ನಟ ಡಾಲಿ ಧನಂಜಯ ತಮ್ಮ ಚೊಚ್ಚಲ ನಿರ್ಮಾಣದ ‘ಬಡವ ರಾಸ್ಕಲ್‌’ ಸಿನಿಮಾಗೆ ಹಮ್ಮಿಕೊಂಡಿರುವ ಪ್ರೊಮೋಷನ್‌ ತಂತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಸೆಂಬರ್‌ 24ರಂದು ಸಿನಿಮಾ ತೆರೆಕಾಣಲಿದೆ.

ವಿಭಿನ್ನ ಪಾತ್ರಗಳ ಮೂಲಕ ಬಹುಭಾಷಾ ನಟನಾಗಿ ಗುರುತಿಸಿಕೊಳ್ಳುತ್ತಿರುವ ನಟ ಧನಂಜಯ ಚೊಚ್ಚಲ ನಿರ್ಮಾಣದ ‘ಬಡವ ರಾಸ್ಕಲ್‌’ ಸಿನಿಮಾ ತೆರೆಗೆ ಸಿದ್ಧವಾಗಿದೆ. ಡಿಸೆಂಬರ್‌ 24ರಂದು ಸಿನಿಮಾ ತೆರೆಕಾಣಲಿದ್ದು, ಧನಂಜಯ ಅವರ ಪ್ರೊಮೋಷನ್ ಗಮನ ಸೆಳೆದಿದೆ. ವಿಶೇಷವೆಂದರೆ ಅವರ ಅಭಿಮಾನಿಗಳೇ ಸ್ವಯಂಪ್ರೇರಿತರಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲಾ ಮಕ್ಕಳಿಂದ ಹಿಡಿದು ದಿನಸಿ ಅಂಗಡಿ, ತರಕಾರಿ ಅಂಗಡಿ, ಮಾಂಸದ ಅಂಗಡಿ, ಕಾರು ಗ್ಯಾರೇಜ್, ಆಟೋ ಚಾಲಕರವರೆಗೂ ವಿವಿಧ ವರ್ಗಗಳಲ್ಲಿ ದುಡಿಯುತ್ತಿರುವ ಅಭಿಮಾನಿಗಳು ಚಿತ್ರದ ಬಿಡುಗಡೆ ದಿನಾಂಕವನ್ನು ಸ್ಲೇಟಿನಲ್ಲಿ ಬರೆದು ಫೋಟೊಗೆ ಪೋಸು ಕೊಡುತ್ತಿದ್ದಾರೆ. ಈ ಫೋಟೊಗಳು ಧನಂಜಯ ಅವರನ್ನು ತಲುಪುತ್ತಿವೆ. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೋಟೊ ಹಾಕಿದ್ದಾರೆ.

‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವಂತೆ ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡು ಬೆಳೆದ ಧನಂಜಯ ಅವರು ಕನ್ನಡ ಚಿತ್ರಗಳನ್ನು ನಿರ್ಮಿಸಿ ಬೆಳೆಸುವ ಪಣ ತೊಟ್ಟಿದ್ದಾರೆ. ‘ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ‘KRG ಸ್ಟೂಡಿಯೋಸ್’ ಸಂಸ್ಥೆಯಡಿ ಸಿನಿಮಾ ಬಿಡುಗಡೆಯಾಗುತ್ತಿದೆ.

LEAVE A REPLY

Connect with

Please enter your comment!
Please enter your name here