‘ದಾರಿ ಯಾವುದಯ್ಯಾ ವೈಕುಂಠಕೆ’ ಸಿನಿಮಾ ದಸರಾ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಿದ್ದು ಪೂರ್ಣಚಂದ್ರ ಕತೆ, ಚಿತ್ರಕತೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ.

ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರ ಎರಡು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು. ಅತ್ಯುತ್ತಮ ಕನ್ನಡ ಚಿತ್ರ ಮತ್ತು ಅತ್ಯುತ್ತಮ ನಟ ಪ್ರಶಸ್ತಿಗೆ (ಬಾಲ ರಾಜವಾಡಿ) ಸಿನಿಮಾ ಭಾಜನವಾಗಿದೆ. ಇಲ್ಲಿಯವರೆಗೂ ಹತ್ತಾರು ರಾಷ್ಟ್ರೀಯ ಮತ್ತು  ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿದೆ. ಸ್ಪೇನ್, ಲಂಡನ್, ಟರ್ಕಿ, ಮಲೇಷ್ಯಾ, ಜರ್ಮನಿ, ಬಾಂಗ್ಲಾದೇಶ, ಸಿಂಗಾಪುರ್, ಇಟಲಿ, ಅಮೆರಿಕಾ, ಔರಂಗಾಬಾದ್, ಕಲ್ಕತ್ತಾ, ಕೇರಳ, ರಾಜಸ್ಥಾನ್, ಕಾಶೀ, ಬಿಹಾರ್, ಮಹಾರಾಷ್ಟ್ರ ಇನ್ನೂ ಮುಂತಾದ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿದೆ.

https://youtu.be/9fRx1TsmrLQ

‘ಕೃಷ್ಣ ಗಾರ್ಮೆಂಟ್ಸ್‌’ ಸಿನಿಮಾ ಮೂಲಕ ಗಮನ ಸೆಳೆದಿದ್ದ ಸಿದ್ದು ಪೂರ್ಣಚಂದ್ರ ನಿರ್ದೇಶಿಸಿರುವ ಸಿನಿಮಾ ಭಿನ್ನ ಮತ್ತು ಸಂಕೀರ್ಣ ಕಥಾವಸ್ತುವಿನಿಂದಾಗಿ ವಿಶೇಷವೆನಿಸಿದೆ. ಕತೆ, ಚಿತ್ರಕತೆ ಮತ್ತು ಸಂಭಾಷಣೆಯೂ ಅವರದೆ. ಲೌಕಿಕ ಜಗತ್ತಿನ ಸುಳಿಯಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಹಣದ ಹಿಂದೆ ಓಡುತ್ತಾನೆ. ಅವನ ಬದುಕಿನಲ್ಲಿ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ. ಅಂಥವನು ಅದೊಮ್ಮೆ ಆಕಸ್ಮಿಕವಾಗಿ ಸ್ಮಶಾನಕ್ಕೆ ಬರುತ್ತಾನೆ. ಅಲ್ಲಿಗೆ ಬಂದುಹೋದ ಮೇಲೆ ಮನಸ್ಥಿತಿ ಏನಾಗುತ್ತದೆ ಎನ್ನುವುದು ಚಿತ್ರದ ಕಥಾವಸ್ತು. ವರ್ಧನ್‌, ‘ತಿಥಿ’ ಸಿನಿಮಾ ಖ್ಯಾತಿಯ ಪೂಜಾ, ಬಾಲ ರಾಜವಾಡಿ, ಶೀಬಾ, ಅರುಣ್ ಮೂರ್ತಿ, ಸ್ಪಂದನ ಇತರರು ನಟಿಸಿದ್ದಾರೆ. ನಿತಿನ್ ಛಾಯಾಗ್ರಹಣ, ರಾಜೀವ್ ಸಂಕಲನ ಚಿತ್ರಕ್ಕಿದೆ. ಡಿಸೆಂಬರ್‌ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆ.

LEAVE A REPLY

Connect with

Please enter your comment!
Please enter your name here