ತಮಿಳು ನಟ ಶಿವಕಾರ್ತಿಕೇಯನ್ ಇಂದು ಪುನೀತ್, ಶಿವರಾಜಕುಮಾರ್‌ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪುನೀತ್ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು.

ನಟ ಪುನೀತ್ ರಾಜಕುಮಾರ್ ದಕ್ಷಿಣ ಭಾರತದ ಸಿನಿಮಾರಂಗದ ಹಲವು ಕಲಾವಿದರು ಹಾಗೂ ತಂತ್ರಜ್ಞರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದವರು. ಮೊನ್ನೆ ದಕ್ಷಿಣ ಭಾರತದ ಹಲವು ತಾರೆಯರು ಬೆಂಗಳೂರಿಗೆ ಆಗಮಿಸಿ ಪುನೀತ್‌ಗೆ ಅಂತಿಮ ನಮನ ಸಲ್ಲಿಸಿದ್ದರು. ಇಂದು ಪುನೀತ್‌ರ ಆತ್ಮೀಯರಲ್ಲೊಬ್ಬರಾದ ತಮಿಳು ನಟ ಶಿವಕಾರ್ತೀಕೇಯನ್‌ ಬೆಂಗಳೂರಿಗೆ ಬಂದಿದ್ದರು. ಪುನೀತ್ ರಾಜಕುಮಾರ್ ಮನೆಗೆ ತೆರಳಿ ಅಶ್ವಿನಿ ಪುನೀತ್‌ರಿಗೆ ಸಾಂತ್ವನ ಹೇಳಿ ನಂತರ ಶಿವರಾಜಕುಮಾರ್ ಮನೆಗೆ ಭೇಟಿ ನೀಡಿದ್ದರು. ಅಲ್ಲಿಂದ ನೇರವಾಗಿ ಕಂಠೀರವ ಸ್ಟುಡಿಯೋಗೆ ತೆರಳಿ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, “ಪುನೀತ್ ನಮ್ಮ ಜೊತೆ ಇಲ್ಲ ಎನ್ನುವುದನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವರೊಬ್ಬ ಉತ್ತಮ ನಟ. ಈಗಲೂ ಕೂಡ ನಾವು ಶಾಕ್‌ನಲ್ಲಿಯೇ ಇದ್ದೇವೆ. ಅದರಿಂದ ಹೊರಗೆ ಬರೋಕೆ ಆಗುತ್ತಲ್ಲ. ನಾನು ಒಂದು ತಿಂಗಳ ಹಿಂದಷ್ಟೇ ಪುನೀತ್ ಜೊತೆ ಮಾತನಾಡಿದ್ದೆ. ನನ್ನ ಚಿತ್ರಗಳಿಗೆ ಅವರು ವಿಶ್ ಮಾಡಿದ್ರು. ಅವರನ್ನು ಕಳೆದುಕೊಂಡಿದ್ದು ಇಡೀ ಸಿನಿಮಾರಂಗಕ್ಕೆ ದೊಡ್ಡ ನಷ್ಟ. ಆದ್ರೆ ಅವರು ಎಲ್ಲರ ಮನಸ್ಸಿನಲ್ಲೂ ಸದಾ ಚಿರಾಯು. ಒಳ್ಳೆಯ ಮನಸ್ಸಿನ ಅವರು ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ರು. ನನ್ನ ‘ಡಾಕ್ಟರ್’ ಸಿನಿಮಾ ನೋಡಿ‌ ಪುನೀತ್ ಮತ್ತು ಶಿವಣ್ಣ ಇಬ್ಬರೂ ವಿಶ್ ಮಾಡಿದ್ದರು. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ” ಎಂದರು.

LEAVE A REPLY

Connect with

Please enter your comment!
Please enter your name here