ಪಾತ್ರಗಳನ್ನು ಕಟ್ಟಿದ ರೀತಿ, ಚಿತ್ರದ ಸಂಭಾಷಣೆ, ನಿರೂಪಣಾ ಶೈಲಿಯಲ್ಲಿ ‘ತೇಜಸ್ವಿತನ’ ಕಾಣಿಸುತ್ತದೆ. ನಿರ್ದೇಶಕ ಶಶಾಂಕ್ ಸೋಗಾಲ್ ಮತ್ತು ಅವರ ತಂಡ ಕೃತಿಯ ಆಶಯ ಈಡೇರಿಸಿದೆ. ಕುಟುಂಬ ಸಮೇತರಾಗಿ, ವಿಶೇಷವಾಗಿ ಮಕ್ಕಳೊಂದಿಗೆ ನೋಡಬೇಕಾದ ಸಿನಿಮಾ ‘ಡೇರ್‌ಡೆವಿಲ್ ಮುಸ್ತಾಫಾ’.
ಸಾಹಿತ್ಯ ಕೃತಿಯೊಂದನ್ನು ತೆರೆಗೆ ಅಳವಡಿಸುವುದು ಯಾವತ್ತಿಗೂ ಸವಾಲೇ. ಅದರಲ್ಲೂ ಈಗ ಓಟಿಟಿ ಎನ್ನುವ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾದ ಭಾಷೆ, ನಿರೂಪಣೆಯೇ ಬದಲಾದ ಸಂದರ್ಭದಲ್ಲಿ ನಿರ್ದೇಶಕರು ಅದು ರಿಸ್ಕ್ ಎಂದೇ ಭಾವಿಸುತ್ತಾರೆ. ಆದರೆ ನಿರ್ದೇಶಕ ಶಶಾಂಕ್ ಸೋಗಾಲ್ ‘ಡೇರ್‌ಡೆವಿಲ್ ಮುಸ್ತಾಫಾ’ ಚಿತ್ರವನ್ನು ಸರಳವಾಗಿ ಮತ್ತು ಅಷ್ಟೇ ಆಕರ್ಷಕವಾಗಿ ನಿಭಾಯಿಸಿದ್ದಾರೆ. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕತೆಯಿದು. ಬಹುಶಃ ತೇಜಸ್ವಿಯವರು ಇಂದು ಸಿನಿಮಾ ವೀಕ್ಷಿಸಿದ್ದಿದ್ದರೆ, ತಮ್ಮ ಎಂದಿನ ಶೈಲಿಯಲ್ಲಿ ‘ಚೆನ್ನಾಗಿ ಮಾಡಿದಿಯಾ ಕಣಯ್ಯ…’ ಎಂದು ನಿರ್ದೇಶಕರ ಬೆನ್ನು ತಟ್ಟುತ್ತಿದ್ದರು ಎನಿಸುತ್ತದೆ.
ನಿರ್ದೇಶಕ ಶಶಾಂಕ್ ಸೋಗಾಲ್ ಅವರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ದೊಡ್ಡ ಅಭಿಮಾನಿ. ಕೃತಿಕಾರ ತಮ್ಮ ಕತೆಯ ಮೂಲಕ ಓದುಗರಿಗೆ ಏನು ಹೇಳಲು ಹೊರಟಿದ್ದಾರೆ ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟತೆಯಿದೆ. ಇನ್ನು ಅವರಂತೆಯೇ ತೇಜಸ್ವಿಯವರನ್ನು ಓದಿಕೊಂಡು ಬೆಳೆದ ಸಮಾನಮನಸ್ಕರು ಸಿನಿಮಾಗೆ ಹಣ ಹಾಕಿದ್ದಾರೆ. ಕೃತಿ, ಕೃತಿಕಾರನನ್ನು ತಾವು ಗ್ರಹಿಸಿದ ರೀತಿ, ಅಲ್ಲದೆ ತೇಜಸ್ವಿಯವರ ಅಭಿಮಾನಿಗಳು ಸಿನಿಮಾಗೆ ಹಣ ಹಾಕಿದ್ದಾರೆ ಎನ್ನುವ ನೈತಿಕ ಜವಾಬ್ದಾರಿ ನಿರ್ದೇಶಕರಲ್ಲಿ ಜಾಗ್ರತವಾಗಿತ್ತು ಎನಿಸುತ್ತದೆ. ಹಾಗಾಗಿ ಪಾತ್ರಗಳನ್ನು ಕಟ್ಟಿದ ರೀತಿ, ಚಿತ್ರದ ಸಂಭಾಷಣೆ, ನಿರೂಪಣಾ ಶೈಲಿಯಲ್ಲಿ ‘ತೇಜಸ್ವಿತನ’ ಕಾಣಿಸುತ್ತದೆ. ನಿರ್ದೇಶಕ ಶಶಾಂಕ್ ಮತ್ತು ಅವರ ತಂಡ ಕೃತಿಯ ಆಶಯವನ್ನು ಈಡೇರಿಸಿದೆ.
ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನೇ ಹಾಸ್ಯ, ವಿಡಂಬನೆಯೊಂದಿಗೆ ದಾಟಿಸುವುದು ತೇಜಸ್ವಿಯವರ ಶೈಲಿ. ಸಿನಿಮಾ ಮಾಡುವಾಗ ನಿರ್ದೇಶಕ ಶಶಾಂಕ್ ಈ ಬಗ್ಗೆ ಎಚ್ಚರ ವಹಿಸಿದ್ದಾರೆ. ಚಿತ್ರಿಸುವ ಮುನ್ನ ಪಾತ್ರಧಾರಿಗಳಿಗೆ ಪಾತ್ರಗಳನ್ನು ಅರ್ಥ ಮಾಡಿಸಿದ್ದಾರೆ. ಹಾಗಾಗಿ ಮುಖ್ಯಪಾತ್ರಗಳಲ್ಲಿನ ಹುಡುಗರು ಸೊಗಸಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಅವರಿಗೆ ಮೊದಮೊದಲ ಪ್ರಯತ್ನ ಎಂದು ಎಲ್ಲೂ ಅನಿಸೋಲ್ಲ. ಹುಡುಗರೊಂದಿಗೆ ಅನುಭವಿ ಕಲಾವಿದರೂ ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ರಂಗಭೂಮಿ ಹಿನ್ನೆಲೆಯ ಈ ಕಲಾವಿದರು ಪಾತ್ರಗಳಿಗೆ ಜೀವ ತುಂಬಿ ಚಿತ್ರವನ್ನು ಚೆಂದಗಾಣಿಸಿದ್ದಾರೆ. ಸಿನಿಮಾದ ಆಶಯಕ್ಕೆ ಪೂರಕವಾಗಿ ದುಡಿದ ಸಂಗೀತ ನಿರ್ದೇಶಕ, ಛಾಯಾಗ್ರಹಕ ಸೇರಿದಂತೆ ಇತರೆಲ್ಲಾ ತಂತ್ರಜ್ಞರಿಗೂ ಶುಭಾಶಯ.
ಸಾಧ್ಯವಾದಷ್ಟೂ ಕೆಡುಕಿನಿಂದ ದೂರವೇ ಇದ್ದು, ಒಳಿತನ್ನೇ ಆಶಿಸುವ ಪ್ರಾಂಶುಪಾಲರ ತೂಕದ ಪಾತ್ರವನ್ನು ನಟ ಮಂಡ್ಯ ರಮೇಶ್ ಚೆನ್ನಾಗಿ ನಿಭಾಯಿಸಿದ್ದಾರೆ. ನಿರ್ಲಿಪ್ತ ವ್ಯಕ್ತಿತ್ವದ ಪ್ಯೂನ್ ಆಗಿ ಮೈಸೂರು ಆನಂದ್ ಅವರು ಮತ್ತೊಂದು ಅಚ್ಚರಿ! ತಿಂಗಳುಗಳ ಹಿಂದೆ ತೆರೆಕಂಡ ‘ಗುರು ಶಿಷ್ಯರು’ ಚಿತ್ರದಲ್ಲಿ ನಿರ್ದೇಶಕರು ಖೋಖೋ ಆಟವನ್ನು ಎಕ್ಸೈಟಿಂಗ್ ಆಗಿ ಕಟ್ಟಿಕೊಟ್ಟಿದ್ದರು. ‘ಡೇರ್‌ಡೆವಿಲ್ ಮುಸ್ತಾಫಾ’ ಚಿತ್ರದ ಕ್ರಿಕೆಟ್‌ನಲ್ಲಿ ಅದೇ ಎಕ್ಸೈಟ್‌ಮೆಂಟ್ ಸಿಗುತ್ತದೆ. ತೇಜಸ್ವಿಯವರ ಕತೆಯಲ್ಲಿನ ಸೂಕ್ಷ್ಮವನ್ನು ನಿರ್ದೇಶಕ ಶಶಾಂಕ್ ಅಷ್ಟೇ ಸೆನ್ಸಿಬಲ್ ಆಗಿ ತೆರೆಗೆ ತಂದಿದ್ದಾರೆ. ಇಂಥದ್ದೊಂದು ಸದಾಶಯದ ಸಿನಿಮಾದ ಬೆಂಬಲಕ್ಕೆ ನಿಂತು ಪ್ರೊಮೋಟ್ ಮಾಡುತ್ತಿರುವ ನಟ ಧನಂಜಯ ಅವರಿಗೂ ಅಭಿನಂದನೆ ಸಲ್ಲಬೇಕು. ಒಳಿತನ್ನೇ ಆಲೋಚಿಸೋಣ, ಸಾಮರಸ್ಯದಿಂದ ಬಾಳೋಣ ಎನ್ನುವ ಸಿನಿಮಾದ ವಸ್ತು ಇಂದಿನ ತುರ್ತು. ಕುಟುಂಬ ಸಮೇತರಾಗಿ, ವಿಶೇಷವಾಗಿ ಮಕ್ಕಳೊಂದಿಗೆ ನೋಡಬೇಕಾದ ಸಿನಿಮಾ ‘ಡೇರ್‌ಡೆವಿಲ್ ಮುಸ್ತಾಫಾ’.