Film Heritage Foundation ವತಿಯಿಂದ ನಟ, ನಿರ್ದೇಶಕ ದೇವ್ ಆನಂದ್ ಜನ್ಮ ಶತಮಾನೋತ್ಸವ ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್ 23 ಮತ್ತು 24ರಂದು ದೇಶದಾದ್ಯಂತ 30 ನಗರಗಳಲ್ಲಿ ಮತ್ತು 55 ಚಿತ್ರಮಂದಿರಗಳಲ್ಲಿ ದೇವಾನಂದ್ ಅವರ ನಾಲ್ಕು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.
ನಟ ದೇವ್ ಆನಂದ್ ಅವರ 100ನೇ ಹುಟ್ಟುಹಬ್ಬವನ್ನು Film Heritage Foundation ಆಯೋಜಿಸುತ್ತಿದೆ. ಎರಡು ದಿನಗಳ ಚಲನಚಿತ್ರೋತ್ಸವ ಆಚರಣೆಯನ್ನು ಸೆಪ್ಟೆಂಬರ್ 23 ಮತ್ತು 24ರಂದು ದೇಶದಾದ್ಯಂತ 30 ನಗರಗಳಲ್ಲಿ ಮತ್ತು 55 ಚಿತ್ರಮಂದಿರಗಳಲ್ಲಿ ನಡೆಸಲಾಗುತ್ತದೆ. ಚಿತ್ರನಿರ್ಮಾಪಕ ಮತ್ತು archivist ಶಿವೇಂದ್ರ ಸಿಂಗ್ ಡುಂಗರ್‌ಪುರ್ ಸ್ಥಾಪಿಸಿರುವ FHF ಸಂಸ್ಥೆಯು ದೇವ್ ಸ್ಮರಣಾರ್ಥವಾಗಿ ನಟನ ‘ಸಿಐಡಿ’ (1956), ‘ಗೈಡ್’ (1965), ‘ಜ್ಯುವೆಲ್ ಥೀಫ್’ (1967) ಮತ್ತು ‘ಜಾನಿ ಮೇರಾ ನಾಮ್’ (1970) ಈ ನಾಲ್ಕು ಚಲನಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿದೆ. ಸೆಪ್ಟೆಂಬರ್ 26ರಂದು ‘ದೇವ್ ಆನಂದ್ @100-Forever’ ಶೀರ್ಷಿಕೆಯಡಿ ನಟನ ನೆನಪಿನ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು, ಮುಂಬೈ, ಅಹಮದಾಬಾದ್, ಹೈದರಾಬಾದ್, ತಿರುವನಂತಪುರ, ಚೆನ್ನೈ, ಲಕ್ನೋ, ಕೊಲ್ಕೊತ್ತಾ, ಗುವಾಹಟಿ, ಇಂದೋರ್, ಜೈಪುರ, ನಾಗ್ಪುರ, ನವದೆಹಲಿ, ಗ್ವಾಲಿಯರ್, ರೂರ್ಕೆಲಾ, ಕೊಚ್ಚಿ ಮತ್ತು ಮೊಹಾಲಿ ಸೇರಿದಂತೆ ಇತರ ನಗರಗಳಲ್ಲಿನ ಪ್ರೇಕ್ಷಕರಿಗೆ ಈ ಚಿತ್ರಗಳನ್ನು ವೀಕ್ಷಿಸಲು ಅವಕಾಶವಿದೆ. ದೊಡ್ಡ ಪರದೆಯ 4K ರೆಸಲ್ಯೂಶನ್‌ನಲ್ಲಿ NFCDC – NFAIನಿಂದ ನವೀಕರಿಸಲ್ಪಟ್ಟ ದೇವ್ ಆನಂದ್ ಅವರ ಹೆಗ್ಗುರುತುಗಳಾಗಿ ಈ ಚಲನಚಿತ್ರಗಳು ಮೂಡಿಬರಲಿವೆ. FHF ಸಂಸ್ಥಾಪಕ ಶಿವೇಂದ್ರ ಸಿಂಗ್, ‘ನಾವು ದೇವ್ ಅವರ ನಾಲ್ಕು ಪ್ರಸಿದ್ದ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರ ಪರಂಪರೆಯನ್ನು ಗೌರವಿಸಲು ಬಯಸಿದ್ದೇವೆ. ಈ ಚಿತ್ರಗಳು ನನ್ನ ವೈಯಕ್ತಿಕ ಮೆಚ್ಚಿನ ಚಿತ್ರಗಳೂ ಸಹ ಹೌದು’ ಎಂದಿದ್ದಾರೆ.
NFDC-National Film Archive of India in collaboration with Film Heritage Foundation presents Dev Anand@100 – Forever Young. As part of #DevAnand's centenary celebrations, 4K restorations of four films will be showcased across 30 Indian cities on 55 screens of PVR and INOX.#NFHM pic.twitter.com/O24ju6DFFZ
— NFDC-National Film Archive of India (@NFAIOfficial) September 11, 2023
ದೇವ್ ಆನಂದ್ ಪುತ್ರ, ಚಲನಚಿತ್ರ ನಿರ್ಮಾಪಕ ಸುನೀಲ್ ಆನಂದ್, ‘ನಮ್ಮ ತಂದೆಯ 100ನೇ ಜನ್ಮದಿನದ ನೆನಪಿಗಾಗಿ FHF ಚಲನಚಿತ್ರೋತ್ಸವವನ್ನು ಯೋಜಿಸುತ್ತಿರುವುದು ಸಂತಸ ತಂದಿದೆ. ವೈಯಕ್ತಿಕವಾಗಿ ನನಗೆ ತಂದೆಯ ‘ಜಾನಿ ಮೇರಾ ನಾಮ್’ ಸಿನಿಮಾವನ್ನು ತುಂಬಾ ಇಷ್ಟಪಡುತ್ತೇನೆ. ಚಿತ್ರದಲ್ಲಿ ಅವರು ನಿರ್ವಹಿಸಿದ ಪಾತ್ರವು ಅವರ ನಿಜವಾದ ವ್ಯಕ್ತಿತ್ವವನ್ನು ಹೋಲುತ್ತದೆ ಎಂದು ನಾನು ಭಾವಿಸಿದ್ದೇನೆʼ ಎಂದಿದ್ದಾರೆ. ‘ದೇವ್ ಆನಂದ್ ಅವರನ್ನು ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ವೀಕ್ಷಿಸುವುದು ಸಾರ್ವಜನಿಕರಿಗೆ ಸಂತಸದ ಕ್ಷಣ’ ಎಂದು ಜಂಟಿ ಕಾರ್ಯದರ್ಶಿ ಮತ್ತು NFDC ವ್ಯವಸ್ಥಾಪಕ ನಿರ್ದೇಶಕ ಪೃಥುಲ್ ಕುಮಾರ್ ಹೇಳಿದ್ದಾರೆ.
ದೇವ್ ಆನಂದ್ (26 ಸೆಪ್ಟೆಂಬರ್ 1923 – 3 ಡಿಸೆಂಬರ್ 2011) ಒಬ್ಬ ಭಾರತೀಯ ನಟ, ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಮತ್ತು ಯಶಸ್ವಿ ನಟರಲ್ಲಿ ಒಬ್ಬರು. ಆರು ದಶಕಗಳ ವೃತ್ತಿಜೀವನದಲ್ಲಿ ಅವರು 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದು, ಇದರಲ್ಲಿ ಎರಡು ‘ಅತ್ಯುತ್ತಮ ನಟ’ ಪ್ರಶಸ್ತಿಗಳು. ಭಾರತ ಸರ್ಕಾರವು ಅವರಿಗೆ 2001ರಲ್ಲಿ ಪದ್ಮಭೂಷಣ ಮತ್ತು 2002ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ದೇವ್ ಆನಂದ್ ಉತ್ಸವದ ಟಿಕೆಟ್‌ಗಳನ್ನು www.pvrcinemas.com ನಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ.