Don’t bite more than you can chew ಎನ್ನುವ ಮಾತು ಇಲ್ಲಿ ಸರಿಯಾಗಿ ಅನ್ವಯವಾಗುತ್ತದೆ. ಸರಣಿ ಅದೆಷ್ಟು ವಿಷಯಗಳಿಗೆ ಬಾಯಿಹಾಕುತ್ತದೆ ಎಂದರೆ ಯಾವುದನ್ನೂ ಸರಿಯಾಗಿ ಅಗಿಯಲು, ಆಸ್ವಾದಿಸಲು ಆಗುವುದೇ ಇಲ್ಲ. ‘ಎಸ್ಕೇಪ್‌ ಲೈವ್‌’ ಸರಣಿ ಡಿಸ್ನೀ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕೆಲವೊಂದು ವಿಷಯಗಳಿರುತ್ತವೆ. ಅದನ್ನು ವಸ್ತುವಾಗಿಟ್ಟುಕೊಂಡು ಯಾಕೆ ಯಾರೂ ಇನ್ನೂ ಸಿನಿಮಾವನ್ನಾಗಲೀ, ವೆಬ್ ಸರಣಿಯನ್ನಾಗಲಿ ಮಾಡಿಲ್ಲ ಎಂದು ಆಗಾಗ ಕುತೂಹಲವಾಗುತ್ತಿರುತ್ತದೆ. ಅಂತಹ ಒಂದು ವಿಷಯ ರಿಯಾಲಿಟಿ ಟೀವಿ ಮತ್ತು ಸಾಮಾಜಿಕ ಜಾಲತಾಣಗಳು. ಈ ವಿಷಯಗಳನ್ನು ವಸ್ತುವಾಗಿಸಿಕೊಂಡ ಹಲವಾರು ಬರಹಗಳನ್ನು ಓದಿದ್ದೇನೆ, ಆದರೆ ಅವುಗಳನ್ನು ತೆರೆಯಮೇಲೆ ಕಂಡಿದ್ದು ಕಡಿಮೆ. ಹಾಗಾಗಿಯೇ ಹಾಟ್‌ಸ್ಟಾರ್‌ನಲ್ಲಿ ‘ಎಸ್ಕೇಪ್ ಲೈವ್’ ಎನ್ನುವ ಈ ವೆಬ್ ಸರಣಿಯನ್ನು ನೋಡಿದಾಗ, ಅದರಲ್ಲೂ ಮೊದಲಿಗೇ ನಮ್ಮ ಅರುಂಧತಿ ನಾಗ್ ಮತ್ತು ಸಿದ್ಧಾರ್ಥನನ್ನು ಕಂಡು ವಿಪರೀತ ಖುಷಿಯಾಯಿತು. ಹಾಗಾಗಿಯೇ ಈ ಸರಣಿಯನ್ನು ನೋಡಲು ಶುರು ಮಾಡಿದೆ.

ಸಿದ್ಧಾರ್ಥ ಕುಮಾರ್ ತಿವಾರಿ ಬರೆದು ನಿರ್ದೇಶಿಸಿರುವ ಈ ವೆಬ್ ಸರಣಿ 9 ಕಂತುಗಳಲ್ಲಿ ಸ್ಟ್ರೀಮ್ ಆಗುತ್ತದೆ. ಒಂದು ಚೈನೀಸ್ ಕಂಪನಿ ಭಾರತದಲ್ಲಿ ತನ್ನ ಬಂಡವಾಳ ಹೂಡಿಕೆ ಮತ್ತು ವ್ಯಾಪಾರ ವಿಸ್ತರಣೆಗಾಗಿ ಒಂದು ಆಪ್ ಶುರು ಮಾಡಿದೆ. ಅದೇ ‘ಎಸ್ಕೇಪ್ ಲೈವ್’. ಭಾರತದ ಯಾವುದೇ ಮೂಲೆಯಲ್ಲಿರುವವರು ಕೇವಲ ಒಂದು ಮೊಬೈಲ್ ಮತ್ತು ಇಂಟರ್‌ನೆಟ್‌ ಸಂಪರ್ಕದ ಮೂಲಕ ಪಾಲ್ಗೊಳ್ಳುವ ಆಟ ಇದು. ಒಂದು ತಿಂಗಳ ಸ್ಪರ್ಧೆ. ಭಾಗವಹಿಸುವವರು ತಮ್ಮಲ್ಲಿರುವ ಕಲೆಯನ್ನು ಆಪ್‌ನ ಸೈಟ್‌ನಲ್ಲಿ ಹರಿಬಿಡಬೇಕು. ನೋಡುಗರು ಮೆಚ್ಚುಗೆಯಾದರೆ ಹಾರ್ಟ್ ಕೊಡಬಹುದು. ಇನ್ನೂ ಮೆಚ್ಚುಗೆಯಾದರೆ ಡೈಮಂಡ್ ಕೊಡಬಹುದು. ಡೈಮಂಡ್ ಕೊಟ್ಟರೆ ಅವರ ಖಾತೆಯಿಂದ ಇಂತಿಷ್ಟು ಹಣ ಹೊರಗೆ ಹೋಗುತ್ತದೆ. ಅದರಲ್ಲಿ ಅರ್ಧ ಆಪ್ ಕಂಪನಿಗೆ, ಇನ್ನರ್ಧ ಆ ಹಾರ್ಟ್ ಸಿಕ್ಕವರ ಖಾತೆಗೆ ಹೋಗುತ್ತದೆ. ಇದು ಕೇವಲ ಟ್ರೈಲರ್ ಮಾತ್ರ, ನಿಜವಾದ ಸಿನಿಮಾ 30 ದಿನಗಳ ಕೊನೆಯಲ್ಲಿ! ಈ ಸ್ಪರ್ಧೆಯಲ್ಲಿ ಅತ್ಯಂತ ಹೆಚ್ಚು ಡೈಮಂಡ್ ಗಳಿಸಿದವರಿಗೆ ಬರೋಬರಿ 3 ಕೋಟಿ ಬಹುಮಾನ! ಈ 3 ಕೋಟಿ ದೇಶದ ಮೂಲೆಮೂಲೆಗಳಿಂದ ಹಲವರನ್ನು ತನ್ನೆಡೆಗೆ ಸೆಳೆಯುತ್ತದೆ. ಅವರಲ್ಲಿ 5 ಮಂದಿಯನ್ನು ಪ್ರಧಾನ ಪಾತ್ರಗಳನ್ನಾಗಿಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ.

ಒಬ್ಬಳು ಈಶಾನ್ಯ ರಾಜ್ಯಗಳಿಂದ ಬಂದವಳು, ಚೈನೀಸ್ ಹೋಟೆಲೊಂದರಲ್ಲಿ ವೆಯ್ಟ್ರೆಸ್ ಆಗಿದ್ದಾಳೆ. ಅವಳ ಆಸೆ ವಿದೇಶಕ್ಕೆ ಹೋಗುವುದು. ಅದಕ್ಕೆ ಅವಳು ಕಾರಣಗಳನ್ನು ಕೊಡುತ್ತಾಳಾಗಲೀ ಅದು ಸಮರ್ಪಕ ಅನ್ನಿಸುವುದಿಲ್ಲ. ಇಲ್ಲಿನ ಹಲವಾರು ಪಾತ್ರಗಳ ನಡವಳಿಕೆ, ಪಾತ್ರರಚನೆ ಹೀಗೆಯೇ ಅಸಮರ್ಪಕವಾಗಿದೆ, ಆ ಮಾತು ಬೇರೆ! ನನ್ನನ್ನು ಎಲ್ಲರೂ ಚಿಂಕಿ ಎಂದು ಅಪಹಾಸ್ಯ ಮಾಡುತ್ತಾರೆ ಎನ್ನುವ ಇವಳು, ಮತ್ತೊಂದು ಪಾತ್ರಧಾರಿಯನ್ನು ಅಷ್ಟೇ ಅವಹೇಳನಕಾರಿಯಾಗಿ ‘ದಕ್ಷಿಣ ಭಾರತದವ’ ಎಂದು ನಿಂದಿಸುತ್ತಾಳೆ! ಇವಳ ಕೆಲಸಕ್ಕೆ ಸಮಜಾಯಿಶಿ ಕೊಡಲೋ ಎನ್ನುವಂತೆ ಊರಲ್ಲಿರುವ ಅಪ್ಪನಿಗೆ ಮರಣಾಂತಿಕ ಕಾಯಿಲೆ ಇದೆ ಎನ್ನುವ ಸವಕಲಾದ ಕಥೆ ಬೇರೆ. ಇವಳು ತೆರೆಯ ಮೇಲೆ ಬರುವುದು ಕಾಮಕನ್ನಿಕೆಯಾಗಿ. ಮುಖಕೆ ಮುಖವಾಡ ಧರಿಸಿರುವ ಈಕೆ ತನ್ನ ಕಾಮೋತ್ತೇಜಕ ಭಾವಭಂಗಿಗಳಿಂದ ಡೈಮಂಡ್ಸ್‌ಗಳಿಗಾಗಿ ಬಿನ್ನಹ ಮಾಡುತ್ತಿರುತ್ತಾಳೆ. ಅವಳ ಈ ಮುಖವಾಡದ ಹಿಂದಿನ ರಹಸ್ಯ ತಿಳಿದ ಬಾಸ್‌ನಿಂದ ಅವಳ ಲೈಂಗಿಕ ಶೋಷಣೆ ನಡೆಯುತ್ತಿರುತ್ತದೆ. ಇಲ್ಲಿ ಬಾಸ್ ಒಬ್ಬ ಹೆಣ್ಣು.

ಇನ್ನೊಬ್ಬ ಡಾರ್ಕಿ ಎನ್ನುವ ಹೆಸರಿನ ಯುವಕ. ವಿಕೃತ ಮನೋಭಾವ ಮತ್ತು ನಡವಳಿಕೆಯವ. ತನ್ನ ವಿಕೃತತೆಯನ್ನೇ TRP ಗಳಿಸಲು ಬಂಡವಾಳ ಮಾಡಿಕೊಂಡವ. ಇನ್ನೊಬ್ಬನಿದ್ದಾನೆ, ನೀಲೇಶ್ ಸೋನಾವಣೆ ಎನ್ನುವ ದೋಭಿಘಾಟ್ ಚಾಳ್‌ನ ಹುಡುಗ, ಅಡ್ಡ, ಗೋಡೆ, ತಡೆಗಳನ್ನು ದಾಟಿ ಹಾರುವ parkour ಕಲಾವಿದ. ತನ್ನ ಚಾಳ್‌ನ ಬಗ್ಗೆ, ಮಡಿವಾಳಿಗನಾಗಿ ಕೆಲಸ ಮಾಡುವ ಅಪ್ಪನ ಬಗ್ಗೆ, ತನ್ನ ಸಾಮಾಜಿಕ ಹಿನ್ನೆಲೆಯ ಬಗ್ಗೆ, ಬಡತನದ ಬಗ್ಗೆ ಅವಮಾನ ಪಟ್ಟುಕೊಳ್ಳುವ ಇವನ ಹಿರಿಯಾಸೆ ಈ ಪಂದ್ಯದ ಹಣ ಗೆದ್ದು, ಈ ಬದುಕನ್ನು ತಪ್ಪಿಸಿಕೊಳ್ಳುವುದು. ಎಲ್ಲ ಮೆಟ್ಟಿಲುಗಳನ್ನೂ ಲಿಫ್ಟ್ ಮೂಲಕ ಏರಿ ಪೆಂಟ್ ಹೌಸ್ ಒಂದರಲ್ಲಿ ವಾಸ ಮಾಡುವುದು. ಅದಕ್ಕಾಗಿ ಸ್ಪರ್ಧೆಗಿಳಿದಿದ್ದಾನೆ. ವಾರಣಾಸಿಯಲ್ಲಿನ ಮುದ್ದಾದ ಹುಡುಗ ರಾಜಕುಮಾರ. ಕಡು ಸ್ಟ್ರಿಕ್ಟ್ ಅಪ್ಪನ ಮಗನಾದ ಅವನ ಆಸೆ ಆಪರೇಶನ್ ಮಾಡಿಸಿಕೊಂಡು ಹೆಣ್ಣಾಗುವುದು. ಅದಕ್ಕೆ ಹಣ ಬೇಕು. ಅದಕ್ಕಾಗಿ ಆತ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುತ್ತಾನೆ.

ಇದು ನಾಲ್ಕು ಜನ ಸ್ಪರ್ಧಾಳುಗಳ ಕಥೆಯಾದರೆ, ನನ್ನನ್ನು ಆಳವಾಗಿ ಅಲುಗಾಡಿಸಿದ್ದು 5ನೆಯ ಸ್ಪರ್ಧಾಳು ಡ್ಯಾನ್ಸ್ ರಾಣಿ. ರಾಜಾಸ್ಥಾನದ ಹಳ್ಳಿಯೊಂದರ ಬಡಕುಟುಂಬದ ಈ 6 – 7 ವರ್ಷಗಳ ಹುಡುಗಿಯ ಅಮ್ಮನಿಗೆ ಅವಳನ್ನು ಟೀವಿಯ ಡ್ಯಾನ್ಸ್ ಕಾಂಪಿಟೇಶನ್‌ನಲ್ಲಿ ಕಳುಹಿಸಿ, ಅಲ್ಲಿ ಆ ಪುಟಾಣಿ ಗೆದ್ದರೆ ಆ ಮೂಲಕ ಹಿಂದೊಮ್ಮೆ ತೀರದ ತನ್ನ ಆಸೆಯನ್ನು ಪೂರೈಸಿಕೊಳ್ಳುವ ಹಟ. ಅವಳು ನೃತ್ಯ ಮಾಡಲು ಅವಳ ತಂದೆ ಅಡ್ಡಿಯಾಗಿರುತ್ತಾನೆ. ಹೀಗಾಗಿ ಮಗಳು ನೃತ್ಯ ಮಾಡಿ, ಟೀವಿ ಶೋನಲ್ಲಿ ಗೆದ್ದು ಹೆಸರು ಬರಲಿ ಎನ್ನುವ ಆಸೆ. ಗಂಡನನ್ನು, ಕಾಡಿ, ಬೇಡಿ, ಮುದ್ದಿಸಿ, ಓಲೈಸಿ ಮಗಳನ್ನು ಟೀವಿ ಸ್ಪರ್ಧೆಗೆ ಕರೆದುಕೊಂಡು ಹೋಗಲು ಒಪ್ಪಿಸುತ್ತಾಳೆ. ಹೋದಸಲ ಆಯ್ಕೆಯಾಗಲಿಲ್ಲ ಎಂದು ಮಗಳು ಒಂದು ವಾರ ಅತ್ತಿದ್ದಳು ಎಂದು ಅಪ್ಪ ನಿಟ್ಟುಸಿರಿಟ್ಟರೆ, ‘ಆಯ್ತು, ಗೆದ್ದರೆ ಬಾಳು ಪೂರ್ತಿ ಹೆಸರಾಗುವುದು’ ಎಂದು ಅಮ್ಮ ಸಮಜಾಯಿಶಿ ಕೊಡುತ್ತಾಳೆ. ಅವಳಿಗೆ ಅದೇ ರೀತಿ ಮಹತ್ವಾಕಾಂಕ್ಷೆ ಇರುವ ತಮ್ಮ ಒಬ್ಬನಿದ್ದಾನೆ. ಅವನೊಬ ಜುಗಾಡ್ ರಾಜ. ಈ ಎಲ್ಲಾ ಸ್ಪರ್ಧೆಗಳಿಗೂ ಅಕ್ಕ ಮತ್ತು ಪುಟಾಣಿ ರಾಣಿಯನ್ನು ಕರೆದೊಯ್ಯುವುದು ಅವನೇ.

ಆ ಸಲದ ಆಯ್ಕೆಯ ಸುತ್ತಿನಲ್ಲಿ ರಾಣಿ ಕುಣಿಯುವುದು ಒಂದು ಐಟಂ ಹಾಡಿಗೆ. ಮಕ್ಕಳು ನೋಡಲೂ ಬಾರದ ನೃತ್ಯವನ್ನು ಆ ಪುಟಾಣಿ ಅಭಿನಯಪೂರ್ವಕವಾಗಿ ಮಂಡಿಸುತ್ತದೆ. ತೀರ್ಪುಗಾರರು ರಾಣಿಯನ್ನು ನಿರಾಕರಿಸಿ ಅವಳ ತಾಯಿ ಮತ್ತು ಮಾವನಿಗೆ ಮಗುವಿನಿಂದ ಅಂತಹ ನೃತ್ಯ ಮಾಡಿಸಿದ್ದಕ್ಕಾಗಿ ಛೀಮಾರಿ ಹಾಕುತ್ತಾರೆ. ಅಲ್ಲಿವರೆಗೂ ಎಲ್ಲಾ ಸರಿ. ಅಷ್ಟರಲ್ಲಿ ಈ ಎಸ್ಕೇಪ್ ಆಪ್ ರಾಣಿಯ ಬದುಕಿಗೆ ಪ್ರವೇಶ ಮಾಡುತ್ತದೆ. ಟೀವಿಯಲ್ಲಿ ಜಡ್ಜ್ ಗಳಿರುತ್ತಾರೆ. ಆದರೆ ಈ ಆಪ್‌ನಲ್ಲಿ ಬೇಕೆಂದವರಿಗೆ ಬೇಕೆನ್ನಿಸುವ ಅವಕಾಶ. ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಜೋರು ಧೈರ್ಯದ, ಚಟುವಟಿಕೆಯ ಆ ಮಗು ಒಂದೊಂದಾಗಿ ತನ್ನ ಮುಗ್ಧತೆಯ ಪರದೆಗಳನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಅವಳಿಗೆ ಬೆಳೆದ ಹುಡುಗಿಯ ಮೈಕಟ್ಟು ಬರಲಿ ಎಂದು ಅವಳ ಮಾವ ಯಾವುದೋ ಸಂಶಯಾಸ್ಪದ ವೈದ್ಯರಿಂದ ವಿಟಮಿನ್ ಇಂಜೆಕ್ಷನ್ ಎಂದು ಹೇಳಿ ಹಾರ್ಮೋನ್ ಇಂಜಕ್ಷನ್‌ಗಳನ್ನು ಕೊಡಿಸುತ್ತಾನೆ. 7 ವರ್ಷದ ಹುಡುಗಿಯ ಮೈ, ನಡವಳಿಕೆ, ವೈಯ್ಯಾರ, ಭಂಗಿ ಎಲ್ಲವೂ ಹದಿಹರೆಯದ ಹುಡುಗಿಯ ರೀತಿ ಬದಲಾಗುತ್ತದೆ. ಜೊತೆಜೊತೆಗೆ ವಯಸ್ಸಿಗೆ ಮೀರಿದ ಚಾಲೂಕು ಸಹ ಬರುತ್ತದೆ.

ಇಡೀ ಸರಣಿಯಲ್ಲಿ ನನ್ನನ್ನು ಇನ್ನಿಲ್ಲದ ವಿಷಾದಕ್ಕೆ ದೂಡಿದ ದೃಶ್ಯ ಎಂದರೆ, ಕೈಯ್ಯಲ್ಲಿ ಬಾರ್ಬಿ ಡಾಲ್ ಹಿಡಿದ ಆ ಪುಟಾಣಿ, ಬೊಂಬೆಯ ಬ್ಲೌಸ್ ನಿಂದ ಇಣುಕಿ ಅದರ ಎದೆ ನೋಡಿ, ತನ್ನ ಎದೆಯ ಬೆಳವಣಿಗೆ ಆಗಿದೆಯೆ ಎಂದು ಬ್ಲೌಸ್ ಒಳಗೆ ಹಣಕಿ ನೋಡಿಕೊಂಡಾಗ… ಟಿವಿಯಲ್ಲಿ ಮಗು ಐಟಂ ಹಾಡುಗಳಿಗೆ ನೃತ್ಯ ಮಾಡುವುದು ತಿಳಿದು ಅವಳ ತಂದೆ ಆಕಾಶ-ಭೂಮಿ ಒಂದು ಮಾಡುತ್ತಾನೆ. ಆ ಪುಟಾಣಿ ಅಪ್ಪನಿಗೆ ‘ಅಪ್ಪ, ಗೆದ್ದರೆ 3 ಕೋಟಿ’ ಎಂದು ಪುಸಲಾಯಿಸುತ್ತಾಳೆ. ವಿಷಣ್ಣನಾಗಿ ನಗುವ ಆತ, ‘ಮಗಳೇ, ಮೂರು ಕೋಟಿಗೆ ಎಷ್ಟು ಸೊನ್ನೆ ಅಂತಾದರೂ ಗೊತ್ತಾ ನಿನಗೆ…. ನನಗೂ ಗೊತ್ತಿಲ್ಲ….ಒಂದೊಮ್ಮೆ ನೀನು ಮೂರು ಕೋಟಿ ಎಂದಾದರೂ ಸಂಪಾದಿಸಲೂ ಬಹುದು, ಆದರೆ ನೀನೀಗ ಕಳೆದುಕೊಳ್ಳುತ್ತಿರುವುದನ್ನು ಮತ್ತೆ ಎಂದೂ ಸಂಪಾದಿಸಲಾಗುವುದಿಲ್ಲಮ್ಮ’ ಎನ್ನುತ್ತಾನೆ. ಆ ದೃಶ್ಯ ಮರೆಯಲಾಗದ್ದು. ಹಾರ್ಮೋನ್ ಇಂಜಕ್ಷನ್ ಪಡೆದ ಹುಡುಗಿಗೆ ಆಗಾಗ ಹೊಟ್ಟೆ ನೋವು, ಕ್ಷಣಕ್ಕೊಮ್ಮೆ ಬದಲಾಗುವ ಮೂಡ್, ಸಿಟ್ಟು, ಉದುರುವ ತಲೆಗೂದಲು, ಮರೆವು… ಆ ಪುಟಾಣಿ ಮಗು ಋತುಮತಿ ಸಹ ಆಗುತ್ತದೆ. ಆಪ್‌ನಲ್ಲಿ ಅವಳ ನೃತ್ಯಕ್ಕೆ ಬರುವ ಪ್ರತಿಯೊಂದು ಡೈಮಂಡ್‌ಗೆ ತನ್ನ ಖಾತೆಯಲ್ಲಿ ಹಣ ಬರುತ್ತದೆ ಎಂದು ತಿಳಿದ ಮೇಲೆ ಅಮ್ಮನೊಡನೆ ಅವಳ ಮಾತುಕಥೆಯ ರೀತಿಯೇ ಬದಲಾಗುತ್ತದೆ. ಅಮ್ಮ ಕಂಗಾಲಾಗುತ್ತಾಳೆ. ಆ ಪುಟಾಣಿ ಕಳೆದುಕೊಳ್ಳುವ ಬಾಲ್ಯ ನಮ್ಮನ್ನು ವಿಷಾದದಲ್ಲಿ ನೂಕುತ್ತದೆ.

ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವವರ ದೊಡ್ಡ ತಲೆನೋವು ಅದಕ್ಕೆ ಬೇಕಾದ ಕಂಟೆಂಟ್ ಸಿದ್ಧಪಡಿಸಿಕೊಳ್ಳುವುದು. ಸಿದ್ಧಪಡಿಸಿಕೊಂಡ ಆ ಕಂಟೆಂಟ್ ನೋಡುಗರ ಓಟುಗಳನ್ನು ತರಬೇಕು. ಈ ಹಪಾಹಪಿ ಅವರನ್ನು ಎತ್ತರಕ್ಕೂ ಏರಿಸಬಹುದು, ಪ್ರಪಾತಕ್ಕೂ ತಳ್ಳಬಹುದು. ಇದು ಒಂದು ರೀತಿಯಲ್ಲಿ 24/7 ನಡೆಯುವ ದೃಶ್ಯ ಮಾಧ್ಯಮ TRP ದಾಹಕ್ಕೆ ಬಿದ್ದು ಒಂದೊಂದೆ ಒಂದೊಂದೆ ಎಲ್ಲೆಗಳನ್ನು ದಾಟುತ್ತಾ ಹೋದಂತೆ. ಒಂದು ಕಡೆ ಸ್ಪರ್ಧಾಳುಗಳ ಕಥೆ ಹೀಗಾದರೆ, ಇನ್ನೊಂದೆಡೆ ಆ ಆಪ್ ಕಂಪನಿಯ ಅಧಿಕಾರಿಗಳ ನಡವಳಿಕೆ. ಅವರ ಒಂದೇ ಮಾನದಂಡ ವ್ಯಾಪಾರ! ಅದಕ್ಕಾಗಿ ಸ್ಪರ್ಧಾಳುಗಳನ್ನು ಪುಸಲಾಯಿಸುವ, ಆಸೆ ತೋರಿಸುವ, ಪ್ರಲೋಭನೆಗೆ ಒಳಪಡಿಸುವ ಕೆಲಸಗಳನ್ನು ಅದು ತನ್ನ ಮಾಡರೇಟರ್‌ಗಳ ಮೂಲಕ ಮಾಡಿಸುತ್ತಿರುತ್ತದೆ. ಒಬ್ಬ ಮಾಡರೇಟರ್ ಅಂತೂ ರಸ್ತೆಯಲ್ಲಿ ಹೋಗುವ ಯಾವುದೋ ಹೆಣ್ಣಿಗೆ ಹಠಾತ್ತಾಗಿ ಹೋಗಿ ಚುಂಬಿಸು, ನಿನ್ನ ನೋಡುಗರು ನಿನ್ನನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಯಾವುದೋ ಸ್ಪರ್ಧಿಗೆ ಪುಸಲಾಯಿಸುತ್ತಿರುತ್ತಾನೆ. ನೀಲೇಶ್ ಮಾಡುವ ಅಪಾಯಕಾರಿ ಸಾಹಸಗಳ ಬಗ್ಗೆ ಮಾತನಾಡುತ್ತಾ ಕಂಪನಿಯ ಉನ್ನತಾಧಿಕಾರಿ ಹೇಳುವುದು, ‘ಆತ ತುಂಬಾ ರಿಸ್ಕ್ ತಗೋತಾನೆ, ಅವನಿಗೇನಾದರೂ ಆದರೆ? ನಾವು ಪ್ಲಾನ್ ಬಿ ಇಟ್ಟುಕೊಳ್ಳಬೇಕು..’ ಎಂದು!

ಪ್ರತಿ ಸ್ಪರ್ಧಾಳುವಿಗೂ ಅವರಿಗೆ ಸಿಗುವ ಮೆಚ್ಚುಗೆಯ ಅಮಲು ತಲೆಗೇರುವಂತೆ ಮಾಡುವ ಅವರು, ಆ ಸ್ಪರ್ಧಿಗಳನ್ನು ಆಕಾಶಕ್ಕೆ ಏರಿಸುತ್ತಿರುತ್ತಾರೆ. ಆದರೆ ಅದೇ ನೋಡುಗರು ಏನಾದರೂ ಇಷ್ಟವಾಗಲಿಲ್ಲ ಎಂದು ಕಾಮೆಂಟ್ ಮಾಡಿದರೆ, ಟ್ರೋಲ್ ಮಾಡಿದರೆ ಆ ಸ್ಪರ್ಧಿಗಳು ಪಾತಾಳಕ್ಕೆ ಕುಸಿಯುತ್ತಿರುತ್ತಾರೆ. ತಮ್ಮ ಮಾನಸಿಕ ಸಮತೋಲನವನ್ನೇ ಕಳೆದುಕೊಂಡು, ಆ ಲೈಕ್ ಗಳಿಗಾಗಿ ಏನಾದರೂ, ಏನು ಬೇಕಾದರೂ ಮಾಡಲು ತಯಾರಾಗುತ್ತಾರೆ. ಆದರೆ ಸುಮಾರು ಸ್ಪರ್ಧೆಗಳ ಹಾಗೆ ಈ ಸ್ಪರ್ಧೆಯಲ್ಲೂ ಆಪ್ ಕಂಪನಿಯವರು ಯಾರು ಗೆಲ್ಲಬೇಕು, ಅಲ್ಲಲ್ಲ ಯಾರನ್ನು ಗೆಲ್ಲಿಸಬೇಕು ಎಂದು ಯೋಚಿಸಿಟ್ಟುಕೊಂಡಿರುತ್ತಾರೆ. ಏಕೆಂದರೆ ಗೆದ್ದವರು ಇವರ ‘ಬ್ರಾಂಡ್ ಅಂಬಾಸಿಡರ್’ ಆಗುತ್ತಾರೆ. ಮಧ್ಯಮ ಮತ್ತು ಕೆಳಮಧ್ಯಮ ಆರ್ಥಿಕ ವಲಯಕ್ಕೆ ಸೇರಿದ ಒಬ್ಬರು ಗೆದ್ದರೆ ಮುಂದೆ ಅದೇ ವಲಯದಿಂದ ಸಾವಿರಾರು ಜನ ಇದರಲ್ಲಿ ಭಾಗವಹಿಸುತ್ತಾರೆ. ಆ ಮಾರುಕಟ್ಟೆ ಕಂಪನಿಗೆ ತೆರೆದ ಹೆಬ್ಬಾಗಿಲಾಗುತ್ತದೆ. ಅಲ್ಲಿ ನಿಜಕ್ಕೂ ಬೇಕಾಗಿರುವುದು ಕಲೆಯಲ್ಲ, ಯಾರ ಬಳಿ ಒಳ್ಳೆಯ ಕಥೆ ಇದೆ, ಯಾರು ಗೆದ್ದರೆ ಕಂಪನಿಗೆ ಅತ್ಯಂತ ಹೆಚ್ಚಿನ ಹೆಸರು ಸಿಗುತ್ತದೆ ಎನ್ನುವುದರ ಮೇಲೆ ಅವರ ಲೆಕ್ಕಾಚಾರ ನಡೆಯುತ್ತಿರುತ್ತದೆ.

ಈ ಎಲ್ಲಾ ಕೇಡಿಗೂ ಎದುರಾಗುವ ಒಂದು ಪಾತ್ರ ಬೇಕಲ್ಲ? ಅದಕ್ಕಾಗಿ ಅವರು ನಮ್ಮ ಮುಂದಿಡುವ ಪಾತ್ರ ಸಿದ್ಧಾರ್ಥ್‌ನದ್ದು. ಆದರೆ ಕಥೆ ಬರೆಯುವಾಗಲೇ ಆ ಪಾತ್ರದ ಕಟ್ಟುವಿಕೆ ಎಷ್ಟು ಪೇಲವವಾಗಿದೆ ಎಂದರೆ, ಆಳದಲ್ಲಿ ಅವನೂ ಸಹ ಇವರಷ್ಟೇ ಭ್ರಷ್ಟನಾಗಿರುತ್ತಾನೆ. ಅವನ ಕಾರಣಗಳು ಬೇರೆಯಾಗಿರುತ್ತವೆ ಅಷ್ಟೆ. ತಂಗಿ ದುಪ್ಪಟ್ಟಾ ಧರಿಸದೆ ಮನೆಯಿಂದ ಹೊರಗೆ ಬಂದರೆ ಕಣ್ಣುಕೆಂಪಾಗಿಸಿಕೊಳ್ಳುವ ಅಣ್ಣ ಈತ. ತಂಗಿ ಸ್ನೇಹಿತನೊಡನೆ ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತಿದ್ದರೆ, ಯಾರು ಏನು ಎಂದು ತಾನು ಕೇಳದೆ ಪೋಲೀಸರನ್ನು ಕರೆದು ಆ ಹುಡುಗನನ್ನು ಲಾಕಪ್ಪಿನಲ್ಲಿ ಕೂರಿಸುವವ. ಆ ಈಶಾನ್ಯ ರಾಜ್ಯದ ಹುಡುಗಿ ಹೀನಾಳ ನಡವಳಿಕೆಯನ್ನು ತುಚ್ಚೀಕರಿಸಿ, ಅವಳನ್ನು ಆಟದಿಂದ ಬ್ಯಾನ್ ಮಾಡಿದವ ಕಡೆಗೆ ಅವಳೊಡನೆ ಮೋಹದಲ್ಲಿ ಬಿದ್ದು ಅವಳಿಗೆ ಡೈಮಂಡ್‌ಗಳ ಆಟದಲ್ಲಿ ನೆರವು ಸಹಾ ನೀಡುತ್ತಾನೆ! ನಮ್ಮಲ್ಲಿರುವ ಉತ್ತಮ ನಟರಲ್ಲಿ ಒಬ್ಬನಾದ ಸಿದ್ಧಾರ್ಥ್‌ಗೆ ಈ ಸರಣಿಯಲ್ಲಿ ನಟನೆಗೆ ಅವಕಾಶವೇ ಇಲ್ಲ. ಅವನ ಅಭಿವ್ಯಕ್ತಿ ನಾಲ್ಕೈದು ಭಾವಗಳನ್ನು ದಾಟುವುದೇ ಇಲ್ಲ. ಕೆಲವು ಪಾತ್ರಗಳನ್ನು ಕೇವಲ ಒಂದು ಸೀನ್‌ನ ಉದ್ದೇಶಕ್ಕಾಗಿ ಸೃಷ್ಟಿಸಲಾಗಿದೆಯೇ ಹೊರತು, ಅವುಗಳ ಸೃಷ್ಟಿಗೆ ಕಾರಣಗಳೇ ಇಲ್ಲ. ಇನ್ನು ಕೆಲವು ಪಾತ್ರಗಳನ್ನಂತೂ ಹಾಸ್ಯಾಸ್ಪದವಾಗಿ ಕಟ್ಟಲಾಗಿದೆ. ಸಿಕ್ಕ ಅವಕಾಶದಲ್ಲೇ ಒಳ್ಳೆಯ ಅಭಿನಯ ನೀಡಿರುವುದು ನೀಲೇಶ್ ತಂದೆ ಮತ್ತು ತಾಯಿಯ ಪಾತ್ರಧಾರಿಗಳು. ಇಡೀ ಸರಣಿಯಲ್ಲಿ ನಟನೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿರುವುದು ರಾಣಿಯ ಪಾತ್ರ ವಹಿಸಿರುವ ಆದ್ಯಾ ಶರ್ಮ.

ಒಂದು ಒಳ್ಳೆಯ ಕಥೆಯ ಎಳೆ ಇರುವ ಸರಣಿ ಅರ್ಧ ಹಾದಿಯಲ್ಲೇ ಸೂತ್ರವನ್ನು ಕಳೆದುಕೊಂಡು ಬಿಡುತ್ತದೆ. ಮೊಟ್ಟ ಮೊದಲ ಕಥೆ ಬರೆಯುವ ಕತೆಗಾರರು ತಮಗೆ ಗೊತ್ತಿರುವ ಎಲ್ಲವನ್ನೂ ಅದರಲ್ಲಿ ತುರುಕುವ ತಪ್ಪು ಮಾಡುವ ಹಾಗೆ ಚಿತ್ರ ಎಲ್ಲಾ ಸಮಸ್ಯೆಗಳನ್ನೂ ಕೈಗೆತ್ತಿಕೊಳ್ಳುತ್ತದೆ. ದೊಡ್ಡ ಕಂಪನಿಗಳ ನೀತಿಹೀನತೆ, ಸಮಾಜದ ಅಸಮಾನತೆ, ಅದು ತರುವ ಕೀಳರಿಮೆ, ಅಧಿಕಾರದ ಸ್ಥಾನದಿಂದ ನಡೆಯುವ ಲೈಂಗಿಕ ಶೋಷಣೆ, ಈಶಾನ್ಯ ರಾಜ್ಯಗಳ ನಾಗರೀಕರು ಅನುಭವಿಸುವ ತಬ್ಬಲಿತನ, ತಮ್ಮತಮ್ಮ ಮಹತ್ವಾಕಾಂಕ್ಷೆಗಳಿಗಾಗಿ ಮಕ್ಕಳ ಬಾಲ್ಯವನ್ನು ಹಾಳುಗೆಡವುವ ಪೋಷಕರು, ರಿಯಾಲಿಟಿ ಶೋಗಳು, ಲಿಂಗಾಂತರಿಗಳು ಅನುಭವಿಸುವ ಅವಮಾನ, ದುರಾಸೆಯ ತಾಯಿ, ಪಿತೃಪ್ರಧಾನ ವ್ಯವಸ್ಥೆ…. ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ ಇಲ್ಲಿ ಭಾಷೆಯ ಆಂಗಲ್ ಸಹ ತರುತ್ತಾರೆ. ಉತ್ತರ ಭಾರತದವರು ನಿರ್ಮಿಸಿರುವ ಈ ಸರಣಿಯಲ್ಲಿ ಸಿದ್ಧಾರ್ಥ್ ಬಾಯಲ್ಲಿ ‘ಕನ್ನಡ್’ ಅಲ್ಲ, ‘ಕನ್ನಡ’ ಎಂದು ಹೇಳಿಸುತ್ತಾರೆ! ಉತ್ತರ ಭಾರತದವರ ಧಾಡಸಿತನವನ್ನೂ ಒಂದು ಪಾತ್ರ ತೋರಿಸುತ್ತದೆ. ಆದರೆ ಇಷ್ಟೆಲ್ಲಾ ವಿಷಯಗಳನ್ನು ಕೈಗೆತ್ತಿಕೊಂಡಿರುವುದರಿಂದ ಯಾವುದೇ ಒಂದು ಫೋಕಸ್ ಸಾಧ್ಯವಾಗಿಲ್ಲ. Don’t bite more than you can chew ಎನ್ನುವ ಮಾತು ಇಲ್ಲಿ ಸರಿಯಾಗಿ ಅನ್ವಯವಾಗುತ್ತದೆ. ಸರಣಿ ಅದೆಷ್ಟು ವಿಷಯಗಳಿಗೆ ಬಾಯಿಹಾಕುತ್ತದೆ ಎಂದರೆ ಯಾವುದನ್ನೂ ಸರಿಯಾಗಿ ಅಗಿಯಲು, ಆಸ್ವಾದಿಸಲು ಆಗುವುದೇ ಇಲ್ಲ. ಒಂದು ಒಳ್ಳೆಯ ಕಥಾಹಂದರ ಮತ್ತು ಅದ್ಭುತ ಸಾಮರ್ಥ್ಯದ ಕಲಾವಿದರನ್ನು ಇಲ್ಲಿ ಅನ್ಯಾಯವಾಗಿ ಪೋಲು ಮಾಡಲಾಗಿದೆ. ಆದರೆ ಇದೆಲ್ಲದಕ್ಕಿಂತ ಹೆಚ್ಚಾಗಿ ಅರುಂಧತಿಯವರಂತಹ ಕಲಾವಿದೆಯ ನಟನೆಯನ್ನು ಇಲ್ಲಿ ಕ್ರಿಮಿನಲ್ ವೇಸ್ಟ್ ಮಾಡಿದ್ದು ನಿಜಕ್ಕೂ ಅಕ್ಷಮ್ಯ! ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡಿರುವ ಸರಣಿ ಅದರ ಕಟ್ಟುವಿಕೆಯಲ್ಲಿ ಎಡವಿಬಿಡುತ್ತದೆ.

Previous articleಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ; ಭಾ ಮಾ ಹರೀಶ್‌ ಬಣಕ್ಕೆ ಗೆಲುವು
Next articleನಮ್ಮೂರಲ್ಲಿ ಅರಳೋ ಹೂವೆಲ್ಲ…

LEAVE A REPLY

Connect with

Please enter your comment!
Please enter your name here