ಸಾಹಿತಿ ದೇವನೂರು ಮಹಾದೇವ ಅವರು ಹೇಳಿರುವ ‘ಸಂಬಂಜ ಅನ್ನೋದು ದೊಡ್ದು ಕನಾ’ ಎನ್ನುವ ಸಾಲು ‘ಡಿಎನ್‌ಎ’ ಚಿತ್ರಕ್ಕೆ ಸ್ಫೂರ್ತಿ. ಪ್ರಕಾಶ್‌ ರಾಜ್‌ ಮೇಹು ನಿರ್ದೇಶನದ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ. ಪರಿಸರ ಪ್ರೇಮಿ ‘ಪದ್ಮಶ್ರೀ’ ತುಳಸೀಗೌಡ ಅವರು ಧ್ವನಿಸುರಳಿ ಬಿಡುಗಡೆ ಮಾಡಿದ್ದು ವಿಶೇಷ.

“ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೀನಿ. ‘ಜನುಮದ ಜೋಡಿ’ ಚಿತ್ರಕ್ಕೆ ನಾಗಾಭರಣ ಅವರೊಡನೆ ಕೆಲಸ‌ ಮಾಡಿದ್ದೇನೆ. ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದೇನೆ. ಈಗ ಬಹಳ ವರ್ಷಗಳ ನಂತರ ‘ಡಿಎನ್‌ಎ’ ಚಿತ್ರ ನಿರ್ದೇಶಿಸಿದ್ದೇನೆ. ಸಾಹಿತಿ ದೇವನೂರು ಮಹದೇವ ಅವರ ‘ಸಂಬಂಜ ಅನ್ನೋದು ದೊಡ್ದು ಕಾನ’ ಮಾತು ಈ ಚಿತ್ರಕ್ಕೆ ಸ್ಫೂರ್ತಿ” ಎಂದರು ನಿರ್ದೇಶಕ ಪ್ರಕಾಶ್ ರಾಜ್ ಮೇಹು. ಅದು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಪರಿಸರ ಕಾರ್ಯಕರ್ತೆ ‘ಪದ್ಮಶ್ರೀ’ ತುಳಸಿಗೌಡ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು. ನಟ, ನಿರೂಪಕ ಮಾಸ್ಟರ್‌ ಆನಂದ್‌ ಚಿತ್ರದ ವೀಡಿಯೋ ಸಾಂಗ್‌ವೊಂದನ್ನು ಲೋಕಾರ್ಪಣೆಗೊಳಿಸಿದರು.

ನಿರ್ಮಾಪಕ ಮೈಲಾರಿ ಅವರು ವರನಟ ಡಾ.ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಕುಟುಂಬದ ಎಲ್ಲರೂ ಒಟ್ಟಾಗಿ ಕುಳಿತು ನೋಡುವಂತಹ ಸಿನಿಮಾ ನಿರ್ಮಿಸಬೇಕೆನ್ನುವುದು ಅವರ ಆಸೆಯಾಗಿತ್ತಂತೆ. ‘ಡಿಎನ್‌ಎ’ ಚಿತ್ರದೊಂದಿಗೆ ಅದು ಈಡೇರಿದೆ ಎಂದರು. ನಟ ಅಚ್ಯುತ್‌ಕುಮಾರ್‌ ಚಿತ್ರದ ಪ್ರಮುಖ ಪಾತ್ರಧಾರಿ. ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಅವರೊಂದಿಗೆ ದಶಕಗಳ ಗೆಳೆತನ ಅಚ್ಯುತ್‌ರದ್ದು. “ನಾನು ಹಾಗೂ ನಿರ್ದೇಶಕರು ಬಹುಕಾಲದ ಗೆಳೆಯರು. ಪ್ರಕಾಶ್ ಅವರು ಈ‌ ರೀತಿಯ ಕಥೆಯಿದೆ ಎಂದು ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಕೊರೋನದಿಂದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ” ಎಂದರು ಅಚ್ಯುತ್‌ ಕುಮಾರ್‌. “ಕೆಲವು ಸಿನಿಮಾಗಳು ಹೃದಯಕ್ಕೆ ಹತ್ತಿರವಾಗುತ್ತವೆ.‌ ಅಂತಹ ಒಂದು ಸಿನಿಮಾ ‘ಡಿಎನ್ಎ'” ಎನ್ನುವ ಖುಷಿ ನಟಿ ಎಸ್ತರ್ ನರೋನ ಅವರದು.

ನಟ, ನಿರೂಪಕ ಮಾಸ್ಟರ್‌ ಆನಂದ್‌ ಅವರ ಪುತ್ರ ಕೃಷ್ಣ ಈ ಚಿತ್ರದಲ್ಲಿ ನಟಿಸಿದ್ಧಾನೆ. ಚಿತ್ರದ ಶೀರ್ಷಿಕೆ ‘ಡಿಎನ್‌ಎ’ ಅಂದರೆ ಏನೆಂಬುದನ್ನು ಅವರು ರಿವೀಲ್‌ ಮಾಡಿದರು. “ಡಿ.ಎನ್.ಎ ಅಂದರೆ ಧ್ರುವ, ನಕ್ಷತ್ರ ಹಾಗೂ ಆಕಾಶ ಎಂದು. ಇದು ತಂದೆ , ತಾಯಿ ಹಾಗೂ ಮಗನ ಹೆಸರು” ಎಂದರು. ನಟಿ ಅನಿತಾಭಟ್‌ ಅವರಿಗೆ ಚಿತ್ರದಲ್ಲಿ ವಿಶೇಷ ಪಾತ್ರವಿದೆ. ಚೇತನ್‌ ರಾಜ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ನಾಳೆ ಜನವರಿ 7ರಂದು ಸಿನಿಮಾ ತೆರೆಕಾಣಬೇಕಿತ್ತು. ವೀಕೆಂಡ್‌ ಕರ್ಫ್ಯೂ ಇರುವುದರಿಂದ ಚಿತ್ರತಂಡ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ. ರೋಜರ್ ನಾರಾಯಣ್, ಯಮುನ, ಚೈತನ್ಯ, ಮಾಸ್ಟರ್‌ ಧ್ರುವ ಮೇಹು, ನಿಹಾರಿಕ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌‌.

LEAVE A REPLY

Connect with

Please enter your comment!
Please enter your name here