ಈ ಹಿಂದೆ ಇಂಗ್ಲಿಷ್‌ ಚಿತ್ರವೊಂದನ್ನು ನಿರ್ದೇಶಿಸಿ ಅನುಭವ ಪಡೆದಿರುವ ಬೃಂದಾ ಮುರಳೀಧರ್‌ ‘ಅಂತು ಇಂತು’ ಕನ್ನಡ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಮೂಲತಃ ಮೈಸೂರಿನ ಅವರು ಸದ್ಯ ಕೆನಡಾ ನಿವಾಸಿ. ಕನ್ನಡದಿಂದ ಕೆನಡಾಕ್ಕೆ ಬಾಂಧವ್ಯ ಬೆಸೆಯುವ ಈ ಚಿತ್ರದ ಹೀರೋ ದಿಗಂತ್‌.

“ನಾನು ಮೂಲತಃ ಮೈಸೂರಿವಳು. ರಂಗ ಕಲಾವಿದೆ. ಇಪ್ಪತ್ತೈದು ವರ್ಷಗಳಿಂದ ಕೆನಡಾದಲ್ಲಿದ್ದೀನಿ. ಅಲ್ಲೇ ನಾನು ಹಾಗೂ ನನ್ನ ಪತಿ ಮುರಳಿಧರ್ ನಾಟಕ ಸೇರಿದಂತೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಾನು ಈ ಹಿಂದೆ ಇಂಗ್ಲಿಷ್ ಚಿತ್ರ ನಿರ್ದೇಶಿಸಿದ್ದ ನನಗಿದು ಕನ್ನಡದಲ್ಲಿ ಮೊದಲ ಸಿನಿಮಾ. ಸ್ವದೇಶದಿಂದ ವಿದೇಶಕ್ಕೆ ಹೋಗಿ ನೆಲೆಸಿರುವವರ ಭಾವನಾತ್ಮಕ ಕಥೆ‌. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ” ಎಂದು ಸುದ್ದಿಗೋಷ್ಠಿಯಲ್ಲಿ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಿದರು ಬೃಂದಾ ಮುರಳೀಧರ್‌. ನಿರ್ದೇಶನದ ಜೊತೆ ನಿರ್ಮಾಣದ ಹೊಣೆಯನ್ನೂ ಅವರು ಹೊತ್ತಿದ್ದಾರೆ. ಕಿರುತೆರೆ ನಟಿ, ನಿರ್ಮಾಪಕಿ ಜಯಶ್ರೀ ರಾಜ್‌ ಅವರು ಈ ಚಿತ್ರನಿರ್ಮಾಣದಲ್ಲಿ ಬೃಂದಾ ಅವರಿಗೆ ಜೊತೆಯಾಗುತ್ತಿದ್ದಾರೆ.

ನಟಿ ಜಯಶ್ರೀ ರಾಜ್‌ ಮಾತನಾಡಿ, “ನಾನು 25 ವರ್ಷಗಳಿಂದ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದೇನೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದು, ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನಿರ್ದೇಶಕಿ ಬೃಂದಾ ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು” ಎಂದರು. ದಿಗಂತ್‌ ಈ ಚಿತ್ರದ ನಾಯಕ. ಭಾರತದಿಂದ ಕೆನಡಾಕ್ಕೆ ಬಂದ ಹುಡುಗನ ಪಾತ್ರ ಅವರದು. ಗಿರಿಜಾ ಲೋಕೇಶ್, ರವಿಶಂಕರ್ ಗೌಡ ಪ್ರಮುಖ ಪಾತ್ರಗಳಲ್ಲಿರುತ್ತಾರೆ. ಕೆನಡಾದ ಸ್ಥಳೀಯ ತಂತ್ರಜ್ಞರು ಚಿತ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ‌.

LEAVE A REPLY

Connect with

Please enter your comment!
Please enter your name here