ಕನ್ನಡ ಗೀತೆಗಳನ್ನು ನಮ್ಮ ನಾಡಿನ ಭಾಷೆ, ಸಂಸ್ಕೃತಿಯ ಜಾಯಮಾನಕ್ಕೆ ಒಗ್ಗಿಸಿದ ಮಾತ್ರದಿಂದಲೇ ಪಿ.ಬಿ. ಶ್ರೀನಿವಾಸ್ ಮುಖ್ಯರಾಗುವುದಿಲ್ಲ. ಕನ್ನಡ ಚಿತ್ರಗೀತೆಗಳನ್ನು ಮನೆಮನೆಗೂ ಮುಟ್ಟಿಸಿ ಕನ್ನಡ ಚಿತ್ರರಂಗವನ್ನು ವಿಸ್ತರಿಸಿದ ಕಾರಣಕ್ಕೂ ಅವರು ಬಹುಮುಖ್ಯರೆನಿಸುತ್ತಾರೆ. ಇಂದು (ಸೆಪ್ಟೆಂಬರ್‌ 22) ಪಿಬಿಎಸ್‌ ಜನ್ಮದಿನ. ಡಾ.ಕೆ.ಪುಟ್ಟಸ್ವಾಮಿ ಅವರ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೃತಿ ‘ಸಿನಿಮಾಯಾನ’ದಲ್ಲಿನ ಅನನ್ಯ ಗಾಯಕ ಪಿಬಿಎಸ್‌ ಕುರಿತ ಆಪ್ತ ಬರಹ ಇಲ್ಲಿದೆ.

ಚಿತ್ರಗೀತೆಗಳು ಒಂದು ಚಿತ್ರದ ಆಚೆಗೂ ಬೆಳೆದು ನಿಂತು ಜನಪ್ರಿಯವಾಗುವ ವಿದ್ಯಮಾನ ಮತ್ತು ಸಾಂಸ್ಕೃತಿಕ ರಾಯಭಾರಿಯ ಕಾರ್ಯನಿರ್ವಹಿಸುವುದು ನಡೆದುಬಂದಿದೆ. ಹಿನ್ನೆಲೆ ಗಾಯನವು ಚಿತ್ರಗೀತೆಗೆ ‘ಪ್ರಾಣ’ ನೀಡುವ ಕಾಯಕ. ಚಿತ್ರದ ಪಾತ್ರ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಭಾವನೆಗಳನ್ನು ಹೊಮ್ಮಿಸಬೇಕಾದ ದೊಡ್ಡ ಹೊಣೆಗಾರಿಕೆ ಗಾಯಕರಿಗಿದೆ. ಜೊತೆಗೆ ಒಂದು ಭಾಷೆಯ ಗೀತೆ ಆ ನಾಡಿನ ಸಂಸ್ಕೃತಿಯ ಪ್ರತಿನಿಧಿಯೂ ಹೌದು. ಒಂದು ಗೀತೆಯ ಸಾಹಿತ್ಯ, ರಾಗ, ಧಾಟಿ ಮತ್ತು ಧ್ವನಿಯಲ್ಲಿ ಆಯಾ ಭಾಷೆಯ ಸಂಸ್ಕೃತಿಯ ಎಳೆಗಳನ್ನು ಬಿಂಬಿಸಿದಾಗ ಮಾತ್ರ ಅದು ಆ ಭಾಷಾಸಂಸ್ಕೃತಿಯ ಅನನ್ಯ ಸ್ವರೂಪವನ್ನು ಪಡೆಯುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಪಿ.ಬಿ. ಶ್ರೀನಿವಾಸ್‌ರವರು ನಮ್ಮ ಕನ್ನಡದ ಸಿರಿಕಂಠ ಎನ್ನಲಡ್ಡಿಯಿಲ್ಲ.

ಕನ್ನಡ ಗೀತೆಗಳನ್ನು ನಮ್ಮ ನಾಡಿನ ಭಾಷೆ, ಸಂಸ್ಕೃತಿಯ ಜಾಯಮಾನಕ್ಕೆ ಒಗ್ಗಿಸಿದ ಮಾತ್ರದಿಂದಲೇ ಪಿ.ಬಿ. ಶ್ರೀನಿವಾಸ್ ಮುಖ್ಯರಾಗುವುದಿಲ್ಲ. ಕನ್ನಡ ಚಿತ್ರಗೀತೆಗಳನ್ನು ಮನೆಮನೆಗೂ ಮುಟ್ಟಿಸಿ ಕನ್ನಡ ಚಿತ್ರರಂಗವನ್ನು ವಿಸ್ತರಿಸಿದ ಕಾರಣಕ್ಕೂ ಅವರು ಬಹುಮುಖ್ಯರೆನಿಸುತ್ತಾರೆ. ಅರವತ್ತರ ದಶಕದಲ್ಲಿ ಕನ್ನಡ ಚಿತ್ರಗಳನ್ನು ನೋಡದ ಜನರಿದ್ದಿರಬಹುದು. ಆದರೆ ಪಿ.ಬಿ. ಶ್ರೀನಿವಾಸ್‌ರವರ ಸೋಲೋ (Solo) ಹಾಡುಗಳನ್ನು, ಯುಗಳ ಗೀತೆಗಳನ್ನು ಕೇಳದ ಜನರಿದ್ದಿರಲಾರರು. ಅರವತ್ತರ ದಶಕವು ಆಗತಾನೆ ಸಿನಿಮಾ ಎಂಬ ಕಲಾಪ್ರಕಾರ ಮೆಲ್ಲಮೆಲ್ಲನೆ ಕನ್ನಡಿಗರ ಮನಸ್ಸನ್ನು ಆವರಿಸಿಕೊಳ್ಳುತ್ತಿದ್ದ ಕಾಲ. ಪ್ರಧಾನವಾಗಿ ಚಿತ್ರಗೀತೆಗಳು ಕನ್ನಡ ಚಿತ್ರಗಳ ಪ್ರಚಾರದ ಸಾರಥ್ಯವನ್ನು ವಹಿಸಿಕೊಂಡಿದ್ದವು. ಕನ್ನಡ ಚಿತ್ರಗೀತೆಗಳು ಶ್ರೀನಿವಾಸರ ಕೊರಳಿಂದ ಹೊರಟು ಕನ್ನಡಿಗರನ್ನು ತಲುಪಿದ ವಿಧಾನವೇ ಒಂದು ಅದ್ಭುತ ಸಾಂಸ್ಕೃತಿಕ ವಿದ್ಯಮಾನ.

ಪಿ.ಬಿ.ಎಸ್.ರವರು ಹಾಡಿದ ಕನ್ನಡ ಗೀತೆಗಳಲ್ಲಿನ ‘ಕನ್ನಡ ಸಂಸ್ಕೃತಿ’ ಅಥವಾ ಕನ್ನಡತವನ್ನು ವಿವರಿಸಿ ಎಂದರೆ ಉತ್ತರಿಸುವುದು ಕಷ್ಟ. ಪ್ರತಿಯೊಂದು ಭಾಷೆಗೂ ಅದರದೇ ಆದ ಧ್ವನಿ, ಲಯ, ಲಾಸ್ಯ ಮತ್ತು ಭಾವನಾ ಸೂಕ್ಷ್ಮತೆ (Nuance) ಇರುತ್ತವೆ. ಅದು ಒಂದು ಸಹಜವಾಗಿ ಭಾಷೆಯ ಮತ್ತು ಆ ಭಾಷೆಯ ಪ್ರಾದೇಶಿಕ ರೂಪಗಳು ಅಥವಾ ಶೈಲಿಗಳ ವಿಕಾಸದ ಜೊತೆಯಲ್ಲಿ ಪಡೆಯುವ ವಿಶಿಷ್ಟತೆ – ಇವೆಲ್ಲ ಒಟ್ಟಾಗಿ ಕೂಡಿಯೇ ಭಾಷೆಗೊಂದು ಬನಿ ಅಥವಾ ಸಾರ ಬರುತ್ತದೆ. ಭಾಷೆಯನ್ನು ಕೇಳಿಸಿಕೊಂಡಾಗ ಮತ್ತು ಆ ಭಾಷೆಯ ಸಾಹಿತ್ಯವನ್ನು ಓದಿದಾಗ ಅದು ಆ ಸಂಸ್ಕೃತಿಯ ರೂಪವೇ ಅಥವಾ ಅದಕ್ಕೆ ಅನ್ಯವೇ ಎಂದು ತಿಳಿಯುತ್ತದೆ. ಸೌಂದರ್‌ರಾಜನ್ ಅವರು ತಮಿಳಿನಲ್ಲಿ ಹಾಡಿದಾಗ ಅದು ತಮಿಳು ದನಿಯ ಕನ್ನಡ ಹಾಡಾಗಿ ಕೇಳಿಸುತ್ತದೆ. ಘಂಟಸಾಲ ಅವರಲ್ಲಿ ತೆಲುಗು ಅಥವಾ ಆಂಧ್ರ ಸಂಸ್ಕೃತಿಯ ಛಾಯೆ ಕಾಣಿಸುತ್ತದೆ. ಹಾಗಾಗಿ ತಮಿಳು ಭಾಷೆಯಲ್ಲಿ ಸೌಂದರ್‌ರಾಜನ್ ಹಾಡಿದಾಗ ಕಾಣುವ ನಮಗೆ, ‘ಪ್ರೇಮಮಯಿ’ ಚಿತ್ರದಲ್ಲಿ ‘ಕಂದನಕರುಳ ಚಿವುಟಿ ಕಣ್ಣ ನೀರ ತಂದನೆ’ ಎಂಬ ಸಾಲು ‘ಕಂದನೈ ಕರುಳನ್ ಚಿವುಂಟಿ ಕಣ್ಣನ್ ನೀರ್ ತಂದನೆ’ ಎಂಬಂತೆ ಕೇಳಿಸುತ್ತದೆ. ಕನ್ನಡದ ಪ್ರಖ್ಯಾತ ಯುಗಳ ಗೀತೆ ‘ಮೆಲ್ಲುಸಿರೇ ಸವಿಗಾನ’ ಹಾಡಿನಲ್ಲಿ ಘಂಟಸಾಲ ಅವರು ‘ಮಧು ಮಂಚಕೆ ವಿಧಿ ಹಂಚಿಕೆ ಅದಕೇಕೆ ಅಂಜಿಕೆ ಶಂಕೆ’ ಎಂದು ಉಚ್ಚರಿಸುವುದು ಕೇಳುತ್ತದೆ. ‘ಶಂಕೆ’ ಎಂಬುದು ‘ಶೆಂಕೆ’ಯಾದಂತೆ, ತೆಲುಗಿನ ಭಾಷಾಜಾಯಮಾನಕ್ಕೆ ತಕ್ಕಂತೆ ಅವರ ಅಮೋಘ ಕಂಠದಲ್ಲಿ ‘ಸಿವಶಂಕರಿ’ (ಶಿವಶಂಕರಿ ಬದಲು), ಈಸ್ವರ (ಈಶ್ವರ ಬದಲು) ಮುಂತಾದ ಪದಗಳಲ್ಲಿ ತೆಲುಗಿನ ಛಾಯೆಯನ್ನು ಗುರುತಿಸಬಹುದು. ಇದೇ ಛಾಯೆಗಳನ್ನು ಸಿ.ಎಸ್. ಜಯರಾಮನ್, ಸೀರ್ಕಾಳಿ ಗೋವಿಂದರಾಜನ್, ಪಿಠಾಪುರಂ ನಾಗೇಶ್ವರರಾವ್ ಅವರ ಉಚ್ಛಾರಣೆಯಲ್ಲೂ ಗುರುತಿಸಬಹುದು. (ಹಿಂದೆ ಚೆಂಬೈ ಭಾಗವತರ್ ಹಾಡಿದ ಪುರಂದರದಾಸರ ಪದದ ಒಂದು ಚರಣದಲ್ಲಿ ಹುಡುಕಿದರೂ ಕನ್ನಡದ ಒಂದು ಪದವೂ ಸಿಗಲಿಲ್ಲವೆಂದು ತಮಾಷೆಯಾಗಿ ವಿಮರ್ಶಕರೊಬ್ಬರು ಹೇಳುತ್ತಿದ್ದರು. ಪುರಂದರದಾಸರ ‘ಚಿಂತೆಯಾತಕೋ ರಂಗಾ ಭ್ರಾಂತಿಯಾತಕೋ’ ಸಾಲು ಭಾಗವತರ ಬಾಯಲ್ಲಿ ‘ಜಿಂದೆಯಾದಗೋ ರಂಕಾ ಬ್ರಾಂದಿಯಾದಗೋ’ ಆಗಿ ರೂಪಾಂತರ ಪಡೆದಿತ್ತಂತೆ!) ಇವುಗಳನ್ನು ನಾನು ಲೋಪವೆಂದು ಆರೋಪ ಮಾಡುತ್ತಿಲ್ಲ. ಬದಲಾಗಿ ಆ ಗಾಯಕರ ಕಂಠ ಆಯಾ ಭಾಷಾಸಂಸ್ಕೃತಿಗೆ ನಿಷ್ಠವಾದ ಫಲ ಮತ್ತು ಕನ್ನಡ ಭಾಷೆಯ ಸೂಕ್ಷ್ಮತೆಗಳ ಪರಿಚಯದ ಅಭಾವ ಎಂದು ಹೇಳಬಹುದು. ಇಲ್ಲದಿದ್ದಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ಲತಾ ಮಂಗೇಷ್ಕರ್ ಅವರು ‘ಬೆಳ್ಳನೆ ಬೆಳಗಾಯಿತು’ ಸಾಲಿನ ‘ಬೆಳ್ಳನೆ’ ಎಂಬ ಪದವನ್ನು ‘ಬೆಳ್ಳನೆ’ ‘ಬೆಳ್ಳಾನೆ’ ‘ಬೆಳನೆ’ ಮತ್ತು ‘ಬೆಳ್ಳನೆ’ ಎಂದು ನಾಲ್ಕು ವಿಧದಲ್ಲಿ ಉಚ್ಚರಿಸಿರುವುದಕ್ಕೆ ಮತ್ತು ಸೋನು ನಿಗಂರವರು ‘ಹನಿಸುತಿದೆ ಯಾಕೋ ಇಂದು’ ಎಂದು ಭಾವ ವ್ಯಂಜನ ಮಾಡಿರುವುದಕ್ಕೆ ಬೇರೆ ವಿವರಣೆ ಸಾಧ್ಯವೇ ಇಲ್ಲ.

ಈ ಹಿನ್ನೆಲೆಯಲ್ಲಿ ನೋಡಿದಾಗ ಪಿ.ಬಿ. ಶ್ರೀನಿವಾಸ್‌ರವರದು ಅಪ್ಪಟ ಕನ್ನಡ ಕಂಠ. ಕನ್ನಡ ಸಂಸ್ಕೃತಿಯ ಪ್ರಾತಿನಿಧಿಕ ಧ್ವನಿ. ಯಾಕೆಂದರೆ ಅವರ ಕನ್ನಡ ಹಾಡುಗಳಲ್ಲಿ ಎಲ್ಲಿಯೂ ತೆಲುಗು ಛಾಯೆಯನ್ನು ಗುರುತಿಸಲಾಗದು. ಅಷ್ಟೇ ಏಕೆ ಡಾ.ರಾಜ್‌ಕುಮಾರ್ ಅವರಿಗೆ ಶ್ರೀನಿವಾಸರ ಕಂಠವು ಹೊಂದಿಕೊಂಡ ಅನನ್ಯ ಸೊಬಗು ಅವರದು ನಿಜವಾದ ಕನ್ನಡದ ದನಿಯೆಂಬುದು ಸಂದೇಹಕ್ಕೆಡೆಯಿಲ್ಲದೆ ರುಜುವಾತು ಮಾಡಿದೆ.

ವಾಕ್ಚಿತ್ರದ ಆರಂಭ ಕಾಲದಲ್ಲಿ ನಟರೇ ತಮ್ಮ ಹಾಡುಗಳನ್ನು ಹಾಡಬೇಕಿತ್ತು. ರಂಗಭೂಮಿಯ ವಸ್ತುಗಳೇ ಚಿತ್ರಗಳಾದಾಗ ರಂಗಗೀತೆಗಳೇ ಚಿತ್ರಗೀತೆಗಳ ರೂಪವನ್ನು ಪಡೆಯುತ್ತಿದ್ದವು. ಆದರೆ ತಾಂತ್ರಿಕ ನೆರವು ಹೆಚ್ಚಾಗಿ ದೊರಕಿದಂತೆ ಚಿತ್ರಗೀತೆಗಳಲ್ಲಿ ‘ಆರ್ಕೆಸ್ಟೇಷನ್’ ಕ್ರಮೇಣ ಸ್ಥಾನಗಳಿಸಿತು. ಭಾರತೀಯ ಚಲನಚಿತ್ರ ಸಂಗೀತ (ಹಿನ್ನೆಲೆ ಸಂಗೀತ ಮತ್ತು ಚಿತ್ರ ಸಂಗೀತ)ದಲ್ಲಿ ‘ಆರ್ಕೆಸ್ಟೇಷನ್’ ಅಥವಾ ‘ಸ್ವರಮೇಳ’ದ ಶೈಲಿ ಪಾಶ್ಚಾತ್ಯ ಪರಂಪರೆಯಿಂದ ಸ್ವೀಕರಿಸಿದ್ದೆಂದು ಸಂಗೀತ ನಿರ್ದೆಶಕ ಸಲೀಲ್ ಚೌಧರಿ ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ಲೇಖನವೊಂದರಲ್ಲಿ ಅವರು ಸಂದೇಹಕ್ಕೆಡೆಯಿಲ್ಲದಂತೆ ಅದನ್ನು ನಿರೂಪಿಸುತ್ತಾರೆ. ವಿದೇಶಿ ಸಂಗೀತ ವಾದ್ಯಗಳು ಸೃಷ್ಟಿಸುವ ಧ್ವನಿಯ ಗುಣಮಟ್ಟ (Tonal Quality) ಮತ್ತು ವಾದ್ಯಗಳ ನಿಖರತೆ ನಮ್ಮ ಸಂಗೀತಗಾರರ ಮತ್ತು ಶೋತೃಗಳನ್ನು ಆಕರ್ಷಿಸಿದ ಕಾರಣ ಕ್ರಮೇಣ ಅವು ನಮ್ಮ ಸಂಗೀತ ಪರಂಪರೆಯಲ್ಲಿ ಅಡಕವಾದವು. ಕ್ರಮೇಣ ಚಿತ್ರ ಸಂಗೀತಕ್ಕೂ ಲಗ್ಗೆಯಿಟ್ಟು ಅದರ ಒಂದು ಭಾಗವದವು. ಇದು ಸಂಗೀತ ನಿರ್ದೇಶಕರು ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಸಹಾಯಕವಾದವು. ತಂತ್ರಜ್ಞಾನ ಹೆಚ್ಚು ಬಳಕೆಗೆ ಬಂದಂತೆ ಹಿನ್ನೆಲೆ ಗಾಯಕರ ಪರಂಪರೆಯೂ ಆರಂಭವಾಯಿತು. ಕರ್ಕಶವಾಗಿ ತೆರೆಯ ಮೇಲೆ ಮಾತನಾಡುವ ನಟನೊಬ್ಬ ಸ್ವರ ತಪ್ಪದೆ ಸುಶ್ರಾವ್ಯವಾಗಿ ಹಾಡುವ ಪವಾಡ ಜರುಗಿ ಹೋಯಿತು. (ಈಗ ಕಲಾವಿದರ ಒರಿಜಿನಲ್ ದನಿಯನ್ನು ಅಳಿಸಿ ಹಾಕಿ ಕಂಠದಾನ ಕಲಾವಿದರ ದನಿ ಅಳವಡಿಸುವುದು ಜಾರಿಗೆ ಬಂದಿರುವುದರಿಂದ ಯಾರು ಬೇಕಾದರೂ ಅಭಿನಯಿಸಬಹುದು)

ಹಿನ್ನೆಲೆ ಗಾಯನ ಜನಪ್ರಿಯಗೊಂಡರೂ ಆರಂಭದಲ್ಲಿ ಕನ್ನಡಕ್ಕೆ ಕನ್ನಡದವರೇ ಆದ ಗಾಯಕರಿರಲಿಲ್ಲ. ಇನ್ನು ಗಾಯಕಿಯರ ಬಗ್ಗೆ ಹೇಳುವಂತೆಯೇ ಇಲ್ಲ. ಆರಂಭದಲ್ಲಿ ಹೊನ್ನಪ್ಪ ಭಾಗವತರ್, ವೀರಣ್ಣ, ಬಿ. ಜಯಮ್ಮ, ಲಕ್ಷ್ಮೀಬಾಯಿ, ಸುಬ್ಬಯ್ಯನಾಯ್ಡು, ಆರ್‌ಎನ್‌ಆರ್ ಮೊದಲಾದವರು ತಮ್ಮ ಹಾಡುಗಳನ್ನು ತಾವೇ ಹಾಡಿಕೊಂಡರು. ಕ್ರಮೇಣ ಕಲಾವಿದರಿಗಿಂತ ನುರಿತ ಗಾಯಕರು ಹಾಡುವ ಪ್ರವೃತ್ತಿಯು ಇತರ ಭಾಷಾ ಚಿತ್ರಗಳಲ್ಲಿ ಹೆಚ್ಚಿದಂತೆಲ್ಲ ಕನ್ನಡವೂ ಅದನ್ನೇ ಅನುಸರಿಸಬೇಕಾಯಿತು. ಸೌಂದರ್‌ರಾಜನ್, ಸೀರ್ಕಾಳಿ ಗೋವಿಂದರಾಜನ್, ಸಿ.ಎಸ್. ಜಯರಾಮನ್, ಸಿ.ಎಸ್. ರಾಜಾ, ಜಿಕ್ಕಿ, ಘಂಟಸಾಲ, ಜೇಸುದಾಸ್, ಪಿಠಾಪುರಂ ನಾಗೇಶ್ವರರಾವ್, ಪಿ. ಸುಶೀಲಾ, ಎಸ್. ಜಾನಕಿ, ಪಿ.ಲೀಲಾ ಮುಂತಾದವರು ಆ ಹೊಣೆ ಹೊತ್ತರು. ಗಾಯಕರಲ್ಲಿ ಘಂಟಸಾಲ ಬಹು ಜನಪ್ರಿಯರಾದರು. ರಾಜ್‌ರವರಿಗಾಗಿ ‘ಹರಿಭಕ್ತ’ (ದೇವಾ ದರುಶನವ ನೀಡೆಯಾ, ತಾಯಿ ತಂದೆಯ ಸೇವೆಯ ಯೋಗ), ‘ಓಹಿಲೇಶ್ವರ’ (ಈ ದೇಹದಿಂದ ದೂರನಾದೆ ಏಕೆ ಆತ್ಮನೆ), ‘ವೀರಕೇಸರಿ’ (ಸ್ವಾಭಿಮಾನದ ನಲ್ಲೆ, ಮೆಲ್ಲುಸಿರೇ ಸವಿಗಾನ, ಸುಗುಣ ನೀತಿ ಚಿರಕಾಲ, ಎಲ್ಲ ನಿನಗಾಗಿ), ‘ಗಾಳಿಗೋಪುರ’ (ಯಾರಿಗೆ ಯಾರುಂಟು ಎರವಿನ ಸಂಸಾರ), ‘ಸತ್ಯ ಹರಿಶ್ಚಂದ್ರ’ (ನಮೋ ಭೂತನಾಥ, ವಿಧಿ ವಿಪರೀತ, ಕಂದ ಪದ್ಯಗಳು), ‘ಚಂದ್ರಹಾಸ’ (ಯಾವ ಕವಿಯ ಶೃಂಗಾರ ಕಲ್ಪನೆಯೋ), ‘ಮುರಿಯದ ಮನೆ’ (ನಮ್ಮೂರ ಚನ್ನಯ್ಯ), ‘ಸಾಕುಮಗಳು’ (ಹೇಳಿದ ಮಾತೆ ಕೇಳಿ, ಎಲ್ಲಿ ಹೊಂಬೆಳಕಲ್ಲಿ), ‘ಮದುವೆ ಮಾಡಿ ನೋಡು’ (ಯಾರೋ ಯಾರೋ ಈ ನವ ನಾಟಕದ ಸೂತ್ರಧಾರಿ ಯಾರೋ…, ಮದುವೆ ಮಾಡಿಕೊಂಡು), ‘ವಾಲ್ಮೀಕಿ’ (ಶ್ರೀರಾಮಾಯಣ ಕಾವ್ಯ ಸುಧೆ) ಚಿತ್ರಗಳಲ್ಲಿ ಹಾಡಿದರು. ಜೊತೆಗೆ ಅಂದಿನ ತೆಲುಗು ಡಬ್ ಚಿತ್ರಗಳ (ಚಂದ್ರಸೇನ, ಲವಕುಶ, ಮಾಯಾಬಜಾರ್, ಶ್ರೀ ಕೃಷ್ಣಾರ್ಜುನಯುದ್ಧ, ಜಗದೇಕವೀರನ ಕತೆ ಇತ್ಯಾದಿ) ಜನಪ್ರಿಯ ಹಾಡುಗಳನ್ನು ಹಾಡಿದ್ದರು. ಇದಕ್ಕೂ ಮುನ್ನ ಭಾಗ್ಯ ಚಕ್ರ’ (ದೇವ ನಿನ್ನ ರಾಜ್ಯದ ನ್ಯಾಯ ವಿದೇನ), ನಳದಮಯಂತಿ (ಅಳತೆಯಿಲ್ಲದ ನಿನ್ನ ಮಾಯ ತಿಳಿಯಲಾರಿಗೆ ಸಾಧ್ಯವಯ್ಯ?) ಮೊದಲಾದ ಚಿತ್ರಗಳ ಹಾಡುಗಳಿಂದಲೂ ಘಂಟಸಾಲ ಪ್ರಖ್ಯಾತರಾಗಿದ್ದರು.

ತೆಲುಗು ಮತ್ತು ಸ್ವಲ್ಪಮಟ್ಟಿಗೆ ತಮಿಳು ಚಿತ್ರಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದ ಘಂಟಸಾಲ ಅವರ ಕಂಚಿನ ಕಂಠ ಕನ್ನಡದಲ್ಲಿ ವಿಷಾದ ಭಾವದ ಹಾಡುಗಳಿಗೆ ಹೆಚ್ಚು ಹೊಂದುತ್ತಿತ್ತೇ ಹೊರತು ರೊಮ್ಯಾಂಟಿಕ್ ಗೀತೆಗಳ ಜಾಯಮಾನಕ್ಕೆ ಒಗ್ಗುತ್ತಿರಲಿಲ್ಲ. ಪ್ರಣಯ ಗೀತೆ ಹಾಡಿದರೂ ಅದರಲ್ಲಿ ದುಃಖದ ಛಾಯೆಯೇ ನುಸುಳಿ ಬರುತ್ತಿತ್ತು. ಜೊತೆಗೆ ಉಚ್ಚಾರಣೆ ಲೋಪಗಳಿದ್ದವು.

ಇನ್ನು ಆರಂಭದಲ್ಲಿ ಟಿ.ಎಂ. ಸೌಂದರ್‌ರಾಜನ್ ಸಹ ‘ಸದಾರಮೆ, ‘ರತ್ನಗಿರಿ ರಹಸ್ಯ’, ‘ಮೊದಲ ತೇದಿ’ ಚಿತ್ರಗಳ ಹಾಡುಗಳಿಂದ ಜನಪ್ರಿಯರಾದರೂ, ಘಂಟಸಾಲ ಅವರ ಮೇಲಿನ ಆರೋಪಗಳೇ ಇವರಿಗೂ ಒಪ್ಪುತ್ತಿದ್ದವು. ಸಿ.ಎಸ್. ಜಯರಾಮನ್, ಸೀರ್ಕಾಳಿ, ಎ.ಎಂ. ರಾಜಾ, ಜಿಕ್ಕಿ ಮೊದಲಾದವರೂ ಕನ್ನಡ ಹಿನ್ನೆಲೆಗಾಯನ ಕ್ಷೇತ್ರಕ್ಕೆ ಬಂದರೂ ನೆಲೆಯೂರಲಿಲ್ಲ. ಟಿ.ಜಿ. ಲಿಂಗಪ್ಪನವರು ‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ‘ಸ್ವಾಮಿ ದೇವನೆ ಲೋಕಪಾಲನೆ’ ವೃಂದ ಗೀತೆಯನ್ನು ‘ರಾಧಾ ಮಾಧವ ವಿನೋದ ಹಾಸ’, ‘ಸೊಂಪಾದ ಸಂಜೆಯಲ್ಲಿ ಯುಗಳ ಗೀತೆಗಳನ್ನು ಹಾಡಿದರೂ, ಹಾಡುಗಳು ಜನಪ್ರಿಯವಾದರೂ ಹಿನ್ನೆಲೆ ಗಾಯನವನ್ನು ಅವರು ಮುಂದುವರೆಸಲಿಲ್ಲ. ಸಂಗೀತ ನಿರ್ದೇಶಕ ನಾಗೇಂದ್ರರವರು ಗಾಯನ ಕ್ಷೇತ್ರದಲ್ಲಿ ಮುಂದುವರೆಯಲಿಲ್ಲ. ಗಾಯಕಿಯರಲ್ಲಿ ಪಿ. ಸುಶೀಲಾ, ಪಿ. ಲೀಲಾ, ಎಸ್.ಜಾನಕಿ ಮೊದಲಾದವರು ಬಹು ದೀರ್ಘಕಾಲ ಕನ್ನಡ ಹಿನ್ನೆಲೆ ಗಾಯನ ಸಾಮ್ರಾಜ್ಯವನ್ನು ಅಬಾಧಿತವಾಗಿ ಆಳಿದರು.

ಈ ಹಿನ್ನೆಲೆಯಲ್ಲಿ ಪಿ.ಬಿ. ಶ್ರೀನಿವಾಸ್‌ರವರು ಕನ್ನಡಕ್ಕೆ ಆಗಮಿಸಿದ್ದು ಒಂದು ಚಾರಿತ್ರಿಕ ಮಹತ್ವದ ಘಟನೆ. ಆರ್‌ಎನ್‌ಆರ್ ತಾವು ಮೂರು ಭಾಷೆಗಳಲ್ಲಿ ತಯಾರಿಸುತ್ತಿದ್ದ ‘ಜಾತಕಫಲ’ (1953) ಚಿತ್ರದಲ್ಲಿ ಹಾಡಲು ಪಿಬಿಎಸ್‌ರವರಿಗೆ ಅವಕಾಶ ಮಾಡಿಕೊಟ್ಟರು. ಪಿಬಿಎಸ್ ಅವರು ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಪ್ರವೇಶ ಪಡೆದ ಅದೃಷ್ಟಶಾಲಿ. ಆರ್.ಗೋವರ್ಧನ್ ಸಂಗೀತ ಸಂಯೋಜಿಸಿದ್ದ ‘ಚಿಂತಿಸದಿರು ರಮಣಿ’ ಅವರು ಹಾಡಿದ ಮೊದಲ ಕನ್ನಡ ಗೀತೆ. ಅದು ‘ಚಿಂತಿಸದಿರಿ ಕನ್ನಡಿಗರೆ’ ಎಂಬ ಆಶ್ವಾಸನೆಯ ದನಿಯಂತೆ ಮೂಡಿ ಬಂತೆನ್ನಬಹುದು. ಅದರ ನಂತರ ಅವರಿಗೆ ತೆಲುಗು, ತಮಿಳು ಭಾಷೆಯಲ್ಲೂ ಅವಕಾಶಗಳು ಒದಗಿ ಬಂದವು. ಆದರೆ ಅವರ ದನಿಯಲ್ಲಿ ಅಚಾನಕವಾಗಿ ಎದ್ದುಕಂಡ ಕನ್ನಡ ಭಾಷೆಯ ನವಿರುತನ ತಮಿಳು ಚಿತ್ರರಂಗದ ‘ಅಬ್ಬರ’ದ ಮುಂದೆ ಕೀರಲು ದನಿಯಂತೆ ಕಾಣುತ್ತಿತ್ತು. ಹಾಗಾಗಿ ಪಿಬಿಎಸ್ ಕನ್ನಡದ ಜಾಯಮಾನಕ್ಕೆ ಒಗ್ಗಿ ಹೋಗಿ ಕನ್ನಡದ ಸಿರಿಕಂಠವಾದರು.

ಪಿ.ಬಿ. ಶ್ರೀನಿವಾಸ್ ಹುಟ್ಟಿದ್ದು ಆಂಧ್ರಪ್ರದೇಶದ ಕಾಕಿನಾಡದಲ್ಲಿ. ಫಣೀಂದ್ರಸ್ವಾಮಿ ಮತ್ತು ಶೇಷ ಗಿರಿಯಮ್ಮ ದಂಪತಿಗಳ ಈ ಸುಪತ್ರ ಪ್ರಸಿದ್ಧ ವೀಣಾ ವಾದಕ ಏಮನಿ ಶಂಕರ ಶಾಸ್ತ್ರಿ ಅವರ ಗರಡಿಯಲ್ಲಿ ಬೆಳೆದವರು. ಗಜಲ್‌ಗಳ ಬಗ್ಗೆ ಒಲವಿದ್ದ ಅವರು ತೆಲುಗಿನಲ್ಲಿ ಅನೇಕ ಗಜಲ್‌ಗಳನ್ನು ಬರೆದು ಹಾಡಿದ್ದರು. ವೃಂದಗಾಯಕರಾಗಿ ಮತ್ತು ಸಹ ಗಾಯಕರಾಗಿ ವೃತ್ತಿ ಜೀವನದಲ್ಲಿ ನಿರತರಾಗಿದ್ದ ಅವರಿಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ನೀಡಿದವರು ಆರೆನ್ನಾರ್. ಆದರೆ ಕನ್ನಡಕ್ಕಿಂತ ತಮಿಳು ಚಿತ್ರಗಳ ಹಾಡುಗಳು ಅವರ ಹಿನ್ನೆಲೆ ಗಾಯನ ಪಟ್ಟವನ್ನು ಭದ್ರಪಡಿಸಿದವು. ‘ಪ್ರೇಮಪಾಸಂ’, ‘ಪಾವಮನ್ನಿಸ್ಸು’ (‘ಕಾಲಂಗಳಿಲ್ ಅವಳ್ ವಸಂತಾ’ ಹಾಡು), ‘ಅಡುತ್ತವೀಟ್ಟು ಪೆಣ್’ ಚಿತ್ರಗಳ ಹಾಡುಗಳು ತಮಿಳು ಚಿತ್ರ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದವು. (ಶಿವಾಜಿ ಗಣೇಶನ್ ನಾಯಕರಾಗಿದ್ದ ಒಂದು ಚಿತ್ರದಲ್ಲಿ ಒಂದೇ ಹಾಡನ್ನು ಪಿಬಿಎಸ್ ಮತ್ತು ಟಿ.ಎಂ. ಸೌಂದರ್‌ರಾಜನ್ ಹಾಡಿದ್ದರು. ಪಿಬಿಎಸ್ ಹಾಡಿದ ಹಾಡನ್ನೇ ತನ್ನ ಮೇಲೆ ಚಿತ್ರೀಕರಿಸಲು ಶಿವಾಜಿ ಒತ್ತಾಯಿಸಿದರೂ ಟಿಎಂಎಸ್ ಜನಪ್ರಿಯ ಗಾಯಕ ಎಂಬ ಕಾರಣಕ್ಕಾಗಿ ಪಿಬಿಎಸ್ ಹಾಡಿದ ಹಾಡನ್ನು ಹಿನ್ನೆಲೆ ದೃಶ್ಯಗಳಿಗೆ ಬಳಸಿಕೊಂಡರು)

ಆದರೆ ತಮಿಳು-ತೆಲುಗು ಚಿತ್ರಗಳಲ್ಲಿ ಈಗಾಗಲೇ ಜನಪ್ರಿಯ ಹಿನ್ನೆಲೆ ಗಾಯಕರ ಸ್ಥಾನ ಭದ್ರವಾಗಿದ್ದ ಕಾರಣ ಪಿಬಿಎಸ್ ಕನ್ನಡ ಚಿತ್ರರಂಗದ ಕಡೆಗೆ ಹೊರಳಿದರು. ಸಿಕ್ಕ ಸಣ್ಣ ಅವಕಾಶಗಳಲ್ಲೇ ಕನ್ನಡದ ಜಾಯಮಾನವನ್ನು ಕರಗತ ಮಾಡಿಕೊಳ್ಳುತ್ತಿದ್ದ ಅವರು ‘ಕೃಷ್ಣಗಾರುಡಿ’ (1958-ಬೊಂಬೆಯಾಟವಯ್ಯ) ಹಾಗೂ ‘ಮಹಿಷಾಸುರ ಮರ್ದಿನಿ’ (1959 – ಶ್ರೀ ಹರಿ ಮುರಾರಿ) ಚಿತ್ರಗಳ ನಾರದನ ಪಾತ್ರಗಳ ಹಾಡುಗಳಿಂದ ಕನ್ನಡಿಗರಿಗೆ ಹೆಚ್ಚು ಪರಿಚಿತರಾದರು. ಕನ್ನಡ ವೃತ್ತಿರಂಗಭೂಮಿಯ ರಂಗಗೀತೆಗಳ ಛಾಯೆಯಿದ್ದ ಆ ಹಾಡುಗಳನ್ನು (ಬೊಂಬೆಯಾಟವಯ್ಯ ಹಾಡಿನ ನಡುವೆ ‘ಕೃಷ್ಣಾ’ ಎಂಬ ಉದ್ಗಾರ ನೆನಪಿಸಿಕೊಳ್ಳಿ) ರಸಿಕರು ಮೊದಲು ಗುನುಗಲಾರಂಭಿಸಿದರು. ಬಳಿಕ ಎಂ.ವೆಂಕಟರಾಜು ಅವರ ಸಂಗೀತದಲ್ಲಿ ಮೂಡಿಬಂದ ‘ಭಕ್ತ ಕನಕದಾಸ’ (1960) ಚಿತ್ರದ ಗೀತೆಗಳು ಪಿಬಿಎಸ್‌ಗೆ ಶಾಶ್ವತವಾದ ಸ್ಥಾನವನ್ನು ಕಲ್ಪಿಸಿಕೊಟ್ಟವು. ಆ ಚಿತ್ರದ ಕನಕದಾಸರ ರಚನೆಗಳು ಅವರ ಕಂಠದಲ್ಲಿ ಮೊಳಗಿದ್ದು ಇಂದಿಗೂ ಕನ್ನಡಿಗರೆದೆಯಲ್ಲಿ ಅನುರಣಿಸುತ್ತಿವೆ.

ನಾನು ಹಿಂದೆ ಪ್ರಸ್ತಾಪಿಸಿದ ‘ಕನ್ನಡತನ’ ಎಂಬುದು ‘ಭಕ್ತ ಕನಕದಾಸ’ ಚಿತ್ರದ ಹಾಡುಗಳಲ್ಲಿ ಪ್ರತಿಧ್ವನಿಸುತ್ತದೆ. ಶೃಂಗಾರಯಮಯವಾದ ಹಾಡು ‘ಸಿಂಗಾರ ಶೀಲ’, ಭಕ್ತಿ – ಆರ್ದ್ರ ಭಾವವಿರುವ ಮತ್ತು ಹರಿಯನ್ನು ಮೊರೆಹೋಗುವ ‘ಬಾಗಿಲನು ತೆರೆದು’, ‘ಕುಲಕುಲವೆಂದು ಹೊಡೆದಾಡದಿರಿ’ ‘ಈತನೀಗ ವಾಸುದೇವನು’ ಹಾಡುಗಳಲ್ಲಿರುವ ತಾತ್ವಿಕ ಭಾವ ಮತ್ತು ತೆಳು ವ್ಯಂಗ್ಯ ‘ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು’ ರಚನೆಯ ಹಿಂದಿರುವ ಧನ್ಯತೆ – ವಿವಿಧ ಭಾವಗಳನ್ನು ಒಂದೇ ಚಿತ್ರದಲ್ಲಿ ಅಭಿವ್ಯಕ್ತಿಸಲು ಸಿಕ್ಕ ಅವಕಾಶದಲ್ಲಿ ನೂರಕ್ಕೆ ನೂರು ಅಂಕ ಪಡೆದರು. ಜೊತೆಗೆ ಆಗ ತಾನೆ ಚಿತ್ರರಂಗದಲ್ಲಿ ಬೇರು ಬಿಡುತ್ತಿದ್ದ ರಾಜ್‌ರವರ ಕಂಠಕ್ಕೆ ಸೂಕ್ತವಾದ ಹೋಲಿಕೆಯುಳ್ಳ ಗಾಯಕ ಅವರೆಂಬುದನ್ನು ಉದ್ಯಮ – ಜನತೆ ಕಂಡುಕೊಂಡಿತು. ಅಂದಿನಿಂದ ಆರಂಭವಾದ ರಾಜ್ – ಪಿಬಿಎಸ್‌ರವರ ಶರೀರ – ಶಾರೀರದ ಸಂಗಮದ ಕತೆ ಕನ್ನಡ ಚಿತ್ರರಂಗ ಇತಿಹಾಸದ ಒಂದು ಭಾಗವೇ ಆಯಿತು. ಪಿಬಿಎಸ್ ಹಾಡಿದ ಹಾಡುಗಳನ್ನು ತೆರೆಯ ಮೇಲೆ ರಾಜ್ ಅಭಿನಯಿಸಿದರೆ ಅವರೇ ಹಾಡಿದಷ್ಟು ಸಹಜವಾಗಿ ಮೂಡಿ ಬರುತ್ತಿತ್ತು. ಆ ಸಹಜತೆ ರಾಜ್‌ರವರು ಸ್ವತಃ ಹಾಡಿದಾಗಲೂ ಕಾಣಲಾಗಲಿಲ್ಲ ಎಂಬುದೂ ಅಷ್ಟೇ ಸತ್ಯ. ಇಂಥ ಸಹಜ ಯೋಗಾನುಯೋಗ ಮತ್ತೊಬ್ಬ ನಟ – ಗಾಯಕನ ನಡುವೆ ಕನ್ನಡದಲ್ಲಿ ಮತ್ತೆ ಸಂಭವಿಸಲಿಲ್ಲಎನ್ನುವುದೂ ಅಷ್ಟೇ ನಿಜ.

ಪಿಬಿಎಸ್‌ರವರದು ಮಧ್ಯಮ ಸ್ಥಾಯಿ ಸ್ವರ, ತಲಾತ್ ಮಹಮದ್‌ರವರಂತೆ ಗಜಲ್‌ಗಳಂತಹ ಹಾಡುಗಳಿಗೆ ಸೂಕ್ತವಾಗಿತ್ತು ಎನ್ನುವ ಅಭಿಪ್ರಾಯವೂ ಇದೆ. ಅದೆಲ್ಲ ಶಾಸ್ತ್ರೀಯ ಸಂಗೀತ ತಜ್ಞರು ತಲೆಕೆಡಿಸಿಕೊಳ್ಳಬೇಕಾದ ವಿಚಾರ. ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಿಂದ ಕನ್ನಡ ಚಿತ್ರರಂಗಕ್ಕೆ ಮತ್ತು ಆ ಮೂಲಕ ಕನ್ನಡ ಸಂಸ್ಕೃತಿ ಮತ್ತು ಉದ್ಯಮ ವಿಸ್ತರಣೆಗೆ ಪಿಬಿಎಸ್ ಅವರು ನೀಡಿದ ಕೊಡುಗೆ ಅಮೂಲ್ಯ. 1953ರಿಂದ ಆರಂಭವಾದ ಅವರ ಕನ್ನಡ ನಂಟು ಅಬಾಧಿತವಾಗಿ ಬೆಳೆದು ಬಂತು. ಅವರು ಈಗ ಕನ್ನಡ ಚಿತ್ರಗಳಿಗೆ ಹಾಡದಿರಬಹುದು. ಆದರೆ ಅನುದಿನವೂ ಅವರ ಗೀತೆಗಳು ನಮ್ಮನ್ನು ಹಿಂಬಾಲಿಸಿ ಬಂದಿವೆ. ನಮ್ಮ ಭಾವಕೋಶದಲ್ಲಿ ಒಂದಾಗಿವೆ. ನಮ್ಮ ಸಂಗೀತ ಅಭಿರುಚಿಯನ್ನು ಬೆಳೆಸಿವೆ. ಕನ್ನಡ ಪ್ರಜ್ಞೆಯನ್ನು ತಿದ್ದಿವೆ.

ವೈವಿಧ್ಯವಿಲ್ಲದ ಪಿಬಿಎಸ್‌ ಅವರು ಖ್ಯಾತಿ ಅಷ್ಟು ಸುದೀರ್ಘ ಕಾಲ ಹೇಗೆ ಉಳಿದುಬಂತು? ಅದಕ್ಕೆ ಉತ್ತರ ಅವರು ಹಾಡುಗಳಿಗೆ ಲೇಪಿಸುತ್ತಿದ್ದ ಭಾವಸ್ಪರ್ಶದಲ್ಲಿದೆ. ಕನ್ನಡದ ದನಿಯನ್ನು ಬೆರೆಸಿದ ಗತಿಯಲ್ಲಿದೆ. ಕನ್ನಡ ಸಂಸ್ಕೃತಿಯನ್ನು ಹಾಡುಗಳ ಸ್ವರಲಾಸ್ಯದೊಡನೆ ಕುಣಿಸಿದ ಪರಿಯಲ್ಲಿದೆ. ಜೊತೆಗೆ ರಾಜ್‌ರವರ ಜನಪ್ರಿಯತೆಯ ಜೊತೆಯಲ್ಲಿ ಅವರು ಹಾಡಿದ ಹಾಡುಗಳು ಕನ್ನಡಿಗರ ಮನೆ ಮನಕ್ಕೆ ಲಗ್ಗೆ ಹಾಕಿದ ವಿದ್ಯಮಾನದಲ್ಲಿದೆ. ಪಿಬಿಎಸ್‌ರವರು ಕನ್ನಡದಲ್ಲಿ ಎಷ್ಟು ಗೀತೆಗಳನ್ನು ಹಾಡಿರುವರೋ ತಿಳಿಯದು. ಆದರೆ ಅವರ ಜನಪ್ರಿಯ ಗೀತೆಗಳನ್ನು ಒಟ್ಟು ಅವಲೋಕಿಸಿದಾಗ ಅವರ ಗಾನ ವೈವಿಧ್ಯದ ಒಂದು ನೋಟ ಸಿಗುತ್ತದೆ. ಸ್ವರ ವೈವಿಧ್ಯದ ಅಭಾವವನ್ನು ಕಂಡವರಿಗೂ ಅವರ ಗಾನ ವೈವಿಧ್ಯ ಅಚ್ಚರಿ ತರಿಸುತ್ತದೆ.

ಅರವತ್ತರ ದಶಕದಲ್ಲಿ ಏಕೀಕರಣದ ತರುವಾಯ ಕನ್ನಡ ನಾಡುನುಡಿಯ ಬಗೆಗಿನ ಭಾವನೆಗಳು ಜಾಗೃತವಾಗಿದ್ದ ಕಾಲದಲ್ಲಿ ಪಿಬಿಎಸ್ ಕಂಠದಲ್ಲಿ ಹರಿದುಬಂದ ಕನ್ನಡ ನುಡಿಯ ವೈಭವೀಕರಣದ ಹಾಡುಗಳು ಕನ್ನಡಿಗರಲ್ಲಿ ನಾಡ ಪ್ರೇಮವನ್ನು ಉಜ್ವಲಗೊಳಿಸಿದ್ದು ಸುಳ್ಳಲ್ಲ. ಪ್ರಾಯಶಃ ಜಿ.ಕೆ. ವೆಂಕಟೇಶರವರು ಹಾಡಿದ ‘ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ’ (ಕಣ್ತೆರೆದು ನೋಡು) ಆ ನಿಟ್ಟಿನಲ್ಲಿ ಹಾಡಿದ ಮೊದಲ ಹಾಡು. ಜಿಕೆವಿ ಅವರಿಂದ ಆ ತಾಳದಂಡವನ್ನು ಕೈಗೆತ್ತಿಕೊಂಡ ಅವರು ಆ ಕಾಯಕವನ್ನು ಸಮರ್ಥವಾಗಿ ಮುಂದುವರಿಸಿದರು. ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ’ (ಪೋಸ್ಟ್ ಮಾಸ್ಟರ್) ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ (ವಿಜಯನಗರ ವೀರಪುತ್ರ), ಬಾ ತಾಯಿ ಭಾರತಿಯ ಭವ ಭಾಗೀರಥಿಯೆ’ (ತಾಯಿ ಕರುಳು), ‘ಜಯ್ ಭಾರತ ಜನನಿಯ ತನುಜಾತೆ’ (ಮನ ಮೆಚ್ಚಿದ ಮಡದಿ), ‘ಕನ್ನಡವೆ ತಾಯ್ನುಡಿಯು ಕರುನಾಡ ತಾಯ್ನಾಡು’ (ಅನ್ನಪೂರ್ಣ) ‘ಕಲಿಯಿರೊಂದು ಪಾಠವನ್ನು ಕನ್ನಡ ತಾಯ್ ಮಕ್ಕಳ’ (ಮಂತ್ರಾಲಯ ಮಹಾತ್ಮ), ‘ಕನ್ನಡತೀ. ನನ್ನೊಡತಿ’ (ಪುನರ್ಜನ್ಮ), ‘ಮೈಸೂರು ದಸರ ಎಷ್ಟೊಂದು ಸುಂದರ’ (ಕರುಳಿನ ಕರೆ) ‘ನಾನೋಡಿ ನಲಿಯುವ ಕಾರವಾರ’ (ಮಹಡಿ ಮನೆ) ‘ನಾವಾಡುವ ನುಡಿಯೇ ಕನ್ನಡ ನುಡಿ’ (ಗಂಧದಗುಡಿ) -ಹೀಗೆ ಅನೇಕ ನಾಡು – ನುಡಿಯನ್ನು ಕುರಿತ ಗೀತೆಗಳು ಕನ್ನಡಿಗರ ಭಾವಕೋಶದಲ್ಲಿ ಬಂಧಿಯಾದವು.

‘ಭಕ್ತ ಕನಕದಾಸ’ ಚಿತ್ರದ ಭಕ್ತಿ ಗೀತೆಗಳಿಂದ ಪಿಬಿಎಸ್‌ಗೆ ದಕ್ಕಿದ ಪಟ್ಟ ‘ಸಂತ ತುಕಾರಾಂ’ ಮತ್ತು ‘ಭಕ್ತ ಕುಂಬಾರ’ ಚಿತ್ರಗಳಲ್ಲಿ ಪರಾಕಾಷ್ಠೆ ಮುಟ್ಟಿತು. ಸಂತ ತುಕಾರಾಂನ ‘ಜಯತು ಜಯ ವಿಠಲ’, ‘ಭಕ್ತ ಕುಂಬಾರ’ದ ‘ಮಾನವ ದೇಹವು…’, ‘ವಿಠಲಾ… ಪಾಂಡುರಂಗ ವಿಠಲಾ…’, ‘ಹರಿನಾಮವೇ ಚಂದ’, ‘ಎಲ್ಲಿ ಮರೆಯಾದೆ ವಿಠಲ…’, ಪಿಬಿಎಸ್‌ರವರ ಭಕ್ತಿ ಭಾವದ ಹಾಡುಗಳಿಗೆ ‘ಕಂಡೆ ಹರಿಯ ಕಂಡೆ’ ಸಾಟಿಯೇ ಇಲ್ಲವೆನ್ನುವಂತಾಯಿತು.

ಪಿಬಿಎಸ್‌ರವರ ಕಂಠದಲ್ಲಿ ಕನ್ನಡದ ಪ್ರಖ್ಯಾತ ಕವಿಗಳ ಕವನಗಳಿಗೆ ದೊರೆತ ವಿಸ್ತರಣೆ ಸಹ ಅಭೂತಪೂರ್ವ, ಕವಿಗಳ ಭಾವಸಂಪತ್ತನ್ನು ಸಮರ್ಥವಾಗಿ ಹಿಡಿದ ಪಿಬಿಎಸ್‌ರವರ ಧ್ವನಿಸಿರಿಯು ಸಾಹಿತ್ಯ ಸೌರಭವನ್ನು ಕನ್ನಡಿಗರಿಗೆ ಉಣಬಡಿಸಿತು. ಕುವೆಂಪು ಅವರ ‘ಜಯ್ ಭಾರತ ಜನನಿಯ ತನುಜಾತೆ’, ‘ಷೋಡಶಿ… ಷೋಡಶಿ’, ‘ಷೋಡಷ ಚೈತ್ರದ ಸುಂದರಿ ನೀನು’, ‘ನಾನೇ ವೀಣೆ ನೀನೇ ತಂತಿ’, ’ಜೀವನ ಸಂಜೀವನಾ’ ಕೆಎಸ್‌ನ ಅವರ ‘ಇವಳು ಯಾರು ಬಲ್ಲೆಯೇನು’, ‘ನನ್ನವಳು ನನ್ನೆದೆಯ ಹೊನ್ನಾಡನಾಡುವಳು’, ‘ಪ್ರೀತಿಯ ಹೂಗಳ ಮುಡಿದವಳೆ’, ಬೇಂದ್ರೆಯವರ ‘ಉತ್ತರ ಧ್ರುವದಿಂ – ದಕ್ಷಿಣ ಧ್ರುವಕೂ’, ಜಿಎಸ್‌ಎಸ್‌ರವರ ‘ವೇದಾಂತಿ ಹೇಳಿದನೂ’ ಮತ್ತು ಅಡಿಗರ ‘ಎಂಥ ಕಣ್ಣು ಎಂಥ ಕಣ್ಣು ನಿನ್ನದೆ’ ಕವನಗಳು ಜನಪ್ರಿಯಗೊಂಡಿದ್ದೇ ಪಿಬಿಎಸ್‌ರವರ ಹಾಡಿನ ದಾಟಿಯಿಂದ. ಇವೆಲ್ಲಕ್ಕೂ ಅತಿಶಯವೆಂಬಂತೆ ವಿಜಯಭಾಸ್ಕರ್‌ ಅವರ ಅಪೂರ್ವ ಸಂಯೋಜನೆಯಲ್ಲಿ ಮೂಡಿ ಬಂದ ‘ಇಳಿದು ಬಾ ತಾಯಿ… ಇಳಿದು ಬಾ’ – ಶಬ್ದ ಗಾರುಡಿಗನ ಕವನವನ್ನು ತಮ್ಮ ಗಾಯನದಿಂದ ಮಾಧುರ್ಯದಿಂದ ಅಜರಾಮರಗೊಳಿಸಿದರು. (ತೆರೆಯ ಮೇಲೆ ಅವರೇ ಹಾಡಿರುವುದು ಇನ್ನೊಂದು ವಿಶೇಷ)

ದಾಸರ ಪದಗಳನ್ನು ಶುದ್ಧ ಶಾಸ್ತ್ರೀಯತೆಯಿಂದ ಮುಕ್ತಗೊಳಿಸಿದ್ದು ಚಿತ್ರ ಸಂಗೀತ, ಅವು ಗುನುಗುನುಗಿಸುವಂತೆ ಮಾಡಿದವರು ಪಿಬಿಎಸ್. ‘ಭಕ್ತ ಕನಕದಾಸ’ ಚಿತ್ರದ ಹಾಡುಗಳ ನಂತರ ಅನೇಕ ಚಿತ್ರಗಳಲ್ಲಿ ಹಾಡಿದ ಕೀರ್ತನೆಗಳಲ್ಲಿನ ಕನ್ನಡದ ಬನಿ ನವನೀತವಾಗಿ ಹೊಮ್ಮಲು ಪಿಬಿಎಸ್‌ರವರೇ ಮೂಲ ಕಾರಣ. ದಾಸರ ಭಕ್ತಿಭಾವ, ಬೆಡಗು, ಸಾಮಾಜಿಕ ವಿಡಂಬನೆ, ಗಾಢ ತಾತ್ವಿಕತೆ, ಕಾವ್ಯಾತ್ಮಕ ಗುಣಗಳನ್ನು ಸ್ವರಲಯಗಳಲ್ಲಿ ಅವರು ಹಿಡಿದಿಟ್ಟರು. ಹಾಗಾಗಿಯೇ ಈಗಲೂ ‘ಗುಮ್ಮನಕರೆಯದಿರೆ’, ‘ಕಲ್ಲುಸಕ್ಕರೆ ಕೊಳ್ಳಿರೋ’, ‘ಭಕ್ತಿ ಬೇಕು ವಿರಕ್ತಿ ಬೇಕು’, ‘ಮಣ್ಣಿಂದ ಕಾಯ ಮಣ್ಣಿಂದ’, ‘ಇಬ್ಬರ ಹೆಂಡಿರಸುಖವ ಇಂದು ಉಂಡೆನಯ್ಯ’ ಇಂದಿಗೂ ಜನಪ್ರಿಯ ಗೀತೆಗಳಾಗಿಯೇ ಉಳಿದಿರುವುದು.

ಈ ಹಿಂದೆ ಹೇಳಿದಂತೆ ರಾಜ್‌ರವರಿಗಾಗಿ ಹಾಡಿದ ಹಾಡುಗಳು ಅವರ ಕಂಠಕ್ಕೆ ತೀರಾ ನಿಕಟವಾದ ಕಾರಣ ಅವು ಇಂದಿಗೂ ನಮ್ಮನ್ನು ಕಾಡುತ್ತವೆ. ರಾಜ್‌ರವರಿಗೆ ಹಾಡುವಾಗ ಪಿಬಿಎಸ್‌ರವರ ಸ್ವರದಲ್ಲಿ ಗರಿಬಿಚ್ಚಿ ಹಾಡುವ ಸ್ವಾತಂತ್ರ್ಯವನ್ನು ಕಾಣಬಹುದು. ಅದರಲ್ಲಿಯೂ ವಿಷಾದ; ವಿರಹ ಮತ್ತು ಆರ್ದ್ರಭಾವವುಕ್ಕಿಸುವ ಹಾಡುಗಳ ಪಟ್ಟಿಯನ್ನು ನೋಡಿ, ‘ಹೊಡೆಯುವ ಕೈ ಒಂದು’ (ಕರುಳಿನ ಕರೆ), ‘ಚಿನ್ನದಂಥ ನಾಡಿಗೆ ರನ್ನದಂಥ ರಾಜ’ (ಬಾಳಬಂಧನ), ‘ಹಾಡೊಂದ ಹಾಡುವೆ ನೀ ಕೇಳು ಮಗುವೆ’ (ನಾಂದಿ), ‘ನಗುತ ಹಾಡಲೇ ಅಳುತ ಹಾಡಲೇ (ಉಯ್ಯಾಲೆ), ‘ನಿಂತಲ್ಲೇ ಅವಳು ಕುಳಿತಲ್ಲಿ ಅವಳು’ (ಶ್ರೀ ಕನ್ನಿಕಾ ಪರಮೇಶ್ವರಿ ಕತೆ), ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ’ (ಸಂಧ್ಯಾರಾಗ), ‘ನಿನ್ನಿಂದ ನಾನಿಂದು ಹಗಲಿರುಳೂ’ (ಲಗ್ನಪತ್ರಿಕೆ), ‘ಒಲವಿನ ಪ್ರಿಯಲತೆ, ಅವಳದೇ ಚಿಂತೆ’ (ಕುಲವಧು), ‘ಈ ನೀತಿ ಈ ನ್ಯಾಯ ಏನೆಂದು ತಂದೆ’ (ಚಂದವಳ್ಳಿಯ ತೋಟ), ‘ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ?’ (ಎರಡು ಕನಸು), ‘ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ’ (ಸನಾದಿ ಅಪ್ಪಣ್ಣ), ‘ನಗುವುದೋ ಅಳುವುದೋ ನೀವೇ ಹೇಳಿ’ (ಸಂಪತ್ತಿಗೆ ಸವಾಲ್), ‘ಎಲ್ಲಿಗೇ ಪಯಣ ಯಾವುದೋ ದಾರಿ’ (ಸಿಪಾಯಿ ರಾಮು), ರಾಜಾಶಂಕರ್‌ಗೆ ಹಾಡಿದ ‘ವೈದೇಹಿ ಏನಾದಳೋ (ದಶಾವತಾರ) ಮುಂತಾದ ಗೀತೆಗಳು ಕಟ್ಟಿಕೊಡುವ ಭಾವನಾ ಪ್ರಪಂಚ ಎಣೆಯಿಲ್ಲದ್ದು. ಈ ಸಾಲಿನಲ್ಲಿ ಬರುವ ಗೀತೆಗಳಲ್ಲಿ ‘ಪುನರ್ಜನ್ಮ’ ಚಿತ್ರದಲ್ಲಿ ಹಾಡಿರುವ ‘ಒಲುಮೆಯ ಹೂವೆ ನೀ ಹೋದೆ ಎಲ್ಲಿಗೆ’ ಎಂಬ ಆರ್‌ಎನ್‌ಜೆ ಗೀತೆಯ ವಿಷಾದ ಭಾವ ಮತ್ತು ಗಾಢ ದುರಂತವನ್ನು ಅನುಭವಿಸದ ಕನ್ನಡಿಗನೇ ಇಲ್ಲವೆನಿಸುತ್ತದೆ.

ಕನ್ನಡದ ಪ್ರಣಯ ಗೀತೆಗಳಿಗೆ ವಿಶಿಷ್ಟವಾದ ರಮ್ಯಭಾವ, ಮಾದಕತೆ, ಭಾವನಾ ಲಹರಿಯನ್ನುತರುವುದರ ಮೂಲಕ ಅರವತ್ತು ಎಪ್ಪತ್ತರ ದಶಕದಲ್ಲಿ ಚಿತ್ರಗೀತೆಗಳ ಜನಪ್ರಿಯತೆಗೆ ಪಿಬಿಎಸ್ ಕಾರಣ ಪುರುಷರೆನಿಸಿದರು. ‘ಭಕ್ತ ಕನಕದಾಸ’ ಚಿತ್ರದ ‘ಸಿಂಗಾರ ಶೀಲ’ ಹಾಡಿನಿಂದ ಆರಂಭವಾದ ಆ ಲಹರಿ ‘ರಾಣಿ ಹೊನ್ನಮ್ಮ’ ಚಿತ್ರದ ‘ಹಾರುತ ದೂರ ದೂರ’ ಹಾಡಿನಿಂದ ಸಂಭ್ರಮವನ್ನು ಪಡೆದುಕೊಂಡಿತು. ‘ಕನ್ಯಾರತ್ನ’ ಚಿತ್ರದ ‘ಬಿಂಕದ ಸಿಂಗಾರಿ ಮೈಡೊಂಕಿನ ವಯ್ಯಾರಿ’ ಆ ಕಾಲದ ಹರೆಯದ ಹೃದಯಗಳಲ್ಲಿ ಹುಚ್ಚೆಬ್ಬಿಸಿತ್ತು. ಮುಂದೆ ‘ತುಟಿಯ ಮೇಲೆ ತುಂಟ ಕಿರುನಗೆ’ (ಮನ ಮೆಚ್ಚಿದ ಮಡದಿ), ‘ಪ್ರತಿಜ್ಞೆ’ಯ ‘ಕನಸಿನಾ ದೇವಿಯಾಗಿ’, ‘ಅಮರಶಿಲ್ಪಿ ..’ಯ ‘ನಿಲ್ಲು ನೀ ನಿಲ್ಲು ನೀ ನೀಲವೇಣಿ’, ‘ಸ್ವಯಂವರ’ದ ‘ನಿನ್ನ ಕಣ್ಣ ಕನ್ನಡಿಯಲ್ಲಿ’ ಗೀತೆಗಳು ಪಿಬಿಎಸ್‌ರವರ ರೊಮ್ಯಾಂಟಿಕ್ ಹಾಡುಗಳ ‘ರೇಂಜ್’ ಅನ್ನು ಪರಿಚಯಿಸಿತು. ಉಲ್ಲಾಸ, ಸಂಭ್ರಮ ತುಂಬಿಕೊಂಡ ‘ಹಾಯಾದ ಈ ಸಂಗಮ’, ‘ಒಂದು ದಿನ ಎಲ್ಲಿಂದಲೋ ನೀ ಬಂದೆ’, ‘ಆಹಾ… ಮೈಸೂರು ಮಲ್ಲಿಗೆ’, ‘ಮಧುರ ಮಧುರವೀ ಮಂಜುಳ ಗಾನ’, ‘ಆಕಾಶದಿ ಲೋಕದ ತಾರ’, ‘ಬಳ್ಳಿಗೆ ಹೂವು ಚಂದ’, ‘ನೀ ಬಂತು ನಿಂತಾಗ’, ‘ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ’, ‘ಬಹು ಜನ್ಮದಾ ಪೂಜಾಫಲ’ ಮುಂತಾದ ಯುಗಳ ಗೀತೆಗಳು ರಸಿಕರೆದೆಯಲ್ಲಿ ಭಾವೋತ್ಕರ್ಷವನ್ನು ಉಕ್ಕಿಸಿದರೆ ‘ಬಂಗಾರದೊಡವೆ ಬೇಕೆ’, ‘ಹೃದಯವೀಣೆ ಮಿಡಿಯೆ ತಾನೆ’, ಕೇದಗೆಯ ಹೂ ಮುಡಿದು’, ‘ಓಡುವ ನದಿ ಸಾಗರವ ಬೆರೆಯಲೇ ಬೇಕು’, ‘ನೀರಿನಲ್ಲಿ ಅಲೆಯ ಉಂಗುರ’, ‘ಪಂಚಮ ವೇದ ಪ್ರೇಮದ ನಾದ’, ‘ಬರೆದೆ ನೀನು ನಿನ್ನ ಹೆಸರ’, ‘ನಿನದೇ ನೆನಪು ದಿನವೂ ಮನದಲ್ಲಿ’ ಮುಂತಾದ ಸೋಲೋ ಹಾಗು ಯುಗಳ ಗೀತೆಗಳು ಪ್ರಬುದ್ಧ ಪ್ರಣಯ ಭಾವಗಳನ್ನುಬಿತ್ತುವಲ್ಲಿ ಯಶಸ್ವಿಯಾದವು. ‘ಎಂದೆಂದೂ ನಿನ್ನನು ಮರೆತು’ (ಎರಡು ಕನಸು), ‘ಬಳ್ಳಿಗೆ ಹೂವು ಚಂದ’ (ಭಲೇ ಹುಚ್ಚ) ಅದಕ್ಕೂ ಹಿಂದಿನ ‘ನಾ ಹಾಡಿದ ಮೊದಲ ಹಾಡು’ (ಕಳ್ಳರ ಕಳ್ಳ), ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ’ (ಕಸ್ತೂರಿ ನಿವಾಸ), ‘ಆಕಾಶವೇ ಬೀಳಲಿ ಮೇಲೆ’ (ನ್ಯಾಯವೇ ದೇವರು), ‘ಬಾರೆ ಬಾರೆ ಚಂದದ ಚಲುವಿನ ತಾರೆ’ (ನಾಗರಹಾವು), ‘ಪ್ರೀತಿನೆ ಆ ದ್ಯಾವು ತಂದ ಆಸ್ತಿ ನಮ್ಮ ಪಾಲಿಗೆ’ (ದೂರದ ಬೆಟ್ಟ), ‘ಚಲುವಾದ ಮುದ್ದಾದ’ (ಬಾಳು ಬೆಳಗಿತು) ಹಾಡುಗಳು ಸೃಷ್ಟಿಸಿದ ಭಾವ ಸಂಚಲನವನ್ನು ‘ನಗುನಗುತಾ ನಲಿ’, ‘ಆಡುತಿರುವಮೋಡಗಳೇ’, ‘ಹಳ್ಳಿಯಾದರೇನು ಶಿವ’, ‘ಕಲ್ಲಾದೆ ಏಕೆಂದು ಬಲ್ಲೆ’ ಹಾಡುಗಳು ಹಚ್ಚಿದ ಗಾಢ ಚಿಂತನೆಯನ್ನು ‘ಗಂಗಿ ಮೇಲ್ ನಂಗೆ ಮನಸೈತೆ’, ‘ಹೋದರೆ ಹೋಗು ನನಗೇನು’, ‘ಮಲೆನಾಡ ಹೆಣ್ಣ ಮೈ ಬಣ್ಣ’, ‘ಬಳ್ಳಿಯಂತೆ ಬಳುಕುತಲಿ ಮಳ್ಳಿಯಂಗೆ ನೋಡುತಲಿ’, ನನ್ನ ಕನಸಿನ ರಾಣಿಯೆ ನಿಲ್ಲೆ ನಿಲ್ಲೆ’ ಮುಂತಾದ ಹಾಡುಗಳ ತುಂಟತನ, ಕನ್ನಡಿಗರು ಸವಿದಿದ್ದಾರೆ.

ಪಿಬಿಎಸ್‌ರವರ ಸುಮಧುರ ಗೀತೆಗಳು ಅಗೆದಷ್ಟು ಸಿಗುತ್ತವೆ. ಮೊಗೆದಷ್ಟು ಬೊಗಸೆಗಳು ತುಂಬಿ ತುಳುಕುತ್ತವೆ. ಆದರೆ ಇಂಥ ಕನ್ನಡದ ಸಿರಿಕಂಠ ನಿಧಾನವಾಗಿ ಇಳಿಮುಖ ಕಂಡದ್ದು ನಮ್ಮ ಕಣ್ಣ ಮುಂದೆಯೇ ಘಟಿಸಿದ ವಿದ್ಯಮಾನ. ಒಂದೆಡೆ ‘ಎಮ್ಮೆ’ ಹಾಡಿನ ಮೂಲಕ ಮತ್ತೆ ಹಾಡಲು ಆರಂಭಿಸಿದ ರಾಜ್‌ ಗಾಯನ ವೃತ್ತಿ ಬದುಕು ಏರುಮುಖ ಕಂಡರೆ ಅದೇ ವೇಳೆ ಕಾಕತಾಳೀಯವೆಂಬಂತೆ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಜನಪ್ರಿಯತೆ ಹೆಚ್ಚುತ್ತಾ ಹೋಯಿತು. ಒಂದು ಕಾಲಕ್ಕೆ ಅಂಚಿನ ಪಾತ್ರಗಳಿಗೆ ಹಿನ್ನೆಲೆ ಗಾಯಕರಾಗಿದ್ದ ಇಲ್ಲವೇ ನೇಪಥ್ಯದ ಹಾಡುಗಳನ್ನುಹಾಡುತ್ತಿದ್ದ ಬಾಲಸುಬ್ರಮಣ್ಯಂರವರು ಮುನ್ನೆಲೆಗೆ ಬಂದು ನಿಂತರು. ಈ ವಿದ್ಯಮಾನದಿಂದಾಗಿಯೂ ಪಿಬಿಎಸ್‌ರವರ ಬೇಡಿಕೆ ಇಳಿಯಿತು. ಈ ವಿದ್ಯಮಾನದ ಪರಿಣಾಮ ತೆಲುಗು – ತಮಿಳಿನಲ್ಲಿ ಪಾರಮ್ಯ ಸಾಧಿಸಿದ್ದ ಗಾಯಕರ ಮೇಲೂ ಆಯಿತು. ಕಾಲದ ಪ್ರವಾಹದಲ್ಲಿ ಇವು ಜರುಗುವಂಥವೇ! ಹೊಸ ನೀರಿನ ರಭಸಕ್ಕೆ ಹಳೆಯ ನೀರು ದಾರಿ ಮಾಡಿಕೊಡಲೇ ಬೇಕು.

ತಮ್ಮ ಅನನ್ಯ ಧ್ವನಿಯ ಮೂಲಕ ಕನ್ನಡಿಗರ ಮನಕ್ಕೆ ಲಗ್ಗೆಯಿಟ್ಟು, ಕನ್ನಡದ ಸಿನಿಮಾ ರಂಗವನ್ನು ಶ್ರೀಮಂತಗೊಳಿಸಿ ಆ ಕನ್ನಡದ ಮನರಂಜನಾಕ್ಷೇತ್ರವನ್ನು ವಿಸ್ತರಿಸಿದವರು ಪಿಬಿಎಸ್. ಎಂಟು ಭಾಷೆಗಳಲ್ಲಿ ಪಾಂಡಿತ್ಯ ಸಾಧಿಸಿ, ಅನ್ಯ ಮೂಲದವರಾದರೂ ಅಪೂರ್ವವೆನ್ನುವ ರೀತಿಯಲ್ಲಿ ಕನ್ನಡದ ದನಿಯಾದ ಪಿಬಿಎಸ್ ಸಾಧನೆಯ ಶಿಖರದಲ್ಲಿರುವಾಗಲೇ ನಿಧಾನವಾಗಿ ಇಳಿಯುತ್ತಾ ನೇಪಥ್ಯಕ್ಕೆ ಸರಿದರು. ಪ್ರಾಯಶಃ ‘ಸೊಸೆ ತಂದ ಸೌಭಾಗ್ಯ’ಕ್ಕೆ ಹಾಡಿದ ‘ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ’ ಅವರು ಅತ್ಯಂತ ಭಾವಪೂರ್ಣವಾಗಿ ಹಾಡಿದ ಕೊನೆಯ ಹಾಡು. ನಂತರದ ಹಾಡುಗಳಲ್ಲಿ ಅವರ ದನಿಯಲ್ಲಿನ ಒಂದು ಬಗೆಯ ಬಳಲಿಕೆಯನ್ನು ಗುರುತಿಸಬಹುದಿತ್ತು. ಭಾವಸಂಪತ್ತು ಕ್ಷಯಿಸುತ್ತಿರುವ ಚಿಹ್ನೆಗಳು ಗೋಚರಿಸುತ್ತಿದ್ದವು. ಆದರೆ ಅವರು ನಮ್ಮ ರಾಗ ಭಾವಗಳಿಗೆ ದನಿಯಾಗಿ, ಅಭಿವ್ಯಕ್ತಿಯ ಸಾಧನವಾಗಿದ್ದನ್ನು ಮರೆಯಲುಂಟೆ?

https://youtu.be/0ZsDw2GZnF4

LEAVE A REPLY

Connect with

Please enter your comment!
Please enter your name here