ಮೋಹನ್‌ಲಾಲ್‌ ಮತ್ತು ಪೃಥ್ವಿರಾಜ್‌ ತಂದೆ – ಮಗನಾಗಿ ನಟಿಸುತ್ತಿರುವ ‘ಬ್ರೊ ಡ್ಯಾಡಿ’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಪೃಥ್ವಿರಾಜ್‌ ನಿರ್ದೇಶನದ ಸಿನಿಮಾ ಜನವರಿ 26ರಿಂದ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ನಟ ಪೃಥ್ವಿರಾಜ್‌ ಎರಡನೇ ನಿರ್ದೇಶನದ ‘ಬ್ರೊ ಡ್ಯಾಡಿ’ ಸಿನಿಮಾ ಜನರ ಮುಂದೆ ಬರಲು ಸಿದ್ಧವಾಗಿದೆ. ಇಲ್ಲಿ ಮೋಹನ್‌ಲಾಲ್‌ ಮತ್ತು ಪೃಥ್ವಿರಾಜ್‌ ತಂದೆ – ಮಗನ ಪಾತ್ರದಲ್ಲಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಫಸ್ಟ್‌ಲುಕ್‌ ಹೊರಬಂದಿತ್ತು. ಇದೀಗ ಟ್ರೈಲರ್‌ ಬಿಡುಗಡೆಯಾಗಿದ್ದು, ಸಿನಿಮಾ ಜನವರಿ 26ರಿಂದ ನೇರವಾಗಿ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ದೇಹಕ್ಕೆ ವಯಸ್ಸಾದರೂ ಚಿರಯುವಕನ ಮನಸಿನ ತಂದೆಯೊಂದಿಗೆ ಪುತ್ರನದ್ದು ಆತ್ಮೀಯ ಒಡನಾಟ. ಪುತ್ರನ ಪ್ರೇಯಸಿಯ (ಕಲ್ಯಾಣಿ ಪ್ರಿಯದರ್ಶನ್‌) ಪ್ರವೇಶದೊಂದಿಗೆ ಗೆಳೆಯರಂತಿರುವ ಇವರ ಸಂಬಂಧದಲ್ಲಿ ಏರುಪೇರಾಗುತ್ತದೆ. ಇವರಿಬ್ಬರ ಸಂಬಂಧ ಮತ್ತೆ ಸರಿಯಾಗುವುದು ಹೇಗೆ? ಇಂಥದ್ದೊಂದು ಕತೆಯ ಎಳೆಯೊಂದಿಗೆ ‘ಬ್ರೊ ಡ್ಯಾಡಿ’ ತಯಾರಾಗಿದೆ. ಟ್ರೈಲರ್‌ನಲ್ಲಿ ತಮಾಷೆಯ ಸನ್ನಿವೇಶಗಳೇ ತುಂಬಿಕೊಂಡಿದ್ದು ತಾಜಾ ಎನಿಸುತ್ತದೆ. ಮೋಹನ್‌ ಲಾಲ್‌, ಪೃಥ್ವಿರಾಜ್‌ ಅಭಿಮಾನಿಗಳು ಅತೀವ ನಿರೀಕ್ಷೆಯಿಂದ ಚಿತ್ರವನ್ನು ಎದುರುನೋಡುತ್ತಿದ್ದಾರೆ.

ಚಿತ್ರದ ಸಂಪೂರ್ಣ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದೆ. ಆಂಟೋನಿ ಪೆರಂಬವೂರ್‌ ನಿರ್ಮಾಣದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಮೀನಾ, ಲಾಲೂ ಅಲೆಕ್ಸ್‌, ಮುರಳಿ ಗೋಪಿ, ಕನಿಹಾ ಇದ್ದಾರೆ. ಇನ್ನು ಪೃಥ್ವಿರಾಜ್‌ ಮತ್ತೆರೆಡು ಸಿನಿಮಾಗಳ ನಿರ್ದೇಶನಕ್ಕೆ ಸಿದ್ಧವಾಗುತ್ತಿದ್ದಾರೆ. ‘ಲೂಸಿಫರ್‌’ ಫ್ರ್ಯಾಂಚೈಸ್‌ ‘ಎಂಪುರಾನ್‌’ ಈಗಾಗಲೇ ಘೋಷಣೆಯಾಗಿದೆ. ಮುರಳಿ ಗೋಪಿ ಚಿತ್ರಕಥೆ ಫೈನಲ್‌ ಆಗುತ್ತಿದ್ದು ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಇನ್ನು ಮೋಹನ್‌ ಲಾಲ್‌ ‘ಬರೋಝ್‌’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಈ ಫ್ಯಾಂಟಸಿ ಡ್ರಾಮಾ ಸಿನಿಮಾ ಮೂಲಕ ಮೋಹನ್‌ಲಾಲ್‌ ನಿರ್ದೇಶಕರಾಗುತ್ತಿದ್ದಾರೆ ಎನ್ನುವುದು ವಿಶೇಷ. ಪೃಥ್ವಿರಾಜ್‌ ಕೂಡ ಈ ಚಿತ್ರದಲ್ಲಿ ನಟಿಸಬೇಕಿತ್ತು. ಬ್ಯುಸಿ ಶೆಡ್ಯೂಲ್‌ನಿಂದಾಗಿ ಅವರು ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಸದ್ಯ ಶಾಜಿ ಕೈಲಾಸ್‌ ನಿರ್ದೇಶನದ ‘ಕಡುವ’ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ ಪೃಥ್ವಿರಾಜ್‌. ಬ್ಲೆಸ್ಸೀ ನಿರ್ದೇಶನದ ‘ಆಡುಜೀವಿತಂ’ ಚಿತ್ರೀಕರಣದಲ್ಲಿರುವ ಅವರ ಮತ್ತೊಂದು ಸಿನಿಮಾ.

LEAVE A REPLY

Connect with

Please enter your comment!
Please enter your name here