ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಭಾ ಮಾ ಹರೀಶ್‌ ಆಯ್ಕೆಯಾಗಿದ್ದಾರೆ. ಈ ಬಾರಿಯ ತುರುಸಿನ ಪೈಪೋಟಿಯಲ್ಲಿ ಸಾ ರಾ ಗೋವಿಂದು ಬಣಕ್ಕೆ ಹಿನ್ನೆಡೆಯಾಗಿ ಭಾ ಮಾ ಹರೀಶ್‌ ತಂಡದ ಸದಸ್ಯರು ಹೆಚ್ಚಿನ ಮತಗಳಿಂದ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ಮೂರು ವರ್ಷಗಳ ನಂತರ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಾರ್ಷಿಕ‌ ಚುನಾವಣೆ ಹಲವು ಕಾರಣಗಳಿಂದ ಸುದ್ದಿಯಾಗಿತ್ತು. ನಿರ್ಮಾಪಕ ಮತ್ತು ವಿತರಕರ ವಲಯಗಳಲ್ಲಿ ಎರಡು ಬಣಗಳು ಏರ್ಪಟ್ಟು ಆಕಾಂಕ್ಷಿಗಳು ಜಿದ್ದಾಜಿದ್ದಿ ನಡೆಸಿದ್ದರು. ನಿನ್ನೆ ಸಂಜೆಯವರೆಗೂ ಮತದಾನ ನಡೆದು ತಡರಾತ್ರಿ ಫಲತಾಂಶ ಹೊರಬಿದ್ದಿದೆ. ಶೇ.80ಕ್ಕೂ ಹೆಚ್ಚು ವೋಟಿಂಗ್‌ ನಡೆದಿದ್ದು 780ಕ್ಕೂ ಹೆಚ್ಚು ಮತಗಳಿಂದ ಭಾ ಮಾ ಹರೀಶ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಸಾ ರಾ ಗೋವಿಂದು ಅವರಿಗೆ 375 ಆಸುಪಾಸು ಸಂಖ್ಯೆಯ ಮತಗಳು ಲಭಿಸಿವೆ. ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿ ಸಂಜೆ ಆರರವರೆಗೆ ನಡೆದಿತ್ತು. 670ಕ್ಕೂ ಹೆಚ್ಚು ಮತಗಳನ್ನು ಪಡೆದಿರುವ ನಟ, ನಿರ್ಮಾಪಕ ಜೈಜಗದೀಶ್‌ ನಿರ್ಮಾಪಕ ವಲಯದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ KFCC ಚುನಾವಣೆ ಕಳೆದೊಂದು ವಾರದಿಂದ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಭಾ ಮಾ ಹರೀಶ್‌ ಪರವಾಗಿ ಹಿರಿಯ ನಿರ್ಮಾಪಕರಾದ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಮತ್ತು ರಾಕ್‌ಲೈನ್‌ ವೆಂಕಟೇಶ್‌, ಕಲಾವಿದರಾದ ಜಯಮಾಲಾ, ಸುಂದರ್‌ರಾಜ್‌ ಸೇರಿದಂತೆ ಹಲವರು ನೇರವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಸುದ್ದಿಗೋಷ್ಠಿಗಳನ್ನು ನಡೆಸಿ ಈ ಹಿಂದಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಆರೋಪಗಳು ಮಾಡಿದ್ದರು. ಈ ಕಾರಣಕ್ಕಾಗಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚುನಾವಣೆಯಲಿ ಭಾ ಮಾ ಹರೀಶ್‌ ಅವರಿಗೆ ಗೆಲುವು ಸಿಕ್ಕಿದೆ. ಮತದಾನದ ನಂತರ ಮಾಧ್ಯಮಗಳಿಗೆ ಮಾತನಾಡಿದ್ದ ಭಾ ಮಾ ಹರೀಶ್‌, “ನಿರ್ಮಾಪಕ ಮತ್ತು ವಿತರಕರ ವಲಯಗಳು ಚುನಾವಣೆಯಲ್ಲಿ ಮುಂಚೂಣೆಯಲ್ಲಿದ್ದಾಗ ಸ್ಪರ್ಧೆ ಇದ್ದದ್ದೆ. ಬದಲಾವಣೆ ಸಹಜ ನಿಯಮ. ಚುನಾವಣೆ ಮುಗಿದ ನಂತರ ನಾವೆಲ್ಲರೂ ಸ್ನೇಹಿತರೇ. ವಾಣಿಜ್ಯ ಮಂಡಳಿಯಿಂದ ಒಳ್ಳೆಯ ಕೆಲಸಗಳನ್ನು ಮಾಡುವುದಷ್ಟೇ ನಮ್ಮ ಗುರಿ” ಎಂದಿದ್ದರು.

LEAVE A REPLY

Connect with

Please enter your comment!
Please enter your name here