ಬಹುಭಾಷಾ ನಟಿ ಶ್ರುತಿ ಹರಿಹರನ್‌ ಅವರು ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಈ ದೂರು ಖುಲಾಸೆಯಾಗಿ ಅರ್ಜುನ್ ಸರ್ಜಾಗೆ ಇಂದು ಕ್ಲೀನ್ ಚಿಟ್‌ ಸಿಕ್ಕಿದೆ. ಸರ್ಜಾ ಅವರ ತಾರಾ ಸಂಬಂಧಿಗಳಾದ ಧ್ರುವ ಸರ್ಜಾ ಮತ್ತು ಮೇಘನಾ ರಾಜ್‌ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಇದು ಮೂರು ವರ್ಷಗಳ ಹಿಂದಿನ ಪ್ರಕರಣ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟ ಅರ್ಜುನ್ ಸರ್ಜಾ ಅವರ ಮೇಲೆ ನಟಿ ಶ್ರುತಿ ಹರಿಹರನ್‌ ಆರೋಪ ಹೊರಿಸಿದ್ದರು. ‘ವಿಸ್ಮಯ’ ಕನ್ನಡ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ದಂಪತಿ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಬೆಂಗಳೂರು ಕಬ್ಬನ್‌ ಪಾರ್ಕ್‌ ಪೊಲೀಸ್ ಸ್ಟೇಷನ್‌ನಲ್ಲಿ ಶ್ರುತಿ ದೂರು ದಾಖಲಿಸಿದ್ದರು. ಈ ಸಂಬಂಧ ಸಾಕಷ್ಟು ರಾಜಿ ಪಂಚಾಯ್ತಿಗಳು ನಡೆದಿದ್ದವು. ಚಿತ್ರರಂಗದ ಕಡೆಯಿಂದ ಹಿರಿಯ ನಟ ಅಂಬರೀಶ್ ಅವರು ಸಂಧಾನ ಸಭೆಯನ್ನೂ ನಡೆಸಿದ್ದರು. ‘ಮೀ ಟೂ’ ಅಭಿಯಾನ ಚಾಲ್ತಿಯಲ್ಲಿದ್ದ ಸಮಯವದು. ಚಿತ್ರನಿರ್ದೇಶಕಿ ಕವಿತಾ ಲಂಕೇಶ್, ನಟ ಚೇತನ್‌ ಮತ್ತಿತರರು ನಟಿ ಶ್ರುತಿ ಹರಿಹರನ್ ಅವರ ಪರ ಮಾತನಾಡಿ ಸುದ್ದಿಗೋಷ್ಠಿ ನಡೆಸಿ ಬೆಂಬಲ ಸೂಚಿಸಿದ್ದರು.

ಶ್ರುತಿ ಹರಿಹರನ್, ಚೇತನ್, ಕವಿತಾ ಲಂಕೇಶ್‌

ಆಗಿಂದಾಗ್ಗೆ ಸುದ್ದಿಯಲ್ಲಿದ್ದ ಈ ಪ್ರಕರಣಕ್ಕೆ ಇಂದು ಅಂತಿಮ ತೆರೆ ಬಿದ್ದಿದೆ. ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಪೊಲೀಸರು ಪ್ರಕರಣವನ್ನು ಖುಲಾಸೆಗೊಳಿಸಿ ನಟ ಅರ್ಜುನ್ ಸರ್ಜಾ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಸರ್ಜಾ ಅವರ ತಾರಾ ಸಂಬಂಧಿಗಳಾದ ನಟ ಧ್ರುವ ಸರ್ಜಾ, ನಟಿ ಮೇಘನಾ ರಾಜ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳಲ್ಲಿ ಈ ಬೆಳವಣಿಗೆಯನ್ನು ಸ್ವಾಗತಿಸಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ನಟಿ ಶ್ರುತಿ ಹರಿಹರನ್‌ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ‘ಹೆಡ್‌ ಬುಷ್‌’, ‘ಸ್ಟ್ರಾಬೆರಿ’ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಟ ಅರ್ಜುನ್ ಸರ್ಜಾ ಎರಡು ತಮಿಳು ಮತ್ತು ಒಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದು, ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮರಕ್ಕರ್‌’ ಮಲಯಾಳಂ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here