಂಜಲಿ (ಸೋನಾಕ್ಷಿ ಸಿನ್ಹಾ) ಮತ್ತು ದೇವೀಲಾಲ್ (ಗುಲ್ಶನ್‌ ದೇವಯ್ಯ) ರಾಜಾಸ್ಥಾನ ಮಾಂಡವಾದಲ್ಲಿ ಪೋಲಿಸ್ ಠಾಣೆಯ ಅಧಿಕಾರಿಗಳು. ಅಲ್ಲೇ ವಾಸಿಸಿ ಇಡೀ ರಾಜಾಸ್ಥಾನವನ್ನೇ ತನ್ನ ಕರಾಳ ಕೊಲೆಗಳಿಗೆ ವೇದಿಕೆ ಮಾಡಿದ ಆನಂದ್ (ವಿಜಯ್ ವರ್ಮ) ಒಬ್ಬ ಅಧ್ಯಾಪಕ.

ವೃತ್ತಿಯಲ್ಲಿ ಮತ್ತು ಮನೆಯಲ್ಲಿ ತನ್ನ ವರ್ತನೆಯಲ್ಲಿ ಅತಿ ವಿನಯವಂತ, ಸಜ್ಜನ ಪೌರನಂತೆ ವರ್ತಿಸುತ್ತಾನೆ. ಅವನ ಇನ್ನೊಂದು ಭಯಂಕರ ಮುಖವೆಂದರೆ – ಮದುವೆಯಾಗದ, ಸ್ವಲ್ಪ ವಯಸ್ಸಾಗುತ್ತಿರುವ ಅವಿವಾಹಿತೆ ಸ್ತ್ರೀಯರ ಸ್ನೇಹ ಬಳಸಿ ಅವರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮನೆಯಿಂದ ಓಡಿಸಿಕೊಂಡು ಹೋಗಿ ಎಲ್ಲಿಯೋ ತಂಗಿ ಮೊದಲ ರಾತ್ರಿಯ ನಂತರ ಆ ಅಮಾಯಕಿಯರಿಗೆ ಸಯನೈಡ್ ಪಿಲ್ಸ್ ಉಣ್ಣಿಸಿ ಕೊಲೆಗಯ್ಯುತ್ತಿರುತ್ತಾನೆ. ಅವನು ಆಯ್ಕೆ ಮಾಡಿಕೊಂಡ ಯುವತಿಯರ ಮನೆಯವರು ಅವಮಾನ ಸಂಭವದ ದೃಷ್ಟಿಯಿಂದ ದೂರು ಕೊಟ್ಟಿರುವುದಿಲ್ಲ. ಆ ಬಲಿಪಶುಗಳ ಮೊಬೈಲ್ ಉಪಯೋಗಿಸಿಯೇ ಮಿಕ್ಕ ಯುವತಿಯರ ಜೊತೆ ಸಂಪರ್ಕ ಮಾಡಿ ತನ್ನ ನಿಜ ಪರಿಚಯವನ್ನು- ತಾನೆಸೆದ 29 ಕೊಲೆಗಳವರೆಗೂ ಮನೆಯವರಿಂದಲೂ, ಸಹೋದ್ಯೋಗಿಗಳಿಂದಲೂ ಮತ್ತು ನಿಶ್ಚಿತವಾಗಿ ಪೋಲೀಸರಿಂದಲೂ ಮುಚ್ಚಿಡುವಲ್ಲಿ ಸಫಲವಾಗುತ್ತಾನೆ.

ಆದರೆ ಆ ಬಗ್ಗೆ ಪತ್ತೇದಾರಿ ಆರಂಭಿಸಿದ ಸಮರ್ಥ ನಾಯಕಿ ಅಂಜಲಿ ಬಡಪೆಟ್ಟಿಗೆ ಅವನ ಜಾಡನ್ನು ಬಿಡುವವಳಲ್ಲ. ಇಡೀ 8 ಕಂತುಗಳ ಸರಣಿ ಈ ಪತ್ತೆದಾರಿ ತನಿಖೆ ಮತ್ತು ಸರಣಿ ಕೊಲೆಗಾರನ ಯಶಸ್ಸಿನ ನಡುವಿನ ಬೆಕ್ಕು – ಇಲಿ ಆಟವೇ ಆಗಿ ವೀಕ್ಷಕರ ಗಮನ ಸೆಳೆದಿಟ್ಟುಕೊಂಡಿದೆ. ಕ್ಲೈಮ್ಯಾಕ್ಸ್ ಚೆನ್ನಾಗಿ ಮೂಡಿಬಂದಿದೆ. ರಾಜಾಸ್ಥಾನ ಮರಳುಗಾಡಿನ ಸಹಜ ಚಿತ್ರಣ ಇದೆ.

ಈ ಮುಖ್ಯಧಾರೆ ಕಥೆಯ ಮಗುಲ್ಲಲೇ ಅಲ್ಲಲ್ಲಿ ಆಯಾ ಪಾತ್ರಗಳ ಕೌಟುಂಬಿಕ ಸಮಸ್ಯೆಗಳು, ಅವರ ಅನೈತಿಕ ಸಂಬಂಧಗಳು ಇತ್ಯಾದಿ ಉಪಕಥೆಗಳ ಸಮಸ್ಯೆಗಳು ಬಂದು ಹೋಗಿ ಕೊನೆಯಲ್ಲಿ ಎಲ್ಲವೂ ಒಂದು ಅಂತ್ಯ ಕಾಣುತ್ತವೆ. ಆದರೆ ಅವು ಕಥೆಯನ್ನು ಎಲ್ಲೋ ಎಳೆದಾಡಿತೇನೋ ಎಂದು ಮಧ್ಯೆ ಮಧ್ಯೆ ಅನಿಸುತ್ತದೆ. ಇದು ಕರ್ನಾಟಕದ ಕುಖ್ಯಾತ ಸರಣಿ ಕೊಲೆಗಾರ ಸಯನೈಡ್ ಮೋಹನ್ ಜೀವನ ಆಧರಿಸಿ ಮಾಡಿ ಅದಕ್ಕೆ ಹಿಂದಿ ರಾಜ್ಯದ ಲೇಪನ ಕೊಟ್ಟಿದ್ದು, ಅಲ್ಲಿನ ಜಾತಿ ಬೇಧ, ಅಂತರ್ಜಾತಿ ವಿವಾಹ ಮುಂತಾದ ಸಮಸ್ಯೆಗಳನ್ನೂ ಸೇರಿಸಿರುವುದು ಒಟ್ಟಾರೆ ಹೊಸ ಮೆರುಗನ್ನೇ ನೀಡಿದಂತೆ ಭಾಸವಾಗುತ್ತದೆ. ವಿಲಕ್ಷಣ ಕೊಲೆಗಳ ಈ ಸರಣಿ ಅಳ್ಳೆದೆಯವರಿಗೆ ಕೊಂಚ ಭಯ ತರುವ ಸಾಧ್ಯತೆಯೂ ಇದೆ. ಪೋಲೀಸರಾಗಿ ಸೋನಾಕ್ಷಿ ಮತ್ತು ಗುಲ್ಶನ್ ದೇವಯ್ಯ ಮತ್ತು ಕೊಲೆಗಾರನಾಗಿ ವಿಜಯ್ ವರ್ಮ ಅಭಿನಯ ನೈಜ ಮತ್ತು ಶ್ಲಾಘನೀಯ. ಜೋಯಾ ಅಖ್ತರ್ ಮತ್ತು ರೀಮಾ ಕಾಟ್ಗಿ ಸರಣಿಯ ಬರವಣಿಗೆ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ‘ದಹಾಡ್‌’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here