ಎರಡು ಸಂಪೂರ್ಣ ಭಿನ್ನ ಶೇಡ್‌ಗಳ ಪಾತ್ರಗಳಲ್ಲಿ ದರ್ಶನ್ ಮಿಂಚಿದ್ದಾರೆ. ‘ಕೃಷ್ಣ’ನ ಪಾತ್ರಕ್ಕಿಂತ ‘ಧನುಷ್’ ಲುಕ್ ಅವರಿಗೆ ಹೆಚ್ಚು ಹೊಂದುತ್ತದೆ. ನಾಯಕಿ ರಚನಾ ರೈ ಅವರ ಪಾತ್ರ ಹಾಡುಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದು ಅವರ ಮುಂದಿನ ಕೆರಿಯರ್‌ಗೆ ನೆರವಾಗಬಹುದು.
ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳ ನಿರ್ದೇಶಕ ಪ್ರಕಾಶ್ ವೀರ್ ‘ಡೆವಿಲ್’ ಚಿತ್ರವನ್ನು ಹೇಗೆ ರೂಪಿಸಬಹುದು ಎನ್ನುವ ಕುತೂಹಲವಿತ್ತು. ದರ್ಶನ್‌ರಂತಹ ಮಾಸ್ ಸಿನಿಮಾಗಳ ಹೀರೋಗಳಿಗೆ ಸಿನಿಮಾ ಮಾಡುವ ಸವಾಲು ಸುಲಭವಲ್ಲ. ಕಂಟೆಂಟ್ ಜೊತೆಗೆ ಅವರ ಅಭಿಮಾನಿಗಳು ಅಪೇಕ್ಷಿಸುವ ಹೀರೋಯಿಸಂ, Swag ಕೂಡ ಇರಲೇಬೇಕು. ಅದಲ್ಲದೆ, ಈ ಸಂದರ್ಭದಲ್ಲಿ ದರ್ಶನ್‌ರ ವೈಯಕ್ತಿಕ ಬದುಕಿನ ಏರುಪೇರುಗಳೂ ಇದ್ದವು. ಈ ಎಲ್ಲಾ ಸವಾಲುಗಳನ್ನು ನಿರ್ದೇಶಕ ಪ್ರಕಾಶ್ ಸಮಚಿತ್ತದಿಂದಲೇ ನಿಭಾಯಿಸಿದ್ದಾರೆ. ದರ್ಶನ್ ಅಭಿಮಾನಿಗಳಷ್ಟೇ ಅಲ್ಲದೆ ಎಲ್ಲಾ ಸಿನಿಪ್ರಿಯರು ವೀಕ್ಷಿಸಿ ಖುಷಿ ಪಡಬಹುದಾದ ಚಿತ್ರವಾಗಿ ‘ಡೆವಿಲ್’ ಹೊರಹೊಮ್ಮಿದೆ.
‘ಡೆವಿಲ್’ ಶೀರ್ಷಿಕೆ ಎಂದಾಗಲೇ ಚಿತ್ರದ ಕತೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಅದಕ್ಕೆ ಸರಿಯಾಗಿ ಚಿತ್ರತಂಡದವರು ಕೂಡ ಕತೆಯ ಎಳೆಯನ್ನು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಟ್ರೇಲರ್‌ನಲ್ಲೂ ಕುತೂಹಲ ಕಾಯ್ದುಕೊಂಡಿದ್ದರು. ಇದು ಚಿತ್ರಕ್ಕೆ ವರವಾಯ್ತು. ಸಾಕಷ್ಟು ನಿರೀಕ್ಷೆಯೊಂದಿಗೆ ಬರುವ ಸಿನಿಪ್ರಿಯರಿಗೆ ದರ್ಶನ್‌ರದ್ದು ಡಬಲ್ ರೋಲ್ ಎನ್ನುವ ಸುದ್ದಿ ತಿಳಿಯವುದೇ ಥಿಯೇಟರ್‌ನಲ್ಲಿ. ಆ ಮಟ್ಟಿಗೆ ನಿರ್ದೇಶಕ ಪ್ರಕಾಶ್ ಮೊದಲ ಗೆಲುವು ಸಾಧಿಸಿದರು. ಮಾಸ್ ಸಿನಿಮಾಗೆ ಅಗತ್ಯವಿರುವ ಎಲ್ಲಾ ಅಂಶಗಳನ್ನು ಸೂಕ್ತ ಪ್ರಮಾಣದಲ್ಲಿ ತುಂಬಿರುವುದರಿಂದ ಮನರಂಜನೆಯ ಚಿತ್ರವಾಗಿಯೂ ‘ಡೆವಿಲ್’ ಸಿನಿಪ್ರಿಯರಿಗೆ ಇಷ್ಟವಾಗುತ್ತದೆ.
ಎರಡು ಸಂಪೂರ್ಣ ಭಿನ್ನ ಶೇಡ್‌ಗಳ ಪಾತ್ರಗಳಲ್ಲಿ ದರ್ಶನ್ ಮಿಂಚಿದ್ದಾರೆ. ವೈಯಕ್ತಿಕ ಬದುಕಿನ ಪಜೀತಿಗಳು ಸ್ಕ್ರಿನ್ ಮೇಲೆ ಕಾಣಿಸದಂತೆ ವೃತ್ತಿಪರತೆ ಮೆರೆದಿದ್ದಾರೆ. ‘ಕೃಷ್ಣ’ನ ಪಾತ್ರಕ್ಕಿಂತ ‘ಧನುಷ್’ ಲುಕ್ ಅವರಿಗೆ ಹೆಚ್ಚು ಹೊಂದುತ್ತದೆ. ನಾಯಕಿ ರಚನಾ ರೈ ಅವರ ಪಾತ್ರ ಹಾಡುಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದು ಅವರ ಮುಂದಿನ ಕೆರಿಯರ್‌ಗೆ ನೆರವಾಗಬಹುದು. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಮತ್ತು ಅಚ್ಯುತ್ ಕುಮಾರ್ ಅವರ ಪಾತ್ರನಿರ್ವಹಣೆ ಸಿನಿಮಾದ ತೂಕ ಹೆಚ್ಚಿಸಿದೆ. ಅಲ್ಲಲ್ಲಿ ಅಳವಡಿಸಿರುವ ಕಾಮಿಡಿಯೂ ಚಿತ್ರಕ್ಕೆ ವರವಾಗಿದೆ. ಗಿಲ್ಲಿ ನಟ ಇರುವ ಹಾಸ್ಯ ಸನ್ನಿವೇಶಗಳು ಪ್ರತ್ಯೇಕವಾಗಿ ಕಾಣಿಸುತ್ತವೆ. ಇವು ಕತೆಗೆ ನೇರವಾಗಿ ಕನೆಕ್ಟ್ ಆಗಿದ್ದರೆ ಚೆನ್ನಾಗಿತ್ತು. ಹಾಡುಗಳು ಥಿಯೇಟರ್‌ನಿಂದಾಚೆಗೆ ನೆನಪಾಗುವುದಿಲ್ಲ ಎನ್ನುವುದು ಮಿತಿ. ಆದರೆ ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ. ಒಟ್ಟಾರೆ ಎಂಗೇಜಿಂಗ್ ಮಾಸ್ ಚಿತ್ರವಾಗಿ ‘ಡೆವಿಲ್’ ಹೊರಹೊಮ್ಮಿದೆ.










