ಪುನೀತ್ ರಾಜಕುಮಾರ್, ಯೋಗಿ, ಶ್ರೀನಗರ ಕಿಟ್ಟಿ ಅಭಿನಯದ ‘ಹುಡುಗ್ರು’ ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು ನಟ ಕೃಷ್ಣ. ಆಗ ಈ ಹುಡುಗನನ್ನು ನೋಡಿದ ಹಲವರು ಇವನಿಗೆ ನಾಯಕನಾಗುವ ಯೋಗ್ಯತೆ ಇದೆ ಎಂದೇ ಆಂದಾಜಿಸಿದ್ದರು. ಅದೀಗ ನಿಜ ಆಗಿದೆ. ಕೃಷ್ಣ ಅವರ ಕೈಲೀಗ ಹಲವು ಚಿತ್ರಗಳಿವೆ.

‘ಹುಡುಗರು’ ಚಿತ್ರದ ಕ್ಯಾಮಿಯೋ ಪಾತ್ರದ ನಂತರ ನಟ ಕೃಷ್ಣ, ಹೀರೋ ಆಗುವ ಪ್ರಯತ್ನ ಮಾಡಿದರು. ಅದರಂತೆಯೇ ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಲು ಯತ್ನಿಸಿದರು. ಚಿತ್ರರಸಿಕರ ಡಾರ್ಲಿಂಗ್ ಆಗಬೇಕು ಅಂತ ‘ಡಾರ್ಲಿಂಗ್’ ಸಿನಿಮಾ ಮಾಡಿದ್ರು. ಅದರಿಂದ ‘ಡಾರ್ಲಿಂಗ್ ಕೃಷ್ಣ’ ಅನ್ನೋ ಹೆಸರು ಬಂತೇ ಹೊರತು ಬೇರೇನೂ ಆಗಲಿಲ್ಲ. ಆ ನಂತರ ಮುಖಕ್ಕಷ್ಟೇ ಅಲ್ಲ ಕೈಗೂ ಬಣ್ಣ ಹಚ್ಚಿಕೊಂಡು ‘ಮದರಂಗಿ’ ಸಿನಿಮಾ ಮಾಡಿದರು. ಈ ಚಿತ್ರದ ಒಂದೆರಡು ಹಾಡುಗಳು ಹಿಟ್ ಆದವು. ಆ ನಂತರ ‘ಮುಂಬೈ’ ಚಿತ್ರ ಮಾಡಿದ್ದಾಯ್ತು. ಅದು ಅವರನ್ನು ಬಾಲಿವುಡ್‌ಗೇನೂ ಕರೆದೊಯ್ಯಲಿಲ್ಲ. ನಂತರ ಓಂಪ್ರಕಾಶ್ ನಿರ್ದೇಶನದಲ್ಲಿ ‘ಹುಚ್ಚ 2’ ಚಿತ್ರ ಮಾಡಿದ್ದೂ ಆಯ್ತು. ಫ್ಲಾಪ್ ಆಗಿದ್ದೂ ಆಯ್ತು. ಆದರೆ ಕೃಷ್ಣ ಅವರ ಸಿನಿಮಾ ಹುಚ್ಚು ಮಾತ್ರ ಕಡಿಮೆ ಆಗಲಿಲ್ಲ.

ತಾರಾ ಪತ್ನಿ ಮಿಲನ ನಾಗರಾಜ್ ಜೊತೆ ಕೃಷ್ಣ

ಕೊನೆಗೆ ಕೃಷ್ಣ ಸಾಹಸ ಮಾಡಿದರು. ಬೇರೆಯವರ ಕೈಯಲ್ಲಿ ತಮ್ಮ ಪ್ರತಿಭೆಗೆ ತಕ್ಕ ಫಲ ಸಿಗುತ್ತಿಲ್ಲ ಎಂಬುದು ಅರಿವಾದ ಮೇಲೆ, ತಾವೇ ತಮ್ಮ ಸಿನಿಮಾ ಮಾಡಿಕೊಳ್ಳುವ ನಿರ್ದಾರ ಮಾಡಿದರು. ಅದರ ಫಲವೇ ‘ಲವ್ ಮಾಕ್‌ಟೇಲ್‌’. ಈ ಚಿತ್ರ ಯಾವ ಮಟ್ಟಕ್ಕೆ ಯಶಸ್ಸು ಕಂಡಿತು ಅನ್ನೋದು ಎಲ್ಲರಿಗೂ ಗೊತ್ತು. ಈ ಒಂದು ಚಿತ್ರದ ಯಶಸ್ಸಿನಿಂದಾಗಿ ಈಗ ಕೃಷ್ಣ ಸ್ಯಾಂಡಲ್‌ವುಡ್‌ನಲ್ಲಿ ಬಿಡುವಿಲ್ಲದ ನಟರಾಗಿದ್ದಾರೆ. ನಿಜ ಈಗ ‘ಲವ್  ಮಾಕ್‌ಟೇಲ್‌ 2’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದರ ಜೊತೆ ನಾಗಶೇಖರ್ ನಿರ್ದೇಶನದ ‘ಕೃಷ್ಣ ಅಟ್ ಜಿಮೇಲ್ ಡಾಟ್ ಕಾಮ್’ ಚಿತ್ರ ರೆಡಿಯಾಗುತ್ತಿದೆ. ಇವುಗಳ ಜೊತೆಗೆ ‘ಶುಗರ್ ಫ್ಯಾಕ್ಟರಿ’, ‘ಲವ್ ಮಿ ಹೇಟ್ ಮಿ’, ‘ಲೋಕಲ್ ಟ್ರೈನ್’, ‘ದಿಲ್ ಪಸಂದ್’ ಚಿತ್ರಗಳಲ್ಲೂ ಕೃಷ್ಣ ನಾಯಕರಾಗಿ ಮಿಂಚುತ್ತಿದ್ದಾರೆ. ಒಟ್ಟಿನಲ್ಲಿ ಒಂದಿಷ್ಟು ಸೋಲುಗಳ ನಂತರ ಕೃಷ್ಣ ಸಾಲು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರೋದು ಅವರ ಕೆರಿಯರ್‌ಗೆ ಹೊಸ ತಿರುವನ್ನೇ ತಂದುಕೊಟ್ಟಿದೆ.

LEAVE A REPLY

Connect with

Please enter your comment!
Please enter your name here