ಸಾಹಿತಿ ಕುಂ.ವೀರಭದ್ರಪ್ಪ ಅವರ ಕೆಲವು ಕತೆಗಳು ಸಿನಿಮಾ ಆಗಿವೆ. ಇತ್ತೀಚೆಗಷ್ಟೇ ಅವರ ‘ಕುಬುಸ’ ಕತೆ ಸಿನಿಮಾ ಆಗಿ ಚಿತ್ರೀಕರಣಗೊಂಡಿದೆ. ಹಿಂದೆ ಅವರ ‘ಬೇಲಿಯ ಹೂಗಳು’ ಸಿನಿಮಾ ಶಿವರಾಜಕುಮಾರ್‌ ನಾಯಕತ್ವದಲ್ಲಿ ‘ದೊರೆ’ ಚಿತ್ರವಾಗಿತ್ತು. ಈಗ ಕುಂವಿ ಅವರ ‘ಉಡ’ ಕಾದಂಬರಿ ಸಿನಿಮಾ ಆಗುತ್ತಿದೆ.

ಖ್ಯಾತ ಸಾಹಿತಿ ಕುಂವೀ ರಚನೆಯ ‘ಉಡ’ ಕಾದಂಬರಿಯನ್ನು ಹಿರಿತೆರೆಗೆ ಅಳವಡಿಸಲಾಗುತ್ತಿದೆ. ಆದರೆ ಮೂಲ ಹೆಸರನ್ನು ಕೈಬಿಟ್ಟು ಇದಕ್ಕೆ ‘ಮಾನ’ ಎನ್ನುವ ಹೆಸರಿಡಲಾಗಿದೆ. ಈ ಚಿತ್ರದ ಮುಹೂರ್ತ ನೆರವೇರಿದೆ. ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ ಜೀತ ಪದ್ಧತಿಯ ಕರಾಳ ಮುಖ ಅನಾವರಣಗೊಳಿಸಲಿದೆ. ತಮ್ಮ ಕಾದಂಬರಿಗಳಲ್ಲಿ ಸಮಾಜದ ಓರೆಕೋರೆಗಳನ್ನು ಹಸಿಹಸಿಯಾಗಿ ತೆರೆದಿಡುವ ಕುಂವೀ, ಅದನ್ನು ಅಷ್ಟೇ ವಿಡಂಬನಾತ್ಮಕವಾಗಿಯೂ ಕಟ್ಟಿಕೊಟ್ಟವರು. ‘ಉಡ’ದಲ್ಲಿಯೂ ಅದು ಕಾಣಸಿಗುತ್ತದೆ. ಆ ವಿಡಂಬನೆಗೆ ಚ್ಯುತಿ ಬಾರದಂತೆ ಸಿನಿಮಾದಲ್ಲೂ ಅದನ್ನು ಕಟ್ಟಿಕೊಡುವುದಾಗಿ ಹೇಳುತ್ತಾರೆ ಚಿತ್ರದ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್.

“ಇಂಥ ಪ್ರಯೋಗಾತ್ಮಕ ಸಿನಿಮಾಗಳ ಆಫರ್ ಬಂದಾಗ ನಿರಾಕರಿಸುವ ಮನಸ್ಸು ಬರುವುದಿಲ್ಲ. ಕುಂವೀಯವರ ಬರಹ ಆಧರಿಸಿ ಸಿನಿಮಾ ಮಾಡುತ್ತಿದ್ದೇವೆ ಎಂದಾಗ ತುಂಬಾ ಖುಷಿಯಾಯ್ತು. ಜೀತದಾಳೊಬ್ಬ ತನ್ನ ಮಾನ ಕಾಯ್ದುಕೊಳ್ಳುವಂಥ ಕಥೆ ಚಿತ್ರದ್ದು” ಎನ್ನುತ್ತಾರೆ ದೇವರಾಜ್. ಗಂಭೀರ ವಿಷಯವನ್ನು ಹಾಸ್ಯದ ಲೇಪನದೊಂದಿಗೆ ಹೇಳಿದಾಗ ಅದು ಮತ್ತಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ ಅನ್ನೋದು ದೇವರಾಜ್ ಅಭಿಮತ. ಹಿರಿಯ ನಟಿ ಉಮಾಶ್ರೀ ಚಿತ್ರದ ಒಂದು ಪ್ರಧಾನ ಪಾತ್ರದಲ್ಲಿದ್ದಾರೆ. ಚನ್ನಪಟ್ಟಣ, ಮೈಸೂರು ಮತ್ತು ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಕಾಂತಲಕ್ಷ್ಮಿ ಮತ್ತು ರಮೇಶ್ ಬಾಬು ಈ ಚಿತ್ರದ ನಿರ್ಮಾಪಕರು.

ಚಿತ್ರತಂಡದಿಂದ ನಟ ದೇವರಾಜ್ ಅವರಿಗೆ ಗೌರವ. ನಿರ್ಮಾಪಕ ಕೆ.ಮಂಜು ಇದ್ದಾರೆ.

LEAVE A REPLY

Connect with

Please enter your comment!
Please enter your name here