ಶಾರುಖ್‌ ಖಾನ್‌ ಅಭಿನಯದ ‘ಡಂಕಿ’ ಹಿಂದಿ ಚಿತ್ರದ ಮೂರನೇ ಸಾಂಗ್‌ ‘ನಿಕ್ಲೆ ದ ಕಭಿ ಹಮ್ ಘರ್ ಸೆ’ ಬಿಡುಗಡೆಯಾಗಿದೆ. ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಸಿನಿಮಾದ ಈ ಹಾಡನ್ನು ಜಾವೆದ್‌ ಅಖ್ತರ್‌ ರಚಿಸಿದ್ದು, ಪ್ರೀತಂ ಸಂಗೀತ ಸಂಯೋಜಿಸಿದ್ದಾರೆ. ಸೋನು ನಿಗಂ ಹಾಡಿದ್ದಾರೆ.

ರಾಜ್‌ಕುಮಾರ್‌ ಹಿರಾನಿ ಮತ್ತು ಶಾರುಖ್‌ ಖಾನ್‌ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಡಂಕಿ’ ಸಿನಿಮಾ ಇದೇ ಡಿಸೆಂಬರ್‌ 21ರಂದು ತೆರೆಕಾಣುತ್ತಿದೆ. ಇಂದು ಚಿತ್ರದ ಮೂರನೇ ಸಾಂಗ್‌ ಬಿಡುಗಡೆಯಾಗಿದೆ. ‘ಡಂಕಿ ಡ್ರಾಪ್‌ -3’ ಶೀರ್ಷಿಕೆಯಡಿ ಹಾಡು ಹೊರಬಂದಿದೆ. ಇದಕ್ಕೂ ಮುನ್ನ ರಿಲೀಸ್‌ ಆಗಿದ್ದ ‘ಡಂಕಿ’ ಸಿನಿಮಾದ ‘ಲುಟ್ ಪುಟ್ ಗಯಾ’ ಹಾಡು ಮೋಡಿ ಮಾಡ್ತಿದೆ. ಶಾರುಖ್ ಹಾಗೂ ತಾಪ್ಸಿ ನಡುವಿನ ಪ್ರೇಮಗೀತೆ ಹಿಟ್ ಲೀಸ್ಟ್ ಸೇರಿದೆ. ಇದೀಗ ಡಂಕಿ ಸಿನಿಮಾದ ಎಮೋಷನಲ್ ನಂಬರ್ ಬಂದಿದೆ. ‘ನಿಕ್ಲೆ ದ ಕಭಿ ಹಮ್ ಘರ್ ಸೆ’ ಸಾಹಿತ್ಯದ ಸಾಂಗ್ ಇದು. ಜಾವೇದ್ ಅಖ್ತರ್‌ ಸಾಹಿತ್ಯ ಬರೆದಿದ್ದು, ಸೋನು ನಿಗಂ ಕಂಠ ಕುಣಿಸಿದ್ದು, ಪ್ರೀತಂ ಸಂಗೀತ ಹಾಡಿನ ಶ್ರೀಮಂತಿಕೆ ಹೆಚ್ಚಿಸಿದೆ.

ನಾಲ್ಕು ಜನ ಸ್ನೇಹಿತರು ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ಹೋಗುವುದೇ ಚಿತ್ರದ ಕಥೆ. ಆ ಕಥೆಯ ಎಮೋಷನಲ್ ಪಯಣವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ‘3 ಈಡಿಯಟ್ಸ್’, ‘ಲಗೆ ರಹೋ ಮುನ್ನಾಭಾಯಿ’, ‘ಪಿಕೆ’, ‘ಸಂಜು’, ‘ಮುನ್ನಾಭಾಯಿ ಎಂಬಿಬಿಎಸ್’ ರೀತಿಯ ಅಪರೂಪದ ಸಿನಿಮಾಗಳನ್ನು ನೀಡಿರುವ ರಾಜ್‌ಕುಮಾರ್‌ ಹಿರಾನಿ ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ಸೇರಿ ‘ಡಂಕಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಇನ್ನೂ ಕೆಲವು ನಟರು ನಟಿಸಿದ್ದಾರೆ. ಭಾರತದಿಂದ ಅಕ್ರಮವಾಗಿ ಕೆಲ ಯುವಕರು ವಿದೇಶಕ್ಕೆ ತೆರಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್‌ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 21ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here