ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್‌ಫ್ರೆಂಡ್’ ತೆಲುಗು ಚಿತ್ರದ ಹೀರೋ ಆಗಿ ದೀಕ್ಷಿತ್ ಶೆಟ್ಟಿ ನಟಿಸಲಿದ್ದಾರೆ. ಚಿತ್ರತಂಡ ಅವರ ಪಾತ್ರವನ್ನು ಪರಿಚಯಿಸುವ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದೆ. ರಾಹುಲ್ ರವೀಂದ್ರನ್ ನಿರ್ದೇಶನದ ಈ ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ‘ಗರ್ಲ್‌ಫ್ರೆಂಡ್’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಈ ಕುರಿತು ಚಿತ್ರತಂಡ ದೀಕ್ಷಿತ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಘರ್ಷಣೆಯ ಮಧ್ಯದ ಸ್ನೇಹಿತರ ಗುಂಪು ಅವನನ್ನು ನಿಯಂತ್ರಿಸಲು ಪ್ರಯತ್ನಿಸುವಾಗ ದೀಕ್ಷಿತ್ ಕೋಪಗೊಂಡಿರುವುದನ್ನು ಕಾಣಬಹುದು. ಕರ್ನಾಟಕದ ಬಳ್ಳಾರಿಯ ಹಿನ್ನೆಲೆಯಲ್ಲಿ ಅವರ ಪಾತ್ರಕ್ಕೆ ಅಚ್ಚುಕಟ್ಟಾಗಿ ಕತೆ ಹೆಣೆಯಲಾಗಿದೆ. ದೀಕ್ಷಿತ್ ಈಗ ಚಿತ್ರತಂಡ ಸೇರಿಕೊಂಡಿದ್ದು, ನಿರ್ದೇಶಕ ರಾಹುಲ್ ರವೀಂದ್ರನ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
‘ಮನ್ಮಥುಡು 2’ ಚಿತ್ರದ ನಂತರ ರಾಹುಲ್ ರವೀಂದ್ರನ್ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಚಿತ್ರವನ್ನು ವಿದ್ಯಾ ಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ನಿರ್ಮಿಸುತ್ತಿದ್ದಾರೆ. ‘ಖುಷಿ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅಲ್ಲು ಅರವಿಂದ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಈ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಈಗಾಗಲೇ ಟಾಲಿವುಡ್‌ನಲ್ಲಿ ‘ಪುಷ್ಪ 2’ ಸಿನಿಮಾ ಕೆಲಸದಲ್ಲಿ ನಿರತರಾಗಿದ್ದಾರೆ. ಅವರು ನಟಿಸಿರುವ ‘ಅನಿಮಲ್’ ಹಿಂದಿ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ದೀಕ್ಷಿತ್ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದು, ‘ಮುಗ್ಗುರು ಮೊನಗಲ್ಲು’ ಚಿತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದರು. ನಂತರ ನಾನಿ ಅವರೊಟ್ಟಿಗೆ ‘ದಸರಾ’ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡರು. ನಂತರ ಪ್ರೇಮ್ ಚಂದ್ ಕಿಲಾರು ಅವರೊಂದಿಗೆ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.